ರೇಷ್ಮೆ ಸೀರೆಗಳನ್ನು ದೀರ್ಘಕಾಲ ಬಾಳಿಕೆ ಬರುವಂತೆ ಕಾಪಾಡಿಕೊಳ್ಳಲು ವಿಶೇಷ ಕಾಳಜಿ ಅಗತ್ಯ. ತಿಂಗಳಿಗೊಮ್ಮೆ ಗಾಳಿಯಾಡಲು ಬಿಡುವುದು, ಡ್ರೈ ಕ್ಲೀನ್ ಮಾಡಿಸುವುದು ಮುಖ್ಯ. ಈ ಲೇಖನದಲ್ಲಿ ಅಸಲಿ ರೇಷ್ಮೆಯನ್ನು ಗುರುತಿಸುವ ವಿಧಾನಗಳು ಮತ್ತು ವಿವಿಧ ಬಗೆಯ ರೇಷ್ಮೆ ಸೀರೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಸೀರೆ ಎಂದರೆ, ಭಾರತೀಯ ನಾರಿ ಎನ್ನುವ ಮಾತಿದೆ. ವಿದೇಶಿ ಮಹಿಳೆಯರು ಕೂಡ ಭಾರತೀಯ ಈ ಸಂಪ್ರದಾಯಕ್ಕೆ ಮೊರೆ ಹೋಗಿದ್ದಾರೆ. ಜೀನ್ಸ್, ಮಿನಿ, ಸ್ಕರ್ಟ್, ಷಾರ್ಟ್.... ಹೀಗೆ ವಿದೇಶಿಗಳ ಬಟ್ಟೆಗಳಿಗೆ ಮೊರೆ ಹೋಗಿರುವ ಭಾರತದ ಹೆಣ್ಣುಮಕ್ಕಳು ಹಬ್ಬ-ಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಇಲ್ಲವೇ ಯಾವುದೋ ಫಂಕ್ಷನ್ಗೆ ಹೋಗುವಾಗ ಸೀರೆಯನ್ನೇ ಪ್ರಿಫರ್ ಮಾಡುವುದು ಇದೆ. ಸೀರೆ ಎನ್ನುವುದು ಗೌರವದ ಮಾತಾಗಿರುವ ಈ ದಿನಗಳಲ್ಲಿ ಅಲ್ಲಿಯೂ ಅಶ್ಲೀಲತೆ ಮೆರೆಯುವ ಹೆಣ್ಣುಮಕ್ಕಳಿಗೇನೂ ಕಮ್ಮಿ ಇಲ್ಲ ಎನ್ನಿ. ಎಲ್ಲವೂ ನಮ್ಮ ನಟಿಮಣಿಗಳ ಉಡುಗೊರೆಯಾಗಿ ಬಂದಿದೆ ಇದು. ಫೋಟೋಶೂಟ್ ಮಾಡಿಸುವಾಗ ಸೀರೆಯ ಸೆರಗನ್ನು ಉದ್ದೇಶಪೂರ್ವಕವಾಗಿ ಜಾರಿಸುವುದು ಇದಾಗಲೇ ಹಲವು ವಿಡಿಯೋಗಳಲ್ಲಿ ನೋಡಿರಬಹುದು. ಇವುಗಳ ಹೊರತಾಗಿಯೂ ಸೀರೆ ತನ್ನತನವನ್ನು, ಭಾರತೀಯ ನಾರಿಯರ ಹೆಮ್ಮೆಯನ್ನು ಸದ್ಯದ ಮಟ್ಟಿಗೆ ಉಳಿಸಿಕೊಂಡಿರುವುದೇ ದೊಡ್ಡ ವಿಷಯವಾಗಿದೆ.
ರೇಷ್ಮೆ ಸೀರೆಗಳನ್ನು ಕಾಪಾಡುವುದು ಹೇಗೆ?
ರೇಷ್ಮೆ ಸೀರೆಗಳ ಗಟ್ಟಿತನ ಮತ್ತು ಝರಿಗಳನ್ನು ಕೊನೆಯವರೆಗೂ ಚೆನ್ನಾಗಿ ಮೆಂಟೇನ್ ಮಾಡಬೇಕು ಎಂದರೆ ಏನು ಮಾಡಬೇಕು ಎನ್ನುವ ಪ್ರಶ್ನೆಗೆ Rapid Rashmi ಚಾನೆಲ್ನಲ್ಲಿ ತಜ್ಞರು ಹೀಗೆ ಉತ್ತರಿಸಿದ್ದಾರೆ ನೋಡಿ: ರೇಷ್ಮೆ ಸೀರೆಗಳನ್ನು ಇಟ್ಟ ಜಾಗದಲ್ಲಿಯೇ ಬಹಳ ದಿನ ಹಾಗೆಯೇ ಇಡಲೇಬಾರದು. ತಿಂಗಳಿಗೆ ಒಮ್ಮೆಯಾದರೂ ಈ ಸೀರೆಯನ್ನು ಕಪಾಟಿನಿಂದ ತೆಗೆದು ಗಾಳಿಯಾಡಲು ಬಿಟ್ಟು ಅದರ ಮಡಕೆಯನ್ನು ಬಿಡಿಸಿ ಮತ್ತೆ ಮಡಕೆ ಹಾಕಿ ಇಡಬೇಕು. ಹೀಗೆ ಮಾಡುತ್ತಿರಬೇಕು. ಮಲಬಾರಿ ಸಿಲ್ಕ್ ಆಗಿದ್ದರೆ, ಒತ್ತಡಕ್ಕೆ ಕಟ್ ಆಗುವ ಛಾನ್ಸ್ ಇರುತ್ತದೆ. ಆದ್ದರಿಂದ ರೇಷ್ಮೆ ಸೀರೆ ಚೇಂಜ್ ಮಾಡುತ್ತಾ ಇರಬೇಕು. ಇನ್ನೊಂದು ಟಿಪ್ಸ್ ಎಂದರೆ ನೀರಿನಲ್ಲಿ ಹಾಕಲೇಬಾರದು. ಡ್ರೈ ಕ್ಲೀನ್ (Dry Clean)ಗೆ ಕೊಡಬೇಕು. ಇಲ್ಲದಿದ್ದರೆ ಅದು ತನ್ನತನವನ್ನು ಕಳೆದುಕೊಳ್ಳುತ್ತದೆ ಎಂದಿದ್ದಾರೆ.
ರೇಷ್ಮೆ ಸೀರೆಗಳಿಗೆ ವಿಶೇಷ ಕಾಳಜಿ ಅಗತ್ಯ
ಅಂದಹಾಗೆ, ಸೀರೆಯನ್ನು ಯಾವುದೇ ಉದ್ದೇಶಕ್ಕೆ ತೊಟ್ಟುಕೊಂಡಿರಲಿ. ಹಲವು ಮಹಿಳೆಯರಿಗೆ ರೇಷ್ಮೆ ಸೀರೆಯೆಂದರೆ ಅಚ್ಚುಮೆಚ್ಚು. ರೇಷ್ಮೆ ಹುಳುಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಸಾಯಿಸಿ ಅದರ ನೂಲನ್ನು ತೆಗೆದು ಈ ಸೀರೆಯನ್ನು ಮಾಡುವ ಪರಿ ನೋಡಿಯೇ ಕೆಲವರು ರೇಷ್ಮೆ ಸೀರೆಗಳನ್ನು ಮುಟ್ಟದ ಹಿರಿಯರೂ ಇದ್ದಾರೆ. ಅದೇನೇ ಇದ್ದರೂ ರೇಷ್ಮೆ ಸೀರೆಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಆದರೆ, ಈ ಸೀರೆಗಳನ್ನು ಜತನದಿಂದ ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಏಕೆಂದರೆ ಇದು ತುಂಬಾ ಸೂಕ್ಷ್ಮವಾಗಿರುವ ಸೀರೆಯಾಗುತ್ತದೆ. ಹೇಗೆಂದರೆ ಹಾಗೆ ಅದನ್ನು ಇಟ್ಟರೆ ಬಹಳ ದುಬಾರಿಯ ಈ ಸೀರೆಗಳನ್ನು ಹಾಳುಮಾಡಿಕೊಳ್ಳಬಹುದಾಗಿದೆ.
ರೇಷ್ಮೆ ಸೀರೆಗಳ ವೈವಿಧ್ಯ
ಇನ್ನು ರೇಷ್ಮೆ ಸೀರೆಗಳ ಕುರಿತು ಒಂದಿಷ್ಟು ಹೇಳುವುದಾದರೆ, ಕಾಂಚೀಪುರಂ ರೇಷ್ಮೆ ಸೀರೆ-: ತಮಿಳುನಾಡಿನ ಕಾಂಚೀಪುರಂನಲ್ಲಿ ತಯಾರಿಸಲಾಗುವ ಈ ಸೀರೆಗಳು ತಮ್ಮ ಸಂಕೀರ್ಣವಾದ ನೇಯ್ಗೆಗೆ ಹೆಸರುವಾಸಿಯಾಗಿವೆ ಮತ್ತು ಮದುವೆಗಳಿಗೆ ಹೆಚ್ಚು ಜನಪ್ರಿಯವಾಗಿವೆ. ಚಂದೇರಿ ರೇಷ್ಮೆ ಸೀರೆ: ಮಧ್ಯಪ್ರದೇಶದಿಂದ ಬರುವ ಈ ಸೀರೆಗಳು ಹಗುರವಾದ ವಿನ್ಯಾಸಗಳನ್ನು ಮತ್ತು ನೈಸರ್ಗಿಕ ಅಂಶಗಳನ್ನು ಒಳಗೊಂಡಿದೆ. ಬನಾರಸಿ ರೇಷ್ಮೆ ಸೀರೆ: ಬನಾರಸಿ ರೇಷ್ಮೆ ಸೀರೆಗಳು ವಿಶಿಷ್ಟವಾದ ಕಸೂತಿ ಮತ್ತು ವಿನ್ಯಾಸಗಳಿಗೆ ಹೆಸರುವಾಸಿಯಾಗಿವೆ.
ಗುರುತಿಸುವುದು ಹೇಗೆ?
ಇನ್ನು ರೇಷ್ಮೆ ಸೀರೆಗಳನ್ನು ಗುರುತಿಸುವುದು ಹೇಗೆ ಎನ್ನುವ ವಿಷಯಕ್ಕೆ ಬರುವುದಾದರೆ, ನಿಜವಾದ ರೇಷ್ಮೆ ನೂಲನ್ನು ಸುಟ್ಟರೆ ಅದು ಸುಟ್ಟ ಕೂದಲಿನ ವಾಸನೆಯನ್ನು ಹೊಂದಿ ಬೂದಿಯಾಗಿ ಮಾರ್ಪಡುತ್ತದೆ. ಕೃತಕ ರೇಷ್ಮೆ ಪ್ಲಾಸ್ಟಿಕ್ ತರಹದ ವಾಸನೆಯನ್ನು ನೀಡುತ್ತದೆ. ನಿಜವಾದ ರೇಷ್ಮೆ ಸೀರೆಗಳು ಬೆಳಕಿನಲ್ಲಿ ಸುಂದರವಾಗಿ ಹೊಳೆಯುತ್ತವೆ. ಕೃತಕ ರೇಷ್ಮೆ ಕೃತಕ ಹೊಳಪನ್ನು ಹೊಂದಿರುತ್ತದೆ.
