Kitchen Garden Tips: ತಾಜಾ ತರಕಾರಿ, ಹಣ್ಣನ್ನು ಮನೆಯಲ್ಲಿ ಬೆಳೆಯೋದು ಸುಲಭ. ಸಣ್ಣ ಜಾಗದಲ್ಲೂ ನೀವು ದೊಡ್ಡ ಬೆಳೆ ತೆಗೆಯಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ. 

ಮಾರ್ಕೆಟ್ಗೆ ಬರುವ ಹಣ್ಣು(fruit), ತರಕಾರಿ (vegetable)ಯಲ್ಲಿ ಕೆಮಿಕಲ್ ಹೆಚ್ಚು, ಅದು ಆರೋಗ್ಯಕ್ಕೆ ಹಾನಿಕರ ಎನ್ನುವ ಸುದ್ದಿ ಆಗಾಗ ಬರ್ತಿರುತ್ತೆ. ಜನರು ಯಾವ್ದೆ ರಾಸಾಯನಿಕವಿಲ್ದೆ ಮನೆಯಲ್ಲಿಯೇ ತರಕಾರಿ ಬೆಳೆಯಲು ಇಷ್ಟಪಡ್ತಿದ್ದಾರೆ. ನಿಮ್ಮ ಮನೆ ಮುಂದಿರುವ ಜಾಗ ಅಥವಾ ಟೆರೆಸ್ ನಲ್ಲಿ ನೀವು ತರಕಾರಿ ಬೆಳೆದುಕೊಳ್ಬಹುದು. ನಮ್ಮ ಮನೆಯಲ್ಲಿ ಬೆಳೆದ ತರಕಾರಿ ನೋಡುವ, ತಿನ್ನುವ ಖುಷಿಯೇ ಬೇರೆ. ನೀವೂ ಮನೆಯಲ್ಲಿ ತರಕಾರಿ ಬೆಳೆಯುವ ಆಲೋಚನೆಯಲ್ಲಿದ್ರೆ ಕಿಚನ್ ಗಾರ್ಡನ್ ಸ್ಟೆಪ್ ಬೈ ಸ್ಟೆಪ್ ಐಡಿಯಾ ಇಲ್ಲಿದೆ.

ಕಿಚನ್ ಗಾರ್ಡನ್ (Kitchen garden) ಅಂದ್ರೆ ಏನು? : ಮನೆಯ ಸುತ್ತಮುತ್ತ ಅಥವಾ ಟೆರೆಸ್ ನಲ್ಲಿರುವ ಸಣ್ಣ ಜಾಗದಲ್ಲಿ ತರಕಾರಿ, ಗಿಡಮೂಲಿಕೆ, ಹಣ್ಣುಗಳನ್ನು ಬೆಳೆಯೋದೇ ಕಿಚನ್ ಗಾರ್ಡನ್. ಇದ್ರಿಂದ ತಾಜಾ ತರಕಾರಿ ನಿಮ್ಗೆ ಸಿಗುತ್ತೆ. ನೀವು ಅಪಾರ್ಟ್ ಮೆಂಟ್ ನಲ್ಲಿ ಇರಿ ಇಲ್ಲ ಹಳ್ಳಿಯಲ್ಲಿರಿ, ನಿಮ್ಮ ಜೀವನಶೈಲಿಗೆ ತಕ್ಕಂತೆ ನೀವು ಈ ಕಿಚನ್ ಗಾರ್ಡನ್ ಸೆಟ್ ಮಾಡ್ಬಹುದು.

ಸ್ಥಳ ನಿರ್ಧಾರ : ಕಿಚನ್ ಗಾರ್ಡನ್ ಮಾಡುವ ಮುನ್ನ ಸ್ಥಳವನ್ನು ಆಯ್ಕೆ ಮಾಡ್ಕೊಳ್ಳಿ. ಬಿಸಿಲು ಬೀಳುವ ಜಾಗದಲ್ಲಿ ನೀವು ಗಾರ್ಡನ್ ಮಾಡ್ಬೇಕು. ಟೆರೆಸ್,ಬಾಲ್ಕನಿ, ಮನೆ ಮುಂಭಾಗ ಇರುವ ಜಾಗ, ಕಿಟಕಿ ಮೇಲೆ ನೀವು ತರಕಾರಿ, ಹಣ್ಣುಗಳನ್ನು ಬೆಳೆಯಬಹುದು.

ಯಾವ ತರಕಾರಿ ಕಿಚನ್ ಗಾರ್ಡನ್ ಗೆ ಸೂಕ್ತ : ನಿಮ್ಮ ಕಿಚನ್ ಗಾರ್ಡನ್ ನಲ್ಲಿ ತುಳಸಿ, ಪುದೀನ, ಕೊತ್ತಂಬರಿ, ಕರಿಬೇವು, ಸೊಪ್ಪುಗಳಾದ ಪಾಲಕ್, ಮೆಂತ್ಯ, ಹರವೆ ಬೆಳೆಯಬಹುದು. ಇದಲ್ಲದೆ ಟೊಮ್ಯಾಟೊ, ಮೆಣಸಿನಕಾಯಿ, ಬದನೆಕಾಯಿ, ಬೆಂಡೆಕಾಯಿ ಬೆಳೆಸಬಹುದು. ಸ್ಟ್ರಾಬೆರಿ ಮತ್ತು ನಿಂಬೆ ಹುಲ್ಲನ್ನು ಕೂಡ ನೀವು ಬೆಳೆಯಬಹುದು. ಅನೇಕ ರೀತಿಯ ಹೂವುಗಳನ್ನು ನೀವು ಕಿಚನ್ ಗಾರ್ಡನ್ ನಲ್ಲಿ ಬೆಳೆಸಬಹುದು. ನಿಮ್ಮ ಗಾರ್ಡನ್ ಎಷ್ಟು ದೊಡ್ಡದಾಗಿದೆ ಮತ್ತು ನೀವು ಹೇಗೆ ಬೆಳೆಸುತ್ತಿದ್ದೀರಿ ಎಂಬುದರ ಮೇಲೆ ಇದು ನಿರ್ಣಯವಾಗುತ್ತದೆ.

ಹೇಗೆ ಕಿಚನ್ ಗಾರ್ಡನ್ ಶುರು ಮಾಡ್ಬೇಕು? :

• ಸ್ಥಳ ಆಯ್ಕೆ ಮಾಡ್ಕೊಂಡ ಮೇಲೆ ನೀವು ಅದಕ್ಕೆ ತಯಾರಿ ನಡೆಸಿ. ನೇರವಾಗಿ ನೆಲದ ಮೇಲೆ ಗಾರ್ಡನ್ ಮಾಡ್ತಿದ್ದರೆ ನೆಲವನ್ನು ಸ್ವಲ್ಪ ಅಗೆದು ಉತ್ತಮ ಮಣ್ಣನ್ನು ಹಾಕಿ, ಭೂಮಿಯನ್ನು ಪಲವತ್ತು ಮಾಡ್ಕೊಳ್ಳಿ. ಅದೇ ನೀವು ಟೆರೆಸ್ ಅಥವಾ ಬಾಲ್ಕನಿಯಲ್ಲಿ ಮಾಡ್ತಿದ್ದರೆ ಪಾಟ್, ಪ್ಲಾಸ್ಟಿಕ್ ಬ್ಯಾಗ್ ಬಳಸಿ.

• ಬೀಜಗಳನ್ನು ಎಚ್ಚರಿಕೆಯಿಂದ ಆರಿಸಿ. ಯುಫೋರಿಕ್ ಗ್ರೀನ್ಸ್ನಂತಹ ವಿಶ್ವಾಸಾರ್ಹ ಮೂಲಗಳಿಂದ ಉತ್ತಮ ಗುಣಮಟ್ಟದ ಸಾವಯವ ಬೀಜವನ್ನು ಆಯ್ಕೆ ಮಾಡಿಕೊಳ್ಳಿ.

• ಮಣ್ಣನ್ನು ಫಲವತ್ತುಗೊಳಿಸಬೇಕು. ಮಣ್ಣನ್ನು ತಯಾರಿಸಲು ಕಾಂಪೋಸ್ಟ್, ಹಸುವಿನ ಸಗಣಿ ಅಥವಾ ಸಾವಯವ ಗೊಬ್ಬರವನ್ನು ಬಳಸಿ. ರಾಸಾಯನಿಕ ಕೀಟನಾಶಕ ತಪ್ಪಿಸಿ, ಅದರ ಬದಲು ಬೇವಿನ ಎಣ್ಣೆ ಅಥವಾ ಮನೆಯಲ್ಲಿ ತಯಾರಿಸಿದ ದ್ರಾವಣಗಳನ್ನು ಆಯ್ಕೆ ಮಾಡಿಕೊಳ್ಳಿ.

• ಪ್ರತಿಯೊಂದು ತರಕಾರಿ, ಹೂ, ಹಣ್ಣಿನ ಗಿಡಕ್ಕೆ ನೀರಿನ ಅಗತ್ಯ ಭಿನ್ನವಾಗಿರುತ್ತದೆ. ನೀವು ಅದನ್ನು ತಿಳಿದುಕೊಂಡು ನೀರನ್ನು ಹಾಕಿ. ಬೆಳಿಗ್ಗೆ ಅಥವಾ ಸಂಜೆ ನೀರು ಹಾಕುವ ರೂಢಿ ಇರಲಿ. ಅತಿಯಾಗಿ ನೀರು ಹಾಕುವುದನ್ನು ತಪ್ಪಿಸಿ.

• ಒಂದು ಪಾಟ್ ನಲ್ಲಿ ಗಿಡ ಬೆಳೆಸುತ್ತಿದ್ದರೆ ಒಂದು ಪಾಟ್ ನಲ್ಲಿ ಒಂದು ಗಿಡವನ್ನು ಮಾತ್ರ ಬೆಳೆಸಿ. ನಾಲ್ಕೈದು ಗಿಡ ಒಂದೇ ಪಾಟ್ ನಲ್ಲಿದ್ದಾಗ ಯಾವುದೂ ಸರಿಯಾಗಿ ಬೆಳವಣಿಗೆ ಹೊಂದುವುದಿಲ್ಲ.

• ಒಂದೇ ಪಾಟ್ ನಲ್ಲಿ ಬೀಜವನ್ನು ಹಾಕಿದ್ದು, ಅದು ಮೊಳಕೆ ಬಂದು ದೊಡ್ಡದಾಗ್ತಿದ್ದಂತೆ ಒಂದೊಂದೇ ಗಿಡವನ್ನು ಬೇರೆ ಪಾಟ್ ಗೆ ಹಸ್ತಾಂತರಿಸಿ. ಸ್ವಲ್ಪ ನೀರನ್ನು ಪಾಟ್ ಗೆ ಹಾಕಿ, ಗಿಡವನ್ನು ಬೇರು ಸಮೇತ ಕಿತ್ತು, ಇನ್ನೊಂದು ಪಾಟ್ ನಲ್ಲಿ ಮಣ್ಣನ್ನು ಹಾಕಿ, ಬೇರುಗಳಷ್ಟೆ ಆಳವಾದ ರಂಧ್ರ ಮಾಡಿ ಅದ್ರಲ್ಲಿ ಗಿಡವನ್ನು ಇಳಿಸಿ ಮಣ್ಣನ್ನು ನಿಧಾನವಾಗಿ ಮುಚ್ಚಿ ಒತ್ತಬೇಕು.

• ಆಗಾಗ ಸಾವಯವ ಗೊಬ್ಬರವನ್ನು ಮಣ್ಣಿಗೆ ಸೇರಿಸಬೇಕು.