ಮನೆ ಮುಂದೆ ಪುಟ್ಟದಾದ ಗಾರ್ಡನ್ ನಿರ್ಮಿಸುವ ಬಗ್ಗೆ ಹಂತ ಹಂತವಾದ ಮಾಹಿತಿ ಇಲ್ಲಿದೆ. ನಿಮಗೂ ಮನೆ ಮುಂದೆ ಗಾರ್ಡನ್ ಮಾಡುವ ಆಸಕ್ತಿ ಇದ್ದರೆ ಇಲ್ಲಿದೆ ಐಡಿಯಾ

ಮನೆ ಮುಂದೆ ಪುಟ್ಟದಾದ ಗಾರ್ಡನ್ ಇದ್ರೆ ಮನಸ್ಸಿಗೆ ಸದಾ ಅವು ಮುದ ನೀಡುತ್ತವೆ. ಬೆಳಗ್ಗೆದು ಅರಳಿರುವ ಪುಟ್ಟ ಪುಟ್ಟ ಹೂವುಗಳನ್ನು ನೋಡುವುದು ಗಿಡಗಳಿಗೆ ನೀರು ಎರೆದು ಅವುಗಳನ್ನು ಮಾತನಾಡಿಸುವುದಲ್ಲಿ ಅದೇನೋ ಖುಷಿ ಇದೆ. ಅಲ್ಲದೇ ಇದು ಮನಸ್ಸಿಗೆ ಬೇರೆಯದ್ದೇ ಆದ ಒಂದು ನವಿರಾದ ಆನಂದವನ್ನು ನೀಡುತ್ತದೆ. ಆದರೆ ಬಹುತೇಕರಿಗೆ ಮನೆ ಮುಂದೆ ಪುಟ್ಟದಾದ ಗಾರ್ಡನ್ ಬೇಕು ಎಂಬ ಆಸೆ ಇರುತ್ತದೆ. ಆದರೆ ಅದನ್ನು ಮಾಡುವುದು ಹೇಗೆ ಎಂಬುದರ ಬಗ್ಗೆ ಸ್ವಲ್ಪವೂ ಪ್ರಾಥಮಿಕ ಜ್ಞಾನ ಇರುವುದಿಲ್ಲ, ಅಂತಹವರಿಗಾಗಿ ಇಲ್ಲಿ ಮನೆ ಮುಂದೆ ಪುಟ್ಟ ಗಾರ್ಡನ್ ಮಾಡುವ ಬಗ್ಗೆ ಸಣ್ಣದೊಂದು ಕೈಪಿಡಿ ಅಥವಾ ಮಾರ್ಗದರ್ಶನ ಈ ಲೇಖನದಲ್ಲಿ ಇದೆ.

ಪೇಟೆಯಲ್ಲಿ ಸಣ್ಣ ಅಪಾರ್ಟ್‌ಮೆಂಟ್‌ನಲ್ಲಿ ಇದ್ದು ವಾಸ ಮಾಡುವವರಿಗೆ ಇಲ್ಲಿ ಪುಟ್ಟದಾಗಿ ಮನೆ ಮುಂದೆ ಗಾರ್ಡನ್ ಮಾಡುವುದು ಹೇಗೆ ಎಂಬ ಬಗ್ಗೆ ಹಂತ ಹಂತವಾದ ಮಾಹಿತಿ ಇದೆ.

ಮೊದಲನೇಯದಾಗಿ ಸರಿಯಾದ ಕಂಟೈನರ್‌ಗಳ ಆಯ್ಕೆ:(ಕಂಟೈನರ್‌ಗಳೆಂದರೆ ಹೂಗಿಡಗಳನ್ನು ನೆಟ್ಟಿಡುವಂತಹ ಪಾಟುಗಳು, ಚೆಟ್ಟಿಗಳು, ಹೂಕುಂಡಗಳಾಗಿವೆ)

ನೀವು ಪ್ರೀತಿಯಿಂದ ತಂದ ಹೂಗಿಡಗಳು ಅಥವಾ ಇತರ ಯಾವುದೇ ಸಸ್ಯಗಳ ಬೇರುಗಳು ಸರಿಯಾಗಿ ಚಾಚಿಕೊಳ್ಳುವುದಕ್ಕೆ ಸಹಾಯಕವಾಗುವ ಹಾಗೂ ನೀರು ನಿಂತು ಗಿಡ ಕೊಳೆಯದಂತೆ ತಡೆಯುವ ಸಣ್ಣದಾದ ತೂತುಗಳಿರುವ ಕಂಟೈನರ್‌ಗಳನ್ನೇ ಆಯ್ಕೆ ಮಾಡಿ. ಉದಾಹರಣೆಗೆ ನೀವು ಬಾಲ್ಕನಿಯಲ್ಲೇ ಟೊಮೆಟೊ ಬೆಳೆಯಲು ಬಯಸಿದ್ದರೆ, 12ರಿಂದ 18 ಇಂಚಿನ ಮಡಕೆಯನ್ನು ಬಳಸಿ, ಆದರೆ ಹೆಚ್ಚಿನ ಗಿಡಗಳಿಗೆ 6–8 ಇಂಚಿನ ಚಟ್ಟಿ ಅಥವಾ ಕುಂಡ ಸಾಕಾಗುತ್ತದೆ. ಹಳೆಯ ಬಕೆಟ್‌ಗಳು ಅಥವಾ ಕ್ರೇಟ್‌ಗಳನ್ನು ಕೂಡ ನೀವು ಹೂಗಿಡಗಳನ್ನು ಬೆಳೆಯುವುದಕ್ಕೆ ಬಳಸಬಹುದು ಅದಕ್ಕೆ ಸಣ್ಣ ತೂತುಗಳನ್ನು ಮಾಡಿ ಮರುಬಳಕೆ ಮಾಡಬಹುದು. ಹಾಗೆಯೇ ನೆಲದ ಜಾಗವನ್ನು ಉಳಿಸಲು ಲಂಬವಾಗಿರುವ ಇಳಿಜಾರಿನ ಸೆಲ್ಪ್‌ಗಳಂತಹ ಪೆಟ್ಟಿಗೆಗಳನ್ನು ಬಳಸಬಹುದು.

ಸೂರ್ಯನ ಬೆಳಕು ಬೀಳುವ ಪ್ರದೇಶವನ್ನೇ ಆಯ್ಕೆ ಮಾಡಿ

ಹೆಚ್ಚಿನ ತರಕಾರಿಗಳು ಅಥವಾ ಹೂಗಿಡಗಳಿಗೆ ಸೂರ್ಯನ ಬೆಳಕು ಬೇಕೇ ಬೇಕು. ಹೀಗಾಗಿ ಗಿಡಗಳು ಚೆನ್ನಾಗಿ ಬೆಳೆಯಲು ನಿಮ್ಮ ಹೂಕುಂಡಗಳನ್ನು ದಿನದಲ್ಲಿ 6 ರಿಂದ 8 ಗಂಟೆಗಳ ಕಾಲ ನೇರ ಸೂರ್ಯನ ಬೆಳಕು ಬೀಳುವ ಪ್ರದೇಶದಲ್ಲೇ ಇಡಿ. ಹಾಗೆಯೇ ನೀವಿರುವ ಜಾಗ ನೆರಳಿನ ಪ್ರದೇಶವಾಗಿದ್ದರೆ ಬೇರೆ ತರಕಾರಿಗಳನ್ನು ಬೆಳೆಯಬಹುದು. ಲೆಟ್ಯೂಸ್, ಪಾಲಕ್, ಪುದೀನಾ, ಕೊತ್ತಂಬರಿ ಮುಂತಾದ ಗಿಡಗಳನ್ನು ಬೆಳೆಸಿ ಇವುಗಳಿಗೆ ಕನಿಷ್ಠ 4 ಗಂಟೆ ಸೂರ್ಯನ ಬೆಳಕಿ ಸಿಕ್ಕಿದರೆ ಸಾಕು. ನಿಮ್ಮ ಬಾಲ್ಕನಿಯಲ್ಲಿ ಸೂರ್ಯನ ಬೆಳಕು ಹೇಗೆ ಬೀಳುತ್ತದೆ ಎಂಬುದನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ಕುಂಡಗಳನ್ನು ಜೋಡಿಸಿ.

ಒಳ್ಳೆಯ ಸಸ್ಯಗಳನ್ನು ಆರಿಸಿ

ಹೊಸದಾಗಿ ಬಾಲ್ಕನಿಯಲ್ಲಿ ತರಕಾರಿ ಬೆಳೆಯಲು ಬಯಸುವವರು ಕಡಿಮೆ ನಿರ್ವಹಣೆಯ ಆದರೆ ಲಾಭದಾಯಕವಾದ ಸಸ್ಯಗಳನ್ನು ಆರಿಸುವುದು ಉತ್ತಮ. ಚೆರ್ರಿ ಟೊಮೆಟೊಗಳು ಈ ಗಿಡಗಳಿಗೆ ಧೃಢವಾಗಿ ನಿಲ್ಲಲು ಕೋಲಿನ ಆಧಾರ ನೀಡಿ, ಹಸಿರು ಮೆಣಸಿನಕಾಯಿಗಳು, ವೇಗವಾಗಿ ಬೆಳೆಯುವ ಕೊತ್ತಂಬರಿ, ಪುದೀನ ಅಥವಾ ರೋಸ್ಮರಿಯಂತಹ ಗಟ್ಟಿಮುಟ್ಟಾದ ಗಿಡಮೂಲಿಕೆಗಳನ್ನು ಬೆಳೆಯಿರಿ. ಪುದೀನ ಆಕ್ರಮಣಕಾರಿಯಾಗಿ ಬೆಳೆಯುತ್ತದೆ.ಆದ್ದರಿಂದ ಅದಕ್ಕೆ ತನ್ನದೇ ಆದ ಕುಂಡವನ್ನು ನೀಡಿ. ನೀವು ಕಡಿಮೆ ನಿರ್ವಹಣೆಯ ಬಾಲ್ಕನಿ ಬಯಸಿದ್ರೆ ಗಿಡಮೂಲಿಕೆಗಳು ನಿಮಗೆ ಹೇಳಿ ಮಾಡಿಸಿದ್ದು,

ಒಳ್ಳೆಯ ಮಣ್ಣು ಹಾಗೂ ಒಳ್ಳೆಯ ಬೀಜವನ್ನೇ ಆರಿಸಿ

ಉತ್ತಮವಾದ ಫಸಲಿಗೆ ಉತ್ತಮವಾದ ಮಣ್ಣು ಹಾಗೂ ಬೀಜವೂ ಬಹಳ ಅಗತ್ಯ. ನೀವು ಫಾಟ್‌ಗಳಲ್ಲಿ ಚೆನ್ನಾಗಿ ನೀರು ಬಸಿದು ಹೋಗುವ ಹಗುರವಾದ ಮಣ್ಣು ತುಂಬಿಸಿ, ಈ ಮಣ್ಣಿನ ಜೊತೆ ಸಸ್ಯಗಳಿಗೆ ಪೋಷಕಾಂಶಗಳನ್ನು ಹೆಚ್ಚಿಸುವುದಕ್ಕಾಗಿ ಸ್ವಲ್ಪ ಕಾಂಪೋಸ್ಟ್ ಅಥವಾ ಸಾವಯವ ಗೊಬ್ಬರವನ್ನು ಮಿಶ್ರಣ ಮಾಡಿ.

ಪ್ಯಾಕೇಟ್ ಮೇಲಿರುವ ಸೂಚನೆಯಂತೆ ಬಿತ್ತನೆ ಮಾಡಿ:

ಕೆಲವು ಬಿತ್ತನೆ ಬೀಜಗಳ ಪ್ಯಾಕೆಟ್‌ನಲ್ಲಿ ಸೂಚನೆಗಳಿರುತ್ತವೆ ಅದರಂತೆ ಬೀಜಗಳನ್ನು ನೆಡಿ. ಸಾಮಾನ್ಯವಾಗಿ ಸಣ್ಣ ಬೀಜಗಳಿಗೆ ಮಣ್ಣಿನ ಮೇಲ್ಮೈ ಕೆಳಗೆ ಮತ್ತು ಮೊಳಕೆಯೊಡೆಯುವವರೆಗೆ ಮಣ್ಣು ತೇವಾಂಶದಿಂದ ಕೂಡಿರುವುದು ಅಗತ್ಯ. ಬೀಜಗಳನ್ನು ಒತ್ತಿ ತುಂಬಿಸಬೇಡಿ, ಅವುಗಳು ಮೊಳಕೆ ಬರುವುದಕ್ಕೆ ತುಸು ಜಾಗ ಇರಲಿ. ಒಂದು ವೇಳೆ ಈ ಹಂತ ನಿಮಗೆ ಕಷ್ಟಕರವೆನಿಸಿದರೆ ನರ್ಸರಿಯಲ್ಲಿ ಈಗಾಗಲೇ ಸಸಿಯಾಗಿರುವ ಗಿಡಗಳನ್ನು ತರಬಹುದು.

ಪ್ರತಿದಿನ ನೀರು ಹಾಕಿ

ಹೂಕುಂಡಗಳಲ್ಲಿರುವ ಸಸ್ಯಗಳು ನೆಲದಲ್ಲಿ ನೆಟ್ಟ ಸಸ್ಯಗಳಿಗಿಂತ ವೇಗವಾಗಿ ಒಣಗುತ್ತವೆ, ಆದ್ದರಿಂದ ನಿಯಮಿತವಾಗಿ ನೀರುಹಾಕುವುದು ಮುಖ್ಯವಾಗಿದೆ. ನಿಮ್ಮ ಬೆರಳನ್ನು ಮಣ್ಣಿನಲ್ಲಿ 1 ಇಂಚು ಒತ್ತಿ ಆಗ ಮಣ್ಣು ಒಣಗಿದಂತೆ ಅನಿಸಿದರೆ ನೀರು ಹಾಕಿ.ಬೇಸಿಗೆಯ ದಿನಗಳಲ್ಲಿ ಪ್ರತಿದಿನ ನೀರು ಹಾಕುವುದು ಅಗತ್ಯ. ಆದರೆ ತಂಪಾದ ವಾತಾವರಣವಿದ್ದಾಗ ವಾರಕ್ಕೆ 2ರಿಂದ 3 ಬಾರಿ ನೀರು ಹಾಕಿದರೆ ಸಾಕು.

ಮಡಕೆಯ ಕೆಳಭಾಗದಿಂದ ಹೆಚ್ಚುವರಿ ನೀರು ಬರುವುದನ್ನು ನೋಡುವವರೆಗೆ ಚೆನ್ನಾಗಿ ನೀರು ಹಾಕಿ ಸೂರ್ಯನ ಬೆಳಕು ಪ್ರಬಲವಾಗಿರುವ ದಿನಗಳಲ್ಲಿ ಬೆಳಗ್ಗೆ ಅಥವಾ ಸಂಜೆ ನೀರು ಹಾಕಲು ಪ್ರಯತ್ನಿಸಿ. ಆದರೆ ನೀರು ಹಾಕದೇ ನಿರಂತರ ಒಣಗಿಸಿದರೆ ಗಿಡಕ್ಕೆ ಹಾನಿಯಾಗುವುದು.

ಸಣ್ಣ ಬಾಲ್ಕನಿಯಲ್ಲಿ ಕೈತೋಟವನ್ನು ಪ್ರಾರಂಭಿಸುವುದು ಸವಾಲಿನಂತೆ ಕಾಣಬಹುದು ಆದರೆ ಮನೆಯಲ್ಲಿ ನಿಮ್ಮ ಸ್ವಂತ ತರಕಾರಿಗಳನ್ನು ಬೆಳೆಸಲು ಇದು ಸುಲಭ ಮತ್ತು ಅತ್ಯಂತ ಲಾಭದಾಯಕ ಮಾರ್ಗಗಳಲ್ಲಿ ಒಂದಾಗಿದೆ.