ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಹೋಗಲು ನಿರ್ಧರಿಸಿದ ತಾಯಿಯೊಬ್ಬಳ ವೈರಲ್ ವಿಡಿಯೋ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಅಮ್ಮ, ಅಮ್ಮಾ…, ಎಂದು ಮಕ್ಕಳು ಕಣ್ಣೀರಿಟ್ಟು ಗೋಗರೆಯುತ್ತಿದ್ದರೂ ಲೆಕ್ಕಿಸದೇ, ಮಕ್ಕಳನ್ನು ದೂಡಿ ಪ್ರಿಯಕರನೊಂದಿಗೆ ಹೋದ ತಾಯಿ ನಡೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು (ಆ.31): ಕೌಟುಂಬಿಕ ಸಂಬಂಧಗಳ ಪವಿತ್ರತೆಯನ್ನು ಪ್ರಶ್ನಿಸುವಂತಹ ಒಂದು ಘಟನೆ ಇತ್ತೀಚೆಗೆ ನಡೆದಿದೆ. ತನ್ನ ಗಂಡನಿಗೆ ವಿಚ್ಛೇದನ ನೀಡಿ, ತನ್ನ ಪ್ರಿಯಕರನೊಂದಿಗೆ ಹೋಗಲು ಹೊರಟ ತಾಯಿಯೊಬ್ಬಳಿಗೆ ಆಕೆಯ ಪುಟ್ಟ ಮಕ್ಕಳು ಅಮ್ಮಾ ನಮ್ಮನ್ನು ಬಿಟ್ಟು ಹೋಗಬೇಡ ಎಂದು ಕೈಮುಗಿದು ಬೇಡಿಕೊಳ್ಳುತ್ತಿರುವ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೀಕ್ಷಣೆ ಮಾಡಿದವರ ಮನಸ್ಸನ್ನು ಕಲಕಿದೆ. ಸಾಮಾನ್ಯವಾಗಿ, ತಾಯಿ ತನ್ನ ಮಕ್ಕಳಿಗೆ ಯಾವುದೇ ಪರಿಸ್ಥಿತಿಯಲ್ಲಿ ಅನ್ಯಾಯ ಮಾಡುವುದಿಲ್ಲ ಎಂಬ ನಂಬಿಕೆಯಿದೆ. ಆದರೆ ಈ ಘಟನೆಯು ಆ ನಂಬಿಕೆಗೆ ವಿರುದ್ಧವಾಗಿದೆ.

ಕುಟುಂಬ ಹಾಗೂ ಕರುಳ ಬಳ್ಳಿ ಬಂಧಗಳನ್ನು ಕಡೆಗಣಿಸಿದ ಪ್ರೀತಿ:

ಘಟನೆಯ ವಿಡಿಯೋದಲ್ಲಿ, ತನ್ನ ಪ್ರೀತಿಯ ತಾಯಿ ತಮ್ಮನ್ನು ಬಿಟ್ಟು ಹೋಗಬಾರದು ಎಂದು ಮಕ್ಕಳು ಪರಿಪರಿಯಾಗಿ ಬೇಡಿಕೊಳ್ಳುವುದನ್ನು ಕಾಣಬಹುದು. ಆದರೆ ಆ ತಾಯಿಯ ಮನಸ್ಸು ಕರಗುವುದಿಲ್ಲ. ತನ್ನ ತಾಯಿಯನ್ನು ತಡೆದ ಮಗಳನ್ನು ದೂರ ತಳ್ಳಿ, 'ನಿಮಗಿಂತ ನನಗೆ ನನ್ನ ಪ್ರಿಯಕರನೇ ಮುಖ್ಯ' ಎಂದು ಹೇಳುತ್ತಾಳೆ. ಈ ಮಾತುಗಳು ಆಕೆಯ ನಿರ್ದಯಿ ಮನಸ್ಸನ್ನು ತೋರಿಸುತ್ತಿದ್ದು, ಮಕ್ಕಳ ಕಣ್ಣುಗಳಲ್ಲಿನ ಅಸಹಾಯಕತೆ ಮನ ಕರಗಿಸುವಂತಿದೆ.

ಮಾನವೀಯತೆ ಮರೆತ ನಡವಳಿಕೆ:

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅನೇಕರು ಈ ತಾಯಿಯ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರೀತಿ, ಸಂಬಂಧ, ಮತ್ತು ಜವಾಬ್ದಾರಿಗಳ ನಡುವಿನ ಸೂಕ್ಷ್ಮ ರೇಖೆಯನ್ನು ಈ ಘಟನೆ ಮೀರಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಆ ತಾಯಿಗೆ ಪ್ರಿಯಕರನ ಮೇಲಿನ ವ್ಯಾಮೋಹ ಮಕ್ಕಳ ಭವಿಷ್ಯಕ್ಕಿಂತ ಮುಖ್ಯವಾಗಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ತಾಯಿ ಎಂತಹದ್ದೇ ಕಷ್ಟದ ಸಂದರ್ಭ ಬಂದರೂ ತನ್ನ ಮಕ್ಕಳಿಗೆ ಮಾತ್ರ ಮೋಸ ಮಾಡುವುದಿಲ್ಲ ಎಂಬ ಮಾತನ್ನು ಹಾಗೂ ಅನೇಕ ಘಟನೆಗಳನ್ನು ನೋಡುತ್ತಾ ಬಂದಿರುವ ಭಾರತೀಯ ಸಮಾಜದಲ್ಲಿ ಈ ಘಟನೆ ಎಲ್ಲದಕ್ಕೂ ತದ್ವಿರುದ್ಧ ಎಂಬಂತೆ ಕಾಣಿಸುತ್ತದೆ. ತಾಯಿಯ ಬಗೆಗಿನ ಎಲ್ ಕಲ್ಪನೆಗಳನ್ನು ಈ ಒಂದು ಘಟನೆ ಬುಡಮೇಲು ಮಾಡುವಂತೆ ಕಾಣಿಸುತ್ತದೆ.

Scroll to load tweet…


ಈ ವಿಡಿಯೋ ಎಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ, ಆದರೆ ಸ್ಥಳೀಯರ ಉಡುಪು ಮತ್ತು ಸಂಸ್ಕೃತಿಯನ್ನು ಗಮನಿಸಿದರೆ ಇದು ಉತ್ತರ ಭಾರತದಲ್ಲಿ ನಡೆದಿದೆ ಎಂದು ಅಂದಾಜಿಸಲಾಗಿದೆ. ಟಿವಿ1ಇಂಡಿಯಾ ಎಂಬ ಖಾಸಗಿ ಮಾಧ್ಯಮದಿಂದ ಸುದ್ದಿ ಮಾಡಲಾಗಿದ್ದು, ಇದನ್ನು 'ಮಿಸ್ ಮೋಹಿನಿ' ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಘಟನೆಯು ಹಲವರ ಹೃದಯವನ್ನು ಕಲಕುವಂತೆ ಮಾಡಿದೆ. ಇಲ್ಲಿ ಕುಟುಂಬದ ಪಾವಿತ್ರ್ಯತೆ ಮತ್ತು ಮಕ್ಕಳ ಮನಸ್ಸಿನ ಮೇಲೆ ಈ ರೀತಿಯ ಘಟನೆಗಳು ಬೀರುವ ಪರಿಣಾಮದ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುವಂತಾಗಿದೆ.