ಎಐ ಬಳಸಿ ಬ್ಲ್ಯಾಕ್‌ಮೇಲ್‌ ಮಾಡಿದ ಪರಿಣಾಮ ಅಮೆರಿಕಾದಲ್ಲಿ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಎಐ ಬಳಕೆಯ ಅಪಾಯಗಳ ಬಗ್ಗೆ ಎಚ್ಚರಿಕೆಯ ಗಂಟೆಯಾಗಿದೆ. ಮಕ್ಕಳನ್ನು ಆನ್‌ಲೈನ್‌ ಅಪಾಯಗಳಿಂದ ರಕ್ಷಿಸಲು ಪೋಷಕರು ಜಾಗೃತರಾಗಿರಬೇಕು.

ಎಐ (ಆರ್ಟಿಫಿಷಿಯಲ್‌ ಇಂಟಲಿಜೆನ್ಸ್)‌ ಬಂದಾಗ ಮೊದಲಿಗೆ ಅದರಿಂದ ಸಮಾಜಕ್ಕೆ ಒಳಿತಾದ ಏನೇನೋ ಮಾಡಬಹುದು ಎಂಬ ಆಸೆಯಿತ್ತು. ಸುಮಾರು ಕೆಲಸಗಳೂ ಆ ನಿಟ್ಟಿನಲ್ಲಿ ಆದವು. ಆದರೆ ಈಗ ಮೀಡಿಯಾಗಳಲ್ಲಿ ಎಐ ಪರಿಣಾಮದ ಕುರಿತ ಸುದ್ದಿಗಳನ್ನು ನೋಡಿದರೆ ಎದೆ ಒಡೆದೇ ಹೋಗುತ್ತದೆ. ಎಐ ತಂತ್ರಜ್ಞಾನ ನಮ್ಮೆಲ್ಲರ ಬದುಕಿನ ಭಾಗವಾಗುತ್ತಿದೆ. ಈ ನಡುವೆ ಎಐ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದನ್ನು ಕೆಟ್ಟ ಕೆಲಸಗಳಿಗೂ ಉಪಯೋಗಿಸಿಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗಿದೆ.

ಅಮೆರಿಕಾದಲ್ಲಿ ಹೀಗೆ ಎಐ ಬಳಸಿ ಬ್ಲ್ಯಾಕ್‌ಮೇಲ್‌ ಮಾಡಿದ ಪರಿಣಾಮ ಒಬ್ಬ ಬಾಲಕನ ಜೀವವೇ ಹೋಗಿದೆ. ಕೆಂಟುಕಿಯ ಎಲಿಜಾ ಎಲಿ ಹೀಕಾಕ್‌ ಎಂಬ 16 ವರ್ಷದ ಬಾಲಕನಿಗೆ ಅನಾಮಧೇಯ ವ್ಯಕ್ತಿಯೊಬ್ಬ ಆತನದೇ ನಗ್ನ ಫೋಟೋಗಳನ್ನು ಕಳುಹಿಸಿ, 3,000 ಡಾಲರ್‌ ಕೊಡದಿದ್ದರೆ ಇವುಗಳನ್ನು ಆತನ ಸ್ನೇಹಿತರು ಮತ್ತು ಕುಟುಂಬಕ್ಕೆ ಕಳಿಸುವುದಾಗಿ ಬೆದರಿಕೆ ಹಾಕಿದ. ಇದರಿಂದ ಭಯಭೀತನಾದ ಎಲಿಜಾ, ಅಪ್ಪನ ಗನ್‌ನಿಂದ ಗುಂಡು ಹಾರಿಸಿಕೊಂಡು ಸತ್ತ. ಆ ಫೋಟೋಗಳು ಎಐಯಿಂದ ರಚಿತವಾದವು, ಅವು ನಕಲಿ ಎಂದು ಎಲಿಜಾಗೆ ತಿಳಿದಿರಲಿಲ್ಲ.

ವಿಚಿತ್ರ ಎಂದರೆ ಎಫ್‌ಬಿಐ ಇದೀಗ ಈ ಬ್ಲ್ಯಾಕ್‌ಮೇಲ್‌ ಮಾಡಿದ ಪಾತಕಿಗಳನ್ನು ಹುಡುಕುತ್ತಿದೆ. ಈ ಪಾತಕಿಗಳು ಬಲ ನಾಜೂಕಾಗಿ ಇವನ ಮುಖದ ಫೋಟೋ ಬಳಸಿಕೊಂಡು, ಅದಕ್ಕೆ ಸರಿಯಾದ ನಗ್ನ ದೇಹದ ಫೋಟೋ ಕ್ರಿಯೇಟ್‌ ಮಾಡಿ ಅಂಟಿಸಿ, ಆತನಿಗೇ ಕಳಿಸಿ ಬೆದರಿಕೆ ಹಾಕಿದ್ದರು. ವ್ಯತ್ಯಾಸವೇ ಗೊತ್ತಾಗುವಂತೆ ಇರಲಿಲ್ಲ. ಈ ಪಾತಕಿಗಳು ಆನ್‌ಲೈನ್‌ ಮೂಲಕ ಎಲ್ಲವನ್ನೂ ಮಾಡಿರುವುದರಿಂದ, ಎಫ್‌ಬಿಐಗೂ ಅದರ ಮೂಲ ಹುಡುಕುವುದು ಕಷ್ಟವಾಗಿದೆ. ಈ ಜಾಲ ಹೇಗೆ ಕೆಲಸ ಮಾಡುತ್ತಿದೆ ಎಂಬುದು ಪೊಲೀಸರಿಗೆ ಗೊತ್ತಿಲ್ಲ.

ಒಮ್ಮೆ ಯೋಚಿಸಿ ನೋಡಿ, ನಾವು ನಮ್ಮ ಫೋಟೋವನ್ನು, ನಮ್ಮ ಮಕ್ಕಳ ಫೋಟೋವನ್ನು ಎಲ್ಲೆಂದರಲ್ಲಿ ಹೇಗೆ ಬೇಕೋ ಹಾಗೆ ಯೂಸ್‌ ಮಾಡುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುತ್ತೇವೆ. ಒಂದು ಕ್ಷಣವೂ, ಈ ಫೋಟೋಗಳು ದುಷ್ಕರ್ಮಿಗಳ ಪಾಲಾದರೆ ಏನು ಗತಿ ಎಂದು ಯೋಚಿಸುವುದೇ ಇಲ್ಲ. ಇದೀಗ ಎಐ ಆಪ್‌ಗಳ ಮೂಲಕ ದುಷ್ಕರ್ಮಿಗಳಿಗೆ ಅವರ ಕೆಲಸ ಬಹು ಸುಲಭವಾಗಿದೆ. ಇವರು ಯಾರ ನಗ್ನ ಫೋಟೋಗಳನ್ನೂ ರಿಯಲ್‌ ಎಂಬಂತೆಯೇ ಕಾಣಿಸುವಂತೆ ಸೃಷ್ಟಿಸಬಲ್ಲರು. ಅದಕ್ಕೇ ಎಚ್ಚರಿಕೆಯ ಅಗತ್ಯವಿದೆ.

ಕೆಲವೊಮ್ಮೆ ಇನ್ನೊಂದು ರೀತಿಯಲ್ಲೂ ಈ ಅಪರಾಧ ನಡೆಯುತ್ತದೆ. ಒಂದು ಗ್ಯಾಂಗ್ AI ಮೂಲಕ ಹುಡುಗಿಯರ ನ್ಯೂಡ್ ವೀಡಿಯೊಗಳನ್ನು ಮಾಡುತ್ತದೆ. ವಾಟ್ಸಾಪ್ ಮೂಲಕ ಕಾಲೇಜು ಹುಡುಗಿಯರಿಗೆ ಕಳುಹಿಸಿ, ನಿಮಗೆ ವಾಟ್ಸ್​ಆ್ಯಪ್​ಗೆ ಸಂದೇಶವನ್ನು ಕಳುಹಿಸಲಾಗಿದೆ ಎಂದು ಮೆಸೇಜ್ ಕಳುಹಿಸುತ್ತಾರೆ. ಹುಡುಗಿಯರು ವಿಡಿಯೋ ನೋಡಿದಾಗ ಈ ಗ್ಯಾಂಗ್ ಬ್ಲ್ಯಾಕ್‌ಮೇಲ್ ಮಾಡುತ್ತದೆ. 'ನೀವು ನಗ್ನ ವೀಡಿಯೊಗಳನ್ನು ನೋಡುತ್ತಿದ್ದೀರಿ, ನಾವು ನಿಮ್ಮ ಶಿಕ್ಷಕರು ಮತ್ತು ನಿಮ್ಮ ಪೋಷಕರಿಗೆ ತಿಳಿಸುತ್ತೇವೆ' ಎಂದು ಬೆದರಿಕೆ ಹಾಕಿ ಹಣ ದೋಚುತ್ತಾರೆ.

ಹಾಗಾದರೆ ನಮ್ಮ ಮಕ್ಕಳನ್ನು ಇದರಿಂದ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿವೆ ಕೆಲವು ಟಿಪ್ಸ್:‌

- ನಿಮ್ಮ ಮಕ್ಕಳ ಫೋಟೋಗಳನ್ನು ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಡಿ.

- ಮಕ್ಕಳಿಗೂ ಇದರ ಬಗ್ಗೆ ಅರಿವು ಮೂಡಿಸಿ. 18 ವರ್ಷ ತುಂಬುವುದಕ್ಕೆ ಮೊದಲು ಯಾವುದೇ ಸೋಶಿಯಲ್‌ ಮೀಡಿಯಾದ ಸಂಗ ಅವರಿಗೆ ಬೇಡ. ವಾಟ್ಸ್ಯಾಪ್‌ ಸ್ಟೇಟಸ್‌, ಡಿಪಿಯಲ್ಲೂ ಫೋಟೋ ಹಂಚಿಕೊಳ್ಳದಿರಿ.

- ಮಕ್ಕಳೊಂದಿಗೆ ಈ ವಿಚಾರ ಮುಕ್ತವಾಗಿ ಮಾತನಾಡಿ. ಇಂಥ ಅಪಾಯಗಳ ಬಗ್ಗೆ ತಿಳಿಹೇಳಿ. ಎಐಯ ಅಪಾಯಗಳ ಬಗ್ಗೆ ಮಾಹಿತಿ ನೀಡಿ.

- ಒಂದು ವೇಳೆ ಇಂಥ ಬ್ಲ್ಯಾಕ್‌ಮೇಲ್‌ಗಳಿಗೆ ನಿಮ್ಮ ಮಕ್ಕಳು ತುತ್ತಾದರೆ, ಅದರ ಬಗ್ಗೆ ನಿರ್ಬೀತವಾಗಿ ಮಾತನಾಡಬಲ್ಲಂಥ ವಾತಾವರಣವನ್ನು ಮನೆಯಲ್ಲಿ ಸೃಷ್ಟಿಸಿ.

- ಇಂಥ ಬ್ಲ್ಯಾಕ್‌ಮೇಲ್‌ ಅಥವಾ ಬೆದರಿಕೆಗೆ ತುತ್ತಾದಾಗ ಯಾವ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂಬ ಮಾಹಿತಿ ನಿಮ್ಮಲ್ಲಿರಲಿ.

- ನಿಮ್ಮ ಹಾಗೂ ನಿಮ್ಮ ಮಕ್ಕಳ ಸೋಶಿಯಲ್‌ ಮೀಡಿಯಾ, ಫೋನ್‌ಗಳಲ್ಲಿ ಪ್ರೈವೆಸಿ ಸೆಟ್ಟಿಂಗ್‌ಗಳು ಇರಲಿ.

- ನಿಮ್ಮ ಫೋನ್‌ನ ಪೇರೆಂಟಲ್‌ ಕಂಟ್ರೋಲ್‌ ನಿಮ್ಮಲ್ಲಿರಲಿ. ಆನ್‌ಲೈನ್ ಅಪಾಯಗಳ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಿ. ವಂಚನೆಗಳು, ಸೈಬರ್‌ಬುಲ್ಲಿಂಗ್, ಅನುಚಿತ ವಿಷಯ ಮತ್ತು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ಅಪಾಯ ತಿಳಿಸಿ.