Dakshina Kannada: ಅಡಿಕೆ ಬೆಳೆಗಾರರಿಗೆ ಗುಡ್‌ ನ್ಯೂಸ್: ಕೊಯ್ಲು, ಔಷಧಿ ಸಿಂಪಡಣೆಗೆ ನುರಿತ ಸಿಬ್ಬಂದಿಯ ತಂಡ!

*ಅಡಿಕೆ ಕೊಯ್ಲು, ಔಷಧಿ ಸಿಂಪಡಣೆಗೆ ನುರಿತ ಸಿಬ್ಬಂದಿಯ ತಂಡ 
*ಫೈಬರ್ ದೋಟಿ ಬಳಸಿ ಅಡಕೆ ಕೊಯ್ಲು ಔಷಧಿ ಸಿಂಪಡಣೆ ವ್ಯವಸ್ಥೆ
*ಬೆಳೆಗಾರರ ಆತಂಕ ಹಾಗೂ ಶ್ರಮ ಕಡಿಮೆ,  ಕ್ಲಪ್ತ ಸಮಯದಲ್ಲಿ ಕೊಯ್ಲು
*ಉತ್ತರ ಕನ್ನಡ ಕಡೆ ಈಗಾಗಲೇ ಜನಪ್ರಿಯವಾಗಿರುವ ಫೈಬರ್ ದೋಟಿ
*ಔಷಧಿ ಸಿಂಪಡಣೆ ವೇಳೆ ಔಷಧ ವ್ಯರ್ಥವಾಗಲ್ಲ, ಕೃಷಿಕರಿಗೆ ಉಳಿತಾಯ 

First Published Feb 21, 2022, 12:01 PM IST | Last Updated Feb 21, 2022, 7:21 PM IST

ಬಂಟ್ವಾಳ (ಫೆ. 21): ಕೈಯ್ಯಲ್ಲಿ ಐದಾರು ಅಡಿ ಉದ್ದದ ಫೈಬರ್ ದೋಟಿ, ಜೊತೆಗೆ ವಿಶಿಷ್ಟವಾದ ಬಲೆ, ತಲೆಗೆ ಹೆಲ್ಮೆಟ್ ಧರಿಸಿ ಸಮವಸ್ತ್ರದಲ್ಲಿ ಸಾಗುತ್ತಿರುವ ಯುವಕರು. ಈ ದೃಶ್ಯಗಳು ಕಂಡು ಬಂದದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿ ಕಜೆ ಎಂಬ ಪುಟ್ಟ ಊರಿನಲ್ಲಿ. ಹೌದು. ಕಳೆದ ಐದು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವ ‘ಪಿಂಗಾರ’ ತೋಟಗಾರಿಕಾ ರೈತ ಉತ್ಪಾಾದಕ ಕಂಪನಿ ಅಡಕೆ ಬೆಳೆಗಾರರಿಗೆ ಅಡಕೆ ಕೊಯ್ಲು ಹಾಗೂ ಔಷಧಿ ಸಿಂಪಡಣೆಗೆ ಫೈಬರ್ ದೋಟಿ ಸಹಿತ ನೆರವಾಗಲು ನುರಿತ ಸಿಬ್ಬಂದಿಯ ತಂಡ ರಚಿಸಿದೆ. 

ನೂತನ ತಂಡಕ್ಕೆ ಇತ್ತೀಚೆಗೆ ಬಂಟ್ವಾಳ ತಾಲೂಕು ಮಂಚಿ ಕಜೆಯಲ್ಲಿರುವ, ಪಿಂಗಾರ ಸಂಸ್ಥೆ ಅಧ್ಯಕ್ಷ ರಾಮ್‌ಕಿಶೋರ್ ಮಂಚಿ ಅವರ ತೋಟದಲ್ಲಿ ತರಬೇತಿ ನೀಡಲಾಯಿತು. ಉತ್ತರ ಕನ್ನಡ ಶಿರಸಿ ಭಾಗದಲ್ಲಿ ಖಾಸಗಿಯಾಗಿ ಅನೇಕ ಮಂದಿ ಫೈಬರ್ ದೋಟಿ ಮೂಲಕ ಅಡಕೆ ಕೊಯ್ಲು ಜಾಬ್ ವರ್ಕ್ ಮಾಡುತ್ತಿದ್ದರೂ, ರೈತ ಉತ್ಪಾದಕ ಕಂಪನಿಯೊಂದು ಅಡಕೆ ಕೊಯ್ಲಿಗೆ ಜಾಬ್ ವರ್ಕ್ ತಂಡ ರಚಿಸುತ್ತಿರುವುದು ಇದು ರಾಜ್ಯದಲ್ಲೇ ಪ್ರಥಮ ಪ್ರಯತ್ನ.

ಇದನ್ನೂ ಓದಿ: ಮಂಗಳೂರು, ಜಾಗ ಕೊಟ್ಟವರ  ಪಾಡು.. ಪ್ರತಿ ದಿನ ರೈಲಿನಡಿ ಸ್ಟಂಟ್..ಸರ್ಕಸ್!
 
ಕ್ಯಾಂಪ್ಕೊ ಉಪಾಧ್ಯಕ್ಷ ಶಂ.ನಾ.ಖಂಡಿಗೆ ಹಾಗೂ ಕ್ಯಾಂಪ್ಕೊ  ಮಾಜಿ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು ಮಂಚಿ ಕಜೆಯಲ್ಲಿ ತರಬೇತಿ ಕಾರ್ಯಕ್ರಮ ಉದ್ಘಾಾಟಿಸಿದರು. ಪ್ರಸ್ತುತ ರಾಜ್ಯದಲ್ಲಿ ಫೈಬರ್ ದೋಟಿಗೆ ಮಾರುಕಟ್ಟೆ ಒದಗಿಸುತ್ತಿರುವ ಹಾಸನ ಮೂಲದ ಬಾಲಸುಬ್ರಹ್ಮಣ್ಯಂ ಅವರು ವಿಷಯ ತಜ್ಞರಾಗಿ ಪಾಲ್ಗೊಂಡು ಪಿಂಗಾರ ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ಅಡಕೆ ಕೊಯ್ಲು ಹಾಗೂ ಔಷಧಿ ಸಿಂಪಡಣೆಯ ತರಬೇತಿ ನೀಡಿದರು. ಎರಡು ದಿನಗಳ ಕಾಲ ಸುಮಾರು ೧೦೦ಕ್ಕೂ ಅಧಿಕ ಮಂದಿ ರೈತರು, ಆಸಕ್ತರು ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡರು.  ಇಲ್ಲಿದೆ ಈ ಕುರಿತ ಒಂದು ವರದಿ. 

ದೋಟಿಯ ಕುರಿತು ಮಾಹಿತಿಗೆ ಬಾಲಸುಬ್ರಹ್ಮಣ್ಯಂ ಅವರ ಮೊಬೈಲ್ ಸಂಖ್ಯೆ 7259350487ಕ್ಕೆ ಕರೆ ಮಾಡಬಹುದು

Video Top Stories