Actor Naveen Mayurs Brother Shreyas Dies of Heart Attack ದಿವಂಗತ ನಟ ನವೀನ್ ಮಯೂರ್ ಅವರ ಸಹೋದರ, ಪತ್ರಕರ್ತ ಶ್ರೇಯಸ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಅವರ ತಂದೆ ರೈಲು ಅಪಘಾತದಲ್ಲಿ ಸಾವು ಕಂಡಿದ್ದರು.
ಬೆಂಗಳೂರು (ಅ.14): ಕನ್ನಡದ ಅತ್ಯಂತ ಸ್ಪುರದ್ರೂಪಿ ನಟರಲ್ಲಿ ಒಬ್ಬರಾಗಿದ್ದ ನಟ ನವೀನ್ ಮಯೂರ್ ತಮ್ಮ 31ನೇ ವಯಸ್ಸಿನಲ್ಲಿ ಜಾಂಡೀಸ್‌ನಿಂದ ಅಕಾಲಿಕವಾಗಿ ಸಾವು ಕಂಡಿದ್ದರು. 2010ರ ಅಕ್ಟೋಬರ್ 3 ರಂದು ಅವರ ಸಾವಿನ ಬಳಿಕ ನವೀನ್ ಮಯೂರ್ ಅವರ ಇಡೀ ಕುಟುಂಬವೇ ಕುಸಿದು ಹೋಗಿತ್ತು. ಮಗನ ನೆನಪಿನಲ್ಲಿಯೇ ಅವರ ತಾಯಿ ಕೂಡ ಕೆಲ ದಿನಗಳ ಬಳಿಕ ಸಾವು ಕಂಡಿದ್ದರು. ನಂತರ ಇದ್ದಿದ್ದು, ಇಡೀ ಮನೆಗೆ ಹಿರಿಯರಾಗಿದ್ದ ನವೀನ್ ಮಯೂರ್ ಅವರ ತಂದೆ ರಘುರಾಮನ್ ಹಾಗೂ ತಮ್ಮ ಶ್ರೇಯಸ್. ಆದರೆ, ಈ ವರ್ಷದ ಜುಲೈನಲ್ಲಿ ರೈಲು ಅಪಘಾತದಲ್ಲಿ ರಘುರಾಮನ್ ಕೂಡ ವಿಧಿವಶರಾಗಿದ್ದರು.
ತಂದೆಯ ಸಾವಿನ ನೋವಿನಲ್ಲಿ ಇರುವಾಗಲೇ ಈಗ ನವೀನ್ ಮಯೂರ್ ಅವರ ಸಹೋದರ ಹಾಗೂ ಪತ್ರಕರ್ತ ಶ್ರೇಯಸ್ ಹೃದಯಾಘಾತದಿಂದ ಮಂಗಳವಾರ ಸಾವು ಕಂಡಿದ್ದಾರೆ. ಈ ಬಗ್ಗೆ ನಟ, ನಿರ್ದೇಶಕ ರಘುರಾಮ್ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅದರೊಂದಿಗೆ ಅವರೊಂದಿಗೆ ನೂರೊಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಚಾರವನ್ನೂ ತಿಳಿಸಿದ್ದಾರೆ.
ರಘುರಾಮ್ ಅವರ ಫೇಸ್‌ಬುಕ್ ಪೇಜ್‌ನ ಪೋಸ್ಟ್..
ಜನವರಿ 2024, ನಾನು ನನ್ನ 'ನೂರೊಂದು ನೆನಪು' ಸರಣಿಗೆ ಸುರದ್ರೂಪಿ ನಟ ಶ್ರೀ ನವೀನ್ ಮಯೂರ ಅವರ ತಂದೆ ಹಾಗೂ ತಮ್ಮನನ್ನು ಸಂದರ್ಶನ ಮಾಡಿದ್ದೆ. ಆ ಸಂದರ್ಶನ ಆಗಲು ಮುಖ್ಯ ಕಾರಣನೇ ನವೀನ್ ಮಯೂರ್ ಅವರ ತಮ್ಮ ಶ್ರೇಯಸ್. ಇವರು TV9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾಗಲಿಂದಲೂ ಪರಿಚಯ. ಈಗ News 18ನಲ್ಲಿ Digital Head ಆಗಿ ಕಾರ್ಯ ನಿರ್ವಹಿಸುತ್ತಿದ್ದರು.. 'ನಿರ್ವಹಿಸುತ್ತಿದ್ದರು' ಅಂತ Past ನಲ್ಲಿ ಮಾತಾಡೋದೇ ತುಂಬಾ ಸಂಕಟ ಅನ್ಸುತ್ತೆ.
ಕೆಲ ವರ್ಷಗಳ ಹಿಂದೆ ಅಕಾಲಿಕ ಮರಣಕ್ಕೆ ನವೀನ್ ಮಯೂರ್ ತುತ್ತಾದರು. ಮಗನ ನೆನಪಿನಲ್ಲಿ, ಕೊರಗಿನಲ್ಲಿ, ಹಾಸಿಗೆ ಹಿಡಿದ ತಾಯಿಯೂ ಕೂಡ ಸ್ವಲ್ಪ ದಿನಗಳ ನಂತರ ಕೊನೆ ಉಸಿರೆಳೆದರು. ಆ ಮನೆಗೆ ಹಿರಿಯ ಹಾಗೂ ಗಟ್ಟಿ ಜೀವ ಆಗಿದ್ದಿದ್ದು ನವೀನ್ ಮಯೂರ್ ಅವರ ತಂದೆ ಶ್ರೀ ರಘುರಾಮನ್, ಹಾಗು ಆಸೆ, ಕನಸು, ನಂಬಿಕೆ ಇದ್ದಿದ್ದು ಅವರ ತಮ್ಮ ಶ್ರೇಯಸ್.

ಇದೇ ವರ್ಷ ಜುಲೈ 13 ಅಥವಾ 14 ಕಾರ್ಯನಿಮಿತವಾಗಿ ರೈಲಿನಲ್ಲಿ ಕೆ.ಜಿ.ಎಫ್ ಗೆ ಪ್ರಯಾಣಿಸುತ್ತಿದ್ದ ಶ್ರೀ ರಘುರಾಮನ್ ಅವರು ರೈಲು ಇಳಿಯಲು ಹೋಗಿ, ಕೆಳಗೆ ಬಿದ್ದು, ದೇಹದ ಅರ್ಧಭಾಗ ತುಂಡಾಗಿ ಈ ಭೂಮಿ ಬಿಟ್ಟು ಹೋದರು. ತಂದೆಯ ಆ ದುರಂತ ಅಂತ್ಯ ಮಗ ಶ್ರೇಯಸ್ ಅವರಿಗೆ ತುಂಬಾ ಕಾಡಿತ್ತು.
ಆಗಸ್ಟ್ 27, ಸುಮಾರು 36 ನಿಮಿಷಗಳ ಕಾಲ ನನ್ನೊಂದಿಗೆ ದೂರವಾಣಿಯಲ್ಲಿ ಮಾತಾಡಿ, ಅವರ ನೋವು, ತಂದೆಯ ಅಗಲಿಕೆ, ಮಗನಾಗಿ ಆಸ್ತಿಯ ವಿಚಾರಗಳಲ್ಲಿ ಅವರು ನಿರ್ವಹಿಸಬೇಕಾಗಿದ್ದ ಜವಾಬ್ದಾರಿಗಳು ಎಲ್ಲದರ ಬಗ್ಗೆಯೂ ಮಾತನಾಡಿ "ಏನೋ ನಿಮ್ಮ ಜೊತೆ ಮಾತಾಡಿದ್ರೆ ಸಮಾಧಾನ" ಅಂತ ಹೇಳಿದ್ರು.
ಈಗ ಮೊನ್ನೆ, ಅಕ್ಟೋಬರ್ 8 ನೇ ತಾರೀಕು, ನನಗೆ ತಲೆನೋವು ಬಂದು ಮೊಬೈಲ್ ಆರಿಸಿ ಮಲಗಿದ್ದೆ. ಎದ್ದ ನಂತರ ಮೊಬೈಲ್ On ಮಾಡಿದಾಗ ಶ್ರೇಯಸ್ ಅವರ missed call intimation ಬಂತು. ತಕ್ಷಣ ನಾನು ಕರೆ ಮಾಡಿದೆ. ಆಗ ಕೂಡ ಅವರು ಅವರ ತಂದೆಯ ಅಗಲಿಕೆಯ ಬಗ್ಗೆಯೇ ಮಾತನಾಡಿ "ನೀವು ಮಾಡಿದ ಸಂದರ್ಶನವನ್ನ ಯಾವಾಗ್ಲೂ ನೋಡ್ತಾ ಇರ್ತೀನಿ ಸರ್. ನಮ್ಮ ತಂದೆ ಅದರಲ್ಲಿ ಜೀವಂತವಾಗಿದ್ದಾರೆ ಅಂತ ನನಗೆ ತುಂಬಾ ಅನ್ಸುತ್ತೆ. ಸಂದರ್ಶನದಲ್ಲಿ ಅವರು ಬೇರೆ ಏನಾದರೂ ತಪ್ಪಾಗಿ ಮಾತನಾಡಿದರೆ ಮುಂದೆ ಪರಿಣಾಮ ಏನೇನಾಗುತ್ತೆ ಅಂತ ಹೆದರಿದ್ದೆ. ಆದರೆ ಅವರು ಎಷ್ಟು ಸ್ಪಷ್ಟವಾಗಿ, ನಿಖರವಾಗಿ, ಅರ್ಥಪೂರ್ಣವಾಗಿ ಮಾತಾಡಿದ್ದಾರೆ ಅಂತ ಆ ಸಂದರ್ಶನನ ನೋಡಿ ತಿಳ್ಕೋತಾ ಇದ್ದೀನಿ. ಇವತ್ತಿಗೂ ನನ್ನ ತಂದೆ ಇಲ್ಲ ಅನ್ನೋದು connect ಆಗ್ತಾ ಇಲ್ಲ. ಎಲ್ಲದಕ್ಕೂ ನಾನು ಅವರ ಮೇಲೆ depend ಆಗಿದ್ದೆ. ಯಾಕೋ ನಿಮ್ಮ ಹತ್ರ ಎಲ್ಲ ಹಂಚ್ಕೋಬೇಕು ಅನ್ನಿಸಿತು. ಕರೆ ಮಾಡಿದ್ದಕ್ಕೆ ತಪ್ಪಾಗಿ ತಿಳಿಯಬೇಡಿ" ಅಂತ ಶ್ರೇಯಸ್ ಅವರು ಹೇಳಿದಾಗ ಅವರನ್ನು ಸಮಾಧಾನಪಡಿಸಿ phone ಇಟ್ಟೆ.
ಆದರೆ ಶ್ರೇಯಸ್ ಅವರ ಧ್ವನಿಯಲ್ಲಿ ಅವರ ತಂದೆ ಇಲ್ಲದ ಒಂದು ನೋವು, ಹತಾಶೆ, ಹಣಕಾಸು ಆಸ್ತಿ ವ್ಯವಹಾರದ ಜವಾಬ್ದಾರಿಗಳು, ಮುಂದೇನು ಅನ್ನೋ ಪ್ರಶ್ನೆಗಳು ಆತಂಕಗಳು, ಭಯ, ಗಾಬರಿ ಎಲ್ಲವೂ ತಿಳಿಯುತ್ತಿತ್ತು.
ಇವತ್ತು ಸಂಜೆ 'ನೂರೊಂದು ನೆನಪು' ಚಿತ್ರಿಕರಣದಲ್ಲಿ ಇರಬೇಕಾದರೆ "ಶ್ರೇಯಸ್ ಅವರು ಇನ್ನಿಲ್ಲ, ಹೃದಯಾಘಾತದಿಂದ ಕಾಲವಾಗಿದ್ದಾರೆ" ಅನ್ನೋ ಸುದ್ದಿ ಓದಿ ಕೆಲ ಹೊತ್ತು ನನಗೆ ಕ್ಯಾಮೆರಾ ಮುಂದೆ ಏನೂ ಮಾತನಾಡಲು ಆಗಲಿಲ್ಲ. ನಾನು ಕೂಡ ಕೆಲವು ಸಮಯ ಮೌನಕ್ಕೆ ಶರಣಾಗಿ ಬಿಟ್ಟೆ.
ನನ್ನ ಚಿತ್ರೀಕರಣ ಮುಗಿಸಿ ಶ್ರೇಯಸ್ ಅವರ ಶ್ರೀಮತಿಯ ಬಳಿ ಮಾತನಾಡಿದೆ. ಆ ಹೆಣ್ಣು ಮಗಳು ಎದುರಿಸುತ್ತಿರುವ ಸವಾಲು, ಅವರ ಪುಟ್ಟ ಮಗ, ತಂದೆಯ ಅಗಲಿಕೆಯನ್ನು ಅರಿಯದ ವಯಸ್ಸು. ಇದನ್ನೆಲ್ಲಾ ಕೇಳಿ, ನೋಡಿ, ಮನಸು ತುಂಬಾ ಭಾರ ಆಗಿದೆ.
ಒಂದೇ ಮಾತು ಅವರ ಶ್ರೀಮತಿಗೆ ಹೇಳಿದ್ದು "ಸೋದರನ ಸ್ಥಾನದಲ್ಲಿ ಸದಾ ನಿಮ್ಮೊಂದಿಗೆ ಇರ್ತೀನಿ. ಯಾವಾಗ ಏನು ಬೇಕಿದ್ರೂ ಒಂದು ಮಾತು ನಮಗೆ ತಿಳಿಸಿ. ಈ ದುಃಖವನ್ನು ತಡೆಯುವ ಶಕ್ತಿ ಭಗವಂತ ನಿಮ್ಮ ಕುಟುಂಬಕ್ಕೆ ಕರುಣಿಸಲಿ".
ನವೀನ್ ಮಯೂರ್ ಇಂದ ಪ್ರಾರಂಭವಾದ ದುರಂತದ ಅಂತ್ಯಗಳು, ಅವರ ತಾಯಿ, ತಂದೆ, ಈಗ ತಮ್ಮ ಶ್ರೇಯಸ್ ಮೂಲಕ ಅಂತ್ಯಗೊಂಡಿದೆ. ದೈಹಿಕವಾಗಿ ನೀವು ಇಲ್ಲದಿದ್ದರೂ, ನೀವು ನನ್ನೊಂದಿಗೆ ಫೋನ್ನಲ್ಲಿ ನಡೆಸಿದ ಮಾತುಕತೆ, ಹಾಗೂ ನೀವು ಹಾಗೂ ನಿಮ್ಮ ತಂದೆಯವರು ನನಗೆ ಕೊಟ್ಟ ಸಂದರ್ಶನ ಎಂದೆಂದಿಗೂ ಜೀವಂತವಾಗಿಯೇ ಇರುತ್ತದೆ.
ದೇವರಿಗೆ ದಯೆ ಇಲ್ಲ, ಸಾವೆದುರು ಜಯವಿಲ್ಲ.
