Veteran Kannada Actor MS Umesh Critical 'ಅಪಾರ್ಥ ಮಾಡ್ಕೋಬೇಡಿ' ಎಂಬ ಸಂಭಾಷಣೆಯಿಂದ ಖ್ಯಾತರಾದ ಹಿರಿಯ ಹಾಸ್ಯ ನಟ ಎಂ.ಎಸ್. ಉಮೇಶ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮನೆಯಲ್ಲಿ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದಾರೆ.
ಬೆಂಗಳೂರು (ಅ.10): ಅಪಾರ್ಥ ಮಾಡ್ಕೋಬೇಡಿ ಅನ್ನೋ ಡೈಲಾಗ್‌ನಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಫೇಮಸ್ ಆಗಿದ್ದ ಹಿರಿಯ ನಟ ಹಾಗೂ ಹಾಸ್ಯ ಕಲಾವಿದ ಉಮೇಶ್ ಅವರ ಸ್ಥಿತಿ ಗಂಭೀರವಾಗಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಶುಕ್ರವಾರ ಮನೆಯಲ್ಲಿಯೇ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರಿನ ಮುದ್ದಿನಪಾಳ್ಯದಲ್ಲಿ ತಮ್ಮ ಕುಟುಂಬದೊಂದಿಗೆ ಅವರು ವಾಸವಾಗಿದ್ದರು. 70 ವರ್ಷದ ಉಮೇಶ್ ಅವರ ಸ್ಥಿತಿ ಸದ್ಯ ಗಂಭೀರವಾಗಿದ್ದು, ಆಂಬುಲೆನ್ಸ್ ಮೂಲಕ ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಅವರನ್ನು ಕುಟುಂಬಸ್ಥರು ಕರೆದುಕೊಂಡು ಬಂದಿದ್ದಾರೆ.
ಮೈಸೂರು ಶ್ರೀಕಂಠಯ್ಯ ಉಮೇಶ್, ಎಂಎಸ್ ಉಮೇಶ್ ಎಂದೇ ಕನ್ನಡ ಸಿನಿ ಜಗತ್ತಿಗೆ ಪರಿಚಿತರು. ಅಂದಾಜು 6 ದಶಕಗಳ ಕಾಲ ಸಾಕಷ್ಟು ಸಿನಿಮಾಗಳಲ್ಲಿ ವಿವಿಧ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದು, ಅವರ ಆರೋಗ್ಯ ಚೇತರಿಕೆ ಕಾಣಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಬಾಲ್ಯದಲ್ಲಿ ಸಾಕಷ್ಟು ರಂಗಭೂಮಿ ನಾಟಕಗಳಲ್ಲಿ ನಟಿಸಿದ್ದ ಉಮೇಶ್, 1960ರಲ್ಲಿ ಮಾಣಿಕ್ಯ ರಾಜ ಸಿನಿಮಾದ ಮೂಲಕ ಮುಖ್ಯ ಪಾತ್ರ ಮಾಡಲು ಆರಂಭಿಸಿದ್ದರು. ಇಲ್ಲಿಯವರೆಗೂ ಅವರು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮ ಕಾಮಿಡಿ ಟೈಮಿಂಗ್, ಮುಖಭಾವ ಹಾಗೂ ಅಪರೂಪದ ಡೈಲಾಗ್ ಡೆಲಿವರಿ ಮೂಲಕ ಅವರು ಸಿನಿರಂಗದಲ್ಲಿ ಫೇಮಸ್ ಆಗಿದ್ದಾರೆ.
ಸೀತಾಪತಿ ಪಾತ್ರದ ಮೂಲಕ ಫೇಮಸ್
1960ರಲ್ಲಿ ಅನಂತ್‌ನಾಗ್ ನಟಿಸಿದ್ದ ಗೋಲ್‌ಮಾಲ್ ರಾಧಾಕೃಷ್ಣ ಸಿನಿಮಾದಲ್ಲಿ ಸೀತಾಪತಿ ಎನ್ನುವ ಪಾತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಈ ಸಿನಿಮಾದಲ್ಲಿ 'ಅಪಾರ್ಥ ಮಾಡ್ಕೊಂಡ್ಬಿಟ್ರೋ ಏನೋ..' ಅನ್ನೋ ಡೈಲಾಗ್‌ಅನ್ನು ಈಗಲೂ ಕೂಡ ಜನ ಸ್ಮರಿಸಿಕೊಳ್ಳುತ್ತಾರೆ. ಅದರೊಂದಿಗೆ ರಮೇಶ್ ಅರವಿಂದ್ ನಿರ್ದೇಶನದ ವೆಂಕಟ ಇನ್ ಸಂಕಟ ಸಿನಿಮಾದಲ್ಲಿ ಹಲ್ಲಿಲ್ಲದ ಅಜ್ಜಿ ಪಾತ್ರದಲ್ಲಿ ಇವರ ನಟನೆಯಂತೂ ಅದ್ಭುತ. 1975ರಲ್ಲಿ ಕಥಾ ಸಂಗಮ ಸಿನಿಮಾದಲ್ಲಿನ ನಟನೆಗಾಗಿ ರಾಜ್ಯ ಸರ್ಕಾರದಿಂದ ಶ್ರೇಷ್ಠ ಪೋಷಕ ನಟ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.
