Actor Mandya Ramesh: ಕನ್ನಡದ ಹಿರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರಿಗೆ ಆಂಧ್ರ ಪ್ರದೇಶದಲ್ಲಿ ಪಾದಪೂಜೆ ಮಾಡಲಾಗಿದೆ. ಹೌದು, ಕನ್ನಡತಿ ಈ ಪೂಜೆ ಮಾಡಿ, ಗುರುವನ್ನು ಸ್ಮರಿಸಿರೋದು ವಿಶೇಷ.
ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದ ಮೇಘನಾ ಲೋಕೇಶ್ ಅವರು ಕೆಲ ವರ್ಷಗಳಿಂದ ತೆಲುಗು ಧಾರಾವಾಹಿಗಳಲ್ಲಿ ಬ್ಯಾಕ್ ಟು ಬ್ಯಾಕ್ ನಟಿಸುತ್ತಿದ್ದಾರೆ. ಜೀ ಕುಟುಂಬ ಅವಾರ್ಡ್ಸ್ ಶೋನಲ್ಲಿ ಮೇಘನಾ ಅವರ ಗುರು ಮಂಡ್ಯ ರಮೇಶ್‌ರನ್ನು ಕರೆಸಲಾಗಿತ್ತು. ಇದು ಮೇಘನಾಗೆ ಸರ್ಪ್ರೈಸ್ ಆಗಿತ್ತು.
ಮಂಡ್ಯ ರಮೇಶ್ ನಟನಾ
ಮಂಡ್ಯ ರಮೇಶ್ ಅವರು ನಟನಾ ಎನ್ನುವ ರಂಗಸಂಸ್ಥೆಯನ್ನು ನಡೆಸುತ್ತಿದ್ದಾರೆ. ಈ ಮೂಲಕ ಸಾಕಷ್ಟು ನಾಟಕಗಳು ಆಗುತ್ತವೆ, ನಟನೆ ಕಲಿಸಿಕೊಡಲಾಗುವುದು, ಅಷ್ಟೇ ಅಲ್ಲದೆ ಮಕ್ಕಳಿಗೆ ಬೇಸಿಗೆ ಶಿಬಿರ ಕೂಡ ಮಾಡಲಾಗುವುದು. ಈ ಸಂಸ್ಥೆಯಿಂದ ಮೇಘನಾ ಲೋಕೇಶ್, ರಾಮಾಚಾರಿ ಧಾರಾವಾಹಿ ನಟ ರಿತ್ವಿಕ್ ಕೃಪಾಕರ್ ಕೂಡ ಕಲಿತಿದ್ದಾರೆ.
ಮೇಘನಾ ಅವರು ನಟನಾ ಸಂಸ್ಥೆಯಿಂದ ಕಲಿತಿದ್ದರು. ಜೀ ಕುಟುಂಬ ಅವಾರ್ಡ್ಸ್ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ, ಮಾತನಾಡಿದ ಮೇಘನಾ, “ನಾನು ಸರ್‌ನ್ನು ಯಾವಾಗಲೂ ನನ್ನ ಜೀವನದಲ್ಲಿ ತುಂಬ ಅಗ್ರಗಣ್ಯವಾದ ಸ್ಥಾನವನ್ನು ನೀಡಿದ್ದೇನೆ” ಎಂದು ಹೇಳಿದ್ದಾರೆ. ಆ ಬಳಿಕ ಪಾದಪೂಜೆಯನ್ನು ಕೂಡ ಮಾಡಿದ್ದಾರೆ.
ಮಂಡ್ಯ ರಮೇಶ್ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಮೂಕನಾದೆ. ತೆಲುಗು ಜೀ ವಾಹಿನಿಯಿಂದ ಕರೆ ಬಂದಾಗ ಅಚ್ಚರಿ, ಆತಂಕ, ಮುಜುಗರ, ಎಲ್ಲವೂ ಸೇರಿದ ಭಾವವೊಂದು ಸುಳಿದಾಡತೊಡಗಿತು. ಪ್ರೀತಿಯ ಒತ್ತಾಸೆಗೆ ಮಣಿದೆ. ಹೋಗಿ -ಬರುವ ಮತ್ತು ಎಲ್ಲಾ ವ್ಯವಸ್ಥೆಗಳನ್ನು ಅದೆಷ್ಟು ಚೆನ್ನಾಗಿ ಮಾಡಿದ್ದರು, ನಡೆಸಿಕೊಂಡರು ಅಂದರೆ ನನಗೆ ಸಂಕೋಚವಾಗುತ್ತಿತ್ತು. ನಮ್ಮ ಮನೆಯ ಹೂವು ಒಂದು ಅಲ್ಲಿ ಅರಳಿದೆ, ಈ ಹುಡುಗಿ ಅದೆಷ್ಟು ಜನರ ಪ್ರೀತಿ ಗಳಿಸಿದ್ದಾಳೆ ಅಂತ ನೋಡಿಯೇ ಅನುಭವಿಸಬೇಕು.
ವೇದಿಕೆ ಮೇಲೆ ನಾನು ಬರುತ್ತಿದ್ದ ಹಾಗೆ ಮತ್ತು ಕನ್ನಡ ನುಡಿಯುತ್ತಿದ್ದ ಹಾಗೆ ಆ ತೆಲುಗು ಜನ ಮತ್ತು ಅಲ್ಲಿದ್ದ ಕನ್ನಡಿಗರು ಪ್ರತಿಕ್ರಯಿಸಿದ ರೀತಿ ಯಾವತ್ತಿಗೂ ಮರೆಯಲಾರೆ. ಅನೇಕ ಭಾಷೆಯ ಜನ ಅಲ್ಲಿದ್ದರು. ಮೇಘನಾ ಲೋಕೇಶ್ ಅಲ್ಲಿ ಬರೀ 'ತಾರೆ'ಯಾಗಿರಲಿಲ್ಲ, 'ಮನೆ ಮಗಳಾಗಿದ್ದಳು.' !
'ನಟನ'ದಿಂದ ನೂರಾರು ಮಂದಿ ಬದುಕು ರೂಪಿಸಿಕೊಂಡಿದ್ದಾರೆ. ಕೆಲವರು ಪ್ರೀತಿಯಿಂದ ನೆನೆಯುತ್ತಾರೆ. ಮತ್ತೆ ಕೆಲವರು ಇಲ್ಲ. ಆದರೆ, ನಾನು ಮತ್ತು ನಟನ ಅವರ ಇಲ್ಲಿಯ ಕಾರ್ಯ ತತ್ಪರತೆ ,ಶ್ರಮ, ಶ್ರದ್ಧೆಗಳನ್ನು ಪ್ರೀತಿಯಿಂದ ಗೌರವಗಳಿಂದ ನೆನೆಯುತ್ತಲೇ ಇರುತ್ತೇವೆ. ನಮ್ಮ ಕೆಲಸಗಳನ್ನು ಮತ್ತಷ್ಟು ಶ್ರದ್ಧೆಯಿಂದ ಮಾಡುತ್ತಲೇ ಹೋಗುತ್ತೇವೆ.
ಸಮಾರಂಭದಲ್ಲಿ ನಾನು ವಿಚಿತ್ರ ಟ್ರಾನ್ಸ್‌ನಲ್ಲಿದ್ದೆ. ಅಷ್ಟೊಂದು ನಾಚಿಕೆಯಾಗಿ ಬಿಟ್ಟಿತು. ಬದುಕಿನಲ್ಲಿ ಏನೇನೋ ಸಂದರ್ಭಗಳು ಬರುತ್ತವೆ. ಆದರೆ ಸಾಮಾನ್ಯ ರಂಗ ಕರ್ಮಿಯೊಬ್ಬನಿಗೆ ಹೀಗೆ ಅನಿರೀಕ್ಷಿತ ,ಅನಪೇಕ್ಷಿತ ಗೌರವ ಸಿಕ್ಕರೆ, ಅದು ನೆರೆಯ ನಾಡಿನಿಂದ ಏನು ಪ್ರತಿಕ್ರಯಿಸಬೇಕು.. ತಿಳಿದ ನಾಲ್ಕು ಮಾತಾಡಿದೆ ಕನ್ನಡದಲ್ಲಿ.
ನೂರಾರು ಕನ್ನಡ ಕಲಾವಿದ ಜೀವಿಗಳು ಮುದ್ದಾಡಿ ಮಾತಾಡಿ ಹೋದವು. ಅನೇಕ ಆಂಧ್ರವಾಳ್ಳುಗಳು, ಕಣ್ಣಲ್ಲಿ ಅಭಿಮಾನ ತುಂಬಿ, ಕೈಕುಲುಕಿ ಹೋದವು! ಅದೊಂದು ಸುಂದರ ನೆನಪು. ..ಎಲ್ಲಕ್ಕೂ ಮನಸ್ವೀ ಧನ್ಯವಾದಗಳು.
