Actress Kamalashree Death: ನಟ ಯಶವಂತ್ ಸರ್‌ದೇಶಪಾಂಡೆ ನಿಧನದ ನೋವು ಅರಗಿಸಿಕೊಳ್ಳುವ ಮುನ್ನವೇ, ಗಟ್ಟಿಮೇಳ, ಕಾವೇರಿ ಕನ್ನಡ ಮೀಡಿಯಂ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಕಮಲಶ್ರೀ ಅವರು ನಿಧನರಾಗಿದ್ದಾರೆ.
ಗಟ್ಟಿಮೇಳ ಧಾರಾವಾಹಿಯ ವೇದಾಂತ್ ಅಜ್ಜಿ ಪಾತ್ರ ಮಾಡಿದ್ದ, ನಟಿ ಕಮಲಶ್ರೀ ಅವರು ನಿಧನರಾಗಿದ್ದಾರೆ. ವಯಸ್ಸು 70 ಆಗುತ್ತಿದ್ದಂತೆ ಅವರಿಗೆ ಸ್ತನ ಕ್ಯಾನ್ಸರ್ ಆಗಿತ್ತು. ಕೊನೆಗೂ ಅವರು ಈ ರೋಗದ ವಿರುದ್ಧ ಹೋರಾಡಲಾಗದೆ ಸೆಪ್ಟೆಂಬರ್ 30ರಂದು ನಿಧನರಾಗಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಅಕ್ಟೋಬರ್ 1ರಂದು ಅಂತ್ಯಕ್ರಿಯೆ ನಡೆಯಲಿದೆಯಂತೆ. ಅಂದಹಾಗೆ ಕಮಲಶ್ರೀ ಅವರಿಗೆ ಗಂಡ, ಮಕ್ಕಳು ಕೂಡ ಇಲ್ಲ. ಅನಾರೋಗ್ಯದ ಕಾರಣಕ್ಕೆ ದುಡಿಯಲು ಆಗದೆ, ಕೊನೆಯ ದಿನಗಳಲ್ಲಿ ಆರ್ಥಿಕವಾಗಿ ಅವರು ಕಷ್ಟಪಟ್ಟಿದ್ದರು.
ಧಾರಾವಾಹಿ, ಸಿನಿಮಾದಲ್ಲಿ ನಟನೆ
ಕಾವೇರಿ ಕನ್ನಡ ಮೀಡಿಯಂ ಹಾಗೂ ಗಟ್ಟಿಮೇಳ, ಪತ್ತೆದಾರಿ ಪ್ರತಿಭಾ ಹೀಗೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಡಾ ರಾಜ್‌ಕುಮಾರ್ ಬ್ಯಾನರ್‌ನಲ್ಲಿಯೂ ಕೆಲಸ ಮಾಡಿದ್ದಾರೆ. ರಾಜ್‌ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಅಷ್ಟೇ ಅಲ್ಲದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ, ನಾಟಕದಲ್ಲಿಯೂ ಅಭಿನಯಿಸಿದ್ದಾರೆ.
ರೋಗದ ಬಗೆ ಹೇಳಿದ್ದೇನು?
ಕೆಲವು ತಿಂಗಳುಗಳ ಹಿಂದೆ ಪಂಚಮಿ ಟಾಕ್ಸ್ ಯುಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದ ಕಮಲಶ್ರೀ ಅವರು, “ನನಗೆ ಕ್ಯಾನ್ಸರ್ ಆಗಿದೆ, ನನಗೆ ಸರ್ಜರಿ ಮಾಡೋದಕ್ಕೂ ಆಗಲ್ವಂತೆ, ವಯಸ್ಸಾಗಿದೆ, ಆಮೇಲೆ ಕಿಮೋಥೆರಪಿ ಕೊಟ್ಟರೆ ನಾನು ತಡ್ಕೊಳಲ್ವಂತೆ. ಅದಕ್ಕೆ ಸ್ವಲ್ಪ ದುಬಾರಿ ಮಾತ್ರೆಗಳೆಲ್ಲ ಬರೆದು ಕೊಡ್ತಾರೆ, ತಗೊಳ್ತಾ ಇದೀನಿ. ಆ ಮಾತ್ರೆಯಿಂದ ನನಗೆ ಸ್ವಲ್ಪ 60% ಪರವಾಗಿಲ್ಲ ಅಂತ ಡಾಕ್ಟರ್ ಹೇಳಿದ್ದಾರೆ. ಗಟ್ಟಿಮೇಳ ಧಾರಾವಾಹಿ ಕಲಾವಿದರು ನನಗೆ ತುಂಬ ಸಹಾಯ ಮಾಡಿದ್ದಾರೆ. ಗಿರಿಜಾ ಲೋಕೇಶ್, ಉಮಾಶ್ರೀ, ಗಟ್ಟಿಮೇಳ ಧಾರಾವಾಹಿ ಅಶ್ವಿನಿ ಹೀಗೆ ಸಾಕಷ್ಟು ಜನರು ಧನಸಹಾಯ ಮಾಡಿದ್ದಾರೆ. ಬೇರೆಯವರಿಗೆ ಕಷ್ಟ ಕೊಡೋಕೆ ನನಗೆ ಇಷ್ಟವಿಲ್ಲ. ಒಳ್ಳೆಯ ಧಾರಾವಾಹಿ ಅವಕಾಶ ಸಿಗುವಾಗಲೇ, ನನಗೆ ದೇವರು ಏನಾದರೊಂದು ಕಷ್ಟ ಕೊಡುತ್ತಾನೆ, ಅದೇ ಬೇಸರ” ಎಂದು ಹೇಳಿದ್ದರು.
ನೆಗೆಟಿವ್ ಪಾತ್ರ ಮಾಡಲ್ಲ ಎಂದಿದ್ರು
“ನಾನೊಮ್ಮೆ ಧಾರಾವಾಹಿಯಲ್ಲಿ ನೆಗೆಟಿವ್ ಕ್ಯಾರೆಕ್ಟರ್ ಮಾಡಿದ್ದೆ, ಅದು ನನಗೆ ಒಪ್ಪೋದೇ ಇಲ್ಲ. ನಾನು ನೆಗೆಟಿವ್ ಕ್ಯಾರೆಕ್ಟರ್ ಮಾಡಿದ್ರೆ ನನಗೆ ಹುಡುಗಿಯರನ್ನು ಹೊಡಿಬೇಕು ಅನಿಸೋದಿಲ್ಲ, ಮುದ್ದು ಮಾಡಬೇಕು ಅನಿಸುತ್ತದೆ, ನನಗೆ ಮಕ್ಕಳಿಲ್ವಲ್ಲ ಯಾರು ನೋಡಿದ್ರು, ನಾನು ಪ್ರೀತಿ ಮಾಡ್ತೀನಿ” ಎಂದು ಹೇಳಿದ್ದರು.
ಕಮಲಶ್ರೀ ಅವರಿಗೆ TB, ಬ್ರೇನ್ ಟ್ಯೂಮರ್ ಕಾಯಿಲೆ ಕೂಡ ಬಂದಿತ್ತು.

