Karna Serial Nithya Real Name Namratha Gowda: ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಪಾತ್ರಕ್ಕೆ ಅಷ್ಟು ಮಹತ್ವ ಕೊಡ್ತಿಲ್ಲ, ಕಡೆಗಾಣಿಸಲಾಗುತ್ತಿದೆ ಎಂದು ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಇದಕ್ಕೆ ನಮ್ರತಾ ಗೌಡ ಉತ್ತರ ಕೊಟ್ಟಿದ್ದಾರೆ.
ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಪಾತ್ರದಲ್ಲಿ ನಟಿ ನಮ್ರತಾ ಗೌಡ ( Namratha Gowda ) ಅಭಿನಯಿಸುತ್ತಿದ್ದಾರೆ. ಕರ್ಣನಿಗೆ ಇಬ್ಬರು ಹೀರೋಯಿನ್. ನಿತ್ಯಾ ತೇಜಸ್‌ರನ್ನು ಪ್ರೀತಿಸುತ್ತಿದ್ದರೆ, ನಿಧಿ ಕರ್ಣನ ಮೇಲೆ ಜೀವವನ್ನೇ ಇಟ್ಟಿದ್ದಾಳೆ. ಕರ್ಣನ ಮದುವೆ ಸುತ್ತ ಕಥೆ ಸಾಗುತ್ತಿದೆ. ಆದರೆ ಇಲ್ಲಿ ನಿತ್ಯಾ ಪಾತ್ರಕ್ಕೆ ಮಹತ್ವವೇ ಇಲ್ಲ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಕಾಣಿಸಲ್ಲ
ನಟಿ ನಮ್ರತಾ ಗೌಡ ಅವರು ಈ ಹಿಂದೆ, ʼಪುಟ್ಟಗೌರಿ ಮದುವೆʼ ಧಾರಾವಾಹಿಯಲ್ಲಿ ಹಿಮಾ ಪಾತ್ರದಲ್ಲಿ ನಟಿಸಿದ್ದರು. ಆಮೇಲೆ ʼನಾಗಿಣಿ 2’ ಧಾರಾವಾಹಿಯಲ್ಲಿ ನಟಿಸಿದ್ದರು. ಇದಾದ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಭಾಗವಹಿಸಿದ್ದರು. ಲೀಡ್ ಪಾತ್ರದ ಮೂಲಕ ಹತ್ತಿರ ಆಗಿದ್ದ ನಮ್ರತಾ ಗೌಡ ಅವರನ್ನು ವೀಕ್ಷಕರಿಗೆ ಜಾಸ್ತಿ ಹೊತ್ತು ತೆರೆ ಮೇಲೆ ನೋಡುವ ಆಸೆ. ಆದರೆ ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಪಾತ್ರವು ಅಷ್ಟಾಗಿ ಕಾಣಿಸುತ್ತಿಲ್ಲ.
ನಮ್ರತಾ ಗೌಡ ಉತ್ತರ ಏನು?
ಹೀಗಾಗಿ ಅಭಿಮಾನಿಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ, “ನಾವು ನಿಮಗೋಸ್ಕರ ಕರ್ಣ ಧಾರಾವಾಹಿ ನೋಡುತ್ತಿದ್ದೆವು, ಆದರೆ ನಿತ್ಯಾ ಪಾತ್ರಕ್ಕೆ ಸ್ಕ್ರೀನ್‌ಸ್ಪೇಸ್ ಇಲ್ಲ. ಬಹಳ ಬೇಜಾರಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ನಮ್ರತಾ ಗೌಡ ಅವರು, “ನಿತ್ಯಾ ಪಾತ್ರವನ್ನು ಕಡೆಗಣಿಸಲಾಗಿದೆ, ಸ್ಕ್ರೀನ್‌ಸ್ಪೇಸ್ ಇಲ್ಲ ಎಂದು ಅನೇಕರು ಬೇಸರ ಮಾಡಿಕೊಂಡಿದ್ದಾರೆ, ಚಿಂತಿಸುತ್ತಿದ್ದಾರೆ. ಈ ಬಗ್ಗೆ ವಾಹಿನಿಯು ಗಮನ ತಗೊಡು ಸ್ಕ್ರೀನ್‌ಪ್ಲೇ ಬರೆಯುತ್ತಿದೆ. ನೀವು ಬೇಜಾರಾಗಬೇಡಿ, ದ್ವೇಷವನ್ನು ಹರಡಬೇಡಿ” ಎಂದು ಹೇಳಿದ್ದಾರೆ.
ಈ ಧಾರಾವಾಹಿ ಕಥೆ ಏನು?
ಈ ಧಾರಾವಾಹಿಯಲ್ಲಿ ಕರ್ಣ ಅನಾಥ ಮಗು. ತೊಟ್ಟಿಯಲ್ಲಿ ಬಿದ್ದಿದ್ದ ಕರ್ಣನನ್ನು ಸೂರ್ಯಪ್ರಕಾಶ್ ಎನ್ನುವ ಆಗರ್ಭ ಶ್ರೀಮಂತ ಎತ್ತಿಕೊಂಡು ಬಂದು, ಮನೆಯಲ್ಲಿ ಸ್ವಂತ ಮೊಮ್ಮಗ ಎನ್ನುವ ಹಾಗೆ ಸಾಕುತ್ತಾನೆ. ಆ ಮನೆಯಲ್ಲಿ ತಾತ, ಅಜ್ಜಿ ಹಾಗೂ ಅವನ ತಾಯಿ ಬಿಟ್ಟು ಉಳಿದವರೆಲ್ಲರೂ ಕರ್ಣನನ್ನು ಅನಾಥ, ಹೆಸರಿಲ್ಲದವರನು ಎನ್ನುವಂತೆ ನೋಡುತ್ತಾರೆ. ಅವನು ಮದುವೆ ಆಗಬಾರದು ಅಂತ ತಾತನ ಮಗ ಅಲಿಯಾಸ್ ಕರ್ಣನ ಅಪ್ಪ ರಮೇಶ್ ಡೀಲ್ ಮಾಡಿಕೊಂಡಿದ್ದನು. ಈ ವಿಷಯ ಅಜ್ಜಿಗೆ ತಿಳಿದಿದ್ದು, ಕರ್ಣನ ಮದುವೆ ನಡೆಯಲೇಬೇಕು ಎಂದು ಹಠ ಹಿಡಿದಿದ್ದಾಳೆ. ಇನ್ನೊಂದು ಕಡೆ ನಿತ್ಯಾ ಹಾಗೂ ನಿಧಿ ಎನ್ನುವ ಸಹೋದರಿಯರಿಗೆ ಅಪ್ಪ-ಅಮ್ಮ ಇಲ್ಲ. ಅವರು ಅಜ್ಜಿ ಶಾಂತಿಯ ಪ್ರೀತಿಯ ನೆರಳಲ್ಲಿ ಬೆಳೆದಿದದಾರೆ. ತೇಜಸ್ ಎನ್ನುವ ಹುಡುಗನನ್ನು ಮದುವೆ ಆಗೋಕ ನಿತ್ಯಾ ರೆಡಿ ಆಗಿದ್ದರೆ, ನಿಧಿಗೆ ಕರ್ಣನನ್ನು ಕಂಡರೆ ತುಂಬ ಇಷ್ಟ. ಈಗ ತಾನೇ ಕರ್ಣನಿಗೆ ನಿಧಿ ಮೇಲೆ ಲವ್ ಶುರುವಾದರೂ ಕೂಡ ಅವನು ಮನೆಯಲ್ಲಿ ಯಾರು ಹೇಗೆ ಹೇಳುತ್ತಾರೋ ಹಾಗೆ ಕೇಳುತ್ತಾನೆ.
ತೇಜಸ್ ಹಾಗೂ ನಿತ್ಯಾ ಮದುವೆ ಆಗಲಿದೆಯಾ ಎನ್ನೋದು ದೊಡ್ಡ ಪ್ರಶ್ನೆಯಾಗಿದೆ. ಇನ್ನೊಂದು ಕಡೆ ನಿಧಿ ಆಸೆಪಟ್ಟಂತೆ ಕರ್ಣ ಅವಳನ್ನು ಮದುವೆ ಆಗ್ತಾನಾ ಅಂತ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಈ ತ್ರಿಕೋನ ಲವ್ ಸ್ಟೋರಿ ವೀಕ್ಷಕರಿಗೆ ಖುಷಿ ಕೊಟ್ಟಿದೆ. ನಿಧಿ, ನಿತ್ಯಾ ನಡುವೆ ಕರ್ಣ ಯಾರನ್ನು ಮದುವೆ ಆಗ್ತಾನೆ ಎಂದು ಕಾದು ನೋಡಬೇಕಿದೆ.
ನಿತ್ಯಾ ಪಾತ್ರದಲ್ಲಿ ನಮ್ರತಾ ಗೌಡ, ನಿಧಿ ಪಾತ್ರದಲ್ಲಿ ಭವ್ಯಾ ಗೌಡ, ಕರ್ಣ ಪಾತ್ರದಲ್ಲಿ ಕಿರಣ್ ರಾಜ್ ನಟಿಸುತ್ತಿದ್ದಾರೆ. ಅಂದಹಾಗೆ ಟಿ ಎಸ್ ನಾಗಾರಭರಣ, ಆಶಾರಾಣಿ, ಗಾಯತ್ರಿ ಪ್ರಭಾಕರ್, ಸಿಮ್ರನ್, ವೀಣಾ ರಾವ್ ಕೂಡ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

