Dhruva Sarja Recalls Emotional Moment ಟಿವಿ ಶೋ ಒಂದರಲ್ಲಿ ನಟ ಧ್ರುವ ಸರ್ಜಾ, ಅಣ್ಣ ಚಿರಂಜೀವಿ ಸರ್ಜಾ ಮದುವೆಯ ನಂತರ ತಾನು ಪೊಸೆಸಿವ್ ಆಗಿದ್ದನ್ನು ನೆನಪಿಸಿಕೊಂಡರು. ಅಣ್ಣ ಸಮಾಧಾನ ಮಾಡಿದ್ದನ್ನುಅವರು ಹೇಳಿದ್ದಾರೆ.

ಬೆಂಗಳೂರು (ಅ.2): ನಟ ಧ್ರುವ ಸರ್ಜಾ ಇತ್ತೀಚೆಗೆ ಟಿವಿ ಚಾನೆಲ್‌ನ ವೇದಿಕೆಯ ಮೇಲೆ ಅಣ್ಣ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಅವರ ಮದುವೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಮದುವೆ ಆದ ಬಳಿಕ ಅಣ್ಣ ನನಗೆ ಹೆಚ್ಚಿನ ಸಮಯ ನೀಡ್ತಾ ಇಲ್ಲ ಅನ್ನೋದಕ್ಕೆ ಬೇಸರ ಪಟ್ಟಿದ್ದ ನನಗೆ, 'ಈಗ ತಾನೆ ಮದ್ವೆ ಆಗಿದ್ಯೋ ಮಗಾ..' ಎಂದು ಹೇಳಿ ಚಿರಂಜೀವಿ ಸರ್ಜಾ ಸಮಾಧಾನ ಮಾಡಿದ್ದರು ಅನ್ನೋದನ್ನ ಸ್ವತಃ ಧ್ರುವ ಸರ್ಜಾ ಹೇಳಿದ್ದಾರೆ. ಇದೇ ವೇಳೆ ಮೇಘನಾ ರಾಜ್‌ ನನಗೆ ಬರೀ ಅತ್ತಿಗೆಯಲ್ಲ, ಅದೆಲ್ಲಕ್ಕಿಂತ ದೊಡ್ಡವರು ಎಂದು ಧ್ರುವ ಹೇಳಿದ್ದಾರೆ.

ಅದು ಮದುವೆಯಾದ ಹೊಸದು. ನಾನು ಹಾಗೂ ನನ್ನ ಅಣ್ಣ ಬೋರ್ಡಿಂಗ್‌ನಲ್ಲೇ ಇದ್ದವರು. ನಮ್ಮಿಬ್ಬರ ನಡುವೆ ತುಂಬಾ ಅಟಾಚ್‌ಮೆಂಟ್‌ ಇತ್ತು. ದಿಢೀರ್‌ ಆಗಿ ಮದುವೆ ಆದ ಬಳಿಕ, ನಾನು ತುಂಬಾ ಪೊಸೆಸಿವ್‌ ಆಗಿದ್ದೆ. ಏನ್‌ ಮದ್ವೆ ಆಗಿದ್ದ ತಕ್ಷಣ ಅಲ್ಲಿಗೆ ಹೋಗೋದು? ಏ ನಮ್‌ ಅಣ್ಣ ನನ್‌ ಜೊತೆ ಮಾತಾಡ್ತಾ ಇಲ್ಲ, ನನ್‌ ಜೊತೆ ಟೈಮ್‌ ಸ್ಪೆಂಡ್‌ ಮಾಡ್ತಾ ಇಲ್ಲ ಅಂದುಕೊಳ್ತಿದ್ದೆ. ಆದರೆ, ನಮ್ಮಣ್ಣ ಒಂದಿನ ನನ್ನ ಕರೆದು, ಮೇಘನಾ ಅವರನ್ನ ಪರಿಚಯ ಮಾಡಿಸಿ, 'ಏಯ್‌ ಯಾರೋ ಇದು..' ಅಂತಾ ಕೇಳಿದ್ದ. ಅದಕ್ಕೆ ನಾನು ಅವರು ಸಿಲ್‌ ಎಂದಿದ್ದೆ. ಸಿಲ್‌ ಅಂದ್ರೆ ಏನು ಅಂತಾ ಕೇಳಿದಾಗ, 'ಸಿಸ್ಟರ್‌ ಇನ್‌ ಲಾ' ಎಂದಿದ್ದೆ. ಏಯ್‌ ಹಾಗೆಲ್ಲಾ ಅನ್ಬಾರ್ದು ಅಂದಿದ್ದ' ಎಂದು ಧ್ರುವ ಸರ್ಜಾ ಹೇಳಿದ್ದಾರೆ.

ಸಿಲ್‌-ಬಿಲ್‌ ಎಂದು ಕರೆದುಕೊಳ್ಳುವ ಧ್ರುವ-ಮೇಘನಾ

ಮೇಘನಾರನ್ನು ಧ್ರುವ ಸರ್ಜಾ ಸಿಲ್‌ (ಸಿಸ್ಟರ್‌ ಇನ್‌ ಲಾ) ಅಂತಾ ಕರೆದರೆ, ಮೇಘನಾ ರಾಜ್‌, ಧ್ರುವರನ್ನು ಬಿಲ್‌ (ಬ್ರದರ್‌ ಇನ್‌ ಲಾ) ಎಂದು ಕರೆಯುತ್ತಾರೆ. ಈ ವೇಳೆ ಮಾತನಾಡಿದ ಮೇಘನಾ, ಮದ್ವೆ ಹಾಗೂ ಎಂಗೇಜ್‌ಮೆಂಟ್‌ಗೂ ಮುಂಚೆ ಧ್ರುವನಿಗೆ ಒಮ್ಮೆ ಟ್ವಿಟರ್‌ನಲ್ಲಿ ವಿಶ್‌ ಮಾಡಿದ್ದೆ. ಆಗ ಬಿಲ್‌ ಅಂತಾ ಹಾಕಿ ವಿಶ್‌ ಮಾಡಿದ್ದೆ. ಆಗ ಎಲ್ಲರೂ ಸಡನ್‌ ಆಗಿ ಬಿಲ್‌ ಅಂತಾ ಹಾಕಿದ್ಯಾಕೆ ಅಂತಾ ಯೋಚನೆ ಮಾಡಿದ್ದರು. ಆದರೆ, ಅರ್ಥ ಆಗೋರಿಗೆ ಅದು ಅರ್ಥ ಆಗಿತ್ತು. ಆದರೆ, ನಾನು ಅದನ್ನು ಹೇಳಬೇಕಿತ್ತು. ನೀನು ನನ್ನ ಬ್ರದರ್‌ ಇನ್‌ ಲಾ ಅಂತಾ ಅದಕ್ಕಾಗಿ ಆ ಪೋಸ್ಟ್‌ ಮಾಡಿದ್ದೆ ಎಂದಿದ್ದಾರೆ.

ನಂತರ ಮಾತನಾಡಿದ ಧ್ರುವ, 'ಅಣ್ಣ ಕರೆದು, ನಿನ್ನ ತಲೆಯಲ್ಲಿ ಏನು ಓಡ್ತಾ ಇದೆ ಅಂತಾ ನನಗೆ ಗೊತ್ತು. ಹಾಗೆಲ್ಲಾ ಏನೂ ಇಲ್ಲ. ನಾನು ಎಲ್ಲಾರಿಗೂ ಟೈಮ್‌ ಕೊಡುತ್ತೇನೆ. ಈಗ ತಾನೆ ಮದುವೆ ಆಗಿದ್ದೀನಲ್ಲ ಮಗಾ. ಹಾಗೆಲ್ಲಾ ಏನೂ ಆಗೋದಿಲ್ಲ' ಎಂದಿದ್ದ.

ಆಗ ನಮ್ಮ ತಾಯಿ ಕೂಡ ಅಣ್ಣನ ಜೊತೆ ಸೇರಿಕೊಂಡು, ಮೇಘನಾ ಅವರನ್ನ ಪರಿಚಯ ಮಾಡಿಸಿದ್ದು ಹೇಗೆ ಅಂದ್ರೆ, 'ಅತ್ತಿಗೆ..', ಅತ್ತಿಗೆ ಅಂದ್ರೆ ಎರಡನೇ ತಾಯಿ ಇದ್ದ ಹಾಗೆ. ನನಗೆ ಎರಡನೇ ತಾಯಿ ಅಂತಾ ಪರಿಚಯ ಮಾಡಿಸಿದ್ರು. ಆದ್ರೆ 'ತಾಯಿ' ಅಂತಾ ಕರೆಯೋಕೆ ಆಗಲ್ವಲ್ಲ ಅದಕ್ಕಾಗಿ ಸಿಲ್‌ ಅಂತೇನೆ. ಅವರು ನಮಗೆ ತುಂಬಾ ಸಪೋರ್ಟಿವ್‌. ಅವರು ಒಂದು ಕರೆಯ ದೂರದಲ್ಲಿ ಇರ್ತಾರೆ. ಯಾವಾಗ ಬೇಕಾದ್ರೂ ನಮಗೆ ಸಿಗ್ತಾರೆ. ಅವರು ನನಗೆ ಅತ್ತಿಗೆಗಿಂತಲೂ ಹೆಚ್ಚು ಎಂದಿದ್ದಾರೆ.