ಕ್ವಾಟ್ಲೆ ಕಿಚನ್‌ ಶೋ ಗ್ರ್ಯಾಂಡ್‌ ಫಿನಾಲೆ ಹಂತಕ್ಕೆ ಬಂದಿದೆ. ಈಗ ಈ ಶೋನಲ್ಲಿ ಭಾಗಿಯಾಗಿರುವ ಪ್ರಶಾಂತ್‌ ಕಲಾವಿದ ಅವರು ಶೋ ಬಗ್ಗೆ ಮಾತನಾಡಿದ್ದಾರೆ, ಸವಿನೆನಪುಗಳನ್ನು ಹಂಚಿಕೊಂಡಿದ್ದಾರೆ. 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ‘ಕ್ವಾಟ್ಲೆ ಕಿಚನ್’‌ ಎಂಬ ಹೊಸ ಶೋ ಶುರುವಾಗಿ, ಈಗ ಗ್ರ್ಯಾಂಡ್‌ ಫಿನಾಲೆ ಹಂತಕ್ಕೆ ಬಂದಿದೆ. ಈ ಶೋನಲ್ಲಿ ಕ್ವಾಟ್ಲೆ ಆಗಿ ಕುಕ್‌ಗಳಿಗೆ ಅಡುಗೆ ಮಾಡಲು ಬಿಡದೆ, ಕಾಟ ಕೊಟ್ಟ ಪ್ರಶಾಂತ್‌ ಕಲಾವಿದ ಅವರು ಶೋ ಮುಕ್ತಾಯ ಆಗುತ್ತಿರುವ ಬಗ್ಗೆ Asianet Suvarna News ಜೊತೆಗೆ ಮಾತನಾಡಿದ್ದಾರೆ.

ಗ್ರ್ಯಾಂಡ್‌ ಫಿನಾಲೆ ಹಂತಕ್ಕೆ ಬಂದಿದ್ದೀರಿ, ಹೇಗೆ ಅನಿಸುತ್ತಿದೆ?

ನಿಜಕ್ಕೂ ಖುಷಿ ಆಗುತ್ತಿದೆ. ಪ್ರತಿ ರವಿವಾರ‌ ಕ್ವಾಟ್ಲೆ ಕಿಚನ್ ಶೂಟ್‌ ಆಗುತ್ತಿತ್ತು. ನಮಗೆ ಇದು ಒಂಥರ ಟ್ರಿಪ್‌ ಹೋದ ಅನುಭವ ಆಗುತ್ತಿತ್ತು. ಎಲ್ಲರ ಕಾಲೆಳೆದುಕೊಂಡು, ನಗುತ್ತ ಶೋ ಎಂಜಾಯ್‌ ಮಾಡಿದೆವು. ಗ್ರ್ಯಾಂಡ್‌ ಫಿನಾಲೆಯಲ್ಲಿ ನಾನು ಕಣ್ಣೀರು ಹಾಕಿದ್ದೇನೆ. ಅಷ್ಟು ಈ ಶೋವನ್ನು ಮಿಸ್‌ ಮಾಡಿಕೊಳ್ತೀನಿ..ಮತ್ತೊಂದು ಸೀಸನ್‌ ಬಂದರೂ ಕೂಡ, ಮೊದಲ ಸೀಸನ್‌ ಖುಷಿಯೇ ಬೇರೆ….

ಅಡುಗೆ ಶೋ ಇದೊಂದು ಥರ ವಿಭಿನ್ನವಾದ ಅನುಭವ..

ಹೌದು, ಇಲ್ಲಿ ಅಡುಗೆಯೂ ಆಗುತ್ತಿರಬೇಕು, ಮನರಂಜನೆ ಕೂಡ ಸಿಗುತ್ತಿರಬೇಕು. ಇಲ್ಲಿ ಅಡುಗೆ ಮಾಡೋದಿಲ್ಲ ಅಂತ ಕೆಲ ವೀಕ್ಷಕರು ಅಂದುಕೊಂಡಿದ್ದಾರೆ. ಇದು ತಪ್ಪು ತಿಳುವಳಿಕೆ. ಇಲ್ಲಿ ಕುಕ್ ಅಡುಗೆ ಮಾಡುತ್ತಿರುತ್ತಾರೆ,‌ ನಾವು ಕ್ವಾಟ್ಲೆಯನ್ನು ಕೊಡುತ್ತೇವೆ. ಇವೆರಡನ್ನೂ ಸರಿದೂಗಿಸಿಕೊಂಡು ಹೋಗೋದು ಕಷ್ಟ, ಅಷ್ಟೇ ಅಲ್ಲದೆ ಜನರಿಗೆ ಇದೆಲ್ಲ ತೋರಿಸೋದು ಕೂಡ ಸವಾಲಿನ ಕೆಲಸವೇ..

ನೀವು ರಿಯಾಲಿಟಿ ಶೋಗಳನ್ನು ಮಾಡಿದವರು.. ಈ ಶೋನಲ್ಲಿ ಧಾರಾವಾಹಿ ಕಲಾವಿದರು ಇದ್ದರು..ಹೇಗಿತ್ತು ಅನುಭ

ನಮ್ಮ ಕಾಮಿಡಿ ಶೋಗಳು ಬೇರೆ, ಸೀರಿಯಲ್‌ ಬೇರೆ. ಸೀರಿಯಲ್‌ನವರಿಗೆ ಹೆಡ್‌ವೇಟ್‌ ಇರತ್ತೆ ಅಂತ ನಾನು ಅಂದುಕೊಂಡಿದ್ದೆ, ಆ ಥರ ಇರಲಿಲ್ಲ. ದಿಲೀಪ್‌ ಶೆಟ್ಟಿ ಕನ್ನಡ, ತೆಲುಗಿನ ಧಾರಾವಾಹಿಗಳಲ್ಲಿ ಲೀಡ್‌ ಆಗಿ ನಟಿಸಿದ್ದವರು, ಚಂದನ್‌ ಸಿನಿಮಾ ಮಾಡುತ್ತಿದ್ದಾರೆ. ಇವರೆಲ್ಲರೂ ನಮ್ಮ ಜೊತೆ ತುಂಬ ಚೆನ್ನಾಗಿದ್ದರು. ಚಂದನ್‌ ಜೊತೆ ನಾನು ಅಡುಗೆ ಮಾಡಲು ಆಗಲಿಲ್ಲ, ನೀನು ತುಂಬ ಕಾಟ ಕೊಡ್ತೀಯಾ, ನನಗೆ ಮಾತ್ರ ಕುಕ್‌ ಆಗಿ ಸಿಗಬೇಡ ಅಂತ ಚಂದನ್‌ ಪದೇ ಪದೇ ಹೇಳುತ್ತಿದ್ದರು, ಆದರೆ ಆಫ್‌ ಸ್ಕ್ರೀನ್‌ ಅವರಿಗೆ ತುಂಬ ಕಾಟ ಕೊಟ್ಟಿದ್ದೀನಿ. ಆಮೇಲೆ ಚಂದನ್‌ ಅವರೇ, ನೀವು ನನಗೆ ಕುಕ್‌ ಆಗಿ ಸಿಗಬೇಕು ಅಂತ ಹೇಳಿದ್ದರು. ದಿಲೀಪ್‌ ಅವರು ನನ್ನ ತುಂಬ ಕಾಲೆಳೆಯುತ್ತಾರೆ, ಅವರಿಗೆ ಅಷ್ಟು ಸ್ವಾತಂತ್ರ್ಯ ಕೊಟ್ಟಿದೀನಿ…

ಅಡುಗೆ ಮಾಡೋದು ಕಲಿತರಾ? ಯಾವ ಫುಡ್‌ ಇಷ್ಟ?

ನಾನು ಈಗ ಖುಷಿಯಿಂದ ಅಡುಗೆ ಮಾಡ್ತೀನಿ. ಮಟನ್‌ ಘೀ ರೋಸ್ಟ್‌ ಮುಂತಾದವನ್ನು ತುಂಬ ಇಷ್ಟಪಟ್ಟು ತಿಂತೀನಿ. ರಘು ಅವರು ನೋಡೋಕೆ ಒರಟು, ಆದರೆ ಮನುಷ್ಯ ಆ ಥರ ಇಲ್ಲ. ರಘು ಮಾಡುವ ಮಟನ್‌ ನನಗೆ ತುಂಬ ಇಷ್ಟ. ಮಟನ್‌ ಮುಂತಾದವನ್ನು ಮಾಡೋಕೆ 2000 ರೂಪಾಯಿ ಮೇಲೆ ಖರ್ಚು ಆಗುತ್ತದೆ. ಹೀಗಾಗಿ ನಾವು ಹೋಟೆಲ್‌ಗೆ ಹೋಗಿ ತಿಂದುಬರ್ತೀವಿ. ಶರ್ಮಿತಾ ಅವರು ಬಿಸಿಬೇಳೆ ಬಾತ್‌ ಮಾಡಲು 35 ಸಾಮಗ್ರಿಗಳನ್ನು ಹಾಕಿದ್ದರು. ಇದನ್ನೆಲ್ಲ ವಾಹಿನಿ ನೀಡಿದ್ದಕ್ಕೆ ಧನ್ಯವಾದಗಳು..

ಈ ಶೋನಿಂದ ಏನು ಕಲಿತಿರಿ?

ನಾನು ತಾಳ್ಮೆ ಕಲಿತೆ. ನಾವು ಎಷ್ಟೇ ಕಾಟ ಕೊಟ್ಟರೂ ಕೂಡ, ಕುಕ್‌ಗಳು ನೀಟ್‌ ಆಗಿ ಅಡುಗೆ ಮಾಡುತ್ತಿದ್ದರು. ಇದು ಸುಲಭ ಇಲ್ಲ. ಮನೆಯಲ್ಲಿ ಅಡುಗೆ ಮಾಡಿದ್ದನ್ನು ನೋಡಿ ಚೆನ್ನಾಗಿಲ್ಲ ಅಂತ ಸುಲಭವಾಗಿ ಹೇಳ್ತೀವಿ, ನಿಜಕ್ಕೂ ಅವರು ಮೂರು ಹೊತ್ತು ಅಡುಗೆ ಮಾಡೋಕೆ ಕಷ್ಟಪಟ್ಟಿರುತ್ತಾರೆ. ಇದರ ಮಹತ್ವ ಏನು ಅಂತ ಗೊತ್ತಾಗಿದೆ. ಹೀಗಾಗಿ ತಾಯಂದಿರಿಗೆ ನಮಸ್ಕಾರಗಳು.

ಅನುಪಮಾ ಗೌಡ ಜೊತೆಗಿನ ಬಾಂಧವ್ಯದ ಬಗ್ಗೆ ಹೇಳಿ

ನಾನು ಈಗಾಗಲೇ ಕೆಲ ಕಾಮಿಡಿ ಶೋಗಳನ್ನು ಮಾಡಿದ್ದೇನೆ, ಅನೇಕ ನಿರೂಪಕರ ಪರಿಚಯ ಇದೆ. ನಾನು ಎಲ್ಲರ ಜೊತೆಯೂ ಅಷ್ಟು ಕ್ಲೋಸ್‌ ಆಗಿಲ್ಲ. ಅನುಪಮಾ ಗೌಡ ಅವರನ್ನು ಕಂಡರೆ ತುಂಬ ಇಷ್ಟ, ನಾನು ಅಕ್ಕ ಅಂತಲೇ ಕರೆಯುತ್ತೇನೆ. ಅನುಪಮಾ ಗೌಡ ಅವರಿಗೆ ನಾನು ಕಾಲ್ಗೆಜ್ಜೆ ಕೊಡಿಸಿದೆ, ಅದಕ್ಕೆ ಕೆಲವರು ಚಿಕ್ಕ ಕಾಲ್ಗೆಜ್ಜೆ ಕೊಡಿಸಿದೆ ಅಂತ ಕಾಮೆಂಟ್‌ ಮಾಡಿದರು. ಇದಕ್ಕೆ ತಾನು ತಲೆ ಕೆಡಿಸಿಕೊಂಡಿಲ್ಲ. ನನ್ನ ಅಂದು ಕರಿಯ, ನಿನ್ನನ್ನು ಶೋನಲ್ಲಿ ಯಾರು ನೋಡ್ತಾರೆ ಎಂದೋರು ಇಂದು ಶೋ ನೋಡಿ ಖುಷಿಪಡ್ತಾರೆ. ನಾನು ಜನರ ಕಾಮೆಂಟ್‌ಗಳಿಗೆ ಬೆಲೆ ಕೊಡೋದಿಲ್ಲ. ಅನುಪಮಾ ಗೌಡ ಅವರ ಮನೆಯಲ್ಲಿ ನನ್ನ ಜನ್ಮದಿನವನ್ನು ಆಚರಿಸಿದರು, ನನಗೆ ಅವರು ಇಷ್ಟು ಮಹತ್ವ ಕೊಡಬೇಕು ಅಂತೇನಿರಲಿಲ್ಲ. ಆದರೂ ಇಷ್ಟು ಪ್ರೀತಿ ಕೊಟ್ಟಿದ್ದಾರೆ. ಇದು ನನ್ನ ಪಾಲಿಗೆ ಖುಷಿ ವಿಷಯ..