Bigg Boss Kannada Season Ashwini Gowda: ಅಶ್ವಿನಿ ಗೌಡ ಅವರು ಸಾಕಷ್ಟು ಆಸ್ತಿ ಇದ್ದು, ಆರಾಮಾಗಿ ಇರುವಷ್ಟು ಆದಾಯ ಹೊಂದಿದ್ದಾರೆ. ಹೀಗಿರುವಾಗ ಅವರು ಹೋರಾಟದ ಹಾದಿ ಹಿಡಿದಿದ್ದಾರೆ. ಇದಕ್ಕೆ ಕಾರಣ ಏನು? 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಶ್ವಿನಿ ಗೌಡ ಅವರು ಸ್ಪರ್ಧಿ. ನಟಿಯಾಗಿರುವ ಅಶ್ವಿನಿ ಅವರು 150 ಮನೆಗಳನ್ನು ಬಾಡಿಗೆಗೆ ಕೊಡುತ್ತಾರೆ. ಅಷ್ಟು ಆಸ್ತಿ ಹೊಂದಿರುವ ಅವರು ಕನ್ನಡ ಪರ ಹೋರಾಟಗಳನ್ನು ಮಾಡುತ್ತಾರೆ. ಇಷ್ಟೆಲ್ಲ ಆಸ್ತಿ ಇದ್ದು, ಹೋರಾಟದ ಹಾದಿ ಹಿಡಿದಿದ್ದು ಯಾಕೆ ಎಂದು ಅವರು ಮಾಧ್ಯಮವೊಂದರ ಜೊತೆ ಮಾತನಾಡಿದ್ದಾರೆ.

ಅಶ್ವಿನಿ ಗೌಡ ಏನು ಹೇಳಿದ್ರು?

ನಾವು ನಮ್ಮ ಹತ್ತಿರ ಆದಷ್ಟು ಸಹಾಯ ಮಾಡ್ತೀವಿ. ತುಂಬ ಸಲ ನಾವು ತುಂಬಾ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುತ್ತೇವೆ, ಬೇರೆಯವರು ನಾನು ಮಾಡಿದ ಸಹಾಯವನ್ನು ನೆನಪಿಟ್ಟುಕೊಂಡು ಕಾಮೆಂಟ್‌ ಮಾಡ್ತಾರೆ ಎಂದು ಸಹಾಯ ಮಾಡೋದಿಲ್ಲ. ಸುಮಾರು ಐದು-ಆರು ವರ್ಷದ ಹಿಂದಿನ ಕಥೆ. ಜೀವನದಲ್ಲಿ ತುಂಬ ನೊಂದಿರುವಂತ ಮಹಿಳೆಗೆ ಮಗ ಇರುತ್ತಾನೆ. ನನ್ನ ನಂಬರ್‌ನ್ನು ಯಾರ ಬಳಿಯೋ ತಗೊಂಡು, ಅವರು ನನ್ನನ್ನು ಕಾಂಟ್ಯಾಕ್ಟ್‌ ಮಾಡ್ತಾರೆ. ಆ ಮಹಿಳೆಯನ್ನು ಭೇಟಿ ಮಾಡಿ ನಾನು ಸಾಂತ್ವನ ಹೇಳಿದ್ದೆ. ಅದನ್ನು ಅವರು ನೆನಪಿಟ್ಟುಕೊಂಡು ಬಂದು ಹೇಳಿದ್ದೆ. ಇದು ನಿಜವಾಗಿಯೂ ಖುಷಿ ಕೊಡುತ್ತದೆ. ನಮ್ಮ ತಂದೆ-ತಾಯಿ ಮಾಡಿರೋದು ಇವತ್ತು ನಮ್ಮನ್ನು ಕಾಯ್ತಾ ಇದೆ, ಈಗ ನಾನು ಮಾಡೋದು ನನ್ನ ಮಗನನ್ನು ಕಾಯುತ್ತದೆ, ಅವನ ಜೀವನ ಉಜ್ವಲವಾಗುತ್ತದೆ ಎಂದು ನಂಬಿದ್ದೇನೆ. ನನಗೆ ಒಬ್ಬನೇ ಮಗ ಇರೋದು. ನಾನು ಇನ್ನಷ್ಟು ಆಸ್ತಿ ಮಾಡಬೇಕು ಅನ್ನೋ ಆಸೆ ದುರಾಸೆ ಇಲ್ಲ.

ನಾನು ಯಾರಿಗಾದರೂ ಸಹಾಯ ಮಾಡಿದ್ರೆ ಅವರ ಆಶೀರ್ವಾದ ನನ್ನ ಮಗನ ಮೇಲಿದ್ರೆ, ಅವನು ಒಳ್ಳೆಯ ಭವಿಷ್ಯವನ್ನು ಕಟ್ಟಿಕೊಳ್ಳಬಹುದು ಅನ್ನೋ ಮನಸ್ಥಿತಿ ಇದೆ. ನನ್ನ ಮಗ ಪವನ್ ಈಗ ಸೆಕೆಂಡ್ ಪಿಯುಸಿ ಓದುತ್ತಿದ್ದಾನೆ. ನನ್ನ ಮಗ ತುಂಬ ಮುಗ್ಧ, ನಾನು ನನ್ನ ಮಗನನ್ನು ಒಂದು ಚೌಕಟ್ಟಿನಲ್ಲಿ ಬೆಳೆಸಿಬಿಟ್ಟಿದ್ದೀನಿ. ಹೊರಗಡೆ ಪ್ರಪಂಚ ನೋಡಿ, ಮಗನಿಗೆ ಏನೂ ಸಮಸ್ಯೆ ಆಗಬಾರದು ಅಂತ ನನಗೆ ಭಯ.

ಈಗ ಏನಾದರೂ ಫೋನ್ ಬಂದರೆ, ಎಲ್ಲೋ ಏನೋ ಆಗ್ತಿದೆ ಅಂದ್ರೆ ತಕ್ಷಣ ಓಡಿ ಹೋಗ್ತೀನಿ, ಆಗ ಮೇಕಪ್‌ ಏನೂ ಮಾಡೋದಿಲ್ಲ. ಕಲಾವಿದೆಯಾಗಿ ನಾನು ಪಾತ್ರ ಮಾಡುವಾಗ ಮಾತ್ರ ರೆಡಿ ಆಗಿರ್ತೀನಿ.

ನನಗೆ ಜನರ ಕಷ್ಟಗಳನ್ನು ಕೇಳೋದಕ್ಕೆ ಇಷ್ಟ, ನನ್ನ ಕಷ್ಟಗಳನ್ನು ಬೇರೆಯವರಿಗೆ ಹೇಳೋದಕ್ಕಿಂತ ಇನ್ನೊಬ್ಬರ ಕಷ್ಟಗಳನ್ನು ಕೇಳಿ ನನಗೆ ಏನಾಗತ್ತೋ ಅದನ್ನು ಮಾಡುವೆ.

ಮನುಷ್ಯ ಹುಟ್ಟಿದ ಮೇಲೆ ಯಾವುದನ್ನೂ ಕೂಡ ನಾವು ತಗೊಂಡು ಹೋಗಲ್ಲ, ಇಲ್ಲಿಯೇ ಎಲ್ಲವನ್ನು ಬಿಟ್ಟು ಹೋಗುತ್ತೇವೆ, ತಂದಿದ್ದೇನು ಇಲ್ಲ, ತಗೊಂಡು ಹೋಗೋದು ಏನು ಇಲ್ಲ. ನಾವೆಲ್ಲ ಒಂದಾಗಿ ಕೊಡಬೇಕು

ಇಲ್ಲವೇ ಬಿಟ್ಟು ಹೋಗಬೇಕು ಅಲ್ವಾ? ಇದನ್ನಷ್ಟೇ ನಾವು ಮಾಡೋಕೆ ಸಾಧ್ಯ. ಯಾವುದೋ ಮನುಷ್ಯ ಹುಟ್ಟಿದ, ಸತ್ತೋದ ಅಂದ್ರೆ ಯಾವ ಪ್ರಯೋಜನವೂ ಇಲ್ಲ, ಏನಾದರೊಂದು ಮಾಡಬೇಕು, ಸಾಧನೆ ಅಂದ್ರೆ ದೊಡ್ಡ ಮಟ್ಟದಲ್ಲಿ ನಾವು ಭಾರತರತ್ನ ತಗೊಳ್ಳಬೇಕು ಅಂತಲ್ಲ, ಆ ಮಟ್ಟಕ್ಕೆ ನನಗೆ ಬೆಳೆಯುವಂತ ಒಂದು ಆಲೋಚನೆ ನನಗೆ ಇಲ್ಲ.

ನಮ್ಮ ಸುತ್ತ ಮುತ್ತ ಇರುವಂತ ಜನಗಳಿಂದ ಏನೋ ಒಂದು ಸಹಾಯ, ಒಂದು ಸಾಂತ್ವನ ಮಾತು ಹೇಳ್ತೀನಿ. ನಾನೇನು ಕನ್ನಡದೊಳಗಡೆ ಹುಟ್ಟಬೇಕು ಅಂತ ಅರ್ಜಿ ಹಾಕಿ ಹುಟ್ಟಿಲ್ಲ. ನಾನು ಈ ಧರ್ಮದಲ್ಲೇ ಹುಟ್ಟಬೇಕು, ಕಲಾವಿದೆಯೇ ಆಗಬೇಕು, ಹೋರಾಟಗಾತಿ ಆಗಬೇಕು ಅಥವಾ ಒಳ್ಳೆಯ ಕುಟುಂಬದಲ್ಲೇ ಹುಟ್ಟಬೇಕು ಅಂತ ಹುಟ್ಟಿಲ್ಲ. ಭಗವಂತ ನಮಗೆ ಇಂದು ಈ ರೀತಿ ಇಟ್ಟಿದ್ದಾನೆ, ನನ್ನ ತಂದೆಯ ಕುಟುಂಬದ ಒಂದು ಗೌರವವನ್ನು ಕಾಪಾಡ್ತೀನಿ.