ಬಿಗ್ ಬಾಸ್ ಸೀಸನ್ 11ರಲ್ಲಿ ಕಿಚ್ಚ ಸುದೀಪ್ ಗರಡಿಯಲ್ಲಿ ಪಳಗಿದ ನಟಿ ಅನುಷಾ ರೈ ಅವರು ಇದೀಗ ವಿಜಯಲಕ್ಷ್ಮೀ ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ದರ್ಶನ್ ಕುಟುಂಬದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ವಿಜಯಲಕ್ಷ್ಮಿ ಅವರಿಗೆ ಅಶ್ಲೀಲ ಕಾಮೆಂಟ್ ಬಂದಿರುವುದಕ್ಕೆ ಅನುಷಾ ರೈ ಖಂಡನೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಆ.31): ಬಿಗ್ ಬಾಸ್ ಮನೆಗೆ ಹೋಗಿ ನಟ ಸುದೀಪ್ ಅವರ ಗರಡಿಯಲ್ಲಿ ಪಳಗಿದ ನಟಿ ಅನುಷಾ ರೈ, ಇದೀಗ ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ಬೆಂಬಲಕ್ಕೆ ಬಂದಿದ್ದಾರೆ. ದರ್ಶನ್ ಮನೆಯಲ್ಲಿ ಎಷ್ಟು ನೋವಿರುತ್ತೋ, ಕಷ್ಟ ಇರುತ್ತೋ ಅವರಿಗೆ ಮಾತ್ರ ಗೊತ್ತು. ದರ್ಶನ್ ಕುಟುಂಬದ ಪರಿಸ್ಥಿತಿಯನ್ನು ಕೂಡ ಅರ್ಥ ಮಾಡಿಕೊಳ್ಳಬೇಕು. ಉತ್ತಮ ಕುಟುಂಬದಲ್ಲಿ ಬೆಳೆದವರು ಯಾರೂ ಈ ರೀತಿ ಮಾಡೊಲ್ಲ ಎಂದು ಅಶ್ಲೀಲ ಕಾಮೆಂಟ್ ಮಾಡಿದವರ ವಿರುದ್ಧ ನಟಿ ಅನುಷಾ ರೈ ಕಿಡಿಕಾರಿದ್ದಾರೆ.
ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಮತ್ತು ನಿಂದನಾತ್ಮಕ ಸಂದೇಶಗಳನ್ನು ಕಳುಹಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಅನುಷಾ ರೈ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಯಾವುದೇ ವ್ಯಕ್ತಿಯ ಕುಟುಂಬದ ಗೌರವಕ್ಕೆ ಧಕ್ಕೆ ತರುವ ಇಂತಹ ಕೃತ್ಯಗಳನ್ನು ಯಾರೂ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಇತ್ತೀಚೆಗೆ ದರ್ಶನ್ ಮತ್ತು ಅವರ ಕುಟುಂಬದ ವಿರುದ್ಧ ಕೆಲವು ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವಿಜಯಲಕ್ಷ್ಮಿ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು. ಇದು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.
ಅನುಷಾ ರೈ ಹೇಳಿದ್ದೇನು?:
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನುಷಾ ರೈ, 'ಯಾರೂ ಯಾರಿಗೂ ಅಶ್ಲೀಲ ಕಮೆಂಟ್ ಹಾಕಬೇಡಿ. ಉತ್ತಮ ಕುಟುಂಬದಲ್ಲಿ ಬೆಳೆದವರು ಯಾರೂ ಈ ರೀತಿ ಮಾಡಲ್ಲ. ಅವರ ಮನೆಯ ಹೆಣ್ಣುಮಕ್ಕಳಿಗೆ ಈ ರೀತಿ ಮೆಸೇಜ್ ಮಾಡ್ತಾರಾ?' ಎಂದು ಪ್ರಶ್ನಿಸಿದ್ದಾರೆ. ಪ್ರತಿ ಕುಟುಂಬದಲ್ಲೂ ತಾಯಿ, ಅಕ್ಕ, ತಂಗಿ ಇರುತ್ತಾರೆ. ಇಂತಹ ಸಂದೇಶಗಳಿಂದ ಅವರಿಗೆ ತುಂಬಾ ನೋವಾಗುತ್ತದೆ. ದರ್ಶನ್ ಮನೆಯಲ್ಲಿ ಎಷ್ಟು ನೋವಿರುತ್ತೋ, ಕಷ್ಟ ಇರುತ್ತೋ ಅವರಿಗೆ ಮಾತ್ರ ಗೊತ್ತು. ದರ್ಶನ್ ಕುಟುಂಬದ ಪರಿಸ್ಥಿತಿಯನ್ನು ಕೂಡ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ರೀತಿಯ ಅಶ್ಲೀಲ ಕಮೆಂಟ್ ಮತ್ತು ನಿಂದನೆಗಳನ್ನು ಮಾಡುವವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಅನುಷಾ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟಿ ರಮ್ಯಾಗೂ ಅಶ್ಲೀಲ ಕಾಮೆಂಟ್ ಮಾಡಿ ಜೈಲು ಸೇರಿದ ನೆಟ್ಟಿಗರು:
ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯ ಕಾಮೆಂಟ್‌ಗಳ ಪ್ರಕರಣಗಳು ಹೆಚ್ಚುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕಮೆಂಟ್ ಮಾಡಿದನೆಂದು ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ದರ್ಶನ್ ಸಹಿತ 'ಡಿ ಗ್ಯಾಂಗ್' ಈಗ ಜೈಲು ಸೇರಿದೆ. ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್ ನಟಿ ರಮ್ಯಾಗೂ ದರ್ಶನ್ ಅಭಿಮಾನಿಗಳು ಕೆಟ್ಟ ಕಮೆಂಟ್ ಮಾಡಿ ಕೇಸು ಹಾಕಿಸಿಕೊಂಡರು. ಇದೀಗ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯ ಕಮೆಂಟ್ ಮಾಡಲಾಗಿದೆ. ಇದೀಗ ಅಶ್ಲೀಲ ಕಾಮೆಂಟ್ ಮಾಡಿದವರ ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲು ಮಾಡಲಾಗಿದೆ.
ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಠಾಣೆಯ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ನಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಅಶ್ಲೀಲ ಕಾಮೆಂಟ್ ಮಾಡಿದ ಖಾತೆಗಳ ವಿರುದ್ಧ ಪಿ.ಎಸ್.ಐ ಲೋಕೇಶ್ ಅವರಿಂದ ದೂರು ದಾಖಲಾಗಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಟ್ವಿಟರ್ ನಲ್ಲಿ ಅಸಭ್ಯ ಪದ ಬಳಸಿ ನಿಂದನೆ ಮಾಡಲಾಗಿದೆ. ಈ ಫೋಸ್ಟ್ ಮಾಡಿದ್ದನ್ನ ಗಮನಿಸಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲಾಗಿದೆ. ಒಟ್ಟು 4-5 ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸದ್ಯ ತನಿಖೆ ಕೈಗೊಂಡಿದ್ದಾರೆ.
ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆ:
ಈ ಪ್ರಕರಣವನ್ನು ಭಾರತೀಯ ದಂಡ ಸಂಹಿತೆ (BNS) ಸೆಕ್ಷನ್ 75, 79 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ (IT Act) ಸೆಕ್ಷನ್ 66 ಮತ್ತು 67 ಅಡಿಯಲ್ಲಿ ದಾಖಲಿಸಲಾಗಿದೆ. ಈಗಾಗಲೇ ಮಹಿಳೆ ಆಯೋಗಕ್ಕೆ ಕೂಡ ದೂರು ನೀಡಲಾಗಿದೆ. ದೂರಿನ ಅನ್ವಯ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ಕೂಡ ಪತ್ರ ಬರೆದಿದೆ. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಕೂಡ ಈ ವಿಚಾರವನ್ನು ಬಹಿರಂಗಪಡಿಸಿದ್ದರು. ಭಾಸ್ಕರ್ ಪ್ರಸಾದ್ ಎಂಬುವವರು ವಿಜಯಲಕ್ಷ್ಮಿ ಪರ ದೂರು ನೀಡಿದ್ದಾಗಿ ಹೇಳಿದರು. ವಿಜಯಲಕ್ಷ್ಮಿ ,ರಮ್ಯಾ ಅಷ್ಟೇ ಅಲ್ಲ, ಯಾವುದೇ ಹೆಣ್ಣು ಮಕ್ಕಳ ಘನತೆಗೆ ಚ್ಯುತಿ ಬರುವಂತೆ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ನಾಗಲಕ್ಷ್ಮಿ ಚೌಧರಿ ತಿಳಿಸಿದರು.
