Sudeep Prediction: ವೇದಿಕೆಯಲ್ಲಿ ಸುದೀಪ್ ನೀಡಿದ್ದ ಎಚ್ಚರಿಕೆಯ ಮಾತುಗಳು ಕೇವಲ ಎರಡೇ ದಿನಗಳಲ್ಲಿ ಸತ್ಯವಾಗಿದ್ದು, ಮಲ್ಲಮ್ಮ ಮತ್ತು ಬಿಗ್‌ಬಾಸ್ ನಡುವಿನ ಸಂಭಾಷಣೆ ವೀಕ್ಷಕರ ಗಮನ ಸೆಳೆಯುತ್ತಿದೆ.

ಬೆಂಗಳೂರು: ಕನ್ನಡಬಿಗ್‌ಬಾಸ್ ಸೀಸನ್ 12 (Bigg Boss Kannada Season 12)ಆರಂಭವಾಗಿ ಎರಡು ದಿನಗಳು ಕಳೆದಿವೆ. ಮೊದಲ ದಿನವೇ ತುಳುನಾಡಿನ ಕನ್ನಡತಿ ರಕ್ಷಿತಾ ಶೆಟ್ಟಿ ಮನೆಯಿಂದ ಹೊರ ನಡೆದಿದ್ದಾರೆ. ಈ ಬಾರಿಯ ಬಿಗ್‌ಬಾಸ್ ಎರಡು ಫಿನಾಲೆಗಳನ್ನು ಹೊಂದಿರಲಿದ್ದು, ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚು ಜನರು ಏಕಕಾಲದಲ್ಲಿ ಎಲಿಮಿನೇಟ್ ಆಗಬಹುದು ಎಂದು ಸ್ಪರ್ಧಿಗಳಿಗೆ ಸೂಚನೆ ನೀಡಲಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಭಾನುವಾರ ನಟ ಕಿಚ್ಚ ಸುದೀಪ್ ಹೇಳಿದ ಮಾತು ಎರಡೇ ದಿನದಲ್ಲಿ ನಿಜವಾಗಿದೆ ಎಂದು ಬಿಗ್‌ಬಾಸ್ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಮಲ್ಲಮ್ಮ

ಈ ಬಾರಿಯ ಸ್ಪರ್ಧಿಯಾಗಿ ಆಗಮಿಸಿರುವ ಮಲ್ಲಮ್ಮ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ತಮ್ಮ ಸಹಜ ಮಾತುಗಳಿಂದಲೇ ಕರುನಾಡಿನ ಗಮನ ಸೆಳೆದಿರುವ ಮಲ್ಲಮ್ಮ ಅವರನ್ನು ಪರಿಚಯ ಮಾಡಿಕೊಡುವ ಸಂದರ್ಭದಲ್ಲಿ ಸುದೀಪ್ ವೇದಿಕೆಯಿಂದಲೇ ಬಿಗ್‌ಬಾಸ್‌ಗೆ ಸಂದೇಶವೊಂದನ್ನು ರವಾನಿಸಿದ್ದರು. ಇದೀಗ ಆ ಸಂದೇಶದಂತೆಯೇ ಬಿಗ್‌ಬಾಸ್ ಮನೆಯಲ್ಲಿ ನಡೆಯುತ್ತಿದೆ.

ಮಲ್ಲಮ್ಮ ಅವರಿಗೆ ಬಿಗ್‌ಬಾಸ್ ಆಟ ಸೇರಿದಂತೆ ಅಲ್ಲಿಯ ಎಲ್ಲಾ ವಿಷಯಗಳು ಹೊಸ ಲೋಕದಂತಿದೆ. ಉತ್ತರ ಕರ್ನಾಟಕ ಭಾಗದ ನಿವಾಸಿಯಾಗಿರುವ ಕಾರಣ ಮಲ್ಲಮ್ಮ ಅವರಿಗೆ ಬಿಗ್‌ಬಾಸ್ ಮಾತುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಕಷ್ಟಪಡುತ್ತಿದ್ದಾರೆ. ಇಂದು ಮಲ್ಲಮ್ಮ ಅವರನ್ನು ಕರೆಸಿಕೊಂಡಿರುವ ಬಿಗ್‌ಬಾಸ್, ಏನಾದರು ಮಾತನಾಡಿ ಎಂದಿದ್ದಾರೆ. ಮಲ್ಲಮ್ಮ ಒಗಟು ಕೇಳಿ ಉತ್ತರಿಸುವಂತೆ ಬಿಗ್‌ಬಾಸ್ ಗೆ ಪ್ರಶ್ನೆ ಮಾಡುತ್ತಾರೆ. ಇಷ್ಟು ಸೀಸನ್‌ಗಳಲ್ಲಿ ಯಾವ ಸ್ಪರ್ಧಿಯೂ ಈ ರೀತಿಯಾಗಿ ಬಿಗ್‌ಬಾಸ್ ಅವರನ್ನು ಪ್ರಶ್ನೆ ಮಾಡಿರಲಿಲ್ಲ.

ಬಿಗ್‌ಬಾಸ್ & ಮಲ್ಲಮ್ಮ ಕ್ಯೂಟ್ ಸಂಭಾಷಣೆ

ನನ್ನ ಮಾತುಗಳು ನಿಮಗೆ ಚೆನ್ನಾಗಿ ಅರ್ಥ ಆಗುತ್ತೆ ಅಲ್ಲವಾ? ಎಂದು ಬಿಗ್‌ಬಾಸ್ ಕೇಳುತ್ತಾರೆ. ಮಲ್ಲಮ್ಮ ಕೇಳಿದ ಒಗಟಿಗೂ ಯೋಚಿಸಿ ಬಿಗ್‌ಬಾಸ್ ಸರಿಯಾದ ಉತ್ತರ ನೀಡುತ್ತಾರೆ. ಬಿಗ್‌ಬಾಸ್ ಮನೆಯಲ್ಲಿ ಬಿಗ್‌ಬಾಸ್‌ಗೆ ಮಾತನಾಡೋದಕ್ಕೆ ಮತ್ತು ಉತ್ತರ ಕೊಡೋದಕ್ಕೆ ಯೋಚನೆ ಮಾಡುವ ಹಾಗೆ ಮಾಡಿದೀರಿ ಮಲ್ಲಮ್ಮ ಎಂದು ಬಿಗ್‌ಬಾಸ್ ತಮಾಷೆ ಮಾಡಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಇದೇ ವಿಚಾರವಾಗಿ ಮಾತನಾಡಿದ್ದರು.

ಬಿಗ್‌ಬಾಸ್ ಮಲ್ಲಮ್ಮ ಬಂದಿದ್ದಾರೆ ಹುಷಾರ್ ಎಂದು ಸುದೀಪ್ ಎಚ್ಚರಿಕೆ ರವಾನಿಸಿದ್ದರು. ಇದೀಗ ಅದೇ ರೀತಿಯಲ್ಲಿಯೇ ನಡೆಯುತ್ತಿದೆ. ಮಲ್ಲಮ್ಮ ಜೊತೆಯಲ್ಲಿ ಮಾತನಾಡಲು ಬಿಗ್‌ಬಾಸ್ ಸಹ ಕಷ್ಟಪಡುತ್ತಿದ್ದಾರೆ. ಸೋಮವಾರ ದಿನಸಿ ಟಾಸ್ಕ್‌ನಲ್ಲಿ ಮಲ್ಲಮ್ಮ ಅವರು ಆಟ ಅರ್ಥವಾಗದೇ ಸೋತಿದ್ದರು. ನಂತರ ಎರಡನೇ ಅವಕಾಶ ನೀಡಿದ್ದ ಬಿಗ್‌ಬಾಸ್ ಸಹ ಸ್ಪರ್ಧಿಗಳು ಮಲ್ಲಮ್ಮ ಅವರಿಗೆ ಆಟ ತಿಳಿಸುವಂತಗೆ ಸೂಚಿಸಿದ್ದರು.

ಇದನ್ನೂ ಓದಿ: ಬಿಗ್‌ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಇತಿಹಾಸ ಸೃಷ್ಟಿಸಿದ ಮಲ್ಲಮ್ಮ: ಹೊಸ ಅಧ್ಯಾಯಕ್ಕೆ ಬಿಗ್‌ಬಾಸ್‌ ಮೆಚ್ಚುಗೆ

ಮಲ್ಲಮ್ಮ ಜೊತೆ ಸುದೀಪ್ ಡೀಲ್

ಮಲ್ಲಮ್ಮ ಅವರ ಫಿಲ್ಟರ್ ಇಲ್ಲದ ಮಾತುಗಳನ್ನು ಕೇಳಿದ ಸುದೀಪ್, ಯಾವುದೇ ಹಿಂಜರಿಕೆಯಿಲ್ಲದೇ ಸುಂದರವಾದ ತಮಾಷೆಯ ಒಪ್ಪಂದವನ್ನು ಮಾಡಿಕೊಂಡಿದ್ದರು. ಮನೆಯೊಳಗೆ ಹೋದ್ಮೇಲೆ ನೀವು ಬಿಗ್‌ಬಾಸ್ ಜೊತೆ ಏನಾದರೂ ಮಾತನಾಡಿಕೊಳ್ಳಿ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆದ್ರೆ ಶನಿವಾರ ಮತ್ತು ಭಾನುವಾರ ನಾನು ಬರುತ್ತೇನೆ. ಆಗ ನನ್ನ ಮರ್ಯಾದೆ ತೆಗಿಯಬೇಡಿ. ಈ ಬಗ್ಗೆ ನಾವಿಬ್ಬರು ಡೀಲ್ ಮಾಡಿಕೊಳ್ಳೋಣ ಎಂದು ಮಲ್ಲಮ್ಮ ಮತ್ತು ಸುದೀಪ್ ಹ್ಯಾಂಡ್‌ಶೇಕ್ ಮಾಡಿಕೊಂಡಿದ್ದರು.

ಈಗ ಸುದೀಪ್ ಹೇಳಿದಂತೆ ಬಿಗ್‌ಬಾಸ್ ಮತ್ತು ಮಲ್ಲಮ್ಮ ನಡುವಿನ ಕ್ಯೂಟ್ ಸಂಭಾಷಣೆ ವೈರಲ್ ಆಗುತ್ತಿದೆ. ಮನೆಯಲ್ಲಿರುವ ಬಹುತೇಕರು ಸೆಲಿಬ್ರಿಟಿಗಳಾಗಿದ್ದರೂ ಮಲ್ಲಮ್ಮ ಎಲ್ಲರೊಂದಿಗೆ ಹೊಂದಿಕೊಂಡು ಹೋಗುತ್ತಿರೋದು ಎಲ್ಲರಲ್ಲಿ ಅಚ್ಚರಿ ಮೂಡಿಸುತ್ತಿದೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಯ ಬಾಸ್‌ಗೆ ಕನ್ಫ್ಯೂಸ್‌ ಮಾಡಿದ ತುಳು ನಾಡಿನ ಬೆಡಗಿ ರಕ್ಷಿತಾ ಶೆಟ್ಟಿ