ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನಕಪುರದಲ್ಲಿ ನಡೆದ ಸರಳ ವಿವಾಹದಲ್ಲಿ ಆಪ್ತರು ಹಾಜರಿದ್ದರು, ಆದರೆ ಒಬ್ಬ ಪ್ರಮುಖ ವ್ಯಕ್ತಿ ಗೈರು ಹಾಜರಾಗಿದ್ದರು.
ಬೆಂಗಳೂರು (ಆ.30): ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಕೊನೆಗೂ ವಿವಾಹವಾಗಿದ್ದಾರೆ. ಕಿರುತೆರೆಯ ಪ್ರೋಗ್ರಾಮ್‌ಗಳಿಂದಲೇ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದ ಅನುಶ್ರೀಗೆ ಇದೇ ಅಭಿಮಾನಿಗಳು ಹಲವು ವರ್ಷಗಳಿಂದ ಮದುವೆ ಯಾವಾಗ ಅನ್ನೋ ಪ್ರಶ್ನೆ ಮಾಡುತ್ತಿದ್ದರು. ಕೊನೆಗೆ ಈ ವರ್ಷದ ಆರಂಭದಲ್ಲಿ ಇದೇ ವರ್ಷ ಮದುವೆ ಆಗುತ್ತೇನೆ ಎಂದಿದ್ದ ಅನುಶ್ರೀ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನಕಪುರದ ಖಾಸಗಿ ರೆಸಾರ್ಟ್‌ನಲ್ಲಿ ಎರಡು ದಿನದ ಮದುವೆಯಲ್ಲಿ ಅನುಶ್ರೀ ಭರ್ಜರಿಯಾಗಿ ಸಂಭ್ರಮಿಸಿದ್ದಾರೆ. ಎರಡು ದಿನಗಳ ಕಾಲ ನಡೆದ ಸರಳ ವಿವಾಹ ಸಮಾರಂಭದಲ್ಲಿ ಆಕೆಯ ತೀರಾ ಅತ್ಯಾಪ್ತರು ಬಂದು ವಿಶ್ ಮಾಡಿದ್ದಾರೆ. ಆದರೆ, ಒಬ್ಬರು ಮಾತ್ರ ಇಡೀ ಮದುವೆಯ ಆವರಣದಲ್ಲಿ ಎಲ್ಲೂ ಕಂಡಿರಲಿಲ್ಲ.
ಎಲ್ಲರೂ ಬಂದ್ರೂ ಆಪ್ತ ಸ್ನೇಹಿತ ಮಾತ್ರ ಮಿಸ್
ನಟ, ನಿರ್ಮಾಪಕ, ನಿರ್ದೇಶಕ ರಾಜ್ ಬಿ ಶೆಟ್ಟಿ, ತರುಣ್ ಸುಧೀರ್, ವಿಜಯ್ ರಾಘವೇಂದ್ರ, ಸಂಗೀತ ನಿರ್ದೇಶಕ ಹಂಸಲೇಖ, ನಿರೂಪಕಿ ಶ್ವೇತಾ ಚೆಂಗಪ್ಪ, ಹಿರಿಯ ನಟಿ ತಾರಾ ಸೇರಿದಂತೆ ಹಲವರು ಅನುಶ್ರೀ ಮದುವೆಗೆ ಆಗಮಿಸಿ ಆಕೆಯ ಹೊಸ ಜೀವನಕ್ಕೆ ಶುಭ ಹಾರೈಸಿದ್ದಾರೆ. ಆದರೆ, ಇವರು ಬರೋದೇ ಇರೋದಕ್ಕೆ ಸಾಧ್ಯಾನೇ ಇಲ್ಲ ಅಂತಿದ್ದ ವ್ಯಕ್ತಿ ಎರಡೂ ದಿನದ ಕಾರ್ಯಕ್ರಮದಲ್ಲಿ ಮಿಸ್ ಆಗಿದ್ದಾರೆ. ಯಾವುದೇ ಫೋಟೋ, ವಿಡಿಯೋದಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ. ಕೊನೆಗೆ ಹಳದಿ ಶಾಸ್ತ್ರ, ಮದುವೆಯ ದಿನವಾದರೂ ಅವರಿಂದ ವಿಶ್ ಬರುವ ನಿರೀಕ್ಷೆಯಲ್ಲಿದ್ದ ಅನುಶ್ರೀ, ಬರದೇ ಇದ್ದ ಕಾರಣದಿಂದ ಕೊಂಚ ಬೇಸರ ಕೂಡ ಹೊಂದಿದ್ದರು.
ಜೀವನ ಸುಖವಾಗಿರಲಿ ಎಂದು ಪೋಸ್ಟ್ ಮಾಡಿದ ಸ್ನೇಹಿತ
ಆದರೆ, ಶನಿವಾರದ ವೇಳೆಗೆ ತಮ್ಮ ಆಪ್ತ ವ್ಯಕ್ತಿಯಿಂದ ಮದುವೆಯ ವಿಶ್‌ಅನ್ನು ಅನುಶ್ರೀ ಪಡೆದುಕೊಂಡಿದ್ದಾರೆ. 'ಈ ಹೊಸ ಪ್ರಯಾಣದಲ್ಲಿ ನಿಮಗೆ ಪ್ರೀತಿ ಮತ್ತು ಸಂತೋಷವನ್ನು ಹಾರೈಸುತ್ತೇನೆ @anchor_anushreeofficial ಮತ್ತು ರೋಷನ್. ನಿಮ್ಮ ಮುಂದಿನ ಜೀವನವು ಸಂತೋಷ ಮತ್ತು ಸುಂದರವಾದ ನೆನಪುಗಳಿಂದ ತುಂಬಿರಲಿ! ನಿಮ್ಮಿಬ್ಬರಿಗೂ ತುಂಬಾ ಪ್ರೀತಿಯಿಂದ ವಿಶ್ ಮಾಡುತ್ತಿದ್ದೇನೆ' ಎಂದು ಅವರು ಬರೆದುಕೊಂಡಿದ್ದಾರೆ. ಶನಿವಾರ ಬೆಳಗ್ಗೆ ಇನ್ಸ್‌ಟಾಗ್ರಾಮ್ ಮೂಲಕ ಈ ವಿಶ್ ಮಾಡಿದ್ದಾರೆ. ಅನುಶ್ರೀ ಕೈಗಳನ್ನು ಹಿಡಿದುಕೊಂಡಿರುವ ರೋಶನ್ ರಾಮಮೂರ್ತಿ ಫೋಟೋವನ್ನು ಇದಕ್ಕೆ ಹಾಕಿದ್ದು, ಅನುಶ್ರೀ ಅವರ ಶುಭ್ರ ನಗು ಇದರಲ್ಲಿ ಕಂಡಿದೆ.
ಆಪ್ತರಿಂದ ಬಂದ್ ವಿಶ್‌ಗೆ ಪ್ರತಿಕ್ರಿಯೆ ನೀಡಿರುವ ಅನುಶ್ರೀ, 'ಓಹ್ ಥ್ಯಾಂಕ್ ಯು ಶ್ರೆಟ್ರೆ. ನಾವು ನಿಮ್ಮನ್ನು ಮಿಸ್ ಮಾಡಿಕೊಂಡೆವು. ಆದರೆ ನಿಮ್ಮ ಬೆಸ್ಟ್ ವಿಶ್ ಪಡೆದುಕೊಂಡಿದ್ದೇವೆ' ಎಂದು ಬರೆದುಕೊಂಡು ಇಮೋಜಿ ಪೋಸ್ಟ್ ಮಾಡಿದ್ದಾರೆ.
ಇನ್ಸ್‌ಟಾಗ್ರಾಮ್ ಮೂಲಕ ವಿಶ್ ಮಾಡಿದ ರಕ್ಷಿತ್ ಶೆಟ್ಟಿ
ಹೌದು.. ಅನುಶ್ರೀಗೆ ಈ ವಿಶ್ ಮಾಡಿದ್ದು, ನಟ, ನಿರ್ಮಾಪಕ, ನಿರ್ದೇಶಕ ರಕ್ಷಿತ್ ಶೆಟ್ಟಿ. ಕಳೆದ ಕೆಲ ತಿಂಗಳುಗಳಿಂದ ಸ್ಯಾಂಡಲ್‌ವುಡ್‌ನಿಂದ ಮಾಯವಾದಂತಿರುವ ರಕ್ಷಿತ್ ಶೆಟ್ಟಿ, ಯಾವುದೋ ಬಿಗ್ ಪ್ರಾಜೆಕ್ಟ್ ಮೂಲಕ ತೆರೆಗೆ ಬರುವ ಸಿದ್ಧತೆಯಲ್ಲಿದ್ದಾರೆ. ಅನುಶ್ರೀ ಹಾಗೂ ರಕ್ಷಿತ್ ಶೆಟ್ಟಿ ಹಲವು ವರ್ಷಗಳಿಂದ ಸ್ನೇಹಿತರು. ಕನಿಷ್ಠ ಅನುಶ್ರೀ ಮದುವೆಯಲ್ಲಾದರೂ ರಕ್ಷಿತ್ ಶೆಟ್ಟಿ ಕಾಣಿಸಿಕೊಳ್ಳಬಹುದು ಎನ್ನುವ ನಿರೀಕ್ಷೆಯೂ ಸುಳ್ಳಾಗಿತ್ತು. ಈಗ ಇನ್ಸ್‌ಟಾಗ್ರಾಮ್ ಮೂಲಕ ಅನುಶ್ರೀ ಅವರ ಹೊಸ ಜೀವನಕ್ಕೆ ರಕ್ಷಿತ್ ಶೆಟ್ಟಿ ಶುಭ ಕೋರಿದ್ದಾರೆ.

