ನಿರೂಪಕಿ ಜಾಹ್ನವಿ ಮಾಜಿ ಪತಿ ಕಾರ್ತಿಕ್ ಮಹಡಿ, ತಮ್ಮ ವೈವಾಹಿಕ ಜೀವನದ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ. ಜಾಹ್ನವಿ ಅವರ ಒತ್ತಾಯದ ಮೇರೆಗೆ ₹1.5 ಕೋಟಿಯ ಫ್ಲ್ಯಾಟ್ ಖರೀದಿಸಿದ್ದರು. ಆದರೆ ಫ್ಲ್ಯಾಟ್‌ಗೆ ಶೇ.90ರಷ್ಟು ಹಣ ತಾನೇ ಕಟ್ಟಿದ್ದೇನೆ ಎಂಬ ಆಕೆಯ ಹೇಳಿಕೆಯನ್ನು ಕಾರ್ತಿಕ್ ಪ್ರಶ್ನೆ ಮಾಡಿದ್ದಾರೆ.
ನಾವು ವೆಲ್ ಸೆಟಲ್ಡ್, ಸುಖ ಸಂಸಾರವಿತ್ತು. ಆದರೆ, ನಮ್ಮಮ್ಮನ ಜೊತೆಗೆ ಹೊಂದಾಣಿಕೆ ಇಲ್ಲದೆ ಬೇರೆ ಮನೆ ಮಾಡುವಂತೆ ಜಾಹ್ನವಿ ಹೇಳಿದರು. ಆಕೆ ಮಾತು ಕೇಳಿಕೊಂಡು ₹1.5 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್ ಫ್ಲ್ಯಾಟ್ ಖರೀದಿ ಮಾಡಿದೆ. ಇದಾದ ನಂತರ ಬಿಸಿನೆಸ್ ಲಾಸ್ ಆಗಿ, ಕೆಲಸವಿಲ್ಲದಿದ್ದಾಗ ಜಾಹ್ನವಿಯೇ ಇಎಂಐ ಕಟ್ಟುತ್ತಿದ್ದರು. ಈಗ ಫ್ಲ್ಯಾಟ್‌ಗೆ ಶೇ.90 ಹಣ ನಾನೇ ಕಟ್ಟಿದ್ದೇನೆ ಎಂದರೆ ಹೇಗೆ ಸಾಧ್ಯ. 60 ಸಾವಿರ ಸಂಬಳದಲ್ಲಿ ಫ್ಲ್ಯಾಟ್ ಖರೀದಿ ಸಾಧ್ಯವೇ? ಎಂದು ಮಾಜಿ ಪತಿ ಕಾರ್ತಿಕ್ ಮಹಡಿ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಲ್ಲಿ ಸ್ವಂತ ಮನೆಗೆ ಭಾರೀ ಒತ್ತಡ:
ಅಶ್ವವೇಗ ಸುದ್ದಿ ಮಾಧ್ಯಮದೊಂದಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ ನಿರೂಪಕಿ ಜಾಹ್ನವಿ ಅವರ ಮಾಜಿ ಪತಿ ಕಾರ್ತಿಕ್ ಮಹಡಿ ಅವರು, ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ನಾನು ಮತ್ತು ಜಾಹ್ನವಿ ಇಬ್ಬರೂ ಮದುವೆ ಮಾಡಿಕೊಂಡು ಸಂಸಾರ ಆರಂಭಿಸಿದ ಮೇಲೆ ನಾವು ಬೆಂಗಳೂರಿಗೆ ಹೋಗೋಣ ಎಂದು ಹಠವಿಡಿದರು. ಚಿತ್ರದುರ್ಗದಲ್ಲಿ ವೆಲ್ ಸೆಟಲ್ಡ್ ಆಗಿದ್ದರೂ ತಂದೆ-ತಾಯಿ ಬಿಟ್ಟು ಹೆಂಡತಿಗಾಗಿ ಬೆಂಗಳೂರಿಗೆ ಬಂದೆ. ಅವರನ್ನು ಮದುವೆ ಮಾಡಿಕೊಳ್ಳುವ ಮುನ್ನ ಸಿನಿಮಾಗೆ ಹೋಗಬಾರದು ಎಂದು ಕಂಡೀಷನ್ ಹಾಕಿದ್ದೆ. ಮದುವೆಯಾದಾಗಿನಿಂದ 2 ವರ್ಷ ಸಂಸಾರ ಚೆನ್ನಾಗಿತ್ತು. ಬೇರೆ ಮನೆ ಮಾಡಬೇಕೆಂದು ಹೇಳಿದಾಗ ಬೆಂಗಳೂರಿಗೆ ಶಿಫ್ಟ್ ಆದವು. ಮಗನನ್ನು ಸಕಲೇಶಪುರಕ್ಕೆ ಓದಲು ಕಳಿಸಿ, ನಂತರ ಬೆಂಗಳೂರಿಗೆ ವಾಪಸ್ ಕರೆದುಕೊಂಡು ಬಂದೆವು.
ನನ್ನ ಬಿಸಿನೆಸ್ ಲಾಸ್ ಆಯ್ತು, ಮನೆ ಹರಾಜಿಗೂ ಬಂದಿತ್ತು:
2016ರಲ್ಲಿ ಬೆಂಗಳೂರಿಗೆ ಬಂದು ಬೇರೆ ಮನೆ ಮಾಡುವುದಕ್ಕೆ ಸ್ವಲ್ಪ ಸಾಲವೂ ಆಗಿದ್ದು, ಇದನ್ನು ಸ್ವಲ್ಪ ದಿನಗಳಲ್ಲಿ ತೀರಿಸಿದೆ. ಇದಾದ ನಂತರ, ಜಾಹ್ನವಿ ನನಗೆ ಸ್ವಂತ ಮನೆ ಬೇಕು ಎಂದು ಹಠವಿಡಿದರು. ಆಗ ಎಲ್ಲ ಕಡೆ ಹುಡುಕಿ ಒಂದು ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ 1.5 ಕೋಟಿ ಫ್ಲ್ಯಾಟ್ ಖರೀದಿ ಮಾಡಿದೆ. ಈ ಫ್ಲಾಟ್ ಖರೀದಿ ಮಾಡಿದ ಕೆಲವು ತಿಂಗಳಲ್ಲಿ ನನ್ನ ಬಿಸಿನೆಸ್ ಲಾಸ್ ಆಯ್ತು, ನನಗೆ ಕೆಲಸವೂ ಇಲ್ಲದೇ ಸಾಲ ಕಟ್ಟಲಾಗಲಿಲ್ಲ. ಬ್ಯಾಂಕಿನವರು ಸಾಲ ಕಟ್ಟದ ಕಾರಣ ನಮ್ಮ ಫ್ಲಾಟ್ ಅನ್ನು 3-4 ಬಾರಿ ಹರಾಜಿಗೂ ಇಟ್ಟಿದ್ದರು. ಆಗ ಬ್ಯಾಂಕ್ ಜೊತೆಗೆ ಮಾತಾಡಿಕೊಂಡು ಅಪಾರ್ಟ್‌ಮೆಂಟ್ ಉಳಿಸಿಕೊಳ್ಳಲು ಪ್ರಯತ್ನ ಮಾಡಿದೆ. ಹೆಚ್ಚು ಬಡ್ಡಿದರ ವಿಧಿಸುತ್ತಿದ್ದ ಕೋ-ಆಪರೇಟಿವ್ ಬ್ಯಾಂಕ್‌ನಿಂದ ರಾಷ್ಟ್ರೀಕೃತ ಬ್ಯಾಂಕ್‌ಗೆ ಮನೆ ಸಾಲ ಶಿಫ್ಟ್ ಮಾಡಿಸಿಕೊಂಡೆ. ಆಗ ನನಗೆ ಕೆಲಸವಿಲ್ಲದ ಕಾರಣ ಜಾಹ್ನವಿ ಅವರೇ ಇಎಂಐ ಕಟ್ಟಿಕೊಂಡು ಹೋಗುತ್ತಿದ್ದರು.
ನಾವು ತುಂಬಾ ಸ್ಥಿತಿವಂತರು, ಪೆಟ್ರೋಲ್ ಬಂಕ್ ಇದ್ದವು, ಟ್ರಾವೆಲ್ಸ್ ಇತ್ತು. ನಮ್ಮ ಪಿತ್ರಾರ್ಜಿತ ಆಸ್ತಿ ಇದ್ದರೂ ನಾನು ಫ್ಲಾಟ್ ಅನ್ನು ಸ್ವಂತ ಮಾಡಿಕೊಳ್ಳುವುದಕ್ಕೆ ಅಪ್ಪ-ಅಮ್ಮನ ಆಸ್ತಿ ಮಾರಲು ಮನಸ್ಸು ಮಾಡಲಿಲ್ಲ. ಹೀಗಾಗಿ, ಫ್ಲಾಟ್ ಖರೀದಿ ಮಾಡಿದ ಸಾಲ ತೀರಿಸಲು ನನಗೆ ಸಾಧ್ಯವಾಗಲಿಲ್ಲ. ಈ ವೇಳೆ ಜಾಹ್ನವಿ ನನಗೆ ಒಂದಿಷ್ಟು ಪ್ಯಾಶನ್ ಇದೆ ಎನ್ನುತ್ತಾ ಅದರಲ್ಲಿಯೇ ಕೆಲಸ ಮಾಡಿಕೊಂಡು ಹೋಗುವುದಾಗಿ ತಿಳಿಸಿದರು. ಯಾವುದರಲ್ಲಿ ಆಸಕ್ತಿ ಎಂದು ಕೇಳಿದಾಗ ಸಿನಿಮಾ, ಧಾರಾವಾಹಿ, ಮಾಧ್ಯಮ ಕ್ಷೇತ್ರದಲ್ಲಿ ಆಫರ್ ಬರ್ತಿವೆ ಎಂದರು. ಆಗ ನಾನು ಸೀರಿಯಲ್ ಬೇಡ, ನ್ಯೂಸ್ ಚಾನಲ್‌ಗೆ ಓಕೆ ಅಂತಾ ಹೇಳಿದೆ. ಆಗ ನ್ಯೂಸ್ ಚಾನೆಲ್ ಸೇರಿದರು. ಆರಂಭದಲ್ಲಿ 22 ಸಾವಿರ ಸಂಬಳದಿಂದ ಆರಂಭವಾಗಿ, ನನ್ನ ಬಿಸಿನೆಸ್ ಲಾಸ್ ಆಗುವ ವೇಳೆಗೆ 60 ಸಾವಿರ ರೂ. ಸಂಬಳ ಪಡೆಯುವ ಹಂತ ತಲುಪಿದ್ದರು. ಆಗ ಅವರೇ ಮನೆಯ ಇಎಂಐ ಕಟ್ಟುತ್ತಿದ್ದರು. ಆದರೆ, ಮನೆಯ ಶೇ.90 ಹಣವನ್ನು ಅವರೇ ಕಟ್ಟಿದ್ದಾರೆ ಎಂದರೆ ಇದು ಸತ್ಯಕ್ಕೆ ದೂರವಾದ ಮಾತು.
ಅವರಿಗೆ ನಾನು ಫ್ಲ್ಯಾಟ್ ಖರೀದಿ ಮಾಡಿವಾಗ ಅದಕ್ಕೆ ಡೌನ್‌ಪೇಮೆಂಟ್ ಎಷ್ಟು ಮಾಡಿದ್ದೇನೆ, ರಿನೋವೇಷನ್‌ಗೆ ಎಷ್ಟು ಖರ್ಚು ಮಾಡಿದ್ದೇನೆ, ಕೋ-ಆಪರೇಟಿವ್ ಬ್ಯಾಂಕಿನಲ್ಲಿದ್ದಾಗ ಎಷ್ಟು ದುಬಾರಿ ಬಡ್ಡಿ ಹಾಗೂ ಇಎಂಐ ಬರುತ್ತಿತ್ತು ಎಂಬ ಮಾಹಿತಿಯಿಲ್ಲ. ಆದರೆ, ಅವರಿಗೆ ಕೇವಲ 60 ಸಾವಿರ ರೂ. ಸಂಬಳ ಇತ್ತು. ಈ ಸಂಬಳದಲ್ಲಿ 1.1 ಕೋಟಿ ಮನೆ ಖರೀದಿ ಮಾಡಲು ಹೇಗೆ ಸಾಧ್ಯ. ವರ್ಷಕ್ಕೆ ದುಡಿದ ಎಲ್ಲ ಹಣವನ್ನು ಇಎಂಐ ಪಾವತಿ ಮಾಡಿದರೂ ವರ್ಷಕ್ಕೆ 7-8 ಲಕ್ಷ ರೂ. ಹಣ ಕಟ್ಟಬಹುದು. ಅಂಥದ್ದರಲ್ಲಿ ಅವರೇ ಶೇ.90 ಹಣ ಕೊಟ್ಟಿದ್ದಾಗಿ ಹೇಳಿದರೆ ನೀವು ನಂಬ್ತೀರಾ ಎಂದು ಪ್ರಶ್ನೆ ಮಾಡಿದರು.
