Actress Mokshitha Pai: ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ಖ್ಯಾತಿಯ ಮೋಕ್ಷಿತಾ ಪೈ ನಟನೆಯ ‘ಮಿಡಲ್ ಕ್ಲಾಸ್ ರಾಮಾಯಣ’ ಸಿನಿಮಾ ರಿಲೀಸ್ ಆಗಲು ರೆಡಿಯಾಗಿದೆ. ಈ ಸಿನಿಮಾಕ್ಕೋಸ್ಕರ ಅವರ ಭಾರೀ ಕುತೂಹಲದಿಂದ ಇದ್ದಾರಂತೆ.
ಸಿನಿಮಾ ಅಂದರೆ ಮನರಂಜನೆ. ಆ ಮನರಂಜನೆಗಾಗಿಯೇ ಸಿನಿಪ್ರೇಮಿಗಳು 2.30 ಗಂಟೆಯಿಂದ 3 ಗಂಟೆ ಮೀಸಲಿಡುತ್ತಾರೆ. ಎಲ್ಲ ಯೋಚನೆಗಳನ್ನು ಮರೆತು, ಸಿನಿಮಾ ನೋಡಬೇಕು ಅಂದರೆ ಕಂಟೆಂಟ್ ಇರಬೇಕು. ಆ ರೀತಿ ಸಿನಿಮಾವೊಂದು ರಿಲೀಸ್‌ಗೆ ರೆಡಿಯಾಗಿದೆ. ಅದುವೆ ‘ಮಿಡಲ್ ಕ್ಲಾಸ್’ ರಾಮಾಯಣ. ಸೆಪ್ಟೆಂಬರ್ 12ಕ್ಕೆ ಈ ಸಿನಿಮಾ ರಿಲೀಸ್ ಆಗ್ತಾ ಇದೆ. ಇನ್ನು ಟ್ರೇಲರ್ ಕೂಡ ರಿಲೀಸ್ ಆಗಿದೆ.
ಮಿಡಲ್ ಕ್ಲಾಸ್ ಮಂದಿಯ ಮದುವೆಯ ಅದೆಷ್ಟೋ ಸಂಕಷ್ಟಗಳನ್ನು ತೋರಿಸಿದ್ದಾರೆ. ಅಷ್ಟೇ ನಗು ಇದೆ. ಮೋಕ್ಷಿತಾ ಪೈ ಅಂತು ತಮ್ಮ ರಿಯಲ್ ಕಲರ್ ಮರೆಮಾಚಿ, ಸೌಂದರ್ಯ ಅನ್ನೋ ಹೆಸರಿಗೆ ತದ್ವಿರುದ್ಧವಾದಂತ ರೂಪ ತಾಳಿದ್ದಾರೆ. ಟ್ರೇಲರ್ ಒಳ್ಳೆ ರೆಸ್ಪಾನ್ಸ್ ಕೂಡ ಪಡೆದುಕೊಳ್ಳುತ್ತಿದೆ.
ರೆಬಲ್ ಹುಡುಗರು ಸಿನಿಮಾವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಧನುಶ್ ಗೌಡ ಮಾತನಾಡಿ, ಮಿಡಲ್ ಕ್ಲಾಸ್ ರಾಮಾಯಣ ಒಬ್ಬ ಹುಡುಗನ ಕಥೆಯಾಗಿದೆ. ಎಲ್ಲರ ಜೀವನದಲ್ಲೂ ಒಂದೊಂದು ಕಥೆ ಇರುತ್ತೆ ಎಂದಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ಆರ್ಟಿಸ್ಟ್ ಇದ್ದಾರೆ. ಆದರೆ ಕರೆದರು ಪ್ರಚಾರಕ್ಕೆ ಬಂದಿಲ್ಲ. ನಮ್ಮದು ದೊಡ್ಡ ಬ್ಯಾನರ್ ಅಲ್ವಾ ಎಂಬ ಅಭಿಪ್ರಾಯವೋ ಏನೋ ಇರಬಹುದು. ಇನ್ನು ಈ ಸಿನಿಮಾ ಕೋವಿಡ್‌ಗೂ ಮುಂಚೆಯೇ ಶುರು ಮಾಡಲಾಗಿತ್ತು. ಆದರೆ ಸ್ವಲ್ಪ ತಡವಾದ ಕಾರಣ ಹೀರೋ - ಹೀರೋಯಿನ್ ಪಾರ್ಟ್ ಅನ್ನು ಸ್ವಲ್ಪ ಮಟ್ಟಿಗೆ ರಿಶೂಟ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ನಿರ್ಮಾಪಕ ಜಯರಾಮ್ ಗಂಗಪ್ಪನಹಳ್ಳಿ ಲಾರಿ ಇಟ್ಟುಕೊಂಡಿದ್ದಾರೆ. ಕೃಷಿ ಬಗ್ಗೆ ಸಾಕಷ್ಟು ಆಸಕ್ತಿಯನ್ನ ಹೊಂದಿದ್ದಾರೆ. ಈ ವೇಳೆ ಮಾತನಾಡಿದ ಜಯರಾಮ್, ಫ್ರೆಂಡ್ ಬಂದು ಕಥೆ ಹೇಳಿದ್ರು, ಕಥೆ ಇಷ್ಟ ಆಯ್ತು ಹೀಗಾಗಿ ಸಿನಿಮಾ ಮಾಡಿದೆವು. ನಮಗೆ ನಮ್ಮ ಸಿನಿಮಾ ಇಷ್ಟ ಆಗೋದು ಮುಖ್ಯ ಅಲ್ಲ. ಜನ ಇಷ್ಟ ಪಡುವುದು ಬಹಳ ಮುಖ್ಯ ಎಂದಿದ್ದಾರೆ.
ನಟಿ ಯುಕ್ತ ಮಾತನಾಡುತ್ತಾ, ಕನ್ನಡ ಇಂಡಸ್ಟ್ರಿಯಲ್ಲಿ ನನಗೆ ಅವಕಾಶ ಕೊಟ್ಟಿದ್ದಕ್ಕೆ ಖುಷಿ ಇದೆ. ಕೀರ್ತಿ ಎಂಬ ಪಾತ್ರ ಮಾಡಿದ್ದೇನೆ. ಕನ್ನಡದಲ್ಲಿಯೇ ಇದೇ ಮೂರನೇ ಸಿನಿಮಾ ಎಂದಿದ್ದಾರೆ.
ಮೋಕ್ಷಿತಾ ಪೈ ಏನಂದ್ರು?
ಮೋಕ್ಷಿತಾ ಪೈ ಮಾತನಾಡುತ್ತಾ, ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟ ಫೀಲ್ ಆಗ್ತಾ ಇದೆ. ನಾವೆಲ್ಲರೂ ನಿಮಗೆ ಕಾಣಿಸ್ತೀವಿ. ಆದರೆ ತೆರೆ ಹಿಂದೆ ಒಂದಷ್ಟು ಜನರು ಹಾಕಿದ ಶ್ರಮದಿಂದ ಈ ಸಿನಿಮಾ ರಿಲೀಸ್ ಹಂತಕ್ಕೆ ಬಂದಿದೆ. ಸೌಂದರ್ಯ ಎಂಬ ಪಾತ್ರ ಮಾಡಿದ್ದೀನಿ. ಆದರೆ ಸಿನಿಮಾದಲ್ಲಿ ನಾನೇನು ಸಖತ್ತಾಗಿ ಕಾಣಿಸ್ತಿಲ್ಲ. ನಿರ್ದೇಶಕರು ಎಣ್ಣಗೆಂಪಾಗಿ ಕಾಣಿಸ್ತೀರಾ ಅಂದಿದ್ರು. ಲುಕ್ ಟೆಸ್ಟ್ ಕೊಟ್ಟಾಗ ನಾನೇ ಶಾಕ್ ಆಗಿದ್ದೆ. ಆದ್ರೆ ಹೊಸಪ್ರಯತ್ನ ಇರಲಿ ಅಂತ ಒಪ್ಪಿಕೊಂಡೆ. ಸಿಂಪಲ್ ಅಂಡ್ ಸ್ವೀಟ್ ಆಗಿ ಕಥೆಯನ್ನ ಹೇಳ್ತಾ ಇದ್ದೀವಿ ಎಂದಿದ್ದಾರೆ.
ನಟ ವಿನು ಗೌಡ ತಮ್ಮ ಸಿನಿಮಾದಲ್ಲಿ ಯಾವ ರೀತಿಯಲ್ಲಿ ಕಾಣಿಸಿಕೊಂಡಿದ್ದರೋ ಅದೇ ರೀತಿ ಬಂದಿದ್ದರು. ಈ ವೇಳೆ ಮಾತನಾಡುತ್ತಾ, ಈ ಸಿನಿಮಾ ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ. ಹೊಸ ಪ್ರತಿಭೆಗಳನ್ನು ಬೆಳೆಸಿ ಎಂದಿದ್ದಾರೆ.
