ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಕಲಾವಿದರು ಹೊರಗಡೆ ಬರುತ್ತಿದ್ದಾರೆ. ಈಗ ಅಂಜಲಿ ಅವರು ಹೊರಗಡೆ ಬಂದಿದ್ದು, ನಿಜವಾದ ಕಾರಣ ಏನು ಎಂದು ಮಾಧ್ಯಮದ ಜೊತೆ ಮಾತನಾಡಿದ್ದಾರೆ.
‘ಲಕ್ಷ್ಮೀ ನಿವಾಸ’ ಧಾರಾವಾಹಿಯಿಂದ ನಟಿ ಶ್ವೇತಾ, ನೀನಾಸಂ ಅಶ್ವತ್ಥ್, ಭವಿಷ್ ಗೌಡ, ಯುಕ್ತಾ ಡಿಕೆ, ದಿವ್ಯಾ ಅವರು ಹೊರಗಡೆ ಬಂದಿದ್ದಾರೆ. ಒಂದಾದ ಮೇಲೆ ಒಂದರಂತೆ ಈ ಸೀರಿಯಲ್‌ನಿಂದ ಕಲಾವಿದರು ಹೊರಗಡೆ ಬರುತ್ತಿದ್ದಾರೆ. ನಟಿ ಅಂಜಲಿ ಅವರು ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ.
ನಟಿ ಅಂಜಲಿ ಹೇಳಿದ್ದೇನು?
“ನನ್ನ ಪಾತ್ರವನ್ನು ಸರಿಯಾಗಿ ಮಾಡಿಲ್ಲ, ತಿದ್ದಿಲ್ಲ ಎಂದು ಬೇಸರ ಆಗಿದೆ. ವಿಜಯಲಕ್ಷ್ಮೀ ಅವರು ಯಾವ ಕಾರಣಕ್ಕೆ ಬೇಸರ ಆಗಿದೆ, ಅಸಮಾಧಾನ ಆಗಿದೆ ಎಂದು ಗೊತ್ತಿಲ್ಲ, ಅದು ಅವರ ವೈಯಕ್ತಿಕ. ವಿಜಯಲಕ್ಷ್ಮೀ ಅವರು ಈಗ ಆಸ್ಟ್ರೇಲಿಯಾದಲ್ಲಿದ್ದಾರೆ. ರೇಣುಕಾ ಮಾತ್ರ ಮುಂದಿನ ದಿನಗಳಲ್ಲಿ ಚೆನ್ನಾಗಿ ಬರಬಹುದು, ಅವಳು ತಪ್ಪು ತಿದ್ದಿಕೊಳ್ಳಬಹುದು. ಆದರೆ ಕಳೆದ ಆರು ತಿಂಗಳಲ್ಲಿ ಏನೂ ಆಗುತ್ತಿಲ್ಲ” ಎಂದು ಅಂಜಲಿ ಹೇಳಿದ್ದಾರೆ.
“ನಿರ್ಮಲಾ ಚೆನ್ನಪ್ಪ ಅವರು ಕಥೆ ಹೇಳುವಾಗ ಎರಡು ಧಾರಾವಾಹಿ ಆಗುತ್ತದೆ, ನಿಮ್ಮ ಮನೆ ಕಡೆ ಆಮೇಲೆ ಇನ್ನೊಂದು ಮನೆ ಕಡೆ ಕಥೆ ಪ್ರಸಾರ ಆಗುತ್ತದೆ ಎಂದು ಹೇಳಿದ್ದರು. ಆದರೆ 800 ಎಪಿಸೋಡ್ ಆದರೂ ಕೂಡ ನನ್ನ ಪಾತ್ರ ಚೆನ್ನಾಗಿ ಬರುತ್ತಿಲ್ಲ. ನಾನು ಇನ್ನೊಂದು ಸೀರಿಯಲ್‌ನಲ್ಲಿ ಪಾಸಿಟಿವ್ ಪಾತ್ರ ಮಾಡುತ್ತಿರೋದಿಕ್ಕೆ, ಇಲ್ಲಿ ತುಂಬ ನೆಗೆಟಿವ್ ಆಗಿ ತೋರಿಸಲಾಗುತ್ತಿದೆ. ಇದು ಬೇಸರ ತಂದಿದೆ” ಎಂದಿದ್ದಾರೆ.
“ನನಗೆ ಇಲ್ಲಿ ನಟಿಸೋಕೆ ಜಾಗವೇ ಇಲ್ಲ. ಸಾಕಷ್ಟು ಬಾರಿ ಈ ಬಗ್ಗೆ ಹೇಳಿದರೂ ಕೂಡ ಅವರು ತಲೆಕೆಡಿಸಿಕೊಳ್ಳಲಿಲ್ಲ. ಲಕ್ಷ್ಮೀ ನಿವಾಸ ಧಾರಾವಾಹಿ ಡೈರೆಕ್ಟರ್ ತುಂಬ ಚೆನ್ನಾಗಿ ನನ್ನ ಡೈಲಾಗ್ ಪೊಲಿಶ್ ಮಾಡಿದ್ದರು. ಇದರಿಂದಲೇ ಇಷ್ಟು ದಿನಗಳಿಂದ ನಾನು ಆ ಸೀರಿಯಲ್‌ನಲ್ಲಿದ್ದೆ. ಸೀರಿಯಲ್‌ನಲ್ಲಿ ರೇಣುಕಾಗೆ ಮೊದಲಿನಿಂದಲೂ ಅಸಮಾಧಾನ ಬಿಟ್ಟರೆ, ಬೇರೆ ಏನೂ ಇಲ್ಲ ಅಂತ ವೀಕ್ಷಕರು ಕಾಮೆಂಟ್‌ನಲ್ಲಿ ಹೇಳಿದ್ದರು” ಎಂದು ಹೇಳಿದ್ದಾರೆ.
“ರೇಣುಕಾ ಪಾತ್ರ ಬದಲಾಗತ್ತೆ, ಅವಳಿಗೆ ಸೊಸೆ ಮೇಲೆ ಮುನಿಸು ಕಮ್ಮಿಯಾಗತ್ತೆ, ಪ್ರಶಸ್ತಿ ಬರತ್ತೆ ಎಂದು ನನಗೆ ಹೇಳಿದ್ದರು. ಹೀಗಾಗಿ ನಾನು ಆರು ತಿಂಗಳಿಂದ ಈ ಪಾತ್ರದ ಬದಲಾವಣೆಗೆ ಕಾದೆ, ಆದರೂ ಆಗಲಿಲ್ಲ. ಈಗ ಸೀರಿಯಲ್ ಬಿಟ್ಟೆ. ಈಗ ನಿರ್ಮಲಾ ಚೆನ್ನಪ್ಪ ಅವರು ಸೀರಿಯಲ್‌ನಲ್ಲಿ ನಿರ್ಮಾಪಕರಾಗಿಲ್ಲ, ಬೇರೆಯವರು ಬಂದಿದ್ದಾರೆ” ಎಂದು ಅಂಜಲಿ ಹೇಳಿದ್ದಾರೆ.
“ಈ ಪಾತ್ರದಿಂದ ಬೇಸರ ಆಗಿದೆ. ಹೀಗಾಗಿ ನಾನು ಧಾರಾವಾಹಿ ಬಿಟ್ಟಿದ್ದೇನೆ. ಒಳ್ಳೆಯ ಪಾತ್ರ ಬಂದರೆ ನಾನು ಮತ್ತೆ ಅದೇ ವಾಹಿನಿಯಲ್ಲಿ ಸೀರಿಯಲ್ ಮಾಡ್ತೀನಿ. ಮಂತ್ರಿ ಪತ್ನಿ ಪಾತ್ರ ಮಾಡಿದ್ದೇನೆ, ಸೋಫಾ, ಡೈನಿಂಗ್ ಒರೆಸೋದು, ಕಿಟಕಿ ಒರೆಸೋದು, ಅಡುಗೆ ಮಾಡೋದು ಬಿಟ್ಟರೆ ಅಲ್ಲಿ ನನ್ನ ನಟನೆಗೆ ಅವಕಾಶವೇ ಇಲ್ಲ. ವಾಹಿನಿ ಬಗ್ಗೆ ನನಗೆ ಯಾವುದೇ ದೂರು ಇಲ್ಲ. ಚಾನೆಲ್‌ನವರು ನನ್ನ ಕೇಳಿ ಅವಕಾಶ ಕೊಟ್ಟಿಲ್ಲ, ಹಿರಿಯ ನಟಿ ಎಂದು ಗೌರವ ಕೊಡಬೇಕಿತ್ತು, ಅದು ಕೂಡ ಸಿಗಲಿಲ್ಲ” ಎಂದು ಅಂಜಲಿ ಅವರು ಹೇಳಿದ್ದಾರೆ.
“ಸಾಕಷ್ಟು ಜನರು ಸೀರಿಯಲ್ ಬಿಟ್ಟು ಹೋದರು. ಎಲ್ಲರಿಗೂ ಅವರ ಪಾತ್ರದ ಮೇಲೆ ಅಸಮಾಧಾನ ಇದೆ. ನಾವು ಇಲ್ಲಿ ಊಟಕ್ಕೆ ಉಪ್ಪಿನಕಾಯಿ ಆಗಿದ್ದೇವೆ. ಕಲಾವಿದರಿಗೆ ಬೇಸರ ಆಗಿದ್ದಕ್ಕೆ ಸೀರಿಯಲ್‌ನಿಂದ ಹೊರಗಡೆ ಬಂದಿದ್ದಾರೆ” ಎಂದು ಅವರು ಹೇಳಿದ್ದಾರೆ.
“ವಸುದೈವ ಕುಟುಂಬ ಧಾರಾವಾಹಿ ಒಂದು ತಿಂಗಳಿನಿಂದ ಶುರುವಾಗಿದೆ. ಆದರೆ ಆರು ತಿಂಗಳಿನಿಂದ ಲಕ್ಷ್ಮೀ ನಿವಾಸ ಧಾರಾವಾಹಿ ಜೊತೆ ಸಮಸ್ಯೆ ಆಗ್ತಿದೆ. ನನಗೆ ಬೇರೆ ಪ್ರಾಜೆಕ್ಟ್‌ಗಳು ಸಿಗುತ್ತಿವೆ. ನಮಗೆ ಗೌರವ ಸಿಕ್ಕಿಲ್ಲ ಅಂದರೆ ಲಕ್ಷ ರೂಪಾಯಿ ಕೊಟ್ಟರೂ ಬೇಡ” ಎಂದು ಅಂಜಲಿ ಅವರು ಹೇಳಿದ್ದಾರೆ.
