Ramachari Kannada Serial Episode: ರಾಮಾಚಾರಿ ಧಾರಾವಾಹಿಯಿಂದ ನಟಿಯೋರ್ವರು ಹೊರಗಡೆ ಬಂದಿದ್ದಾರೆ, ಇದಕ್ಕೆ ಕಾರಣ ಏನು? 

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ರಾಮಾಚಾರಿ ಧಾರಾವಾಹಿಯಲ್ಲಿ ( Ramachari Serial ) ಸದ್ಯ ಕೃಷ್ಣನ ಕೊಲೆ ಆಗಿದೆ. ರಾಮಾಚಾರಿ ಎಂದುಕೊಂಡು ರುಕ್ಮಿಣಿ, ಚಾರುಲತಾ, ಮಾನ್ಯತಾ, ಜೆಪಿ ಸೇರಿಕೊಂಡು ಕೃಷ್ಣನನ್ನು ಕೊಲೆ ಮಾಡಿದ್ದಾರೆ. ಇವರೆಲ್ಲರನ್ನು ಸದೆಬಡಿಯಲು ರಾಮಾಚಾರಿ, ಚಾರುಲತಾ ಒಟ್ಟಾಗಿ ಸೇರಿದ್ದಾರೆ. ಹೀಗಿರುವಾಗ ವಿಶಾಖ ಪಾತ್ರದಾರಿ ಐಶ್ವರ್ಯಾ ಸಾಲೀಮಠ ಅವರು ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ.

ವಿಡಿಯೋ ಶೇರ್‌ ಮಾಡಿದ ಐಶ್ವರ್ಯಾ ಸಾಲೀಮಠ!

ಸೆಪ್ಟೆಂಬರ್‌ ಅಂತ್ಯದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಶುರುವಾಗಲಿದೆ. ಹೀಗಾಗಿ ರಾಮಾಚಾರಿ ಧಾರಾವಾಹಿ ಅಂತ್ಯ ಆಗಲಿದೆ ಎನ್ನಲಾಗಿದೆ. ಸೀರಿಯಲ್‌ ಎಂಡ್‌ ಆಗುವ ಮುನ್ನವೇ ಐಶ್ವರ್ಯ ಅವರು ಈ ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಈ ಬಗ್ಗೆ ಅವರೇ ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾಹಿತಿ ನೀಡಿದ್ದಾರೆ. “ವಿಶಾಖ ಆಗಿ ಕೊನೆಯ ದಿನ” ಎಂಬ ಟೈಟಲ್‌ ಅಡಿಯಲ್ಲಿ ಅವರು ಮಾಹಿತಿ ನೀಡಿದ್ದಾರೆ.

ಸೀರಿಯಲ್‌ನಿಂದ ಹೊರಬರಲು ಕಾರಣ ಏನು?

ಐಶ್ವರ್ಯಾ ಸಾಲೀಮಠ ಅವರು ಕೆಲ ದಿನಗಳಿಂದ ರಾಮಾಚಾರಿ ಧಾರಾವಾಹಿಯಲ್ಲಿ ಕಾಣಿಸ್ತಿಲ್ಲ. ಇವರು ಸೀರಿಯಲ್‌ನಿಂದ ಹೊರನಡೆದು ಸುಮಾರು ದಿನಗಳೇ ಆಗಿವೆ. ವೈಯಕ್ತಿಕ ಕಾರಣದಿಂದ ಅವರು ಸೀರಿಯಲ್‌ನಿಂದ ಆಚೆ ಬಂದಿದ್ದಾರೆ ಎನ್ನಲಾಗಿದೆ. ಐಶ್ವರ್ಯಾ ಸಾಲೀಮಠ ಅವರು ಸದ್ಯ ಬ್ರೇಕ್‌ನಲ್ಲಿದ್ದಾರೆ ಎಂಬ ಮಾಹಿತಿಯಿದೆ. ಈ ಬಗ್ಗೆ ಅವರೇ ಮಾಹಿತಿ ಕೊಡಬೇಕಿದೆ. ಅಂದಹಾಗೆ ಈಗ ಮಾನ್ಯತಾ, ರಾಮಾಚಾರಿ, ಚಾರುಲತಾ, ರುಕ್ಮಿಣಿ ಮೇಲೆಯೇ ಕಥೆ ಸಾಗುತ್ತಿದೆ.

‌ಪ್ರೀತಿಸಿ, ಮದುವೆಯಾಗಿರೋ ಐಶ್ವರ್ಯಾ, ವಿನಯ್!

ಅಂದಹಾಗೆ ಐಶ್ವರ್ಯಾ ಪತಿ ವಿನಯ್‌ ಕೂಡ ನಟರೇ. ಆರಂಭದಲ್ಲಿ ಈ ಜೋಡಿ ʼಮಹಾಸತಿʼ ಧಾರಾವಾಹಿಯಲ್ಲಿ ನಟಿಸಿತ್ತು. ಉತ್ತರ ಕರ್ನಾಟಕದ ಭಾಗದಲ್ಲಿ ಶೂಟಿಂಗ್‌ ಆದ ಸೀರಿಯಲ್‌ ಇದಾಗಿತ್ತು. ಅಂದಹಾಗೆ ಇವರಿಬ್ಬರು ಧಾರವಾಡದವರು. ಅಂದು ಶುರುವಾದ ನಟನೆ, ಇಂದು ಚಿತ್ರರಂಗದಲ್ಲಿ ಬ್ಯುಸಿ ಆಗುವಂತೆ ಮಾಡಿದೆ. ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. 2022ರಲ್ಲಿ ಈ ಜೋಡಿ ಮದುವೆ ಆಗಿತ್ತು. ಮದುವೆ ಬಳಿಕ ಸೀರಿಯಲ್‌, ರಿಯಾಲಿಟಿ ಶೋ ಎಂದು ಬ್ಯುಸಿ ಆಗಿದೆ. ಐಶ್ವರ್ಯಾ ಅವರು ʼಅಗ್ನಿಸಾಕ್ಷಿʼ ಧಾರಾವಾಹಿಯಲ್ಲಿ ತನು ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತ್ತು.

ಮೂರು ವರ್ಷಗಳಿಂದ ಪ್ರಸಾರವಾಗ್ತಿರೋ ರಾಮಾಚಾರಿ ಧಾರಾವಾಹಿ

2022ರ ಜನವರಿಯಿಂದ ʼರಾಮಾಚಾರಿʼ ಧಾರಾವಾಹಿ ಪ್ರಸಾರವಾಗುತ್ತಿದೆ. ಮೂರು ವರ್ಷಗಳಿಗೂ ಅಧಿಕ ಕಾಲ ಈ ಸೀರಿಯಲ್‌ ಪ್ರಸಾರ ಆಗಿದೆ. ನಟಿ ಮೌನ ಗುಡ್ಡೇಮನೆ, ರಿತ್ವಿಕ್‌ ಕೃಪಾಕರ್‌ ಅವರು ಲೀಡ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗುರುದತ್‌, ಶಂಕತ್‌ ಅಶ್ವತ್ಥ್‌, ಅಂಜಲಿ, ಝಾನ್ಸಿ ಸುಬ್ಬಯ್ಯ, ಸಿರಿ, ಶಾರದಾ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಪುರುಷ ಪ್ರಧಾನ ಕಥೆಯಿದು. ಹೀರೋ ರಾಮಾಚಾರಿ ಪೌರೋಹಿತನೂ ಹೌದು. ಚಾರುಲತಾಗೆ ತಾಯಿ ಮಾನ್ಯತಾ ರೀತಿ ಹಣದ ವ್ಯಾಮೋಹ, ಅಸೂಯೆ, ಅಹಂಕಾರ. ಆದರೆ ರಾಮಾಚಾರಿಯ ಪರಿಚಯವಾದ ಬಳಿಕ ಅವರು ಬದಲಾಗುತ್ತಾಳೆ, ಅವನನ್ನೇ ಪ್ರೀತಿಸಿ, ಮೋಸದಿಂದ ಮದುವೆ ಆಗುತ್ತಾಳೆ. ಆರಂಭದಲ್ಲಿ ಚಾರುಳಿಂದ ದೂರವಿದ್ದ ರಾಮಾಚಾರಿ ಕೂಡ ಅವಳನ್ನು ಪ್ರೀತಿಸ್ತಾನೆ, ಹೆಂಡ್ತಿ ಎಂದು ಒಪ್ಪಿಕೊಳ್ತಾನೆ. ಚಾರುಲತಾಳನ್ನು ರಾಮಾಚಾರಿಯಿಂದ ದೂರ ಮಾಡಲು ಮಾನ್ಯತಾ ಒಂದಲ್ಲ ಒಂದು ತೊಂದರೆ ಕೊಡ್ತಾಳೆ. ಇದರಿಂದ ಈ ಜೋಡಿ ಹೇಗೆ ಬಚಾವ್‌ ಆಗುತ್ತದೆ ಎನ್ನುವುದರ ಮೇಲೆ ಕಥೆ ಸಾಗ್ತಿದೆ. ಅಂದಹಾಗೆ ಕೆ ಎಸ್‌ ರಾಮ್‌ಜೀ ಅವರು ಈ ಧಾರಾವಾಹಿಯ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ.