ರೈಲ್ವೆ ಇಲಾಖೆಯು ಶೀಘ್ರದಲ್ಲೇ ಹೊಸ ನಿಯಮವನ್ನು ಜಾರಿಗೆ ತರಲಿದ್ದು, ಇದರ ಅಡಿಯಲ್ಲಿ ಪ್ರಯಾಣಿಕರು ಟಿಕೆಟ್ ಕ್ಯಾನ್ಸಲ್ ಮಾಡದೆಯೇ ಪ್ರಯಾಣದ ದಿನಾಂಕ ಮತ್ತು ಸ್ಥಳವನ್ನು ಬದಲಾಯಿಸಬಹುದು. ಈ ಸೌಲಭ್ಯದಿಂದ ಕ್ಯಾನ್ಸಲೇಷನ್ ಶುಲ್ಕದ ಹೊರೆ ತಪ್ಪಲಿದ್ದು, ದರ ವ್ಯತ್ಯಾಸವಿದ್ದರೆ ಮಾತ್ರ ಹೆಚ್ಚುವರಿ ಪಾವತಿಸಬೇಕು.

ಎಷ್ಟೋ ಸಂದರ್ಭಗಳಲ್ಲಿ 1-2 ತಿಂಗಳು ಮುಂಚಿತವಾಗಿಯೇ ರೈಲ್ವೆ ಟಿಕೆಟ್​ ಬುಕ್​ ಮಾಡಿ ಇಟ್ಟುಕೊಳ್ಳುವುದು ಇದೆ. ಅದರಲ್ಲಿಯೂ ವಿಶೇಷವಾಗಿ ಹಬ್ಬದ ಟೈಮ್​ನಲ್ಲಿ ಇದು ಮಾಮೂಲು. ಟಿಕೆಟ್​ ಕೊನೆಯ ಕ್ಷಣದಲ್ಲಿ ಸಿಗುವುದಿಲ್ಲ ಎಂದು ಮೊದಲೇ ಬುಕ್​ ಮಾಡಿಕೊಳ್ತೇವೆ. ಆದರೆ ದುರದೃಷ್ಟವಶಾತ್​ ಅದ್ಯಾವುದೋ ಕಾರಣಕ್ಕೆ ಅಂದು ಹೋಗಲು ಆಗುವುದಿಲ್ಲ ಎಂದಾದರೆ, ಟಿಕೆಟ್​ ಕ್ಯಾನ್ಸಲ್​ ಮಾಡುವುದು ಅನಿವಾರ್ಯವಾಗುತ್ತದೆ. ಅದು ಕೊನೆಯ ಕ್ಷಣದಲ್ಲಿ ತಿಳಿದುಬರುತ್ತದೆ. ಅಷ್ಟಕ್ಕೂ ಯಾವಾಗಲೇ ಆದರೂ ಟಿಕೆಟ್​ ಕ್ಯಾನ್ಸಲ್​ ಮಾಡಿದ್ರೆ ಕನಿಷ್ಠ 60 ರೂಪಾಯಿ ಅಂತೂ ಕಟ್​ ಆಗಿಯೇ ಆಗುತ್ತದೆ. ಈ ಶುಲ್ಕವು ಸಾಮಾನ್ಯವಾಗಿ ಟಿಕೆಟ್ ಬೆಲೆಯ 25% ರಿಂದ 50% ರವರೆಗೆ ಇರುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ, ಪ್ರಯಾಣಿಕರು ಸಂಪೂರ್ಣ ದರವನ್ನು ಕಳೆದುಕೊಳ್ಳಬಹುದು. ಸಾಲದು ಎನ್ನುವುದಕ್ಕೆ ಇನ್ನೊಂದು ದಿನ ಹೋಗುವುದಾದರೆ ಅದಕ್ಕೆ ಮತ್ತೆ ಟಿಕೆಟ್​ ಬುಕ್​ ಮಾಡುವ ಅನಿವಾರ್ಯತೆ ಇರುತ್ತದೆ.

ಶೀಘ್ರದಲ್ಲಿಯೇ ಹೊಸ ಕ್ರಮ

ಆದರೆ ಇವೆಲ್ಲಾ ಸಂಕಷ್ಟಕ್ಕೆ ರೈಲ್ವೆ ಇಲಾಖೆ ಶೀಘ್ರದಲ್ಲಿಯೇ ಫುಲ್​ ಸ್ಟಾಪ್​ ಇಡಲಿದೆ. ಬಹುಶಃ ಬರುವ ಜನವರಿಯಿಂದ ಈ ಯೋಜನೆ ಜಾರಿಗೆ ಬರುವ ನಿರೀಕ್ಷೆ ಇದೆ. ಇದರಲ್ಲಿ ನೀವು ಅದೇ ಟಿಕೆಟ್​ ನಂಬರ್​ ಮೂಲಕ ಟಿಕೆಟ್​ ಕ್ಯಾನ್ಸಲ್​ ಮಾಡದೇ ಬೇರೆ ದಿನ ಬುಕ್​ ಮಾಡಿ ಪ್ರಯಾಣಿಸಬಹುದು ಮಾತ್ರವಲ್ಲದೇ ನೀವು ಅದೇ ಟಿಕೆಟ್​ನಿಂದ ಸ್ಥಳವನ್ನೂ ಬದಲಾಯಿಸಲು ಸಾಧ್ಯವಿದೆ. ಇಂಥ ಸಮಯದಲ್ಲಿ ದರ ವ್ಯತ್ಯಾಸ ಬಂದಲ್ಲಿ ಮಾತ್ರ ನೀವು ಹೆಚ್ಚುವರಿ ಪಾವತಿಸಬೇಕಾಗುತ್ತದೆ ವಿನಾ ಟಿಕೆಟ್​ ಕ್ಯಾನಲ್​ ಚಾರ್ಜ್​ ಏನೂ ಇರುವುದಿಲ್ಲ

ನೀವು ಮಾಡಬೇಕಾದದ್ದು ಏನು?

ಈ ಹೊಸ ವ್ಯವಸ್ಥೆಯು ಪ್ರಯಾಣಿಕರು IRCTC ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗೆ ಲಾಗಿನ್ ಆಗಲು, ಅವರು ಬುಕ್ ಮಾಡಿದ ಟಿಕೆಟ್ ಅನ್ನು ಆಯ್ಕೆ ಮಾಡಲು ಮತ್ತು ಸೀಟುಗಳು ಲಭ್ಯವಿರುವವರೆಗೆ ಬೇರೆ ಪ್ರಯಾಣ ದಿನಾಂಕ ಅಥವಾ ರೈಲನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ನೀವು ರೀ-ಬುಕಿಂಗ್​ ಮಾಡಬೇಕಾಗುತ್ತದೆಯಷ್ಟೇ. ನಿಮಗೆ ಅಲ್ಲಿ ಸ್ಥಳಾವಕಾಶ ಇದ್ದರೆ ನೀವು ಅದೇ ಟಿಕೆಟ್​ನಲ್ಲಿ ಪ್ರಯಾಣಿಸಬಹುದಾಗಿದೆ.

ಸ್ಥಳ ಬದಲಾವಣೆಗೂ ಅವಕಾಶ

ಒಂದು ವೇಳೆ ನೀವು, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗಬೇಕಿದ್ದು, ಅಕ್ಟೋಬರ್​ 20ರ ಟಿಕೆಟ್​ ಬುಕ್​ ಮಾಡಿದ್ದೀರಿ ಎಂದುಕೊಳ್ಳಿ. ಆದರೆ ಅದು ಸಾಧ್ಯವಾಗದೇ ನಿಮಗೆ ಅಕ್ಟೋಬರ್​ 22ರಂದು ಹೋಗಬೇಕಾಗಿ ಬರಬಹುದು. ಅಷ್ಟೇ ಅಲ್ಲದೇ ಬೆಂಗಳೂರಿನಿಂದ ಅದೇ ರೈಲಿನಲ್ಲಿ ಶಿವಮೊಗ್ಗ ದಾಟಿ ತಾಳಗುಪ್ಪಕ್ಕೆ ಹೋಗಬೇಕಾಗಿ ಬರಬಹುದು. ಅಂಥ ಸಮಯದಲ್ಲಿ ನೀವು ಅಕ್ಟೋಬರ್​ 22ರಲ್ಲಿ ಸೀಟ್​ ಲಭ್ಯವಿದ್ದರೆ, ಮೊದಲೇ ಬುಕ್​ ಮಾಡಿರುವ ಟಿಕೆಟ್​ನಿಂದ ನೀವು ನೇರವಾಗಿ ತಾಳಗುಪ್ಪದ ವರೆಗೆ ಸೀಟು ಬುಕ್​ ಮಾಡಬಹುದು. ಆ ಸಮಯದಲ್ಲಿ ಶಿವಮೊಗ್ಗದಿಂದ ತಾಳಗುಪ್ಪಕ್ಕೆ ಆಗುವ ಎಕ್ಸ್​ಟ್ರಾ ಹಣವನ್ನು ಕೊಟ್ಟರೆ ಆಯಿತು ಅಷ್ಟೇ.

ಈಗಿರುವ ಪರಿಸ್ಥಿತಿ ಏನು?

ಸದ್ಯ ಇರುವ ಸ್ಥಿತಿಯಲ್ಲಿ, ಕನ್ಫರ್ಮ್ ಆಗಿರುವ ಟಿಕೆಟನ್ನು ರೈಲು ಹೊರಡುವ 24 ಗಂಟೆಗೂ ಮೊದಲೇ ಕ್ಯಾನ್ಸಲ್ ಮಾಡಿದರೆ ರೈಲು ಟಿಕೆಟ್ಟಿನ ಬೆಲೆಯಲ್ಲಿ ಶೇ. 25ರಷ್ಟನ್ನು ಕಟ್ ಮಾಡಿಕೊಂಡು ಉಳಿದ ಹಣವನ್ನು ಕೊಡಲಾಗುತ್ತದೆ. ಆದರೆ, ರೈಲು ಹೊರಡುವ ಸಮಯಕ್ಕೆ ನಾಲ್ಕು ಗಂಟೆಗಳಿದ್ದಾಗ ಅಥವಾ ಅದಕ್ಕಿಂತಲೂ ಕಡಿಮೆ ಅವಧಿಯಲ್ಲಿ ರೈಲು ಬುಕ್ಕಿಂಗ್ ಮಾಡಿದರೆ ಆಗ ಟಿಕೆಟ್ ನ ಪೂರ್ತಿ ಹಣ ಕಟ್ ಮಾಡಿಕೊಳ್ಳಲಾಗುತ್ತದೆ. ಆದರೆ ಇನ್ನುಮುಂದೆ ಆ ಸಮಸ್ಯೆ ಇರುವುದಿಲ್ಲ.