ತಂತ್ರಜ್ಞಾನ ಬೆಳೆದಂತೆ, ಬೆಂಗಳೂರು ಮಂದಿಯ ಅವಶ್ಯಕತೆಗೆ ತಕ್ಕಂತೆ ಹೊಸ ಹೊಸ ಸಾರಿಗೆ ವ್ಯವಸ್ಥೆಗಳು ಶುರುವಾಗ್ತಿವೆ. ಇತ್ತೀಚಿಗಿನ ದಿನಗಳಲ್ಲಿ ಇದು ಬ್ಲಾ ಬ್ಲಾ ಕಾರ್ ನಂಥ ಕಾರ್‌ ಪೂಲಿಂಗ್ ವ್ಯವಸ್ಥೆಯೂ ಜನಪ್ರಿಯವಾಗ್ತಿದೆ.

ಅರ್ಜೆಂಟ್‌ ಊರಿಗೆ ಹೋಗ್ಬೇಕು, ಆದ್ರೆ ಬಸ್‌ ಟಿಕೆಟ್‌ ಸಿಗ್ತಿಲ್ಲ; ಹಬ್ಬ ಊರಲ್ಲೇ ಮಾಡ್ಬೇಕು, ಆದ್ರೆ ರೈಲಿನಲ್ಲಿ ವೇಟಿಂಗ್ ಲಿಸ್ಟ್!; ಫ್ಲೈಟ್‌ ಟಿಕೆಟ್‌ ರೇಟ್‌ ಕೇಳೋದೇ ಬೇಡ! ಈ ಸ್ಥಿತಿಯಲ್ಲಿ ಇದ್ದೀರಾ ಹಾಗಾದ್ರೆ ನಿಮಗೊಂದು ಪರ್ಯಾಯ ಸೇವೆಯನ್ನ ಪರಿಚಯಿಸ್ತೀವಿ, ಏನದು ನೋಡೋಣ ಬನ್ನಿ...

ಹೈಟೆಕ್‌ ಬೆಂಗಳೂರಿಗೆ ಹೈಟೆಕ್‌ ವ್ಯವಸ್ಥೆ:

ನಗರ ಬೆಳೆದಂತೆ ಬೆಂಗ್ಳೂರಂತೂ ಸಾರ್ವಜನಿಕ ಸಂಚಾರ ವ್ಯವಸ್ಥೆಗಾಗಿ ಹೊಸ ಹೊಸ ವಿಧಾನಗಳನ್ನು ನೆಚ್ಚಿಕೊಂಡು ಬಂದಿದೆ. ಬಸ್‌-ಆಟೋ- ಕ್ಯಾಬ್‌ಗಳಿಗೆ ಸೀಮಿತವಾಗಿದ್ದ ಸಿಲಿಕಾನ್ ಸಿಟಿಯು ತಂತ್ರಜ್ಞಾನ ಬೆಳೆದಂತೆ ಹೈಟೆಕ್‌ ಆಗುತ್ತಾ ಬಂದಿದೆ. ಮೊಬೈಲ್‌ ಝಮಾನದಲ್ಲಿ ಮೊದಮೊದಲಿಗೆ ಸಿಟಿಟ್ಯಾಕ್ಸಿ ಎಂಬ ಕ್ಯಾಬ್ ಸೇವೆ ಇಡೀ ನಗರವನ್ನೇ ವ್ಯಾಪಿಸಿಕೊಂಡಿತ್ತು. ಬಳಿಕ ಆ್ಯಪ್ ಆಧಾರಿತ ಕ್ಯಾಬ್‌ ಸೇವೆಗಳು ಶುರುವಾಯ್ತು. ಊಬರ್, ಓಲಾಗಳು ನಗರದ ರಸ್ತೆಗಳನ್ನು ಆಳಲು ಶುರು ಮಾಡಿದ್ದವು. ಬಳಿಕ ಆ ಸೇವೆಗಳು ಆಟೋಗಳಿಗೂ ಶುರುವಾಯ್ತು.

ಸೆಲ್ಫ್‌ ಡ್ರೈವ್‌ ವಾಹನಗಳ ಎಂಟ್ರಿ:

ಈ ನಡುವೆ ದ್ವಿಚಕ್ರ ವಾಹನ ಸೇವೆಗಳು ಆರಂಭವಾದುವು. ಬೌನ್ಸ್‌ ಎಂಬ ಬಾಡಿಗೆ ಬೈಕ್‌ಗಳಂತೂ ಯುವಕರಿಗೆ ವರವಾಗಿದ್ದುವು. ಎಲ್ಲೂ ಬೇಕಾದ್ರೂ ಬುಕ್‌ ಮಾಡಿ, ಎಲ್ಲೂ ಬೇಕಾದ್ರೂ ಬಿಟ್ಬಿಡಿ ಎಂಬ ರೀತಿಯಲ್ಲಿದ್ದ ಬೌನ್ಸ್‌ ಸೇವೆಯನ್ನು ಬೆಂಗ್ಳೂರು ಮಂದಿಗೆ ಉಳಿಸಿಕೊಳ್ಳಕ್ಕೆ ಆಗಿಲ್ಲ. ಅದ್ರ ವ್ಯಾಲ್ಯೂ ಗೊತ್ತಿದ್ದವರು ಅದನ್ನ ಸದ್ಬಳಕೆ ಮಾಡಿಕೊಂಡ್ರೆ, ಕೆಲ ಬುದ್ದಿಹೀನರು ಅದನ್ನ ದುರ್ಬಳಕೆ ಮಾಡಿದ್ದೇ ಹೆಚ್ಚು. ವ್ಹೀಲಿಂಗ್ ಮಾಡೋದು, ಬಚ್ಚಿಟ್ಟಿಕೊಳ್ಳೊದು, ಹೆಲ್ಮೆಟ್‌ ಕದಿಯೋದು, ಸ್ಪೇರ್ ಪಾರ್ಟ್ಸ್ ಕದಿಯೋದು, ಚರಂಡಿಗೆ ಹಾಕೋದು ಇತ್ಯಾದಿ ಮಾಡಿ ಕಂಪನಿಯನ್ನೇ ಹಳ್ಳ ಹಿಡಿಸಿಬಿಟ್ರು!

ಬೈಕ್ ಟ್ಯಾಕ್ಸಿಗಳ ಜಮಾನ!:

ಬಳಿಕ ಶುರುವಾಯ್ತು ಈಗ ವಿವಾದದ ಕೇಂದ್ರಬಿಂದು ಆಗಿರುವ ಬೈಕ್‌ ಟ್ಯಾಕ್ಸಿಗಳು! ಅಕ್ರಮ ವ್ಯವಸ್ಥೆ ಎಂಬ ವಾದ ಒಂದು ಕಡೆಯಾದ್ರೆ, ಇದು ದುಡಿದು ಸಂಪಾದಿಸುವ ಮೂಲಭೂತ ಹಕ್ಕು ಎಂಬ ವಾದಗಳ ನಡುವೆ ಬೈಕ್‌ ಟ್ಯಾಕ್ಸಿಗಳು ಅತಂತ್ರವಾಗಿವೆ.

ಸೆಲ್ಫ್‌ ಡ್ರೈವ್‌ ವಾಹನಗಳ ಎಂಟ್ರಿ:

ಇವುಗಳ ನಡುವೆ ಸೆಲ್ಫ್‌ ಡ್ರೈವ್‌ ಕಾರ್‌ ಕಂಪನಿಗಳು ತಮ್ಮ ಆಟ ಶುರು ಮಾಡಿದ್ವು. ಬಾಡಿಗೆಗೆ ಕಾರ್‌ ತಗೊಂಡು ತಾವೇ ಡ್ರೈವ್‌ ಮಾಡಿಕೊಂಡು ಹೋಗುವಂಥ ವ್ಯವಸ್ಥೆ ಇದು. ಈಗ ಖಾಸಗಿ ವ್ಯಕ್ತಿಗಳು ಕೂಡಾ ತಮ್ಮ ಕಾರನ್ನು ಈ ಕಂಪನಿಗಳಿಗೆ ಅಟ್ಯಾಚ್‌ ಮಾಡಿ ದುಡ್ಡು ಸಂಪಾದಿಸುವ ವ್ಯವಸ್ಥೆ ಇದೆ.

ಜೊತೆಗೆ ಬೆಂಗ್ಳೂರಿನಲ್ಲಿ ಕಾರ್‌ ಪೂಲಿಂಗ್‌ ಎಂಬ ವ್ಯವಸ್ಥೆ ಹುಟ್ಟಿಕೊಂಡಿತ್ತು. ಆದರೆ ಸರಿಯಾದ ಸ್ಪಂದನೆ ಹಾಗೂ ಉತ್ತೇಜನ ಸಿಗದ ಹಿನ್ನೆಲೆ ಅಷ್ಟೊಂದು ಜನಪ್ರಿಯವಾಗಿಲ್ಲ. ಕಾರ್‌ ಪೂಲಿಂಗ್ ಸೇವೆಯಲ್ಲಿ, ಖಾಸಗಿ ಕಾರ್‌ಉಳ್ಳವರು ಬೇರೆಯವ್ರಿಗೆ ಡ್ರಾಪ್‌ ಕೊಡ್ಬಹುದು. ನಿಗದಿತ ರೂಟ್‌ನಲ್ಲಿ ನಿರ್ದಿಷ್ಟ ಚಾರ್ಜ್‌ ಕೊಟ್ಟು ಕಾರ್‌ಪೂಲ್‌ ಮಾಡುವ ವ್ಯವಸ್ಥೆ ಅದಾಗಿತ್ತು. ಉದಾ: ಒಂದೇ ಟೆಕ್‌ಪಾರ್ಕ್‌ನಲ್ಲಿ ಕೆಲಸ ಮಾಡೋ ನಾಲ್ಕೈದು ಮಂದಿ ಒಂದೇ ಕಾರ್‌ನಲ್ಲಿ ಪ್ರತಿದಿನ ಆಫಿಸ್‌ಗೆ ಹೋಗಲು ಸಹಕಾರಿಯಾಗುವ ವ್ಯವಸ್ಥೆ.

Carpooling ಕಾರ್‌ ಪೂಲಿಂಗ್:

ಇನ್ನು ಮುಖ್ಯ ವಿಷಯಕ್ಕೆ ಬರೋಣ. ಇದೊಂಥರ ಅಂತರ್ಜಿಲ್ಲಾ/ ಅಂತರ್ರಾಜ್ಯ ಕಾರ್‌ ಪೂಲಿಂಗ್ ವ್ಯವಸ್ಥೆ. ಸಾವಿರಾರು ಮಂದಿ ಒಂದು ಕಡೆಯಿಂದ ಇನ್ನೊಂದು ಕಡೆ ತಮ್ಮ ಕಾರಲ್ಲಿ ಒಬ್ಬರೇ ಪ್ರಯಾಣಿಸುತ್ತಿರುತ್ತಾರೆ. ಅದು ಅವರಿಗೂ ದುಬಾರಿ, ಏಕಂದ್ರೆ ಇಡೀ ಪೆಟ್ರೋಲ್ ಖರ್ಚನ್ನ ಒಬ್ಬನೇ ನಿಭಾಯಿಸ್ಬೇಕು. ಇನ್ನಿಬ್ಬರೋ ಮೂವರು ಜೊತೆ ಸಿಕ್ಕಿದ್ರೆ ಪೆಟ್ರೋಲ್‌ ಖರ್ಚು ಶೇರ್‌ ಮಾಡ್ಬಹುದಿತ್ತೇನೋ ಎಂಬ ಯೋಚ್ನೆ ನಿಮಗೆ ಬರುತ್ತೆ.

ಇನ್ನೊಂದು ಕಡೆ ನೀವು ಬೆಂಗ್ಳೂರಿನಿಂದ ಮಂಗ್ಳೂರಿಗೆ ಹೋಗಬಯಸುತ್ತೀರಿ. ಆದ್ರೆ ಅದ್ಯಾವುದೋ ಕಾರಣಕ್ಕೆ ಬಸ್‌, ಟ್ರೇನ್ ಅಥ್ವಾ ಪ್ಲೇನ್‌ನಲ್ಲಿ ಹೋಗಕ್ಕಾಗ್ತಿಲ್ಲ. ಅಂಥ ಸಂದರ್ಭದಲ್ಲಿ, ಕಾರ್‌ವೊಂದಿದ್ರೆ ಚೆನ್ನಾಗಿತ್ತೇನೋ ಎಂಬ ಭಾವನೆ ನಿಮ್ಮಲ್ಲಿ ಬರುತ್ತೆ.

ಆ ಯೋಚ್ನೆ, ಭಾವನೆ ಹಾಗೂ ಲೆಕ್ಕಾಚಾರಗಳನ್ನೇ ಬಂಡವಾಳ ಮಾಡಿಕೊಂಡು ಕಾರ್‌ಪೂಲಿಂಗ್ ವ್ಯವಸ್ಥೆಯೊಂದು ಹುಟ್ಟಿಕೊಂಡಿದೆ. ಉದಾಹರಣೆಗೆ ಬ್ಲಾ ಬ್ಲಾ ಎಂಬ ಕಾರ್‌ಪೂಲಿಂಗ್ ಸೇವೆ. ಈ ಅಪ್‌ ಸೇವೆ ಕಾರ್‌ ಮಾಲೀಕರನ್ನು ಹಾಗೂ ಪ್ರಯಾಣಿಕರನ್ನು ಕನೆಕ್ಟ್‌ ಮಾಡುತ್ತೆ! ನಾನು ಇಂತಿಂಥ ದಿನ, ಇಷ್ಟಿಷ್ಟೊತ್ತಿಗೆ ಈ ಸ್ಥಳದಿಂದ ಈ ಸ್ಥಳಕ್ಕೆ ಹೋಗ್ತೀನಿ, ನನ್ ಜೊತೆ ಇಂತಿಷ್ಟು ಹಣ ಕೊಟ್ಟು ಇಂತಿಷ್ಟು ಜನ ಬರ್ಬಹುದು ಎಂದು ಕಾರ್‌ ಮಾಲೀಕ ಪೋಸ್ಟ್‌ ಮಾಡಿರ್ತಾನೆ. ಪ್ರಯಾಣಿಕರು ಕೂಡಾ ತಮಗೆ ಸೂಟ್‌ ಆಗೋ ಕಾರ್‌ಅನ್ನು ಆಯ್ದುಕೊಳ್ಳಬಹುದು.

ಈ ಪ್ರಕ್ರಿಯೆಯಲ್ಲಿ ಕೆಲವು ನೀತಿ ನಿಬಂಧನೆಗಳಿರುತ್ತವೆ. ಮೊದಲು ನೀವು ರಿಜಿಸ್ಟರ್‌ ಮಾಡಿಕೊಳ್ಬೇಕು. ಬಳಿಕ ಆಯಾಯ ಕಾರು ಮಾಲೀಕನ ಏನಾದರೂ ನಿಯಮಗಳಿರುತ್ತವೆ. ಉದಾಹರಣೆಗೆ, ಸ್ಮೋಕಿಂಗ್ ಮಾಡುವವರು ಬೇಡ, ಎಂಬ ಷರತ್ತು ಇರುತ್ತದೆ. ಹಾಗೇ ಕಾರು ಚಾಲಕ ತನ್ನ ಬಗ್ಗೆಯೂ ಹೇಳಿಕೊಂಡಿರ್ತಾನೆ. ನಾನು ಮಾತಾಡೋದು ಸ್ವಲ್ಪ ಹೆಚ್ಚು- ಕಮ್ಮಿ ಅಂತಾನೋ ಏನೋ ಹಾಕಿಕೊಂಡಿರ್ತಾನೆ. ಆಪ್‌ನಲ್ಲಿ ಆತನ ಅನುಭವ, ರೇಟಿಂಗ್‌ ಹಾಗೂ ಆತನ ಬಗ್ಗೆ ಫೀಡ್‌ಬ್ಯಾಕ್‌ ಕಾಮೆಂಟ್‌ಗಳೂ ಇರ್ತಾವೆ. ನಿಮ್ಮ ಪ್ರೊಫೈಲ್‌ ನೋಡಿ ಚಾಲಕ ಅಪ್ರೂವ್‌ ಮಾಡಿದ್ರೆ ಮಾತ್ರ ನಿಮ್ಮ ಬುಕ್ಕಿಂಗ್ ಆಗುತ್ತೆ.

ಸುಮಾರು ದೇಶಗಳಲ್ಲಿ ಈ ಸೇವೆ ಲಭ್ಯವಿದೆ, ಕೋಟ್ಯಂತರ ಮಂದಿ ಈ ಸೇವಯನ್ನು ಸದ್ಬಳಕೆ ಮಾಡಿಕೊಳ್ತಿದ್ದಾರೆ, ಈ ಸೇವೆಯಿಂದಾಗಿ ವಾಯುಮಾಲಿನ್ಯವೂ ಕಡಿಮೆಯಾಗುತ್ತೆ, ಈ ವ್ಯವಸ್ಥೆ ಸುರಕ್ಷಿತ ಎಂಬಿತ್ಯಾದಿ ವಿಚಾರಗಳನ್ನು ಈ ಸೇವೆ ನೀಡೋ ಕಂಪನಿಗಳು ಹೇಳಿಕೊಳ್ಳುತ್ತವೆ.

ಇನ್ನು ರಿಜಿಸ್ಟರ್‌ ಮಾಡಿ ಸದಸ್ಯರಾಗ್ಬೇಕಾದ್ರೆ, ಜರ್ನಿ ಚಾರ್ಜ್, ಶುಲ್ಕ, ಹಾಗೂ ಕ್ಯಾನ್ಸಲೇಶನ್ ಬಗ್ಗೆ ಕಂಪನಿಗಳದ್ದೇ ನೀತಿ-ನಿಯಮಗಳಿರುತ್ತವೆ. ಇನ್ನು ವೈಯುಕ್ತಿಕ ಸುರಕ್ಷತೆ, ಮಹಿಳಾ ಸುರಕ್ಷತೆ ಇತ್ಯಾದಿಗಳ ಬಗ್ಗೆ ಅರಿತುಕೊಂಡೇ ಈ ಸೇವೆಯನ್ನು ಪಡೆಯುವುದು ಉತ್ತಮ.