ಡಿಆರ್‌ಡಿಒ ಅಭಿವೃದ್ಧಿಪಡಿಸುತ್ತಿರುವ ಅಗ್ನಿ-5 ಕ್ಷಿಪಣಿಯ ಹೊಸ ಆವೃತ್ತಿಯು ಸಾಂಪ್ರದಾಯಿಕ ಸಿಡಿತಲೆಗಳನ್ನು ಹೊತ್ತು, ಭಾರತೀಯ ವಾಯುಪಡೆಗೆ ಶತ್ರುಗಳ ನೆಲೆಗಳ ಮೇಲೆ ದಾಳಿ ನಡೆಸಲು ಹೊಸ ಶಕ್ತಿ ನೀಡಲಿದೆ.
ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಗ್ನಿ-5 ಕ್ಷಿಪಣಿಯ ಇನ್ನಷ್ಟು ಶಕ್ತಿಶಾಲಿಯಾದ ಹೊಸ ಆವೃತ್ತಿಯನ್ನು ಅಭಿವೃದ್ಧಿ ಪಡಿಸುತ್ತಿದ್ದು, ಈ ಆವೃತ್ತಿ ಅಣ್ವಸ್ತ್ರ ಸಿಡಿತಲೆಯನ್ನು ಹೊಂದಿಲ್ಲ! ಈ ವಿಶೇಷ ಆವೃತ್ತಿಯನ್ನು ಕೇವಲ ಭಾರತೀಯ ವಾಯುಪಡೆಗಾಗಿ ನಿರ್ಮಿಸುತ್ತಿದ್ದು (ಐಎಎಫ್), ಇದನ್ನು 7.5ರಿಂದ 8 ಟನ್ ತೂಕದಷ್ಟು ಭಾರೀ ಪ್ರಮಾಣದ ಸಾಂಪ್ರದಾಯಿಕ (ಅಣ್ವಸ್ತ್ರವಲ್ಲ) ಸಿಡಿತಲೆಗಳನ್ನು ಒಯ್ಯಲು ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಈ ಕ್ಷಿಪಣಿ ಎರಡು ಆವೃತ್ತಿಗಳಲ್ಲಿ ಬರಲಿದೆ
ಏರ್ ಬರ್ಸ್ಟ್ ವಾರ್‌ಹೆಡ್: ನೆಲದ ಮೇಲೆ ವಿಶಾಲವಾಗಿ ಹಾನಿ ಉಂಟುಮಾಡುತ್ತದೆ.
ಬಂಕರ್ ಬಸ್ಟರ್ ವಾರ್‌ಹೆಡ್: ಭೂಮಿ ಅಥವಾ ಕಾಂಕ್ರೀಟಿನ ದಪ್ಪನೆಯ ಪದರಗಳನ್ನು ಭೇದಿಸಿ, ನೆಲದಾಳದಲ್ಲಿರುವ ಶತ್ರುಗಳ ಕಮಾಂಡ್ ಕೇಂದ್ರಗಳು ಅಥವಾ ಆಯುಧ ಸಂಗ್ರಾಹಕದಂತಹ ಗುರಿಗಳನ್ನು ನಾಶಪಡಿಸುತ್ತದೆ.
ಇಷ್ಟೊಂದು ಭಾರೀ ಪ್ರಮಾಣದ ಆಯುಧಗಳನ್ನು ಒಯ್ಯುವ ಸಲುವಾಗಿ, ಕ್ಷಿಪಣಿಯ ವ್ಯಾಪ್ತಿಯನ್ನು ಅಂದಾಜು 2,500 ಕಿಲೋಮೀಟರ್‌ಗಳಿಗೆ ಇಳಿಸಲಾಗಿದೆ. ಆದರೆ, ಕ್ಷಿಪಣಿ ಶತ್ರುಗಳ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಂಡು ಮುಂದೆ ಸಾಗುವಷ್ಟು ಆಧುನಿಕವಾಗಿದೆ. ಇದು ಶತ್ರು ಪ್ರದೇಶದ ಒಳಗೆ ಅತ್ಯಂತ ಹೆಚ್ಚಿನ ಭದ್ರತೆ ಹೊಂದಿರುವ ಗುರಿಗಳ ಮೇಲೂ ದಾಳಿ ನಡೆಸಲು ಕ್ಷಿಪಣಿಯನ್ನು ಸೂಕ್ತ ಆಯುಧವಾಗಿಸುತ್ತದೆ.
ಅಮೆರಿಕಾದ ಬಳಿ ಭಾರೀ ಬಾಂಬರ್ ವಿಮಾನಗಳಿದ್ದು, ಅವುಗಳು ಜಿಬಿಯು-57 'ಬಂಕರ್ ಬಸ್ಟರ್' ಗಳಂತಹ ಬೃಹತ್ ಬಾಂಬ್‌ಗಳನ್ನು ಪ್ರಯೋಗಿಸುತ್ತವೆ. ಆದರೆ, ಭಾರತದ ಬಳಿ ಇಂತಹ ಬಾಂಬರ್ ವಿಮಾನಗಳಿಲ್ಲ. ಈಗ ಅಗ್ನಿ-5 ಕ್ಷಿಪಣಿಯ ನೂತನ ಆವೃತ್ತಿ ಸಿದ್ಧವಾಗುವುದರಿಂದ, ಭಾರತೀಯ ವಾಯುಪಡೆಗೂ ಅಮೆರಿಕಾಗೆ ಸಮನಾದ ಸಾಮರ್ಥ್ಯ ಲಭಿಸಲಿದ್ದು, ಇದು ಭಾರತದ ರಕ್ಷಣಾ ಸಾಮರ್ಥ್ಯದಲ್ಲಿ ಮುಖ್ಯ ಪಾತ್ರ ವಹಿಸಲಿದೆ.
ಭಾರತೀಯ ವಾಯುಪಡೆಗೆ ದೀರ್ಘ ಕಾಲದಿಂದಲೂ ಶತ್ರುಗಳ ಬಂಕರ್‌ಗಳು, ಬಚ್ಚಿಟ್ಟ ಕಮಾಂಡ್ ಕೇಂದ್ರಗಳಂತಹ ಗುರಿಗಳನ್ನು ನಾಶಪಡಿಸಲು ಶಕ್ತಿಶಾಲಿ ಆಯುಧಗಳ ಅವಶ್ಯಕತೆ ಇತ್ತು. ಆದರೆ, ಭಾರತದ ಬಳಿ ಅಮೆರಿಕಾದ ಬಿ-2 ಸ್ಪಿರಿಟ್ ಅಥವಾ ಬಿ-52 ಸ್ಟ್ರಾಟೋಫೋರ್ಟ್ರೆಸ್ ರೀತಿಯ ಬೃಹತ್ ಬಾಂಬ್‌ಗಳನ್ನು ಸುರಿಸುವ ಬಾಂಬರ್ ವಿಮಾನಗಳ ಕೊರತೆ ಇದೆ.
ಉದಾಹರಣೆಗೆ, ಅಮೆರಿಕಾ ಬಳಿ ಇರುವ ಜಿಬಿಯು-57 ಮ್ಯಾಸಿವ್ ಆರ್ಡ್‌ನನ್ಸ್ ಪೆನಟ್ರೇಟರ್ (ಎಂಒಪಿ) 13.6 ಟನ್‌ಗಳಷ್ಟು ಭಾರ ಹೊಂದಿದ್ದು, 60 ಮೀಟರ್‌ಗಳಷ್ಟು ದಪ್ಪನೆಯ ಕಾಂಕ್ರೀಟ್ ಪದರಗಳನ್ನು ಸೀಳಿ ನುಗ್ಗಬಲ್ಲದು. ಈ ಬಾಂಬ್ ಅನ್ನು ಅಮೆರಿಕಾ ಇತ್ತೀಚೆಗೆ ಇರಾನಿನ ಫೋರ್ದೊ ಪರಮಾಣು ನೆಲೆಯ ಮೇಲೆ ಪ್ರಯೋಗಿಸಿದ್ದು, ಇಂತಹ ಆಯುಧಗಳು ಎಷ್ಟು ಮುಖ್ಯ ಎನ್ನುವುದನ್ನು ಸಾಬೀತುಪಡಿಸಿದೆ.
ಭಾರತದ ಸು-30ಎಂಕೆಐ ಮತ್ತು ರಫೇಲ್ ಯುದ್ಧ ವಿಮಾನಗಳು ಬಹುಮುಖಿ ಮತ್ತು ಶಕ್ತಿಶಾಲಿ ವಿಮಾನಗಳೇ. ಆದರೆ, ಅವುಗಳಿಗೂ ಒಂದಷ್ಟು ಇತಿಮಿತಿಗಳಿವೆ. ಅವುಗಳು ಅಮೆರಿಕಾದ ಜಿಬಿಯು-57 ನಂತಹ 13 ಟನ್‌ಗಳಷ್ಟು ಭಾರೀ ತೂಕದ ಬಾಂಬ್‌ಗಳನ್ನು ಒಯ್ಯುವಷ್ಟು ಪೇಲೋಡ್ ಸಾಮರ್ಥ್ಯವನ್ನು ಹೊಂದಿಲ್ಲ. ಅದರೊಡನೆ, ಭಾರತೀಯ ಯುದ್ಧ ವಿಮಾನಗಳು ಸ್ಟೆಲ್ತ್ ವೈಶಿಷ್ಟ್ಯಗಳನ್ನೂ ಹೊಂದಿಲ್ಲ. ಅತ್ಯಂತ ಹೆಚ್ಚಿನ ಕಣ್ಗಾವಲು, ರಕ್ಷಣೆ ಹೊಂದಿರುವ ಶತ್ರು ಪ್ರದೇಶಗಳಲ್ಲಿ ಶತ್ರುವಿನ ಕಣ್ಣಿಗೆ ಬೀಳದಂತೆ ಸಾಗಲು ಸ್ಟೆಲ್ತ್ ಸಾಮರ್ಥ್ಯ ಅತ್ಯವಶ್ಯಕವಾಗಿದೆ.
ಇಂತಹ ಮಿತಿಗಳ ಕಾರಣದಿಂದ, ಭಾರತ ಸದ್ಯದ ಪರಿಸ್ಥಿತಿಯಲ್ಲಿ ಯುದ್ಧ ವಿಮಾನಗಳನ್ನು ಬಳಸಿಕೊಂಡು ದೂರದ ಪ್ರದೇಶಗಳಲ್ಲಿ ಬಂಕರ್ ಬಸ್ಟರ್ ಬಾಂಬ್‌ಗಳನ್ನು ಪ್ರಯೋಗಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಡಿಆರ್‌ಡಿಒ 5,000 ಕಿಲೋಮೀಟರ್ ದೂರದ ತನಕ ಅಣ್ವಸ್ತ್ರ ಸಿಡಿತಲೆಗಳನ್ನು ಒಯ್ಯಲು ನಿರ್ಮಾಣಗೊಂಡಿದ್ದ ಅಗ್ನಿ ಕ್ಷಿಪಣಿಯನ್ನು 7.5 ರಿಂದ 8 ಟನ್ ತೂಕದ ಸಿಡಿತಲೆಗಳನ್ನು 2,500 ಕಿಲೋಮೀಟರ್ ವ್ಯಾಪ್ತಿಗೆ ಒಯ್ಯುವಂತೆ ಮಾರ್ಪಡಿಸಲಾಗುತ್ತಿದೆ. ಈ ಅಭಿವೃದ್ಧಿಯಿಂದಾಗಿ, ಭಾರತೀಯ ವಾಯುಪಡೆಗೆ ಶತ್ರುವಿನ ದೇಶದೊಳಗೆ, ಅತ್ಯಂತ ಭದ್ರತೆ ಹೊಂದಿರುವ ಪ್ರದೇಶಗಳ ಮೇಲೂ ದಾಳಿ ನಡೆಸಲು ಸಾಧ್ಯವಾಗುತ್ತದೆ.
ಅಗ್ನಿ-5 ಕ್ಷಿಪಣಿಯ ಸಾಂಪ್ರದಾಯಿಕ ಆವೃತ್ತಿಯನ್ನು 2,500 ಕಿಲೋಮೀಟರ್‌ಗಳಷ್ಟು ಕಡಿಮೆ ವ್ಯಾಪ್ತಿಗೆ ವಿನ್ಯಾಸಗೊಳಿಸಿದ್ದು, ಇದು ವಿಶೇಷವಾಗಿ ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಭಾರತ ಎದುರಿಸುವ ಸಮಸ್ಯೆಗಳನ್ನು ಎದುರಿಸಲು ನೆರವಾಗಲಿದೆ. ಈ ಸವಾಲುಗಳಲ್ಲಿ ಆಧುನಿಕ ಜೆ-20 ಸ್ಟೆಲ್ತ್ ಯುದ್ಧ ವಿಮಾನ, ಹಡಗುಗಳ ಮೇಲೆ ದಾಳಿ ನಡೆಸಬಲ್ಲ ಡಿಎಫ್-21ಡಿ ಕ್ಷಿಪಣಿಗಳು ಮತ್ತು ಅತ್ಯಂತ ಭದ್ರತೆ ಹೊಂದಿರುವ ಭೂಗರ್ಭದ ಮಿಲಿಟರಿ ನೆಲೆಗಳು ಸೇರಿವೆ.
ಕ್ಷಿಪಣಿ ಭಾರತಕ್ಕೆ ಪಾಕಿಸ್ತಾನದಿಂದ ಬರುವ ಅಪಾಯಗಳನ್ನು ಎದುರಿಸಲು, ಅದರಲ್ಲೂ ಕಿರಾಣಾ ಬೆಟ್ಟಗಳ ಬಳಿ ಇದೆ ಎನ್ನಲಾದ ಪರಮಾಣು ಸಂಗ್ರಹಾಗಾರದ ಬಳಿಯಿಂದ ಬರುವಂತಹ ಅಪಾಯಗಳನ್ನು ನಿವಾರಿಸಲು ನೆರವಾಗಲಿದೆ. ಪಾಕಿಸ್ತಾನದಲ್ಲಿನ ಈ ನೆಲೆಗಳು ನೆಲದಾಳದಲ್ಲಿದ್ದು, ಅವುಗಳನ್ನು ನಿವಾರಿಸಲು ನೆಲದಾಳಕ್ಕೆ ಸಾಗುವ ಕ್ಷಿಪಣಿಗಳು ಬೇಕಾಗುತ್ತವೆ.
ಅಗ್ನಿ-5 ಆವೃತ್ತಿ, 2022ರಲ್ಲಿ ಪರೀಕ್ಷಿಸಲಾದ ಮಿಷನ್ ದಿವ್ಯಾಸ್ತ್ರ ಎಂಬ ಪರಮಾಣು ಸಜ್ಜಿತ ಪರೀಕ್ಷೆಯ ಸ್ಮಾರ್ಟ್ ಗೈಡೆನ್ಸ್ ವ್ಯವಸ್ಥೆಯನ್ನು ಒಳಗೊಂಡಿದೆ. ಈ ವೈಶಿಷ್ಟ್ಯಗಳು ಕ್ಷಿಪಣಿಗೆ ಶತ್ರುಗಳ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಕಣ್ಣು ತಪ್ಪಿಸಿ, ಗುರಿಯನ್ನು ತಲುಪಲು ನೆರವಾಗುತ್ತದೆ. ಇದರಿಂದ ಭಾರತೀಯ ಸೇನಾ ಪಡೆಗಳಿಗೆ ದೀರ್ಘ ವ್ಯಾಪ್ತಿಯ ನಿಖರ ದಾಳಿಗಳನ್ನು ನಡೆಸಲು ಸಾಧ್ಯ.
ಏರ್ ಬರ್ಸ್ಟ್ ವಾರ್‌ಹೆಡ್
ಏರ್ ಬರ್ಸ್ಟ್ ಸಿಡಿತಲೆಯನ್ನು ಶತ್ರುವಿನ ಗುರಿಗೆ ನೇರವಾಗಿ ಅಪ್ಪಳಿಸುವ ಬದಲು, ಅದರ ಮೇಲೆ ಸ್ಫೋಟಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಪ್ರಬಲ ಆಘಾತ ತರಂಗಗಳನ್ನು ಸೃಷ್ಟಿಸಿ, ವಿಶಾಲ ಪ್ರದೇಶಗಳಲ್ಲಿ ತುಣುಕುಗಳನ್ನು ಚದುರಿಸಿ, ಹೆಚ್ಚಿನ ಹಾನಿ ಉಂಟುಮಾಡುತ್ತದೆ.
ಭಾರತ ಏನಾದರೂ ಇಂತಹ ಸಿಡಿತಲೆಗಳೊಡನೆ ಅಗ್ನಿ-5 ಅನ್ನು ಬಳಸಿದರೆ, ಇದು ಒಂದೇ ದಾಳಿಯಲ್ಲಿ ಶತ್ರುವಿನ ವಿಶಾಲ ಪ್ರದೇಶಗಳನ್ನು ನಾಶಪಡಿಸಬಲ್ಲದು. ಇದರ ಸ್ಫೋಟ ರನ್‌ವೇಗಳು, ನಿಲ್ಲಿಸಿರುವ ವಿಮಾನಗಳು, ರೇಡಾರ್ ವ್ಯವಸ್ಥೆಗಳು ಮತ್ತು ಕಮಾಂಡ್ ಸೆಂಟರ್‌ಗಳನ್ನು ಏಕಕಾಲದಲ್ಲಿ ನಾಶಪಡಿಸಬಲ್ಲದು.
ಉದಾಹರಣೆಗೆ, ಮೇ 2025ರಲ್ಲಿ, ಆಪರೇಷನ್ ಸಿಂದೂರದ ಸಂದರ್ಭದಲ್ಲಿ, ಭಾರತೀಯ ವಾಯುಪಡೆ ಸರ್ಗೋಧ ಮತ್ತು ರಫೀಕಿಯಂತಹ ವಾಯುನೆಲೆಗಳ ಮೇಲೆ ಬ್ರಹ್ಮೋಸ್ ಮತ್ತು ಸ್ಕಾಲ್ಪ್ ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸಿತ್ತು. ಒಂದೇ ಅಗ್ನಿ-5 ಕ್ಷಿಪಣಿ 7.5ರಿಂದ 8 ಟನ್‌ಗಳಷ್ಟು ಏರ್ ಬರ್ಸ್ಟ್ ಸಿಡಿತಲೆಗಳನ್ನು ಒಯ್ದು, ಇನ್ನೂ ಗಂಭೀರ ಹಾನಿ ಉಂಟುಮಾಡಬಲ್ಲದು. ಇದು ಒಂದೇ ಹೊಡೆತಕ್ಕೆ ಸಂಪೂರ್ಣ ವಾಯು ನೆಲೆಯನ್ನೇ ನಾಶಮಾಡಬಲ್ಲದು. ಆ ಮೂಲಕ ಯುದ್ಧದ ಸಂದರ್ಭದಲ್ಲಿ ಭಾರತಕ್ಕೆ ಆಗಸವನ್ನು ನಿಯಂತ್ರಿಸುವ ಅನುಕೂಲ ಒದಗಿಸುತ್ತದೆ.
ಬಂಕರ್ ಬಸ್ಟರ್ ಸಿಡಿತಲೆ
ಬಂಕರ್ ಬಸ್ಟರ್ ಸಿಡಿತಲೆಯನ್ನು ನೆಲದಾಳದಲ್ಲಿರುವ ಶತ್ರುಗಳ ಗುರಿಗಳನ್ನು ನಾಶಪಡಿಸಲು ನಿರ್ಮಿಸಲಾಗಿದೆ. ಇದು ಸ್ಫೋಟಿಸುವ ಮುನ್ನ 80-100 ಮೀಟರ್‌ಗಳಷ್ಟು ಆಳಕ್ಕೆ ಇಳಿಯಬಲ್ಲದು. ಆ ಮೂಲಕ ಶತ್ರುಗಳ ಮಿಲಿಟರಿ ಬಂಕರ್‌ಗಳು, ಕ್ಷಿಪಣಿ ಸಂಗ್ರಹಾಗಾರಗಳು, ಅಥವಾ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಬಲ್ಲದು.
ಈ ಸಿಡಿತಲೆ ರಿಂಗ್ ಲೇಸರ್ ಗೈರೋಸ್ಕೋಪ್‌ಗಳು ಮತ್ತು ನಾವಿಕ್ / ಜಿಪಿಎಸ್ ನಂತಹ ಆಧುನಿಕ ಸಂಚರಣಾ ವ್ಯವಸ್ಥೆಯನ್ನು ಬಳಸಿ, ಅತ್ಯಂತ ನಿಖರವಾದ ದಾಳಿ ನಡೆಸುತ್ತದೆ. ಶತ್ರುವಿನ ಮಹತ್ವದ ಗುರಿಗಳ ಮೇಲೆ ದಾಳಿ ನಡೆಸುವಾಗ ಇಂತಹ ನಿಖರತೆ ಅವಶ್ಯಕವಾಗಿದೆ.
ಈ ಆಯುಧ ಬಹುತೇಕ ಅಮೆರಿಕಾ ಇರಾನ್ ವಿರುದ್ಧ ಬಳಸಿದ ಜಿಬಿಯು-57 ಬಾಂಬ್ ಅನ್ನು ಹೋಲುತ್ತದೆ. ಆದರೆ, ವಿಮಾನದಿಂದ ಪ್ರಯೋಗಿಸುವ ಬದಲು, ಭಾರತೀಯ ಆವೃತ್ತಿ ಕ್ಷಿಪಣಿಯ ಮೂಲಕ ಸಾಗುತ್ತದೆ. ಅಂದರೆ, ಇದರ ವೇಗ ಇನ್ನಷ್ಟು ಹೆಚ್ಚಾಗಿದ್ದು, ಶತ್ರುಗಳ ರಕ್ಷಣಾ ವ್ಯವಸ್ಥೆಗಳಿಗೆ ಇದನ್ನು ತಡೆಯುವುದು ಕಷ್ಟಕರವಾಗಲಿದೆ.
ಅಗ್ನಿ-5 ಕ್ಷಿಪಣಿ ವಿನ್ಯಾಸ
ಅಗ್ನಿ-5 ಕ್ಷಿಪಣಿ ಮೂರು ಹಂತಗಳನ್ನು ಹೊಂದಿದ್ದು, ಘನ ಇಂಧನವನ್ನು ಬಳಸುತ್ತದೆ. ಆ ಮೂಲಕ ಇದು ಕ್ಷಿಪ್ರ ಉಡಾವಣೆಗೆ ಸೂಕ್ತವಾಗಿದೆ. ಇದನ್ನು ಟಿಸಿಟಿ-5 ಎನ್ನುವ ವಿಶೇಷ ವಾಹನದಲ್ಲಿ ಸಂಗ್ರಹಿಸಿ, ಸಾಗಿಸಲಾಗುತ್ತದೆ. ಇದು ಕ್ಷಿಪಣಿಯನ್ನು ಉಡಾವಣೆಗೆ ಸೂಕ್ತವಾದ ಸ್ಥಿತಿಯಲ್ಲಿ ಎತ್ತಿ ನಿಲ್ಲಿಸುವ ವ್ಯವಸ್ಥೆ ಹೊಂದಿದೆ. ಇದು ಕ್ಷಿಪಣಿಯನ್ನು ಬೇರೆ ಬೇರೆ ಸ್ಥಳಗಳಿಂದ ಉಡಾವಣೆ ನಡೆಸಲು ಸಹಾಯಕವಾಗಿ, ಸೇನೆಗೆ ಮೇಲುಗೈ ಒದಗಿಸುತ್ತದೆ.
ಅಗ್ನಿ-5 ಅತ್ಯಂತ ಭಾರದ ಸಿಡಿತಲೆಗಳನ್ನು ಹೊತ್ತು, 10 ಮೀಟರ್ ವ್ಯಾಪ್ತಿಯಷ್ಟು ಅತ್ಯಂತ ನಿಖರವಾಗಿ ಗುರಿ ತಲುಪಬಲ್ಲದು. ಇದು ಕ್ಷಿಪಣಿಯನ್ನು ನೆಲದ ಮೇಲಿನ ಮತ್ತು ಭೂಗರ್ಭದ ಗುರಿಗಳನ್ನು ಧ್ವಂಸಗೊಳಿಸಲು ಸೂಕ್ತವಾಗಿಸುತ್ತದೆ.
ಅಗ್ನಿ-5 ಬಂಕರ್ ಬಸ್ಟರ್ - ಭಾರತೀಯ ವಾಯುಪಡೆಯ ಗೇಮ್ ಚೇಂಜರ್
ಅಗ್ನಿ-5 ಕ್ಷಿಪಣಿಯ ನೂತನ ಬಂಕರ್ ಬಸ್ಟರ್ ಆವೃತ್ತಿ ಭಾರತೀಯ ವಾಯು ಸೇನೆಯ ದಾಳಿ ಸಾಮರ್ಥ್ಯವನ್ನು ಬಹಳಷ್ಟು ವೃದ್ಧಿಸಲಿದೆ. ಇದಕ್ಕಾಗಿ ಭಾರತಕ್ಕೆ ಬಾಂಬ್ ಉದುರಿಸುವ ಯುದ್ಧ ವಿಮಾನಗಳ ಅಗತ್ಯವೂ ಇರುವುದಿಲ್ಲ.
ಏರ್ ಬರ್ಸ್ಟ್ ಸಿಡಿತಲೆ ಹೊಂದಿರುವ ಒಂದು ಕ್ಷಿಪಣಿ ಪಾಕಿಸ್ತಾನದ ಸರ್ಗೋದ ಅಥವಾ ಚೀನಾದ ಹೋತಾನ್ ನಂತಹ ಸಂಪೂರ್ಣ ವಾಯು ನೆಲೆಯನ್ನು ಸ್ಥಗಿತಗೊಳಿಸಬಲ್ಲದು. ಇನ್ನೊಂದೆಡೆ, ಬಂಕರ್ ಬಸ್ಟರ್ ಆವೃತ್ತಿ ಕಿರಾಣ ಬೆಟ್ಟದಂತಹ ನೆಲದಾಳದ ನೆಲೆಗಳನ್ನು ನಾಶಪಡಿಸಬಲ್ಲದು.
ಇಂತಹ ಶಕ್ತಿಶಾಲಿ ಕ್ಷಿಪಣಿ ಭಾರತದ ರಕ್ಷಣಾ ವ್ಯವಸ್ಥೆಯಲ್ಲಿನ ಬಹುದೊಡ್ಡ ಅಂತರವನ್ನು ತಗ್ಗಿಸುತ್ತಿದ್ದು, ದೀರ್ಘ ವ್ಯಾಪ್ತಿಯ, ಅಪಾರ ಹಾನಿ ಉಂಟುಮಾಡಬಲ್ಲ ದಾಳಿಯನ್ನು ಒದಗಿಸುತ್ತಿದೆ. ಬಾಂಬರ್‌ಗಳು ಉಂಟುಮಾಡುವ ಹಾನಿಯನ್ನೇ ಇದು ಮಾಡಬಲ್ಲದಾಗಿದ್ದು, ಇದರಿಂದ ಭಾರತದ ವಿಮಾನ ಅಥವಾ ಪೈಲಟ್‌ಗಳು ಅಪಾಯಕ್ಕೆ ತುತ್ತಾಗುವುದಿಲ್ಲ.
ಅಗ್ನಿ-5 ಕ್ಷಿಪಣಿ: ಪ್ರಮುಖ ವೈಶಿಷ್ಟ್ಯಗಳು
ಅಗ್ನಿ-5 ಕ್ಷಿಪಣಿ ಅತ್ಯಂತ ಶಕ್ತಿಶಾಲಿ, ದೀರ್ಘ ವ್ಯಾಪ್ತಿಯ ಕ್ಷಿಪಣಿಯಾಗಿದ್ದು, ಮ್ಯಾಕ್ 8ರಿಂದ ಮ್ಯಾಕ್ 20 (ಪ್ರತಿ ಗಂಟೆಗೆ 9,800 ಕಿಲೋಮೀಟರ್‌ನಿಂದ 24,500 ಕಿಲೋಮೀಟರ್) ಹೈಪರ್‌ಸಾನಿಕ್ ವೇಗದಲ್ಲಿ ಸಾಗಬಲ್ಲದು. ಇದರ ವೇಗ ಅಮೆರಿಕಾದ ಬಂಕರ್ ಬಸ್ಟರ್‌ಗಳ ವೇಗಕ್ಕೆ ಸಮನಾಗಿದ್ದರೂ, ಭಾರತದ ಅಗ್ನಿ-5 ಹೆಚ್ಚು ಭಾರದ ಪೇಲೋಡ್‌ಗಳನ್ನು ಒಯ್ಯಬಲ್ಲದು.
ಪ್ರಮುಖ ವಿಚಾರಗಳು
ತೂಕ: 50,000 ದಿಂದ 56,000 ಕೆಜಿ
ಉದ್ದ: 17.5 ಮೀಟರ್
ವ್ಯಾಸ: 2 ಮೀಟರ್ (ಅಂದಾಜು 6 ಅಡಿ 7 ಇಂಚು)
ಉಡಾವಣಾ ವೇದಿಕೆ: ಇದನ್ನು 8×8 ತಾರಾ ಟ್ರಕ್ ಅಥವಾ ಕಂಬಿ ಆಧಾರಿತ ವ್ಯವಸ್ಥೆಯ ಮೂಲಕ ಉಡಾಯಿಸಲಾಗುತ್ತದೆ. ಕ್ಷಿಪಣಿಯನ್ನು ಮುಚ್ಚಿಟ್ಟ ಸಂಗ್ರಾಹಕದಲ್ಲಿ ಇಡಲಾಗುತ್ತದೆ. ಇದನ್ನು ಸಾಗಿಸಲು ಮತ್ತು ಕ್ಷಿಪ್ರವಾಗಿ ಉಡಾಯಿಸಲು ಸಾಧ್ಯವಾಗುತ್ತದೆ.
ಇದರ ವಿನ್ಯಾಸ ಭಾರತಕ್ಕೆ ಬಲವಾದ, ಕುಶಲವಾದ, ದೀರ್ಘ ವ್ಯಾಪ್ತಿಯ ದಾಳಿ ಸಾಮರ್ಥ್ಯವನ್ನು ಒದಗಿಸಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
