ಯೆಲ್ಲೋ ಲೈನ್‌ನಲ್ಲಿ ರೈಲು ತಪ್ಪಿದ ಪ್ರಯಾಣಿಕನಿಗೆ ₹50 ದಂಡ ವಿಧಿಸಲಾಗಿದೆ. 20 ನಿಮಿಷಕ್ಕಿಂತ ಹೆಚ್ಚು ಸಮಯ ನಿಲ್ದಾಣದಲ್ಲಿ ಕಳೆದಿದ್ದಕ್ಕೆ ದಂಡ ವಿಧಿಸಲಾಗಿದೆ. ಕೇವಲ ಮೂರು ರೈಲುಗಳಿರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಬೆಂಗಳೂರು (ಆ.13): ಯೆಲ್ಲೋ ಲೈನ್ನಲ್ಲಿ ಒಂದು ರೈಲು ಮಿಸ್ ಮಾಡಿಕೊಂಡಿದ್ದಕ್ಕೆ ಪ್ರಯಾಣಿಕನೋರ್ವನಿಗೆ 50 ರೂಪಾಯಿ ದಂಡ ಹಾಕಿದ ಘಟನೆ ನಡೆದಿದೆ. ಮೊದಲ ಪ್ರಯಾಣದಲ್ಲೇ ಯೆಲ್ಲೋ ಲೈನ್ ಸಹವಾಸ ಬೇಡ ಎಂದು ನಿರ್ಧರಿಸಿದ ಪ್ರಯಾಣಿಕ. ಹೊಸ ಮೆಟ್ರೋ ರೈಡ್ ಮಾಡಲು ಬಂದವನಿಗೆ ದಂಡದ ಬಿಸಿ ತಟ್ಟಿದೆ. ಅಷ್ಟಕ್ಕೂ ನಡೆದಿದ್ದೇನು?

ಸಿಲ್ಕ್ ಬೋರ್ಡ್ ಸ್ಟೇಷನ್‌ನಿಂದ ಆರ್‌ವಿ ರಸ್ತೆಗೆ ತೆರಳಲು ಟಿಕೆಟ್ ಪಡೆದು ಒಳಗೆ ಪ್ರವೇಶಿಸಿದ ಪ್ರಯಾಣಿಕನೊಬ್ಬ ರೈಲು ತಪ್ಪಿದ ಕಾರಣಕ್ಕೆ 25 ನಿಮಿಷ ಕಾಯಬೇಕಾದ ಪರಿಸ್ಥಿತಿ ಬಂದಿದೆ. ಆದರೆ ಮೆಟ್ರೋದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಸ್ಟೇಷನ್‌ನಲ್ಲಿ ಕಳೆದಿದ್ದಕ್ಕೆ 50 ರೂ. ದಂಡ ಹಾಕಲಾಗಿದೆ.

ಯೆಲ್ಲೋ ಲೈನ್‌ನಲ್ಲಿ ಕೇವಲ ಮೂರು ರೈಲುಗಳೊಂದಿಗೆ ಸಂಚಾರ ಆರಂಭಿಸಿದೆ, ಹೀಗಿರುವಾಗ ಒಂದು ರೈಲು ತಪ್ಪಿದರೆ ಮುಂದಿನ ರೈಲಿಗೆ 25 ನಿಮಿಷ ಕಾಯಬೇಕು. ಆದರೆ, 20 ನಿಮಿಷಕ್ಕಿಂತ ಹೆಚ್ಚು ಸಮಯ ಸ್ಟೇಷನ್‌ನಲ್ಲಿ ಕಾಯುವಂತಿಲ್ಲ ಎಂಬ ನಿಯಮದಿಂದ ಪ್ರಯಾಣಿಕರು ಕಂಗಾಲಾಗಿದ್ದಾರೆ. ರೈಲು ತಪ್ಪಿದರೆ ಕಾಯಬೇಕು, ಇಲ್ಲವೇ ಹೊರಗೆ ಹೋದರೆ 50 ರೂ. ದಂಡ ಎಂಬ ಗೊಂದಲಮಯ ಸ್ಥಿತಿ ನಿರ್ಮಾಣವಾಗಿದೆ.

ಮೊದಲ ಪ್ರಯಾಣದಲ್ಲೇ ಯೆಲ್ಲೋ ಲೈನ್ ಸಹವಾಸ ಬೇಡವೆಂದು ಬೇಸರ ವ್ಯಕ್ತಪಡಿಸಿರುವ ಪ್ರಯಾಣಿಕ, ರೈಲುಗಳ ಸಂಖ್ಯೆ ಹೆಚ್ಚಾಗುವವರೆಗೆ ಬಸ್‌ನಲ್ಲೇ ಪ್ರಯಾಣಿಸುತ್ತೇನೆ ಎಂದಿದ್ದಾರೆ.

ಯೆಲ್ಲೋ ಲೈನ್‌ ಪ್ರಯಾಣಿಕರಿಗೆ ಗುಡ್‌ನ್ಯೂಸ್, ನಾಲ್ಕನೇ ರೈಲು ಎಂಟ್ರಿ!

ಇದರ ನಡುವೆ, ಯೆಲ್ಲೋ ಲೈನ್ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಕೊಲ್ಕತ್ತಾದಿಂದ ನಾಲ್ಕನೇ ರೈಲಿನ ಮೂರು ಬೋಗಿಗಳು ಈಗಾಗಲೇ ಬೆಂಗಳೂರಿಗೆ ತಲುಪಿದ್ದು, ಉಳಿದ ಮೂರು ಬೋಗಿಗಳು ನಾಳೆ ಆಗಮಿಸಲಿವೆ. ಆರು ಬೋಗಿಗಳ ಈ ರೈಲು ಸೆಟ್ ಈ ತಿಂಗಳಲ್ಲಿ ಸೇವೆ ಆರಂಭಿಸುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ. ಇದರಿಂದ ರೈಲುಗಳ ಕೊರತೆಯ ಸಮಸ್ಯೆ ಕಡಿಮೆಯಾಗಿ, ಪ್ರಯಾಣಿಕರಿಗೆ ಸೌಕರ್ಯ ಒದಗಲಿದೆ ಎಂಬ ನಿರೀಕ್ಷೆಯಿದೆ.