Bengaluru Yellow Line Metro Station Name: ಬೆಂಗಳೂರಿನ ಹಳದಿ ಮೆಟ್ರೋ ಮಾರ್ಗದಲ್ಲಿ ಎರಡು ನಿಲ್ದಾಣಗಳ ಹೆಸರು ಅದಲು-ಬದಲು ಆಗಿರುವುದರಿಂದ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದಾರೆ.
ಬೆಂಗಳೂರು: ಭಾನುವಾರ ಬೆಂಗಳೂರಿನ ಹಳದಿ ಮೆಟ್ರೋ (Yellow Line Metro) ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಲಾಗಿತ್ತು. ಸೋಮವಾರದಿಂದಲೇ ಸಾರ್ವಜನಿಕರು ಹಳದಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಆರಂಭದಲ್ಲಿಯೇ ಮೆಟ್ರೋ ಪ್ರಯಾಣಿಕರು ಸಮಸ್ಯೆಯನ್ನು ಎದುರಿಸುವಂತಾಗಿದೆ. ಎರಡು ಮೆಟ್ರೋ ನಿಲ್ದಾಣಗಳ ಹೆಸರು ಅದಲು-ಬದಲು ಆಗಿದೆ. ಈ ಕುರಿತಂತೆ ಬೆಂಗಳೂರು ದಕ್ಷಿಣ ಸಂಸದ, ತೇಜಸ್ವಿ ಸೂರ್ಯ, ಎಕ್ಸ್ ಖಾತೆಯಲ್ಲಿ ಬರೆದುಕೊಂಡು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಬಹುನಿರೀಕ್ಷಿತ Yellow Line ಸೋಮವಾರ ಬಹಳ ಸಂಭ್ರಮದಿಂದ ಆರಂಭವಾಗಿದೆ. ಪ್ರಯಾಣಿಕರು ಈಗಾಗಲೇ ಹೊಸ ಸವಾಲನ್ನು ಎದುರಿಸಿದ್ದಾರೆ. ಈ ಸಮಸ್ಯೆ ಕಾಮಿಡಿ ಸ್ಟೋರಿಯಂತಿದ್ದು, ಮೆಟ್ರೋ ಸ್ಟೇಶನ್‌ನಗಳ ಹೆಸರು ಅದಲು ಬದಲು ಆಗಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಏನಿದು ಅದಲು-ಬದಲು, ಗೀತಾ-ಸೀತಾ ಕಥೆ?
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪ್ರದೇಶವನ್ನು ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ಎಂದು ಕರೆಯಲಾಗುತ್ತದೆ. ಇನ್ನು ಕೋನಪ್ಪನ ಅಗ್ರಹಾರ ಪ್ರದೇಶವನ್ನು ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಎಂದು ಕರೆಯಲಾಗುತ್ತದೆ. ನೀವು ಕೋನಪ್ಪನ ಅಗ್ರಹಾರ ಟಿಕೆಟ್ ಖರೀದಿಸಿದ್ರೆ ಎಲೆಕ್ಟ್ರಾನಿಕ್ ಸಿಟಿಗೆ ಹೋಗುತ್ತೀರಿ. ಅಂದ್ರೆ ನಿಗಧಿತ ನಿಲ್ದಾಣಕ್ಕೆ ಮುಂದೆ ಹೋಗುತ್ತೀರಿ. ಇದರಿಂದಾಗಿ ನೀವು ದಂಡ ಪಾವತಿಸಬೇಕಾಗುತ್ತದೆ. ಹಾಗಾಗಿ ಬಿಎಂಟಿಸಿ ಎಲೆಕ್ಟ್ರಾನಿಕ್ ಸಿಟಿಯನ್ನು ಎಲೆಕ್ಟ್ರಾನಿಕ್ ಸಿಟಿ ಎಂದು, ಕೋನಪ್ಪನ ಅಗ್ರಹಾರವನ್ನು ಕೋನಪ್ಪನ ಅಗ್ರಹಾರ ಎಂದು ಕರೆಯಬೇಕು. ಇಲ್ಲವಾದ್ರೆ ಈ ಎರಡು ನಿಲ್ದಾಣಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟವಾಗಲಿದೆ. ಮೆಟ್ರೋ ಮತ್ತು ಬಸ್ ನಿಲ್ದಾಣಗಳು ಹೆಸರು ಅದಲು-ಬದಲು ಆಗೋದರಿಂದ ಗೊಂದಲವಾಗಲಿದೆ.
ಇದೇನು ರಾಕೇಟ್ ವಿಜ್ಞಾನವಲ್ಲ, ಬಿಎಂಆರ್‌ಸಿಎಲ್ ಹೆಸರಿಸುವ ಅವ್ಯವಸ್ಥೆಯನ್ನು ತಕ್ಷಣವೇ ಸರಿಪಡಿಸಬೇಕು. ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಎಂಎಲ್‌ಟಿಎ ಸ್ಥಾಪಿಸುವಲ್ಲಿ ಸಮಯ ವ್ಯರ್ಥ ಮಾಡಬಾರದು, ಇದರಿಂದ ಇಂತಹ ಪ್ರಮಾದಗಳು ಮತ್ತೆ ಮತ್ತೆ ಸಂಭವಿಸಬಾರದು ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.
ಹಳದಿ ಮೆಟ್ರೋ ಭಾಗದಲ್ಲಿ ಮೊದಲ 56000 ಜನ ಪ್ರಯಾಣ
ಹಳದಿ ಮೆಟ್ರೋ ಮಾರ್ಗದ ಜನಸಂಚಾರದ ಮೊದಲ ದಿನವೇ ಎಲ್ಲ ಮೂರು ರೈಲುಗಳು ಸಂಪೂರ್ಣ ಭರ್ತಿಯಾಗಿ ಸಂಚರಿಸಿದ್ದು, ಹೊಸ ಮಾರ್ಗದಲ್ಲಿ ಪ್ರಯಾಣಿಸಿದ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ರಾತ್ರಿ 9 ಗಂಟೆಯವರೆಗೆ ಬರೋಬ್ಬರಿ 56 ಸಾವಿರಕ್ಕೂ ಅಧಿಕ ಜನರು ಪ್ರಯಾಣ ಮಾಡಿದ್ದಾರೆ. ಬೆಳಗ್ಗೆ 6.30ಕ್ಕೆ ಆರ್.ವಿ.ರಸ್ತೆ ಮೆಟ್ರೋ ನಿಲ್ದಾಣದಿಂದ ಚೀನಾದ ಸಿಆರ್‌ಆರ್‌ಸಿ ಕಂಪನಿ ಪೂರೈಸಿರುವ ರೈಲು ಸಂಚಾರ ಆರಂಭಿಸಿತು. ಬೊಮ್ಮಸಂದ್ರ ಕಡೆಯಿಂದ ತಿತಾಘರ್‌ನಲ್ಲಿ ನಿರ್ಮಿತ ರೈಲು ಹೊರಟಿತ್ತು.
ಹಳದಿ ಮಾರ್ಗದಲ್ಲಿ ಮೂರು ಇಂಟರ್‌ಚೇಂಜ್
ನಿಲ್ದಾಣ ಮಾರ್ಗ ಎಲ್ಲಿಂದ - ಎಲ್ಲಿಗೆ?
- ಆರ್.ವಿ. ರೋಡ್ ಹಸಿರು ಮಾರ್ ರೇಷ್ಮೆ ಸಂಸ್ಥೆ - ಮಾದಾವರ
- ಜಯದೇವ ಆಸ್ಪತ್ರೆ ಗುಲಾಬಿ ಮಾರ್ಗ ನಾಗಾವರ - ಕಾಳೇನ ಅಗ್ರಹಾರ
- ಸಿಲ್ಕ್ ಬೋರ್ಡ್ ನೀಲಿ ಮಾರ್ಗ (2ಎ) ಸಿಲ್ಕ್‌ಬೋರ್ಡ್ - ಕೆಆರ್ ಪುರಂ
ಹಳದಿ ಮಾರ್ಗದ ನಿಲ್ದಾಣಗಳು ಯಾವುವು?
ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೋಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲುಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್.ವಿ.ರಸ್ತೆ ನಿಲ್ದಾಣ.
ಹಳದಿ ಮಾರ್ಗದ ವಿವರ
- ಮಾರ್ಗ: ಹಳದಿ
- ಸಂಪರ್ಕ ಆರ್.ವಿ.ರಸ್ತೆ - ಬೊಮ್ಮಸಂದ್ರ
- ಉದ್ದ: 19.15 ಕಿಮೀ
- ನಿಲ್ದಾಣ: 16
- ಇಂಟರ್‌ಚೇಂಜ್: 3
- ಡಬ್ಬಲ್ ಡೆಕ್ಕರ್ ರಾಗಿಗುಡ್ಡ - ಸೆಂಟ್ರಲ್ ಸಿಲ್ಕ್ ಬೋರ್ಡ್ (3.3ಕಿಮೀ)
- ಒಟ್ಟು ವೆಚ್ಚ ₹ 5,056.99 ಕೋಟಿ
