- Home
- News
- State
- ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಬಾಗಿನ ಸ್ವೀಕರಿಸಿ, ಕುಂಕುಮ ಇಟ್ಟ ಬಾನು ಮುಷ್ತಾಕ್; ಇಲ್ಲಿದೆ ಫಸ್ಟ್ ರಿಯಾಕ್ಷನ್!
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಬಾಗಿನ ಸ್ವೀಕರಿಸಿ, ಕುಂಕುಮ ಇಟ್ಟ ಬಾನು ಮುಷ್ತಾಕ್; ಇಲ್ಲಿದೆ ಫಸ್ಟ್ ರಿಯಾಕ್ಷನ್!
ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಗೆ ಮೈಸೂರು ದಸರಾ 2025 ಉದ್ಘಾಟನೆಗೆ ಆಹ್ವಾನ ನೀಡಲಾಗಿದ್ದು, ನಟಿ ಶಶಿಕಲಾ ಅವರು ಬಾನು ಮುಷ್ತಾಕ್ ಅವರಿಗೆ ಬಾಗಿನ ನೀಡಿ ಗೌರವಿಸಿದ್ದಾರೆ. ಈ ಆಯ್ಕೆಯನ್ನು ಕೆಲವರು ವಿರೋಧಿಸಿದರೆ, ಇನ್ನು ಕೆಲವರು ಬೆಂಬಲಿಸಿದ್ದಾರೆ.

ಹಾಸನ (ಆ.25): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2025ರ ಉದ್ಘಾಟನೆಗೆ ಸಾಹಿತಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಗೆ ನಟಿ ಶಶಿಕಲಾ ಅವರಿಗೆ ಹರಿಶಿಣ, ಕುಂಕುಮ, ಸೀರೆ, ಬಳೆ, ಹೂವು ಒಳಗೊಂಡ ಬಾಗಿನ ನೀಡಿ ಗೌರವಿಸಿದರು. ಬಾಗಿನ ಸ್ವೀಕರಿಸಿ ಬಾನು ಮುಷ್ತಾಕ್ ಅವರು, ಶಶಿಕಲಾ ಅವರ ಹಣೆಗೆ ಕುಂಕುಮ ಇಟ್ಟು ಅವರ ಮನೆಯಿಂದಲೂ ಒಂದು ಬಾಗಿನವನ್ನು ನೀಡಿ ಹಾರೈಸಿದರು.
ಇದಾದ ನಂತರ ಮಾತನಾಡಿದ ಬಾನು ಮುಷ್ತಾಕ್ ಅವರು, ನಾನು ತಂದೆ ತಾಯಿ ಜೊತೆ ಹಲವು ಬಾರಿ ಜಂಬು ಸವಾರಿ ನೋಡಲು ಹೊಗುತ್ತಿದ್ದೆ. ಈಗ ನಾನೇ ದಸರಾ ಉದ್ಘಾಟನೆ ಸಂದರ್ಭದ ಆಹ್ವಾನ ಬಂದಿದೆ. ಹಾಗಾಗಿ, ನನಗೆ ಸಂತೋಷ ವಾಗಿದೆ ಎಂದರು. ಇದನ್ನ ನಾವು ಹಲವು ಪ್ರಭೇದಗಳಲ್ಲಿ ನೋಡಬಹುದು. ನೀವು ಚಾಮುಂಡೇಶ್ವರಿ ತಾಯಿ ಅಂತಿರಿ, ನಿಮ್ಮ ಭಾವವನ್ನು ಗೌರವಿಸುತ್ತೇನೆ. ಅನೇಕರು ಇದನ್ನ ನಾಡ ಹಬ್ಬ ಅಂತಾರೆ ಅದನ್ನು ಗೌರವಿಸುತ್ತೇನೆ ಎಂದರು.
ನಾಡ ಹಬ್ಬ, ಚಾಮುಂಡೇಶ್ವರಿ ತಾಯಿ ಅಂತಾ ಪ್ರೀತಿ ಅಭಿಮಾನದಿಂದ ಕರೀತೀರಿ. ಇದು ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ, ನಾಡಿನ ಭಾಗವಾಗಿದೆ. ಹಾಗಾಗಿ ಇದು ನನಗೂ ಪ್ರಿಯವಾಗಿದೆ. ನಾನು ಗೌರವಿಸುವ ಹಬ್ಬವಾಗಿದೆ, ಪ್ರೀತಿಯಿಂದ ಭಾಗಿಯಾಗುವ ಹಬ್ಬವಾಗಿದೆ ಎಂದು ಹೇಳಿದರು.
ಮೈಸೂರು ದಸರಾ ಉದ್ಘಾಟಕಿ ಬಾನು ಮುಷ್ತಾಕ್‌ಗೆ ಬಾಗಿನ ನೀಡಿದ ನಟಿ ಶಶಿಕಲಾ!
ಬೂಕರ್ ಪ್ರಶಸ್ತಿ ವಿಜೇತೆ, ಮೈಸೂರು ದಸರಾ ಉದ್ಘಾಟನಾ ಆಹ್ವಾನಿತೆ ಬಾನು ಮುಷ್ತಾಕ್‌ಗೆ ನಟಿ ಶಶಿಕಲಾ ಬಾಗಿನ ನೀಡಿದರು. ಹಾಸನದ ಮನೆಗೆ ಆಗಮಿಸಿ ಹಿಂದೂ ಸಂಪ್ರದಾಯದಂತೆ ಬಾಗಿನ ಅರ್ಪಣೆ ಮಾಡಿದರು. ಬೆಂಗಳೂರಿನ ಕಲಾವಿದೆ ಹಾಗೂ ಅಮ್ಮನ ಮಡಿಲು ಸಂಸ್ಥಾಪಕಿ ಶಶಿಕಲಾ ಬಾಗಿನ ಕೊಟ್ಟರು.
ಹೂ, ಬಳೆ, ಸೀರೆ, ಅರಿಶಿನ ಕುಂಕುಮ ನೀಡಿ ಶುಭ ಹಾರೈಸಿದರು. ನಿನ್ನೆ ತಾನೇ ಬಾನು ಮುಷ್ತಾಕ್ ಲಂಡನ್‌ನಿಂದ ಹಾಸನದ ಮನೆಗೆ ಆಗಮಿಸಿದ್ದರು. ನಟಿ ಶಶಿಕಲಾ ಅವರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಹಿನ್ನೆಲೆಯಲ್ಲಿ ಗೌರವ ಸಲ್ಲಿಸಿದರು. ನಾಡ ಹಬ್ಬ ದಸರಾ ಉದ್ಘಾಟನೆ ಹಿನ್ನೆಲೆಯಲ್ಲಿ ಗೌರವ ಸಮರ್ಪಣೆ ಮಾಡಿದರು. ಈ ವೇಳೆ ಸಾಹಿತಿ ಭಾನು ಮುಷ್ತಾಕ್ ಖುಷಿಯಾಗಿ ಬಾಗಿನ ಸ್ವೀಕಾರ ಮಾಡಿದರು.
ಇದಾದ ನಂತರ ಬಾನು ಮುಸ್ತಾಕ್ ಅವರೂ ಕೂಡ ನಟಿ ಶಶಿಕಲಾರಿಗೂ ಬಾಗಿನ ನೀಡಿದರು. ಶಶಿಕಲಾರ ಹಣೆಗೆ ಅರಿಶಿನ ಕುಂಕುಮವಿಟ್ಟು, ಸೀರೆ ಬಾಗಿನ ನೀಡಿದರು.
ಬಾನು ಮುಸ್ತಾಕ್ ದಸರಾ ಉದ್ಘಾಟನೆಗೆ ಆಹ್ವಾನ ನೀಡಿರುವುದಕ್ಕೆ ಪ್ರತಾಪ್ ಸಿಂಹ, ಬಸವನಗೌಡ ಪಾಟೀಲ್ ಯತ್ನಾಳ್ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನು ನಟಿ ಶಶಿಕಲಾ ಹಣೆಗೆ ಕುಂಕುಮ ಹಚ್ಚಿದ ಸಾಹಿತಿ ಬಾನು ಮುಷ್ತಾಕ್ ಅವರಿಗೆ ವಾಪಸ್ ಕುಂಕುಮ ಹಚ್ಚಲು ಸಾಧ್ಯವಾಗದೇ ಅವರ ಸೀರೆಯ ಮಾಡಿಲಿಗೆ ಅರಿಶಿನ, ಕುಂಕುಮ ಹಾಕಿದರು. ಇನ್ನು ಬಾನು ಮುಷ್ತಾಕ್ ಅವರ ಧಾರ್ಮಿಕ ಸಂಪ್ರದಾಯ ಪಾಲನೆಯನ್ನೂ ಮಾಡಿದ್ದು, ಕಂಡುಬಂದಿದೆ. ಇನ್ನು ಅವರ ಧಾರ್ಮಿಕ ವಿಧಿ-ವಿಧಾನದ ಹೊರತಾಗಿ ನಟಿ ಶಶಿಕಲಾಗೆ ಕುಂಕುಮ ಹಚ್ಚಿದ್ದಾರೆ.
ಬಾನು ಮುಷ್ತಾಕ್‌ಗೆ ಬೆಂಬಲ ಸೂಚಿಸಿದ ಮಾಜಿ ಸಚಿವ ಎಚ್.ಡಿ. ರೇವಣ್ಣ:
ಬಾನು ಮುಷ್ತಾಕ್ ಅವರ ಆಯ್ಕೆಗೆ ಅಪಸ್ವರ ವ್ಯಕ್ತವಾಗಿರುವ ಬಗ್ಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಪ್ರತಿಕ್ರಿಯೆ ನೀಡಿದರು. 'ಬಾನು ಮುಷ್ತಾಕ್ ನಮ್ಮ ಜಿಲ್ಲೆಯ ಮಹಿಳೆ. ಅವರೊಬ್ಬ ಹೋರಾಟಗಾರ್ತಿ. ಹಾಗಾಗಿ ಅವರು ದಸರಾ ಉದ್ಘಾಟನೆ ಮಾಡಿದರೆ ಸಂತೋಷ' ಎಂದರು. 'ಪಕ್ಷ ಯಾವುದೇ ಇರಲಿ, ಧರ್ಮದ ಹೆಸರಿನಲ್ಲಿ ಜನರನ್ನು ಬೇರ್ಪಡಿಸುವುದು ಸರಿಯಲ್ಲ.
ನಾವೆಲ್ಲರೂ ಒಂದೇ ಸಮಾಜದಲ್ಲಿ ಹಿಂದೂ, ಮುಸ್ಲಿಂ ಎಲ್ಲರೂ ಒಂದೇ. ಎಲ್ಲರೂ ಭಾರತೀಯರು, ಎಲ್ಲರೂ ಒಂದಾಗಿ ದೇಶವನ್ನು ಉಳಿಸಬೇಕು. ಬಾನು ಮುಷ್ತಾಕ್ ಅವರನ್ನು ರಾಜಕೀಯ ಕಾರಣಗಳಿಗಾಗಿ ವಿರೋಧಿಸಬಾರದು. ಅವರ ಆಯ್ಕೆಯು ಸರಿಯಾದ ನಿರ್ಧಾರ ಎಂದು ಪ್ರತಿಪಾದಿಸಿದರು. ಈ ಬೆಳವಣಿಗೆಯಿಂದ ದಸರಾ ಉದ್ಘಾಟನೆಯ ಕುರಿತು ನಡೆಯುತ್ತಿರುವ ಚರ್ಚೆಗಳಿಗೆ ಹೊಸ ಆಯಾಮ ದೊರೆತಿದೆ ಎಂದು ರೇವಣ್ಣ ಹೇಳಿದರು.
ವಿರೋಧಕ್ಕೆ ಸೂಕ್ತ ಉತ್ತರ ಕಡ್ತೇನೆಂದ ಬಾನು ಮುಷ್ತಾಕ್:
ಇದಕ್ಕೂ ಮುನ್ನ ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರನ್ನು ಆಯ್ಕೆ ಮಾಡಿರೋದಕ್ಕೆ ಪ್ರತಾಪ್ ಸಿಂಹ ವಿರೋಧ ವಿಚಾರದ ಬಗ್ಗೆ ದೂರವಾಣಿ ಕರೆಯಲ್ಲಿ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಬಾನು ಮುಷ್ತಾಕ್ ಅವರು, ಈ ಬಗ್ಗೆ ಸೂಕ್ತ ವೇದಿಕೆ, ಸೂಕ್ತ ವೇಳೆಯಲ್ಲಿ ಪ್ರತಿಕ್ರಿಯೆ ನೀಡುತ್ತೇನೆ. ಇದೀಗ ನಾನು ವಿರೋಧ ವ್ಯಕ್ತವಾಗುತ್ತಿರುವುದರ ಯಾವುದೇ ಹೇಳಿಕೆ ನೀಡುವುದಿಲ್ಲ. ನಾನು ಎಲ್ಲಾ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದ್ದೇನೆ ಎಂದು ತಿಳಿಸಿದರು.