ನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಕೆ.ಎಸ್. ಜೈನ್ ಅವರು ಬೆಂಗಳೂರು-ಮಂಡ್ಯ ಮಾರ್ಗದಲ್ಲಿ ವಿಂಡೋ-ಟ್ರೈಲಿಂಗ್ ತಪಾಸಣೆ ನಡೆಸಿ, ನಿಲ್ದಾಣಗಳ ಪುನರಾಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಅಮೃತ ಭಾರತ ನಿಲ್ದಾಣ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದರು.

ನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಕೆ.ಎಸ್. ಜೈನ್ ಅವರು ಇಂದು ಕೆಎಸ್ಆರ್ ಬೆಂಗಳೂರು ಮತ್ತು ಮಂಡ್ಯ ನಡುವಿನ ಮಾರ್ಗದಲ್ಲಿ ವಿಂಡೋ-ಟ್ರೈಲಿಂಗ್ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಅವರು ರೈಲು ಸಂಚಾರದ ಸುರಕ್ಷತೆ, ಕಾರ್ಯಾಚರಣೆ ಮಾನದಂಡಗಳು ಮತ್ತು ನಿಲ್ದಾಣಗಳಲ್ಲಿ ನಡೆಯುತ್ತಿರುವ ವಿವಿಧ ಪುನರಾಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.

ಅಮೃತ ಭಾರತ ನಿಲ್ದಾಣ ಯೋಜನೆಯಡಿ ಕೆಂಗೇರಿ, ರಾಮನಗರ, ಚನ್ನಪಟ್ಟಣ ಮತ್ತು ಮಂಡ್ಯ ನಿಲ್ದಾಣಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಶ್ರೀ ಜೈನ್ ಸಮೀಕ್ಷಿಸಿ, ಅವುಗಳನ್ನು ನಿಗದಿತ ಅವಧಿಯೊಳಗೆ ಗುಣಮಟ್ಟ ಕಾಪಾಡಿಕೊಂಡೇ ಪೂರ್ಣಗೊಳಿಸುವಂತೆ ಸೂಚಿಸಿದರು. ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಿಲ್ದಾಣಗಳ ಪುನರ್ ನಿರ್ಮಾಣ ಕಾರ್ಯಗಳು ಅತ್ಯಂತ ಮಹತ್ವದ್ದೆಂದು ಅವರು ಅಭಿಪ್ರಾಯಪಟ್ಟರು.

ತಪಾಸಣೆಯ ವೇಳೆ ಶ್ರೀ ಜೈನ್ ಅವರು ನಿಲ್ದಾಣಗಳಲ್ಲಿ ಕೈಗೊಳ್ಳಲಾಗಿರುವ ಸ್ವಚ್ಛತಾ ಕ್ರಮಗಳು, ಮೂಲಸೌಕರ್ಯ ಸುಧಾರಣೆ, ಪ್ರಯಾಣಿಕರ ಅನುಕೂಲಕ್ಕಾಗಿ ಕಲ್ಪಿಸಲಾದ ಹೊಸ ವ್ಯವಸ್ಥೆಗಳು ಹಾಗೂ ಭದ್ರತಾ ಕ್ರಮಗಳನ್ನು ಪರಿಶೀಲಿಸಿದರು. ರೈಲು ನಿಲ್ದಾಣಗಳ ಪುನರ್ ನಿರ್ಮಾಣ ಕಾರ್ಯಗಳು ಪೂರ್ಣಗೊಂಡ ನಂತರ, ಪ್ರಯಾಣಿಕರ ಅನುಭವವನ್ನು ಮತ್ತಷ್ಟು ಸುಧಾರಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ರೀ ಪ್ರವೀಣ್ ಕಾತರಕಿ, ಮುಖ್ಯ ಯೋಜನಾ ವ್ಯವಸ್ಥಾಪಕ (ಗತಿ ಶಕ್ತಿ) ಶ್ರೀ ಗುಲ್ ಅಶ್ಫಾಕ್ ಮೊಹಮ್ಮದ್, ಹಿರಿಯ ವಿಭಾಗೀಯ ಎಂಜಿನಿಯರ್ ಶ್ರೀ ಸಂಚಿತ್ ಶ್ರೀವಾಸ್ತವ, ಹಿರಿಯ ವಿಭಾಗೀಯ ವಿದ್ಯುತ್ ಎಂಜಿನಿಯರ್ ಶ್ರೀ ಬಿ.ಎಸ್. ಶಿವ ಪ್ರಸಾದ್, ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಶ್ರೀಮತಿ ನಿವೇದಿತಾ ಎಸ್. ಬಾಲರಡ್ಡಿಯವರ್ ಹಾಗೂ ಇತರ ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಂಡೋ-ಟ್ರೈಲಿಂಗ್ ತಪಾಸಣೆಯು ರೈಲುಗಳ ಸುರಕ್ಷತೆ, ಸಮಯಪಾಲನೆ ಮತ್ತು ನಿಲ್ದಾಣ ಸೌಲಭ್ಯಗಳ ಗುಣಮಟ್ಟವನ್ನು ಸುಧಾರಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಹಿನ್ನೆಲೆಯಲ್ಲಿ, ಪ್ರಯಾಣಿಕರಿಗೆ ಇನ್ನಷ್ಟು ಸುಗಮ, ಸುರಕ್ಷಿತ ಹಾಗೂ ಆಧುನಿಕ ಸೇವೆಗಳನ್ನು ಒದಗಿಸುವ ಉದ್ದೇಶವನ್ನು ನೈಋತ್ಯ ರೈಲ್ವೆ ಮುಂದಿಟ್ಟುಕೊಂಡಿದೆ.