ನಮ್ಮ ಸರ್ಕಾರ ಆರ್‌ಎಸ್‌ಎಸ್‌ ನಿಷೇಧಿಸಿಲ್ಲ, ಬದಲಿಗೆ ಜಗದೀಶ್ ಶೆಟ್ಟರ್ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರದ ಆದೇಶವನ್ನೇ ಪುನರುಚ್ಚರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ. ಶಾಲಾ, ಕಾಲೇಜು ಆವರಣದಲ್ಲಿ ಯಾವುದೇ ಸಂಘ-ಸಂಸ್ಥೆಗಳು ಚಟುವಟಿಕೆ ನಡೆಸಲು ಅನುಮತಿ ಪಡೆಯಬೇಕೆಂ ಬಗ್ಗೆ ಮಾತ್ರ ಆದೇಶ.

ಬೆಂಗಳೂರು (ಅ.21): ನಮ್ಮ ಸರ್ಕಾರ ಆರ್‌ಎಸ್‌ಎಸ್‌ ನಿಷೇಧ ಮಾಡಿಲ್ಲ. ಯಾವುದೇ ಸಂಘ, ಸಂಸ್ಥೆಗಳು ಶಾಲಾ, ಕಾಲೇಜು ಆವರಣದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದನ್ನು ಜಗದೀಶ್‌ ಶೆಟ್ಟರ್‌ ನೇತೃತ್ವದ ಹಿಂದಿನ ಸರ್ಕಾರದಲ್ಲಿ ನಿಷೇಧಿಸಲಾಗಿತ್ತು. ಬಿಜೆಪಿ ಸರ್ಕಾರದ ಆದೇಶ ಮಾಡಿದ್ದನ್ನೇ ನಾವೂ ಪುನರುಚ್ಚರಿಸಿದ್ದೇವೆ ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಆರ್‌ಎಸ್‌ಎಸ್‌ಗೆ ನಿಷೇಧ ಹೇರಿಲ್ಲ: ಸಿಎಂ

ಪುತ್ತೂರಿನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ ಯಾವುದೇ ಸಂಘ, ಸಂಸ್ಥೆಗಳ ಕಾರ್ಯಕ್ರಮ, ಚಟುವಟಿಕೆಗಳಿಗೆ ಅನುಮತಿ ಪಡೆಯಬೇಕೆಂದು ಹೊರಡಿಸಿರುವ ಸರ್ಕಾರದ ಆದೇಶದಲ್ಲಿ ಆರ್‌ಎಸ್‌ಎಸ್‌ ಎಂದು ಎಲ್ಲೂ ನಿರ್ದಿಷ್ಟ ಉಲ್ಲೇಖ ಮಾಡಿಲ್ಲ. ಬಿಜೆಪಿಯವರು ಮಾಡಿದ್ದ ಆದೇಶವನ್ನೇ ನಾವೂ ಮಾಡಿದ್ದೇವೆ. ಅವರು ಮಾಡಬಹುದು, ನಾವು ಮಾಡಬಾರದೇ ಎಂದು ಪ್ರಶ್ನಿಸಿದರು.

2013 ರಲ್ಲಿ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಗಳಿಯಾಗಿದ್ದ ಸಂದರ್ಭದಲ್ಲಿ ಸಂಘ-ಸಂಸ್ಥೆಗಳು ಶಾಲಾ, ಕಾಲೇಜು ಆವರಣದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದನ್ನು ನಿಷೇಧಿಸಿದ್ದರು. ಆ ಆದೇಶ ಮಾಡಿರುವುದು ಶಿಕ್ಷಣ ಇಲಾಖೆಯೇ ಹೊರತು ನಾನಲ್ಲ ಎಂದಿದ್ದಾರೆ. ಇವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಆದೇಶ ಹೊರಡಿಸಿದ್ದಾರೆ ಎಂದು ಹೇಳಿದರು.

ಅನುಮತಿ ಕಡ್ಡಾಯವಲ್ಲ:

ಸಂಘ, ಸಂಸ್ಥೆಗಳಿಗೆ ಅನುಮತಿ ಕೊಡಲೇಬೇಕು ಎಂದೇನೂ ಇಲ್ಲ. ಶಾಂತಿ-ಸುವ್ಯವಸ್ಥೆ ಮೇಲೆ ಬೀರುವ ಪರಿಣಾಮವನ್ನು ಯೋಚಿಸಿ ಅನುಮತಿ ನೀಡುವುದು, ಬಿಡುವುದು ಅವಲಂಬಿತವಾಗಿದೆ ಎಂದು ಹೇಳಿದರು.