ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ಒಂದೇ ಕುಟುಂಬದ ಮೂವರು ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಕುರಿಗಳೊಂದಿಗೆ ಆಟವಾಡುವಾಗ ಆಯತಪ್ಪಿ ಬಿದ್ದು, ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಇಡೀ ಗ್ರಾಮದಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿದೆ.

ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದ ಮಾದೇವ ನಗರದಲ್ಲಿ ದುರಂತ ಘಟನೆ ಸಂಭವಿಸಿದೆ. ಒಬ್ಬ ಬಾಲಕ ಹಾಗೂ ಇಬ್ಬರು ಬಾಲಕಿಯರು ಕೃಷಿ ಹೊಂಡದಲ್ಲಿ ಜಾರಿ ಬಿದ್ದು ಮೃತಪಟ್ಟಿದ್ದಾರೆ. ಮೃತರು ಶಿವಮ್ಮ ರಾಜೂ ರಾಠೋಡ್ (8 ವರ್ಷ), ಕಾರ್ತಿಕ್ ವಿಶ್ವಾ ರಾಠೋಡ್ (7 ವರ್ಷ) ಮತ್ತು ಸ್ವಪ್ನಾ ರಾಜೂ ರಾಠೋಡ್ (12 ವರ್ಷ), ಮೃತ ದುರ್ದೈವಿ ಮಕ್ಕಳು. ಮೃತ ಮಕ್ಕಳೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದ್ದು, ರಾಜೂ ರಾಠೋಡ್‌ರ ಎಂಬುವವರ ಮಕ್ಕಳಾಗಿದ್ದಾರೆ.

ಕುರಿಗಳೊಂದಿಗೆ ಆಟವಾಡುತ್ತಾ ಕೃಷಿ ಹೊಂಡಕ್ಕೆ ಬಿದ್ದ ಮಕ್ಕಳು:

ಸಂಜೆ ಮಕ್ಕಳು ಕುರಿಗಳೊಂದಿಗೆ ಆಟವಾಡುತ್ತಾ ಕೃಷಿ ಹೊಂಡದ ಬಳಿ ತೆರಳಿದ್ದರು. ಆಟದ ವೇಳೆ ಕಾಲು ಜಾರಿ ಆಯಾತಪ್ಪಿ ಮೂವರು ಒಟ್ಟಿಗೆ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಮೇಲೆ ಬರಲಾಗದೆ, ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನೆಯ ಸುದ್ದಿ ತಿಳಿದು ಆಘಾತಗೊಂಡ ಕುಟುಂಬಸ್ಥರು, ಮಕ್ಕಳ ಮೃತದೇಹ ಕಂಡು ಪೋಷಕರ ಅಕ್ರಂದನ ಮುಗಿಲುಮುಟ್ಟಿದೆ.

ಸ್ಥಳಕ್ಕೆ ವಿಜಯಪುರ ತಹಸೀಲ್ದಾರ್, ಪೊಲೀಸರು ಭೇಟಿ:

ಸ್ಥಳಕ್ಕೆ ವಿಜಯಪುರ ತಹಶಿಲ್ದಾರ್ ಚೆನಗೊಂಡ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದ ಈ ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ, ಸ್ಥಳ ಪರಿಶೀಲನೆ ನಡೆಸಿದರು. ಈ ದುರಂತವು ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಸುರಕ್ಷತೆಗೆ ಎಚ್ಚರಿಕೆ ನೀಡಿದೆ.