ಹೂವಿನಹಡಗಲಿಯಲ್ಲಿ ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವ ಗಣತಿದಾರರು ತಾಂತ್ರಿಕ ದೋಷಗಳಿಂದ ಹೈರಾಣಾಗಿದ್ದಾರೆ. ಜೆಸ್ಕಾಂ ಆರ್‌ಆರ್‌ ಸಂಖ್ಯೆ ಆಧಾರಿತ ಯುಎಚ್‌ಐಡಿ ಲೊಕೇಷನ್‌ ದಕ್ಷಿಣ ಆಫ್ರಿಕಾ, ಗುಜರಾತ್‌ನಂತಹ ಅಸಂಬದ್ಧ ಸ್ಥಳಗಳನ್ನು ತೋರಿಸುತ್ತಿದೆ

ಹೂವಿನಹಡಗಲಿ (ಸೆ.26): ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಹತ್ತಾರು ಸಮಸ್ಯೆಗಳು ಎದುರಾಗಿವೆ. ಜೆಸ್ಕಾಂ ಆರ್‌ಆರ್‌ ಸಂಖ್ಯೆ ಆಧಾರದ ಮೇಲೆ ರಚಿಸಿದ ಯುಎಚ್‌ಐಡಿ ಲೋಕೇಷನ್‌, ಸಮೀಕ್ಷೆ ಕೈಗೊಂಡಿರುವ ಸಿಬ್ಬಂದಿಯನ್ನು ದಕ್ಷಿಣ ಆಫ್ರಿಕಾ ಮತ್ತು ಗುಜರಾತ್‌ಗೆ ಕರೆದುಕೊಂಡು ಹೋಗುತ್ತದೆ. ಅವರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಹೀಗಾದರೆ, ನಾವು ಹೇಗೆ ಕೆಲಸ ಮಾಡಬೇಕು ಎಂಬುದು ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಗಣತಿದಾರರ ಅಳಲು.

ಹೀಗಾಗಿ, ಈ ಸಮಸ್ಯೆ ಬಗೆಹರಿಸುವಂತೆ ಗಣತಿದಾರರು ತಹಸೀಲ್ದಾರ್‌ ಜಿ. ಸಂತೋಷ ಕುಮಾರ್‌ ಗೆ ಮನವಿ ಸಲ್ಲಿಸಿದ್ದಾರೆ. ಮನೆಯ ಆರ್‌ಆರ್‌ ನಂಬರ್‌ ಆಧಾರದ ಮೇಲೆ ಜೆಸ್ಕಾಂ ರಚಿಸಿರುವ ಯುಎಚ್‌ಐಡಿ ಲೋಕೋಷನ್‌ ಹಾಕಿದರೆ ದಕ್ಷಿಣ ಆಫ್ರಿಕಾ ತೋರಿಸುತ್ತದೆ. ಉಳಿದಂತೆ 13 ಮನೆಗಳ ಲೊಕೇಷನ್‌ ಗುಜರಾತ್‌ಗೆ ಕರೆದುಕೊಂಡು ಹೋಗುತ್ತದೆ. ಕೆಲವು ಗ್ರಾಮಗಳಲ್ಲಿ ಲೋಕೇಷನ್‌ ಸ್ಮಶಾನ, ನದಿ, ಹಳ್ಳ ತೋರಿಸುತ್ತದೆ. ಸಮಸ್ಯೆ ಹೀಗಿರುವಾಗ ಸಮೀಕ್ಷೆ ಮಾಡಲು ಸಿಬ್ಬಂದಿ ಸುತ್ತಿ, ಸುತ್ತಿ ರೋಸಿ ಹೋಗಿದ್ದಾರೆ.

ಇದನ್ನೂ ಓದಿ: Caste survey: ಜಾತಿ ಕೇಳುವಂತಿಲ್ಲ.. ಸಮೀಕ್ಷೆಗೆ ಬಂದವರನ್ನ ವಾಪಸ್ ಕಳಿಸಿದ ವ್ಯಕ್ತಿ!

ಶಾಲೆಗಳು ರಜೆ ಇರುವ ಹಿನ್ನೆಲೆಯಲ್ಲಿ ಮನೆಯ ಮಾಲೀಕರು ಸೇರಿದಂತೆ ಯಾರೂ ಮನೆಯಲ್ಲಿ ಇಲ್ಲ. ಇಂತಹ ಸಮಸ್ಯೆಗಳು ಹತ್ತಾರು ಇವೆ. ಇವುಗಳನ್ನು ಮೊದಲು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.