ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆ್ಯಪ್‌ನಲ್ಲಿನ ತಾಂತ್ರಿಕ ದೋಷಗಳು ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ. ಸಮೀಕ್ಷಾ ಸಿಬ್ಬಂದಿಗೆ ಸೂಕ್ತ ತರಬೇತಿ, ಫೋನ್, ಇಂಟರ್ನೆಟ್ ಸೌಲಭ್ಯ ಒದಗಿಸಲು ಮನವಿ
ಬೆಂಗಳೂರು (ಸೆ.26): ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಒದಗಿಸಿರುವ ಮೊಬೈಲ್ ಫೋನ್ ಆ್ಯಪ್‌ನಲ್ಲಿರುವ ದೋಷಗಳು ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಸರ್ಕಾರ ಸರಿಪಡಿಸಬೇಕು ಹಾಗೂ ಆ್ಯಪ್ ಅಳವಡಿಸಿರುವ ಫೋನ್, ಟ್ಯಾಬ್, ಇಂಟರ್ನೆಟ್ ಅನ್ನು ಸಮೀಕ್ಷೆ ನಡೆಸುವ ಸಿಬ್ಬಂದಿಗೆ ಒದಗಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.
ಈ ಕುರಿತು ಮನವಿ ಪತ್ರವನ್ನು ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ಮನವಿ ಪತ್ರ ಸಲ್ಲಿಸಿದ್ದಾರೆ.
ಅನೇಕ ಗಣತಿದಾರರಿಗೆ ಸ್ಮಾರ್ಟ್ ಫೋನ್ ಬಳಕೆ ಜ್ಞಾನವಿಲ್ಲ. ಸೂಕ್ತ ತರಬೇತಿಯನ್ನೂ ನೀಡಿಲ್ಲ. ಗ್ರಾಮಾಂತರ ಜೊತೆಗೆ ನಗರ ಪ್ರದೇಶ ಅನೇಕ ಕಡೆ ಮೊಬೈಲ್ ಇಂಟರ್ನೆಟ್ ಸಮಸ್ಯೆ ಇದೆ. ಮಾಹಿತಿ ಅಪ್‌ಲೋಡ್ ಮಾಡಿದ ನಂತರ ದೃಢೀಕರಣಕ್ಕೆ ಮನೆ ಮಾಲೀಕರು ಒಟಿಪಿ ನೀಡುವಲ್ಲಿಯೂ ಸಮಸ್ಯೆ ಇದೆ. ಆಧಾರ್ ಒಟಿಪಿ, ಹೊಸ ಸದಸ್ಯರ ಸೇರ್ಪಡೆ, ಕೈಬಿಡಲು ಆ್ಯಪ್‌ನಲ್ಲಿ ಆಯ್ಕೆಗಳನ್ನು ನೀಡಿಲ್ಲ ಎಂದು ಸಂಘ ತಿಳಿಸಿದೆ.
ಇದನ್ನೂ ಓದಿ: ಜಾತಿ ಸಮೀಕ್ಷೆಯಲ್ಲಿ ಯಾವುದೇ ಗೊಂದಲ ಇಲ್ಲ, ಸರಿಯಾದ ಮಾಹಿತಿ ನೀಡಬೇಕು: ಡಿ.ಕೆ.ಶಿವಕುಮಾರ್
ಮಾಹಿತಿ ಅಪ್‌ಲೋಡ್ ಮಾಡಿದ ಎಷ್ಟೋ ತಾಸುಗಳಾದರೂ ಮಾಹಿತಿ ಪೂರ್ಣಗೊಂಡಿರುವ ದೃಢೀಕರಣವನ್ನು ತೋರಿಸುತ್ತಿಲ್ಲ. ನೀಡಿರುವ ಮನೆಗಳ ವಿಳಾಸ ಪತ್ತೆ ಹಚ್ಚುವುದೇ ಸವಾಲಿನದ್ದಾಗಿದ್ದು, ನಿಗದಿತ ಅವಧಿಯಲ್ಲಿ 150 ಮನೆಗಳ ಸಮೀಕ್ಷೆ ಮಾಡಲು ಸಾಧ್ಯವಾಗುವುದಿಲ್ಲ. ಸಮೀಕ್ಷೆದಾರರಿಗೆ ನಿಂದನೆ, ಹಲ್ಲೆ ಘಟನೆಗಳು ನಡೆದರೆ ಸೂಕ್ತ ಕಾನೂನು ಕ್ರಮದ ಎಚ್ಚರಿಕೆ ನೀಡಬೇಕು. ಸಮೀಕ್ಷೆ ನಡೆಸುತ್ತಿರುವ ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ, ತಾಂತ್ರಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಆದೇಶಗಳನ್ನು ಕಲ್ಪಿಸುವಂತೆ ಪತ್ರದಲ್ಲಿ ಸಿ.ಎಸ್. ಷಡಕ್ಷರಿ ಕೋರಿದ್ದಾರೆ.
