ಧರ್ಮಸ್ಥಳ ಮತ್ತು ಚಾಮುಂಡಿ ಬೆಟ್ಟದ ಕುರಿತು ಡಿಕೆ ಶಿವಕುಮಾರ್ ಹೇಳಿಕೆಗೆ ಕೇಂದ್ರ ಸಚಿವ ವಿ. ಸೋಮಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಹೇಳಿಕೆಯನ್ನು ಅಕ್ಷಮ್ಯ ಅಪರಾಧ ಎಂದು ಕರೆದ ಸೋಮಣ್ಣ, ಧಾರ್ಮಿಕ ವಿಚಾರಗಳನ್ನು ರಾಜಕೀಯಗೊಳಿಸಬಾರದು ಎಂದು ಹೇಳಿದ್ದಾರೆ.
ಬೆಂಗಳೂರು (ಆ.28): ಧರ್ಮಸ್ಥಳ ವಿಚಾರದಲ್ಲಿ ನಾವೆಂದೂ ರಾಜಕೀಯ ಮಾಡಿಲ್ಲ. ಅದು ಹಿಂದೂಗಳ ನಂಬಿಕೆ, ಸಂಸ್ಕಾರ ಮತ್ತು ಆಚರಣೆಗಳಿಗೆ ಸಂಬಂಧಿಸಿದ ಪವಿತ್ರ ಸ್ಥಳವಾಗಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ತಿಳಿಸಿದರು.
ಧರ್ಮಸ್ಥಳ ಹಾಗೂ ಚಾಮುಂಡಿಬೆಟ್ಟ ಕುರಿತಾದ ವಿವಾದ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ತಾವೇ ತೋಡಿದ ಗುಂಡಿಯಲ್ಲಿ ಬಿದ್ದು, ತಾವೇ ಮುಚ್ಚಲಾಗದ ಪರಿಸ್ಥತಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಾಮುಂಡಿ ಬೆಟ್ಟ ಹಿಂದುಗಳದ್ದಲ್ಲ ಎಂದ ಡಿಕೆಶಿಗೆ ತಿರುಗೇಟು:
ಚಾಮುಂಡಿಬೆಟ್ಟ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಯಾರೋ ಹೇಳಿದ ಮಾತಿಗೆ ದಾರಿ ತಪ್ಪಿಸುತ್ತಿದ್ದಾರೆ. ಸಾವಿರ ಸುಳ್ಳು ಹೇಳಿದರೂ ಅದು ಸತ್ಯವಾಗದು. ಡಿಕೆಶಿ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಚಾಮುಂಡಿಬೆಟ್ಟ ಹಿಂದೂಗಳ ಆಸ್ತಿ ಮಾತ್ರವಲ್ಲ ಎಂದು ಹೇಳಿರುವುದು ಸರಿಯಲ್ಲ. ನಾವು ಮಸೀದಿಗೆ ಚರ್ಚ್‌ಗೆ ಹೋಗುತ್ತೇವೆ, ಆದರೆ ಅವುಗಳನ್ನು ನಮ್ಮದು ಎಂದರೆ ಅವರು ಒಪ್ಪಿಕೊಳ್ಳುತ್ತಾರೆಯೇ? ಧರ್ಮಸ್ಥಳದ ಬಗ್ಗೆ ಮಾತನಾಡಿದಾಗ ಭಗವಂತನ ಶಕ್ತಿಯಿಂದ ಇವರು ಈ ದೇಶದಲ್ಲಿರುವಿರಿ ಎಂದು ಭಾವಿಸಿದ್ದೆ, ಆದರೆ ಚಾಮುಂಡೇಶ್ವರಿ ವಿಚಾರದಲ್ಲಿ ಅವರ ಹೇಳಿಕೆ ತಪ್ಪಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: 'ಮೈಸೂರು ದಸರಾ ಸರ್ಕಾರಿ ಕಾರ್‍ಯಕ್ರಮ..', ಬಾನು ಮುಷ್ತಾಕ್ ವಿರೋಧಕ್ಕೆ ಹರಿಪ್ರಸಾದ್ ಆಕ್ಷೇಪ
ನಿಸಾರ್ ಅಹಮದ್ ಭುವನೇಶ್ವರಿಯನ್ನ ತಾಯಿಯಂತೆ ಕಂಡಿದ್ದರು:
ನಿಸಾರ್ ಅಹಮದ್ ಅವರಿಂದ ಉದ್ಘಾಟನೆ ಮಾಡಿಸಿದ್ದೇವೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸೋಮಣ್ಣ, ನಿಸಾರ್ ಅಹಮದ್ ಕನ್ನಡ ಭುವನೇಶ್ವರಿದೇವಿಯನ್ನ ತಾಯಿಯ ರೀತಿಯಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ, ಇದನ್ನು ರಾಜಕೀಯಗೊಳಿಸುವ ಅಗತ್ಯವಿಲ್ಲ. ನಾವು ನಮ್ಮ ಧರ್ಮಕ್ಕೆ ಸಣ್ಣ ಅಪಚಾರವಾದಾಗ ಅದನ್ನು ಸರಿಪಡಿಸಿಕೊಂಡಿದ್ದೇವೆ. ಸರ್ಕಾರ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ತಿಣುಕಾಡುತ್ತಿದೆ ಎಂದು ತಿರುಗೇಟು ನೀಡಿದರು.
ಧರ್ಮಸ್ಥಳ, ಚಾಮುಂಡಿ ಬೆಟ್ಟ ಕುರಿತಾದ ಹೇಳಿಕೆಗಳು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.
