ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನು ಬಿಜೆಪಿ ನಿರಂತರವಾಗಿ ವಿರೋಧಿಸುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ. 

ಬೆಳಗಾವಿ (ಆ.27): ಕಾಂಗ್ರೆಸ್‌ ಸರ್ಕಾರ ಎಷ್ಟೇ ಮಹತ್ವದ ಕೆಲಸಗಳನ್ನು ಮಾಡಿದರೂ ಬಿಜೆಪಿಯವರು ವಿರೋಧಿಸುವುದು ಸ್ವಾಭಾವಿಕ. ಇನ್ನೂ ಎರಡೂವರೇ ವರ್ಷಗಳ ಕಾಲ ಆರೋಪ, ವಿರೋಧಿಸುವುದು ಬಿಟ್ಟರೆ ಬಿಜೆಪಿಯವರಿಗೆ ಬೇರೆ ಯಾವುದೇ ಕೆಲಸವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರು ಹೋರಾಟಗಾರ್ತಿ. ಇವರು ನಾಡಹಬ್ಬ ದಸರಾ ಉದ್ಘಾಟನೆ ಮಾಡುತ್ತಿರುವುದು ಒಳ್ಳೆಯ ವಿಚಾರ. ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ದಸರಾ ಉದ್ಘಾಟನೆಗೆ ಸರ್ಕಾರ ಆಹ್ವಾನ ನೀಡಿದೆ. ಆದರೆ ಇದರಲ್ಲಿ ರಾಜಕಾರಣ ಅಥವಾ ಧರ್ಮ ಬೆರೆಸುವುದು ಸರಿಯಲ್ಲ ಎಂದರು.

ಅನೇಕ ಜಿಲ್ಲೆಗಳಲ್ಲಿ ಗಣೇಶೋತ್ಸವ ನಿಮಿತ್ತ ಜಿಲ್ಲಾಡಳಿತದಿಂದ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಅದರಂತೆಯೇ ಭಕ್ತರಿಗಾಗಿ ಜಿಲ್ಲಾಧಿಕಾರಿ ಪ್ರಸಾದ ವ್ಯವಸ್ಥೆ ಮಾಡಿದ್ದಾರಷ್ಟೇ. ಒಳ್ಳೆಯ ಕಾರ್ಯ ಮಾಡಬೇಕಾದರೆ ಯಾರಿಗೂ ಹೆದರುವ ಅಗತ್ಯವಿಲ್ಲ. ಗಣೇಶೋತ್ಸವಕ್ಕೆ ಬೇಕಾದ ತಯಾರಿ ಪಾಲಿಕೆಯಿಂದ ಮಾಡಬೇಕು. ಜಿಲ್ಲಾಧಿಕಾರಿ, ಪೊಲೀಸ್‌ ಆಯುಕ್ತರು ಗಣೇಶೋತ್ಸವಕ್ಕೆ ಸಹಕಾರ ನೀಡುತ್ತಾರೆ. ಯಾವುದೇ ಸಮಸ್ಯೆ ಆಗುವುದಿಲ್ಲ, ಪ್ರತಿ ವರ್ಷವೂ ಅಚ್ಚುಕಟ್ಟಾಗಿ ಬೆಳಗಾವಿಯಲ್ಲಿ ನಡೆಯುತ್ತದೆ ಎಂದು ತಿಳಿಸಿದರು.

ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಿದೆ. ವೈದ್ಯರ ನೇಮಕ ಸೇರಿದಂತೆ ಉಳಿದ ಕೆಲಸಗಳನ್ನು ಹಂತ-ಹಂತವಾಗಿ ಮಾಡಿ, ಸಾರ್ವಜನಕರಿಗೆ ಅನುಕೂಲ ಕಲ್ಪಿಸಲಾಗುವುದು. ಮುಂಬರುವ ತಿಂಗಳು ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡವನ್ನು ಮುಖ್ಯಮುಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದರು.

ಹೈಕೋರ್ಟ್‌ ಆದೇಶದ ಮೇರೆಗೆ ಧರ್ಮಸ್ಥಳ ಪ್ರಕರಣದ ಕುರಿತು ತನಿಖೆಗೆ ಎಸ್ಐಟಿ ರಚಿಸಲಾಗಿದೆ. ಈ ಪ್ರಕರಣ ತನಿಖೆ ಹಂತದಲ್ಲಿದೆ. ಈ ಪ್ರಕರಣದಲ್ಲಿ ಕಾಂಗ್ರೆಸ್‌ ಪಕ್ಷದ ಯಾವುದೇ ಪಾತ್ರವೇನೂ ಇಲ್ಲ ಎಂದ ಅವರು, ವಿಧಾನಸೌಧದಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ ಮೇಲೆ ಕ್ರಮ ಕೈಗೊಳ್ಳುವುದು ಅಂತಿಮವಾಗಿ ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು. ಇದು ಡಿ.ಕೆ.ಶಿವಕುಮಾರ ಅವರ ವೈಯಕ್ತಿಕ ವಿಚಾರ. ಈ ಕುರಿತು ಅವರೇ ಸ್ಪಷ್ಟನೆ ನೀಡಬೇಕು ಎಂದರು.

ರೈತರ ಹಿತದೃಷ್ಟಿಯಿಂದ ಬಿಡಿಸಿಸಿ ಬ್ಯಾಂಕ್‌ ಹಾಗೂ ಹುಕ್ಕೇರಿ ವಿದ್ಯುತ್‌ ಸಹಕಾರಿ ಸಂಘದ ಚುನಾವಣೆ ಎದುರಿಸುತ್ತಿದ್ದೇವೆ ಹೊರತು ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಇನ್ನು ಗೋಕಾಕನಲ್ಲಿ ಇಂಜಿನಿಯರಿಂಗ್‌ ಕಾಲೇಜು ಪ್ರಾರಂಭವಾಗುವ ಮೂಲಕ ಗೋಕಾಕ ಸುತ್ತಲಿನ 6-7 ತಾಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಶೀಘ್ರವೇ ಸಿಬ್ಬಂದಿ ನೇಮಕವಾಗಲಿದ್ದು, ಇಂಜಿನಿಯರಿಂಗ್‌ ವಿಭಾಗದ ಮೂರು ವಿಷಯಗಳ ಕಲಿಕೆಗೆ ಸರ್ಕಾರ ಅನುಮತಿ ನೀಡಿದೆ. ಸೈಬರ್‌ ಸೆಕ್ರೆಟರಿ, ಆರ್ಟಿಫಿಶಿಯಲ್ ಇಂಟಲಿಜೆನ್ಸ್‌, ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ ವಿಷಯ ಕಲಿಕೆ ಪ್ರಾರಂಭಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್‌ ಹಣಮನ್ನವರ್‌, ಬೆಳಗಾವಿ ಗ್ರಾಮೀಣ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಬಸವರಾಜ ಶೇಗಾವಿ, ಸಿದ್ದಿಕಿ ಅಂಕಲಗಿ ಮೊದಲಾದವರು ಉಪಸ್ಥಿತರಿದ್ದರು.