ಕಟ್ಮಂಡುವಿನಲ್ಲಿ ಹಿಂಸಾಚಾರದಿಂದಾಗಿ 50 ಕರ್ನಾಟಕ ಪ್ರವಾಸಿಗರು ಸಿಲುಕಿಕೊಂಡಿದ್ದರು. ಪಶುಪತಿನಾಥ ದೇವಸ್ಥಾನದ ಬಳಿ ಗಲಾಟೆ ನಡೆದಿದ್ದು, ಪ್ರವಾಸಿಗರು ಹೋಟೆಲ್‌ನಲ್ಲಿ ಆಶ್ರಯ ಪಡೆದಿದ್ದರು. ಈಗ ಪರಿಸ್ಥಿತಿ ಸುಧಾರಿಸಿದ್ದು, ಪ್ರವಾಸಿಗರು ತಮ್ಮ ಪ್ರಯಾಣ ಮುಂದುವರೆಸಲಿದ್ದಾರೆ.

ಕಟ್ಮಂಡು (ಸೆ.11) ಬೆಂಗಳೂರಿನಿಂದ ಸೆಪ್ಟೆಂಬರ್ 1 ರಂದು 13 ದಿನಗಳ ಧಾರ್ಮಿಕ ಪ್ರವಾಸಕ್ಕೆ ತೆರಳಿದ್ದ ಕರ್ನಾಟಕದ 50 ಜನ ಪ್ರವಾಸಿಗರು, ರಾಮನಗರದ ನಾಲ್ವರು ಸೇರಿದಂತೆ, ನೇಪಾಳದ ಕಟ್ಮಂಡುವಿನ ಪ್ರೈಮ್ ಶೂಟ್ ಹೋಟೆಲ್‌ನಲ್ಲಿ ಸಿಲುಕಿದ್ದಾರೆ.

ಇಂದು ಕಟ್ಮಂಡುವಿನಿಂದ ಜನಕ್‌ಪುರದ ಡಿಯೊಗರ್ ವಿಮಾನ ನಿಲ್ದಾಣಕ್ಕೆ ಪಯಣಿಸಲಿರುವ ಈ ಪ್ರವಾಸಿಗರು, ನೇಪಾಳದಲ್ಲಿ ಉಂಟಾಗಿರುವ ಹಿಂಸಾಚಾರದಿಂದ ಆತಂಕಕ್ಕೆ ಒಳಗಾಗಿದ್ದ ಕನ್ನಡಿಗರು. ಬೆಂಗಳೂರಿನ ವಿಮಾನ ನಿಲ್ದಾಣದಿಂದ ಪ್ರವಾಸ ಆರಂಭಿಸಿದ್ದ ಕನ್ನಡಿಗರು, ವಾರಣಾಸಿ, ಆಯೋದ್ಯೆಯನ್ನು ಭೇಟಿ ಬಳಿಕ ನೇಪಾಳದ ಸೋನಾಲಿ ಗಡಿಯನ್ನು ತಲುಪಿದ್ದರು. 

ನೇಪಾಳದಲ್ಲಿ ಸಿಲುಕಿದ ಕನ್ನಡಿಗರು ಆತಂಕ:

ಸೆಪ್ಟೆಂಬರ್ 8 ರಂದು ಪೊಕ್ರಾದಿಂದ ಕಟ್ಮಂಡು ಕಡೆಗೆ ಪಯಣಿಸಿ, ಮನೋಕಾಮನಾ ದೇವಿಯ ದರ್ಶನ ಪಡೆದಿದ್ದರು. ಆದರೆ, ಸೆಪ್ಟೆಂಬರ್ 9 ರಂದು ಬೆಳಗ್ಗೆ 11 ಗಂಟೆಗೆ ಕಟ್ಮಂಡುವಿನ ಪಶುಪತಿನಾಥ ದೇವಸ್ಥಾನದ ದರ್ಶನ ಮುಗಿಸಿ ಹೊರಬರುವಾಗ ಸ್ಥಳೀಯ ಗಲಾಟೆ ಹಿಂಸಾಚಾರ ಭುಗಿಲೆದ್ದಿತ್ತು.. ಅಲ್ಲಿಂದ ಬೇರೆಡೆ ತಲುಪಲಾಗದೇ ಹೋಟೆಲ್‌ನಲ್ಲಿ ಆತಂಕದಲ್ಲಿ ವಾಸ್ತವ್ಯ ಮಾಡಿದ್ದರು.

 ಸದ್ಯ ಕಟ್ಮಂಡುವಿನ ಪ್ರೈಮ್ ಶೂಟ್ ಹೋಟೆಲ್‌ನಲ್ಲಿ ಸುರಕ್ಷಿತವಾಗಿ ವಾಸ್ತವ್ಯ ಹೂಡಿದ್ದಾರೆ. ಪರಿಸ್ಥಿತಿ ಈಗ ಸುಧಾರಿಸಿದ್ದು, ಪ್ರವಾಸಿಗರು ತಮ್ಮ ಪಯಣವನ್ನು ಮುಂದುವರಿಸಲು ಸಿದ್ಧರಾಗಿದ್ದಾರೆ. ಈ ಘಟನೆಯಿಂದ ಕರ್ನಾಟಕದ ಪ್ರವಾಸಿಗರಲ್ಲಿ ಆತಂಕ ಮೂಡಿದ್ದರೂ, ಸ್ಥಳೀಯ ಆಡಳಿತದಿಂದ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ನೇಪಾಳ ಹಿಂಸಾಚಾರಕ್ಕೆ ಕಾರಣವೇನು?

ನೇಪಾಳದಲ್ಲಿ ಸರ್ಕಾರವು 26 ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಹೇರಿದ್ದು, ರಾಜಕೀಯ ಭಿನ್ನಾಭಿಪ್ರಾಯವನ್ನು ಮೊಡಚಲು ಯತ್ನಿಸಿದೆ ಎಂಬ ಆರೋಪದಿಂದ ತೀವ್ರ ರಾಜಕೀಯ ಕಲಹ ಉಂಟಾಯಿತು. ಇದು ಜನರೇಷನ್ ಝೆಡ್‌ನಿಂದ ಮುನ್ನಡೆಸಲ್ಪಟ್ಟ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಯಿತು, ಇದರಲ್ಲಿ ಭ್ರಷ್ಟಾಚಾರ, ಆರ್ಥಿಕ ಸಮಸ್ಯೆಗಳು, ಮತ್ತು ಯುವಜನರ ನಿರುದ್ಯೋಗದಂತಹ ದೀರ್ಘಕಾಲದ ಸಮಸ್ಯೆಗಳ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಪ್ರತಿಭಟನೆಗಳು ಕಟ್ಮಂಡುವಿನಲ್ಲಿ ಹಿಂಸಾತ್ಮಕವಾಗಿ ಬದಲಾಗಿ, ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಲಾಯಿತು ಮತ್ತು ಕನಿಷ್ಠ 19 ಜನರು ಮೃತಪಟ್ಟರು, ಇದರಿಂದಾಗಿ ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದರು