ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಕನ್ನಡಿಗರು ಸರ್ಕಾರದ ಸೂಚನೆ ಪಾಲಿಸುವಂತೆ ಸಲಹೆ ನೀಡಿದ್ದಾರೆ.
ಕೋಲಾರ(ಸೆ.10): ನನ್ನನ್ನು ಒಬ್ಬರು ಸಂಪರ್ಕಿಸಿದ್ದರು, ನಾನು ಅವರೊಂದಿಗೆ ಮಾತನಾಡಿದ್ದೇನೆ. ಒಂದೆರಡು ದಿನಗಳಲ್ಲಿ ಅಲ್ಲಿನ ವಾತಾವರಣ ತಿಳಿಯಾಗಲಿದೆ. ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರು ಎಲ್ಲಿದ್ದಾರೋ ಅವರು ಜಾಗೃತರಾಗಿರುವುದು ಒಳಿತು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ನೇಪಾಳದಲ್ಲಿ ಕನ್ನಡಿಗರು ಸಿಲುಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೋಲಾರದ ನಾರಾಯಣಿ ಕನ್ವೆನ್ಷನಲ್ ಹಾಲ್‌ನಲ್ಲಿ ಪ್ರತಿಕ್ರಿಯಿಸಿದ ಸಚಿವರು. ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರು ಅಲ್ಲಿನ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಸಲಹೆ ನೀಡಿದರು. ಸದ್ಯಕ್ಕೆ ಅಲ್ಲಿನ ವಾತಾವರಣ ಬಹಳ ಭೀತಿ ಹುಟ್ಟಿಸುವಂತಿದೆ. ಇದು ರೆಸ್ಕ್ಯೂ ಕಾರ್ಯಾಚರಣೆ ಅಲ್ಲ, ದೇಶದ ಒಳಗಡೆ ಉಂಟಾಗಿರೊ ಆಂತರಿಕ ಗಲಭೆಯಾಗಿದೆ. ಹೀಗಾಗಿ ಅಲ್ಲಿನ ಸಮಸ್ಯೆ ತಿಳಿಯಾಗುವವರೆಗೂ ನಾವೂ ಕಾಯಲೇಬೇಕು. ರಾಜ್ಯ ಸರ್ಕಾರ ಸೂಚಿಸಿದರೆ, ನೇಪಾಳಕ್ಕೆ ತೆರಳಲು ಸಿದ್ಧನಿರುವುದಾಗಿಯೂ ಸಚಿವರು ತಿಳಿಸಿದರು.
ದಸರಾ ಉದ್ಘಾಟನೆ ವಿವಾದಕ್ಕೆ ಲಾಡ್ ತಿರುಗೇಟು:
ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ಟಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಸಚಿವ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಬೆಳಗ್ಗೆಯಿಂದ ಸಂಜೆವರೆಗೂ ಜಾತಿಪದ್ಧತಿ ಬಗ್ಗೆಯೇ ಬಗ್ಗೆಯೇ ಚರ್ಚೆಯಾಗುತ್ತಿದೆ. ಕಾನೂನಿನಲ್ಲಿ, ಸಂವಿಧಾನದಲ್ಲಿ ಇದಕ್ಕೆ ಅವಕಾಶವಿದೆ. ಪ್ರತಾಪ್ ಸಿಂಹ ವಿರೋಧ ಮಾಡುವುದಾದರೆ ಮಾಡಲಿ. ಹೊಸ ಪಾರ್ಲಿಮೆಂಟ್ ಭವನ ಉದ್ಘಾಟನೆ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಏಕೆ ಕಡೆಗಣಿಸಿದಿರಿ? ಎಸ್ಸಿ, ಎಸ್ಟಿ ಎಂದೋ? ಅಥವಾ ವಿಧವೆ ಎಂದೋ? ಅವರನ್ನು ಆಹ್ವಾನಿಸಲಿಲ್ಲವೇಕೆ? ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರ ಬಾನು ಮುಷ್ಟಾಕ್ ಅವರನ್ನು ಆಹ್ವಾನಿಸಿದೆ. ಇದು ರಾಜ್ಯದ ಪ್ರೊಟೊಕಾಲ್‌ನ ಭಾಗವಾಗಿದೆ. ರಾಷ್ಟ್ರಪತಿಗೆ ಪ್ರೊಟೊಕಾಲ್ ಇದ್ದರೂ, ಬಿಜೆಪಿ ಸರ್ಕಾರ ಅವರನ್ನು ಪಾರ್ಲಿಮೆಂಟ್ ಉದ್ಘಾಟನೆಗೆ ಕರೆಯಲಿಲ್ಲ ಏಕೆ? ಎಂದು ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆ.
