ಬೆಳಗಾವಿಯಲ್ಲಿ ಬಾಲ್ಯ ವಿವಾಹ, ತುಮಕೂರಿನಲ್ಲಿ ಸ್ವಾಮೀಜಿಗಳ ಭೇಟಿ, ಮೈಸೂರಿನಲ್ಲಿ ಎಂಜಿನ್ ಆಯಿಲ್ ಕುಡಿಯುವ ವ್ಯಕ್ತಿ, ಚುನಾವಣಾ ಮೀಸಲಾತಿಯ ಕೋರ್ಟ್ ಸೂಚನೆ ಹಾಗೂ ಪಾಲಕ್ಕಾಡಿನಲ್ಲಿ ಶಿಶು ಸಾವು – ಒಂದೇ ದಿನದಲ್ಲಿ ನಡೆದ ಐದು ವಿಚಿತ್ರ ಘಟನೆಗಳ ಸಂಕ್ಷಿಪ್ತ ವರದಿ.
ಬೆಳಗಾವಿ(ಆ.31): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ತವರು ಜಿಲ್ಲೆ ಬೆಳಗಾವಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ, ಸಚಿವ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯಲ್ಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಶಿ ಕಾಲಿಮಣಿ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ವಿವಾಹವಾದ ಆರೋಪದ ಮೇಲೆ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. 2023ರ ನವೆಂಬರ್ 5ರಂದು ಭೀಮಶಿ ಕಾಲಿಮಣಿ ಈ ಕೃತ್ಯವೆಸಗಿದ್ದು, ವಿವಾಹದ ವೇಳೆ ಬಾಲಕಿಯ ವಯಸ್ಸು ಕೇವಲ 15 ವರ್ಷವಾಗಿತ್ತು. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಯಮಕನಮರಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
2. ಕೆಎನ್ ರಾಜಣ್ಣ ಭೇಟಿಗೆ ಮುಂದಾದ 15ಕ್ಕೂ ಹೆಚ್ಚು ಮಠಾಧೀಶರು!
ಕೆಎನ್ ರಾಜಣ್ಣ ಅವರ ಸಚಿವ ಸ್ಥಾನದಿಂದ ವಜಾದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ 15ಕ್ಕೂ ಹೆಚ್ಚು ವಿವಿಧ ಮಠಗಳ ಸ್ವಾಮೀಜಿಗಳು ತುಮಕೂರಿನ ಕ್ಯಾತಸಂದ್ರದಲ್ಲಿರುವ ಅವರ ಮನೆಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ಮೂಲಕ 'ನಾವು ನಿಮ್ಮೊಂದಿಗೆ ಇದ್ದೇವೆ' ಎಂಬ ಸಂದೇಶವನ್ನು ಸ್ವಾಮೀಜಿಗಳು ರಾಜಣ್ಣ ಅವರಿಗೆ ಸೂಚಿಸಲಿದ್ದಾರೆ. ಕೆ.ಎನ್. ರಾಜಣ್ಣ ಅವರಿಗೆ ಸಚಿವ ಸ್ಥಾನವನ್ನು ಮರಳಿ ನೀಡಬೇಕೆಂದು ಹೈಕಮಾಂಡ್ ನಾಯಕರ ಮನವೊಲಿಕೆಗೆ ಸ್ವಾಮೀಜಿಗಳು ಮುಂದಾಗಿದ್ದಾರೆ. ಈ ಭೇಟಿಯ ನಂತರ ಸ್ವಾಮೀಜಿಗಳು ಸುದ್ದಿಗೋಷ್ಠಿಯನ್ನು ಆಯೋಜಿಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿದ್ದಾರೆ.
3.29 ವರ್ಷಗಳಿಂದ ಎಂಜಿನ್ ಆಯಿಲ್ ಕುಡಿದು ಬದುಕುವ ಅಯ್ಯಪ್ಪ ಭಕ್ತ! ವೈದ್ಯಲೋಕಕ್ಕೇ ಸವಾಲಾದ ಮೈಸೂರಿನ ವ್ಯಕ್ತಿ ಯಾರು?
ಕುರುಕಲು ತಿಂಡಿ ಪ್ರಿಯರನ್ನು ನೋಡಿರುತ್ತೀರಿ, ಹೆಚ್ಚು ತಿನ್ನುವ ತಿಂಡಿಪೋತರನ್ನು ಕಂಡಿರುತ್ತೀರಿ. ಆದರೆ, ಇಲ್ಲೋರ್ವ ಹಣ್ಣಿನ ರಸದಂತೆ ಎಂಜಿನ್ ಆಯಿಲ್ ಕುಡಿದು ಎಲ್ಲರನ್ನೂ ಅಚ್ಚರಿಗೆ ಒಳಗಾಗುವಂತೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ಮೈಸೂರಿನ ಕುಮಾರ್ ಎಂಬ ಅಯ್ಯಪ್ಪಸ್ವಾಮಿ ಭಕ್ತ ಕೊಳ್ಳೇಗಾಲದ ಮೂಲಕ ಶಬರಿಮಲೆ ಯಾತ್ರೆಗೆ ತೆರಳುವಾಗ ಕೊಳ್ಳೇಗಾಲದಲ್ಲಿ ಹಣ್ಣಿನ ರಸದಂತೆ ಎಂಜಿನ್ ಆಯಿಲ್ ಅನ್ನು ಗಟಗಟನೇ ಕುಡಿದು ಅಚ್ಚರಿ ಮೂಡಿಸಿದ್ದಾರೆ.
4.ಸ್ಥಳೀಯ ಸಂಸ್ಥೆ ಚುನಾವಣೆ : ಅವಧಿಯೊಳಗೆ ಮೀಸಲು ಪಟ್ಟಿ ಪ್ರಕಟಣೆಗೆ ಕೋರ್ಟ್ ಸೂಚನೆ
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ನಿಗದಿತ ಅವಧಿಯೊಳಗೆ ಪ್ರಕಟಿಸದಿದ್ದರೆ ಹಾಲಿ ರೋಸ್ಟರ್ ಪ್ರಕಾರವೇ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಎಚ್ಚರಿಸಿದೆ. ಶಿವಮೊಗ್ಗ, ತುಮಕೂರು, ದಾವಣಗೆರೆ, ಮೈಸೂರು ಮತ್ತು ಮಂಗಳೂರು ಮಹಾನಗರ ಪಾಲಿಕೆ, ಅತ್ತಿಬೆಲೆ, ಬೊಮ್ಮಸಂದ್ರ, ಕಮಲಾಪುರ ನಗರಸಭೆ ಸೇರಿ ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯ ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಲು ನಿರ್ದೇಶಿಸಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ಪೀಠ ನಡೆಸಿತು.
5.ಗಂಟಲಿನಲ್ಲಿ ಎದೆಹಾಲು ಸಿಲುಕಿ 4 ತಿಂಗಳ ಮಗು ಸಾವು: ಅಮ್ಮನ ಮಡಿಲಿನಲ್ಲಿಯೇ ಪ್ರಾಣಬಿಟ್ಟ ಕಂದಮ್ಮ
ಪಾಲಕ್ಕಾಡ್: ಪಾಲಕ್ಕಾಡ್‌ನ ಮೀನಾಕ್ಷಿಪುರಂನಲ್ಲಿ (Meenakshipural, Palakkad) ಹಾಲು ಉಸಿರುಗಟ್ಟಿ ಶಿಶು (4 Month Old Baby) ಸಾವನ್ನಪ್ಪಿದೆ. ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದ ನಾಲ್ಕು ತಿಂಗಳ ಮಗು ಗಂಟಲಿನಲ್ಲಿ ಹಾಲು ಸಿಲುಕಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ವರದಿಯಯಾಗಿದೆ. ಮೀನಾಕ್ಷಿಪುರಂ ಸರ್ಕಾರಿ ಆದಿವಾಸಿ ವಸತಿಗೃಹದಲ್ಲಿ ವಾಸಿಸುತ್ತಿದ್ದ ಪಾರ್ಥಿಪನ್-ಸಂಗೀತ ದಂಪತಿಯ 4 ತಿಂಗಳ ಮಗಳು ಕನಿಷ್ಕಾ ಮೃತಪಟ್ಟಿದ್ದಾಳೆ.
