ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ನಿಗದಿತ ಅವಧಿಯೊಳಗೆ ಪ್ರಕಟಿಸದಿದ್ದರೆ ಹಾಲಿ ರೋಸ್ಟರ್‌ ಪ್ರಕಾರವೇ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಎಚ್ಚರಿಸಿದೆ.

 ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ನಿಗದಿತ ಅವಧಿಯೊಳಗೆ ಪ್ರಕಟಿಸದಿದ್ದರೆ ಹಾಲಿ ರೋಸ್ಟರ್‌ ಪ್ರಕಾರವೇ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಎಚ್ಚರಿಸಿದೆ.

ಶಿವಮೊಗ್ಗ, ತುಮಕೂರು, ದಾವಣಗೆರೆ, ಮೈಸೂರು ಮತ್ತು ಮಂಗಳೂರು ಮಹಾನಗರ ಪಾಲಿಕೆ, ಅತ್ತಿಬೆಲೆ, ಬೊಮ್ಮಸಂದ್ರ, ಕಮಲಾಪುರ ನಗರಸಭೆ ಸೇರಿ

ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯ ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಲು ನಿರ್ದೇಶಿಸಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರಿದ್ದ ಏಕಸದಸ್ಯ ಪೀಠ ನಡೆಸಿತು.

ಶಿವಮೊಗ್ಗ, ಮೈಸೂರು ಸೇರಿ ಹಲವು ನಗರ ಸ್ಥಳೀಯ ಸಂಸ್ಥೆಗಳ ಅವಧಿ 2023ರಲ್ಲೇ ಮುಗಿದಿದೆ. ಅನೇಕ ಮನವಿಗಳಿಗೆ ಸರ್ಕಾರ ಪ್ರತಿಕ್ರಿಯೆ ನೀಡಿಲ್ಲ. ಇದು ಸಾಂವಿಧಾನಿಕ ಆಶಯ ಮತ್ತು ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರತಿನಿಧಿಸಿದ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ ಹೈಕೋರ್ಟ್‌ಗೆ ತಿಳಿಸಿದರು.

ಆಗ ಪೀಠವು ರಾಜ್ಯ ಸರ್ಕಾರದ ಪರ ವಕೀಲರನ್ನು ಉದ್ದೇಶಿಸಿ, ಚುನಾವಣೆ ನಡೆಯಬೇಕಲ್ಲವೇ? ನಿಮ್ಮದೇ ಸರ್ಕಾರವಿದೆ. ಅವಧಿ ಮುಗಿಯುವುದರೊಳಗೆ ಮೀಸಲಾತಿ ಸೇರಿ ಎಲ್ಲವನ್ನೂ ಪೂರ್ಣಗೊಳಿಸಬೇಕು. ಅಂಥದ್ದರಲ್ಲಿ ಅವಧಿ ಮುಗಿದು 2 ವರ್ಷಗಳಾದರೂ ಚುನಾವಣೆ ನಡೆಸದಿದ್ದರೆ ಹೇಗೆ? ನಿರ್ದಿಷ್ಟ ದಿನಾಂಕದಲ್ಲಿ ಮೀಸಲಾತಿ ಪ್ರಕಟಿಸಲು ಮುಂದಾಗದಿದ್ದರೆ ಹಾಲಿ ರೋಸ್ಟರ್‌ ಪ್ರಕಾರವೇ ಚುನಾವಣೆ ನಡೆಸಲು ಆಯೋಗಕ್ಕೆ ನಿರ್ದೇಶಿಸಲಾಗುವುದು. ಚುನಾವಣೆ ವಿಳಂಬವು ಸಾಂವಿಧಾನಿಕ ಆಡಳಿತ ಕುಸಿತಕ್ಕೆ ಸಮನಾಗುತ್ತದೆ. ಇದಕ್ಕೆ ಸುಪ್ರೀಂ ಕೋರ್ಟ್‌ ಉಲ್ಲೇಖ ಬೇಕೇ? ಎಂದು ನ್ಯಾಯಪೀಠ ಚಾಟಿ ಬೀಸಿತು.

ಸರ್ಕಾರದ ಪರ ವಕೀಲರ ಕೋರಿಕೆಯ ಮೇರೆಗೆ ಮತ್ತೆ 11 ದಿನಗಳ ಕಾಲಾವಕಾಶ ನೀಡಿದ ಹೈಕೋರ್ಟ್ ವಿಚಾರಣೆಯನ್ನು ಸೆ.11ಕ್ಕೆ ಮುಂದೂಡಿತು.