ಧರ್ಮಸ್ಥಳದ ಮೂಳೆ ರಹಸ್ಯ ಭೇದಿಸಲು ವಿದೇಶಿ ತಂತ್ರಜ್ಞಾನ ಬಳಕೆ?, ಮಾವಳ್ಳಿ ಕ್ರಾಸ್ ಬಳಿ ಭೀಕರ ಬಸ್ ಅಪಘಾತ, ಚಂದ್ರಶೇಖರನಾಥ ಸ್ವಾಮೀಜಿ ವಿಧಿವಶ, ರೋಶನ್ ಸಲ್ಡಾನ್ಹಾ ಕೇಸ್ ಸಿಐಡಿಗೆ ಹಸ್ತಾಂತರ ಸೇರಿದಂತೆ ಇಂದಿನ 5 ಪ್ರಮುಖ ಸುದ್ದಿಗಳು.
ಇಂದಿನ ಪ್ರಮುಖ ಸುದ್ದಿಗಳು: ಇಂದು ರಾಜ್ಯದಲ್ಲಿನ ಪ್ರಮುಖ 5 ಸುದ್ದಿಗಳ ಮಾಹಿತಿ ಇಲ್ಲಿದೆ. ಮಾವಳ್ಳಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇತ್ತ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ವಿಧಿವಶರಾಗಿದ್ದಾರೆ. ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ರೋಶನ್ ಸಲ್ಡಾನ್ಹಾ ವಿರುದ್ಧದ ನಾಲ್ಕು ಪ್ರಕರಣಗಳನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ
1.ಧರ್ಮಸ್ಥಳ ಗ್ರಾಮ: ಮೂಳೆ ರಹಸ್ಯ ಭೇದಿಸಲು ವಿದೇಶಿ ಟೆಕ್ನಾಲಜಿ ಬಳಕೆ?
ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಅನಧಿಕೃತವಾಗಿ ಹೂತಿಟ್ಟಿರುವ ಆರೋಪದ ಮೇರೆಗೆ ನಡೆಸಿದ ಗುಂಡಿ ಅಗೆಯುವ ಕಾರ್ಯಾಚರಣೆ ವೇಳೆ ಪತ್ತೆಯಾದ ಅಪರಿಚಿತ ವ್ಯಕ್ತಿಯ ಮೂಳೆಗಳ ‘ರಹಸ್ಯ’ ಭೇದಿಸಲು ವಿದೇಶಿ ಮಾದರಿಯ ಮೂರು ಮಹತ್ವದ ವೈಜ್ಞಾನಿಕ ಪರೀಕ್ಷೆಗೊಳಪಡಿಸಲು ವಿಶೇಷ ತನಿಖಾ ತಂಡ (ಎಸ್ಐಟಿ) ಚಿಂತನೆ ನಡೆಸಿದೆ. ಇವು ಅಸ್ಪಾರ್ಟಿಕ್ ಅಮಿನೋ ಆ್ಯಸಿಡ್ ರೆಸಮೈಜಸನ್, ಇನ್ಫ್ರಾರೆಡ್ ಸ್ಪೆಕ್ಟ್ರೋಸ್ಕೋಫಿ ಹಾಗೂ ರಾಮನ್ ಸ್ಪೆಕ್ಟ್ರೋಸ್ಕೋಫಿ ಪರೀಕ್ಷೆಗಳಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಅಪರಾಧ ಪ್ರಕರಣ ಸಂಬಂಧ ಈ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
2.ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ವಿಧಿವಶ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ(Chandrashekaranatha Swamiji) (75) ಅವರು ತಡರಾತ್ರಿ 12:01ರ ಸುಮಾರಿಗೆ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಕೆಂಗೇರಿಯಲ್ಲಿ ಶ್ರೀಮಠವನ್ನು ಸ್ಥಾಪಿಸಿ, ಶಿಕ್ಷಣ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದ ಸ್ವಾಮೀಜಿಯವರ ನಿಧನಕ್ಕೆ ಭಕ್ತರು ಮತ್ತು ಧಾರ್ಮಿಕ ಮುಖಂಡರು ಕಂಬನಿ ಮಿಡಿದಿದ್ದಾರೆ.
3.ನಾಟ್ ರಿಚೇಬಲ್ ಆದ ‘ದಿ ಡೆವಿಲ್’ ಡೈರೆಕ್ಟರ್; ದರ್ಶನ್ ಅರೆಸ್ಟ್ ಆದ್ಮೇಲೆ ಏನಾಗ್ತಿದೆ ಗೊತ್ತಾ?
ದರ್ಶನ್ ನಟನೆಯಲ್ಲಿ ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿ ಮೊಟ್ಟಮೊದಲ ಹಾಡನ್ನು ಬಿಡುಗಡೆ ಮಾಡುವ ಸಂಭ್ರಮದಲ್ಲಿ ಇತ್ತು ದಿ ಡೆವಿಲ್ (The Devil) ಚಿತ್ರತಂಡ. ಆಗಸ್ಟ್ 15ಕ್ಕೆ ಸಾಂಗ್ ಲಾಂಚ್ ಕೂಡ ಫಿಕ್ಸ್ ಆಗಿತ್ತು. ಆದರೆ, ನಟ ದರ್ಶನ್ ಬೇಲ್ ರದ್ದಾಗಿ ಮತ್ತೆ ಜೈಲು ಸೇರಿರುವ ಕಾರಣಕ್ಕೆ ಸಿನಿಮಾ ತಂಡ ಸಾಂಗ್ ಲಾಂಚ್ ಮುಂದಕ್ಕೆ ಹಾಕಿದೆ. ಅಷ್ಟೇ ಅಲ್ಲ, ಮತ್ತೊಂದು ಬೆಳವಣಿಗೆ ಕೂಡ ನಡೆದಿದೆ. ಅದು 'ದಿ ಡೆವಿಲ್' ನಿರ್ದೇಶಕ ಪ್ರಕಾಶ್ ವೀರ್ (ಮಿಲನಾ ಪ್ರಕಾಶ್) ನಾಟ್ ರೀಚೆಬಲ್ ಅಗುವಂತೆ ಮಾಡಿದೆಯಂತೆ!
4.ಮಾವಳ್ಳಿ ಕ್ರಾಸ್ ಬಳಿ ಭೀಕರ ಬಸ್ ಅಪಘಾತ: ಬಾಗಲಕೋಟೆಯ ಮೂವರ ದುರ್ಮರಣ, 7 ಜನ ಗಂಭೀರ
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್ (Mavalli Cross) ಬಳಿ ಭೀಕರ ಅಪಘಾತ (Bus Accident) ಸಂಭವಿಸಿದ್ದು, ಮೂವರು ಮೃತರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಏಳು ಜನರನ್ನು ಹುಬ್ಬಳ್ಳಿ ಆಸ್ಪತ್ರೆಗೆ (KIMS, Hubballi) ರವಾನಿಸಲಾಗಿದೆ. ಮೃತದೇಹಗಳನ್ನು ಯಲ್ಲಾಪುರ (Yellapur, Uttar Kannada) ಆಸ್ಪತ್ರೆಗೆ ಶವಾಗರಕ್ಕೆ ಶಿಫ್ಟ್ ಮಾಡಲಾಗಿದೆ. KA-19-F-3470 ಸಂಖ್ಯೆಯ ಸಾರಿಗೆ ಬಸ್ ಬಾಗಲಕೋಟೆಯಿಂದ ಮಂಗಳೂರಿಗೆ ತೆರಳುತ್ತಿತ್ತು. ಈ ವೇಳೆ ರಸ್ತೆಬದಿ ಪಾರ್ಕ್ ಮಾಡಿದ್ದ ಕೇರಳ ಮೂಲದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಒಂದು ಬದಿ ಸಂಪೂರ್ಣ ನಜ್ಜುಗುಜ್ಜಾಗಿದೆ.
5.ರಾಜ್ಯವೇ ದಂಗಾಗಿದ್ದ ಬಹುಕೋಟಿ ವಂಚಕ ಮಂಗಳೂರಿನ ರೋಶನ್ ಕೇಸ್ ಸಿಐಡಿಗೆ ಹಸ್ತಾಂತರ
ಬಹುಕೋಟಿ ರುಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ಮಂಗಳೂರಿನ ಬಜಾಲ್ ಬೊಲ್ಲಗುಡ್ಡೆ ನಿವಾಸಿ ರೋಶನ್ ಸಲ್ಡಾನ್ಹಾ (43) ವಿರುದ್ಧ ದಾಖಲಾಗಿರುವ ನಾಲ್ಕು ಪ್ರಕರಣಗಳು ಸಿಐಡಿಗೆ ಹಸ್ತಾಂತರಗೊಂಡಿದೆ. ಈ ಪ್ರಕರಣಗಳ ಮುಂದಿನ ತನಿಖೆಯನ್ನು ಸಿಐಡಿ ಅಧಿಕಾರಿಗಳು ಮಾಡಲಿದ್ದಾರೆ. ಬಿಹಾರ ಉದ್ಯಮಿಯೊಬ್ಬರಿಗೆ ರೋಶನ್ 10 ಕೋಟಿ.ರು. ಮೋಸ ಮಾಡಿದ ಪ್ರಕರಣ ಸೇರಿ ಮಂಗಳೂರಿನ ಸೆನ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣ ಮತ್ತು ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿರುವ ಮುಂಬೈ ಮೂಲದ ಉದ್ಯಮಿಗೆ 5 ಕೋ.ರು. ಪಡೆದು ವಂಚನೆ ಪ್ರಕರಣ, ಬೆಂಗಳೂರು ಮೂಲದ ಮಹಿಳೆಯೊಬ್ಬರಿಗೆ14.74 ಲಕ್ಷ ರು. ವಂಚನೆ ಎರಡು ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸಲಿದೆ.
