ಕಲಬುರಗಿಯ ಚಿತ್ತಾಪುರದಲ್ಲಿ ನ. 2 ರಂದು RSS ಪಥಸಂಚಲನ ನಡೆಸಲು ಮುಂದಾಗಿದ್ದು, ಅದೇ ದಿನ 'ಭಾರತೀಯ ದಲಿತ ಪ್ಯಾಂಥರ್ಸ್' ಸಂಘಟನೆಯೂ ಪಥಸಂಚಲನಕ್ಕೆ ಅನುಮತಿ ಕೋರಿದೆ. ಇದು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಆತಂಕವನ್ನು ಸೃಷ್ಟಿಸಿದ್ದು, ಜಿಲ್ಲಾಡಳಿತವು ಹೈಕೋರ್ಟ್ ನಿರ್ದೇಶನಕ್ಕಾಗಿ ಕಾಯುತ್ತಿದೆ.
ಕಲಬುರಗಿ (ಅ.22): ಕಲಬುರಗಿಯ ಚಿತ್ತಾಪುರದಲ್ಲಿ ನವೆಂಬರ್ 2 ರಂದು ನಡೆಯಬೇಕಿರುವ ಆರ್‌ಎಸ್‌ಎಸ್ ಪಥಸಂಚಲನ ವಿಚಾರ ಮತ್ತೆ ದೊಡ್ಡ ಗೊಂದಲದ ಗೂಡಾಗುವ ಲಕ್ಷಣಗಳು ಗೋಚರಿಸುತ್ತಿವೆ. ಆರ್‌ಎಸ್‌ಎಸ್ ಮನವಿ ಸಲ್ಲಿಸಿದ ಬೆನ್ನಲ್ಲೇ, ಅದೇ ದಿನವೇ ಪಥಸಂಚಲನ ನಡೆಸಲು 'ಭಾರತೀಯ ದಲಿತ ಪ್ಯಾಂಥರ್ಸ್' ಸಂಘಟನೆಯು ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಅಧಿಕೃತವಾಗಿ ಮನವಿ ಸಲ್ಲಿಸಿರುವುದು ರಾಜಕೀಯ ಮತ್ತು ಕಾನೂನು ಸಂಘರ್ಷದ ವಾತಾವರಣವನ್ನು ಸೃಷ್ಟಿಸಿದೆ.
ದಲಿತ ಪ್ಯಾಂಥರ್ಸ್‌ನಿಂದ ಸಮಾನ ಪಥಸಂಚಲನಕ್ಕೆ ಬೇಡಿಕೆ:
ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ನವೆಂಬರ್ 2 ರಂದೇ ಚಿತ್ತಾಪುರದಲ್ಲಿ ತಾವು ಸಹ ಪಥಸಂಚಲನ ನಡೆಸಲು ನಿರ್ಧರಿಸಿರುವುದಾಗಿ ಭಾರತೀಯ ದಲಿತ ಪ್ಯಾಂಥರ್ಸ್ ಸಂಘಟನೆ ತಿಳಿಸಿದೆ. ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ಅವರು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ದಲಿತ ಪ್ಯಾಂಥರ್ಸ್‌ನ ಈ ಪಥಸಂಚಲನವು ಸಂವಿಧಾನದ ಪೀಠಿಕೆಯನ್ನು ಪ್ರದರ್ಶಿಸುವುದು, ಲಾಠಿ ಹಿಡಿದು ಸಜ್ಜಾಗಿರುವುದು ಹಾಗೂ ನೀಲಿ ಶಾಲು ಧರಿಸಿ ನಡೆಯುವುದು ಎಂದು ನಿರ್ಧಾರ ಕೈಗೊಂಡಿರುವುದು ಗಮನಾರ್ಹ.
ಜಿಲ್ಲಾಡಳಿತಕ್ಕೆ ಎಚ್ಚರಿಕೆ:
ಈ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ ಮಲ್ಲಪ್ಪ ಹೊಸಮನಿ, 'ಪಥಸಂಚಲನಕ್ಕೆ ಆರ್‌ಎಸ್‌ಎಸ್‌ಗೆ ಅನುಮತಿ ಕೊಟ್ಟು, ನಮಗೆ ಅನುಮತಿ ಕೊಡಲಿಲ್ಲವೆಂದರೆ ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದಕ್ಕೂ ಮುನ್ನ, ಆರ್‌ಎಸ್‌ಎಸ್ ಮನವಿ ಸಲ್ಲಿಸಿದ ಕೆಲವೇ ಕ್ಷಣಗಳಲ್ಲಿ 'ಭೀಮ್ ಆರ್ಮಿ' ಸಂಘಟನೆಯೂ ಸಹ ಪಥಸಂಚಲನಕ್ಕೆ ಅನುಮತಿ ಕೋರಿ ಮನವಿ ಸಲ್ಲಿಸಿತ್ತು. ಈಗ 'ದಲಿತ ಪ್ಯಾಂಥರ್ಸ್' ಕೂಡ ಇದೇ ರೀತಿಯ ಬೇಡಿಕೆ ಇಟ್ಟಿರುವುದರಿಂದ, ನವೆಂಬರ್ 2 ರಂದು ಒಂದೇ ಸ್ಥಳದಲ್ಲಿ ಎರಡು ವಿಭಿನ್ನ ಗುಂಪುಗಳಿಂದ ಪಥಸಂಚಲನ ನಡೆದರೆ ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂಬ ಆತಂಕ ಎದುರಾಗಿದೆ.
ನ್ಯಾಯಾಲಯದ ಆದೇಶದತ್ತ ಗಮನ:
ಈ ಮೊದಲೇ ಹೈಕೋರ್ಟ್ ಈ ವಿಚಾರದ ಕುರಿತು ಕೆಲವು ನಿರ್ದೇಶನಗಳನ್ನು ನೀಡಿದ್ದು, ಅನುಮತಿ ನೀಡುವ ಬಗ್ಗೆ ಜಿಲ್ಲಾಡಳಿತಕ್ಕೆ ಅಧಿಕಾರ ನೀಡಿದೆ. ಹೀಗಾಗಿ, ನವೆಂಬರ್ 24 ರಂದು ಕಲಬುರಗಿಯಲ್ಲಿ ನಡೆಯಲಿರುವ ಹೈಕೋರ್ಟ್ ವಿಚಾರಣೆಯತ್ತ ಜಿಲ್ಲಾಡಳಿತದ ಚಿತ್ತ ನೆಟ್ಟಿದೆ. ಜಿಲ್ಲಾಡಳಿತವು ಶಾಂತಿ ಕಾಪಾಡಲು ಯಾವ ಸಂಘಟನೆಗಳಿಗೆ ಅವಕಾಶ ನೀಡುತ್ತದೆ ಮತ್ತು ಯಾರ ಮನವಿ ತಿರಸ್ಕರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
