RSS ಚಟುವಟಿಕೆ ನಿಷೇಧಕ್ಕೆ ಹೊರಟ ಸರ್ಕಾರಕ್ಕೆ ಹಿನ್ನಡೆ, ರಾಜ್ಯ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಸರ್ಕಾರಿ ಶಾಲೆ, ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ಟಾರ್ಗೆಟ್ ಮಾಡಿ ನಿಷೇಧ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಲಾಗಿದೆ.

ಧಾರಾವಾಡ (ಅ.28) ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಆರ್‌ಎಸ್‌ಎಸ್ ಹಾಗೂ ಸರ್ಕಾರ ನಡುವಿನ ಸಂಘರ್ಷ ಹೆಚ್ಚಾಗಿದೆ. ಆರ್‌ಎಸ್‌ಎಸ್ ಪಥಸಂಚಲನಕ್ಕೆ ಕೆಲವೆಡೆ ಅನುಮತಿ ನಿರಾಕರಿಸಿದರೆ, ಇತ್ತ ಸಚಿವ ಪ್ರಿಯಾಂಕ ಖರ್ಗೆ ಬರೆದ ಪತ್ರದ ಆಧಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ಆದೇಶ ನೀಡಿತ್ತು. ಆರ್‌ಎಸ್‌ಎಸ್ ಚಟುವಟಿಕೆ ಟಾರ್ಗೆಟ್ ಮಾಡಿ ಆದೇಶವೊಂದನ್ನು ಹೊರಡಿಸಲಾಗಿತ್ತು. ಸರ್ಕಾರಿ ಶಾಲೆ ಹಾಗೂ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳ ಕಾರ್ಯಕ್ರಮ, ಚಟುವಟಿಕೆ ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಈ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ಮಧ್ಯಂತರ ತಡೆ ನೀಡಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ.

ರಾಜ್ಯ ಸರ್ಕಾರಕ್ಕೆ ​ಧಾರವಾಡ ಹೈಕೋರ್ಟ್ ಪೀಠದಿಂದ ನೋಟಿಸ್

ಸರ್ಕಾರ ಹೊರಡಿಸಿದ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಧಾರವಾಡ ಹೈಕೋರ್ಟ್ ಪೀಠ ನೋಟಿಸ್ ನೀಡಿದೆ. ಹುಬ್ಬಳ್ಳಿಯ ಪುನಶ್ಚೇತನ ಸೇವಾ ಸಂಸ್ಥೆ ಹೈಕೋರ್ಟ್‌ಗೆ ಸರ್ಕಾರದ ಆದೇಶದ ವಿರುದ್ದ ರಿಟ್ ಅರ್ಜಿ ಸಲ್ಲಿಸಿತ್ತು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಸಂವಿಧಾನ ನೀಡಿರುವ ಹಕ್ಕನ್ನು ಸರ್ಕಾರಿ ಆದೇಶ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇಂಥಾ ಆದೇಶ ಕಾನೂನಿನ ಮೂಲಕ ಬರಬೇಕು.. ಸರ್ಕಾರಿ ಆದೇಶದಿಂದಲ್ಲ ಎಂದು ಧಾರವಾಡ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ರೀತಿಯ ಸರ್ಕಾರಿ ಆದೇಶ ಜಾರಿಗೆ ತರುವುದನ್ನು ಕೋರ್ಟ್ ಅನುಮತಿಸುವುದಿಲ್ಲ. ಸರ್ಕಾರದ ಈ ಆದೇಶ ಸಂವಿಧಾನದ ಹಲವು ವಿಧಿಗಳನ್ನು ಉಲ್ಲಂಘಿಸುತ್ತಿದೆ. ಹೀಗಾಗಿ ಸರ್ಕಾರದ ಆದೇಶಕ್ಕೆ ಮಧ್ಯಮಂತ್ರ ತಡೆ ನೀಡಿದ ಹೈಕೋರ್ಟ್, ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿದೆ.

ಅರ್ಜಿದಾರರ ವಕೀರಲ ವಾದವೇನು?

ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ, ಸಂಘಟನೆಗಳ ಕಾರ್ಯಚಟುವಟಿಕೆ ನಿಷೇಧಿಸುವ ಆದೇಶದಲ್ಲಿ ಅನುಮತಿ ಇಲ್ಲದೆ 10 ಜನ ಸೇರಿದರೆ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಸಂವಿಧಾನದತ್ತವಾದ ಮೂಲಭೂತ ಹಕ್ಕಿಗೆ ನಿರ್ಬಂಧ ವಿಧಿಸಲಾಗಿದೆ. ಸಂವಿಧಾನಿಕ ಹಕ್ಕನ್ನು ಸರ್ಕಾರ ಕಿತ್ತುಕೊಳ್ಳಲಾಗದು ಎಂದು ವಾದಿಸಿದ್ದಾರೆ. ರಸ್ತೆ, ಪಾರ್ಕ್, ಮೈದಾನ, ಕೆರೆ ಇತ್ಯಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ. ಪಾರ್ಕಿನಲ್ಲಿ ನಗೆಕೂಟ ಮಾಡಿದ್ರೂ ಸರ್ಕಾರದ ಪ್ರಕಾರ ಅಕ್ರಮ ಕೂಟ ಎಂದು ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದ್ದರು.

ಸರ್ಕಾರ ಬೇರೆ ಏನನ್ನೋ ಸಾಧಿಸಲು ಹೊರಟಿದೆಯಾ?

ಅರ್ಜಿದಾರರ ಪರ ವಾದನ ಮಂದನೆಯಲ್ಲಿ ಹೈಕೋರ್ಟ್ ಕೆಲ ಪ್ರಶ್ನೆಗಳನ್ನು ಎತ್ತಿದೆ. ಸರ್ಕಾರ ಬೇರೆ ಏನನ್ನೋ ಸಾಧಿಸಲು ಬಯಸಿದ್ಯಾ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಈ ಆದೇಶ ಹೊರಡಿಸಿದ್ದು ಯಾರು ಎಂದು ನ್ಯಾಯಮೂರ್ತಿ ಪ್ರಶ್ನಿಸಿದ್ದಾರೆ. ಇತ್ತ ವಾದ ಮುಂದುವರಿಸಿದ ಅರ್ಜಿದಾರರ ಪರ ವಕೀಲ ಆಶೋಕ್ ಹಾರನಹಳ್ಳಿ, ಕ್ಯಾಬಿನೆಟ್ ಈ ಆದೇಶ ಹೊರಡಿಸಿದೆ.ಸರ್ಕಾರ ಶಾಲಾ ಕಾಲೇಜು, ಉದ್ಯಾನವನ ಮತ್ತು ಇತರ ಕಡೆ ಸಾರ್ವಜನಿಕರು ಬಳಸಲು ಇದೆ. ಈ ವೇಳೆ ವಾದ ಮಂಡಿಸಲು 1 ದಿನ ಕಾಲಾವಕಾಶ ನೀಡಬೇಕು ಎಂದು ಸರ್ಕಾರಿ ಪರ ವಕೀಲರು ಮನವಿ ಸಲ್ಲಿಸಿದರು. ಇದೇ ವೇಳೆ ಸರ್ಕಾರದ ಪರ ವಕೀಲರಿಗೆ ನಾಳೆ ತಕರಾರು ಸಲ್ಲಿಸಲು ಸೂಚನೆ ನೀಡಿತು.ಇತ್ತ ಕೋರ್ಟ್ ಮಧ್ಯಮಂತರ ತಡೆ ನೀಡಿ ವಿಚಾರಣೆ ನವೆಂಬರ್ 17ಕ್ಕೆ ಮುಂದೂಡಿದೆ.