ಸ್ವಿಜರ್ಲೆಂಡ್‌ನ ಮಾರ್ಟಿನ್, ಆನೆಗೊಂದಿಯಲ್ಲಿ ಮುಸ್ಲಿಂ ಮಾಲೀಕತ್ವದ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ, ಸ್ಥಳೀಯರೊಂದಿಗೆ ಹಬ್ಬ ಆಚರಿಸಿದ್ದಾರೆ. ಸ್ಥಳೀಯರ ಸಹಕಾರದಿಂದ ಎಲ್ಲಾ ಸಮಸ್ಯೆಗಳು ದೂರವಾಗಿ ಸಂತೋಷವಾಗಿದ್ದೇನೆ ಎಂದು ಮಾರ್ಟಿನ್ ಹೇಳಿದ್ದಾರೆ.

ಕೊಪ್ಪಳ (ಆ.28): ಗಣೇಶೋತ್ಸವದ ಸಂಭ್ರಮದ ನಡುವೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಒಂದು ಅಪರೂಪದ ಮತ್ತು ಹೃದಯಸ್ಪರ್ಶಿ ಘಟನೆ ಎಲ್ಲರ ಗಮನ ಸೆಳೆದಿದೆ. ಸ್ವಿಜರ್ಲೆಂಡ್ ಮೂಲದ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಮಾರ್ಟಿನ್ ಎಂಬ ಪ್ರವಾಸಿಗ, ಮುಸ್ಲಿಂ ಮಾಲೀಕತ್ವದ ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿ, ಸ್ಥಳೀಯರೊಂದಿಗೆ ಗಣೇಶ ಹಬ್ಬವನ್ನು ಆಚರಿಸಿ ಎಲ್ಲರ ಮನ ಗೆದ್ದಿದ್ದಾರೆ.

ಹೌದು, ಕಳೆದ ಒಂದು ವರ್ಷದಿಂದ ಆನೆಗೊಂದಿಯಲ್ಲಿ ಮೆಹಬೂಬ್ ದಸ್ತಗಿರಿ ಎಂಬುವವರ ಮನೆಯನ್ನು ಬಾಡಿಗೆಗೆ ಪಡೆದು ವಾಸವಾಗಿರುವ ಮಾರ್ಟಿನ್, ಹಿಂದೂ ಧರ್ಮದ ಮೇಲೆ ಗಾಢವಾದ ನಂಬಿಕೆಯನ್ನು ಹೊಂದಿದ್ದಾರೆ. ಗಣೇಶೋತ್ಸವದ ಹಿನ್ನೆಲೆಯಲ್ಲಿ, ತಾವು ವಾಸವಾಗಿರುವ ಮನೆಯ ಎದುರು ಗಣೇಶನ ಪ್ರತಿಷ್ಠಾಪನೆ ಮಾಡಿ, ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ.

ಈ ಕಾರ್ಯಕ್ಕೆ ಸ್ಥಳೀಯರು ಸಾಥ್ ನೀಡಿದ್ದು, ಎಲ್ಲರೂ ಒಟ್ಟಾಗಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. 'ಗಣೇಶ ಹಬ್ಬವನ್ನು ಆಚರಿಸುತ್ತಿರುವುದು ನನಗೆ ಬಹಳ ಸಂತೋಷವಾಗುತ್ತಿದೆ. ಸ್ವಿಜರ್ಲೆಂಡಿನಿಂದ ಇಲ್ಲಿಗೆ ಬಂದಾಗ ಸಾಕಷ್ಟು ಸಮಸ್ಯೆಗಳು ಮತ್ತು ಅಡೆತಡೆಗಳನ್ನು ಎದುರಿಸಿದೆ. ಆದರೆ, ಸ್ಥಳೀಯರ ಸಹಕಾರ ಮತ್ತು ಸಹಾಯದಿಂದ ಈಗ ಎಲ್ಲ ಸಮಸ್ಯೆ ದೂರವಾಗಿದೆ, ನಾನೀಗ ಸಂತೋಷವಾಗಿದ್ದೇನೆ. ಇದಕ್ಕೆಲ್ಲ ಕಾರಣ ಗಣೇಶನ ಕೃಪೆ. ಹಾಗಾಗಿ, ಎಲ್ಲರೂ ಒಟ್ಟಾಗಿ ಈ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದು ಮಾರ್ಟಿನ್ ಭಾವುಕರಾಗಿ ಹೇಳಿದ್ದಾರೆ.

ಈ ಘಟನೆಯು ಧಾರ್ಮಿಕ ಸೌಹಾರ್ದತೆ ಮತ್ತು ಸಾಮರಸ್ಯದ ಸಂದೇಶವನ್ನು ಸಾರುವಂತೆ ಮಾಡಿದ್ದು, ಆನೆಗೊಂದಿಯ ಜನತೆಯಲ್ಲಿ ಒಗ್ಗಟ್ಟಿನ ಸಂಕೇತವಾಗಿದೆ.