ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ವಿವಿಯು ನವೆಂಬರ್ 7 ರಿಂದ 10, 2025 ರವರೆಗೆ ಬೃಹತ್ ಕೃಷಿ-ತೋಟಗಾರಿಕೆ ಮೇಳ ಆಯೋಜಿಸಿದೆ. 'ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ' ಎಂಬ ಧ್ಯೇಯದೊಂದಿಗೆ, ಈ ಮೇಳವು ರೈತರಿಗೆ ನೂತನ ತಂತ್ರಜ್ಞಾನ, ಸಮಗ್ರ ಕೃಷಿ ಪದ್ಧತಿಗಳು ಮತ್ತು ಮೌಲ್ಯವರ್ಧನೆಯ ಬಗ್ಗೆ ಮಾಹಿತಿ ನೀಡಲಿದೆ.
ಶಿವಮೊಗ್ಗ (ಅ.16): ಕೃಷಿ ಕ್ಷೇತ್ರದ ನೂತನ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳನ್ನು ರೈತ ಸಮುದಾಯಕ್ಕೆ ಪರಿಚಯಿಸುವ ಮಹತ್ವಾಕಾಂಕ್ಷೆಯೊಂದಿಗೆ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ (ಕೆ.ಶಿ.ನಾ.ಕೃ.ತೋ.ವಿ.ವಿ.), ಶಿವಮೊಗ್ಗವು, ಬೃಹತ್ ಕೃಷಿ-ತೋಟಗಾರಿಕೆ ಮೇಳವನ್ನು ಆಯೋಜಿಸಿದೆ. ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಈ ನಾಲ್ಕು ದಿನಗಳ ಮೇಳವು ದಿನಾಂಕ: 07-11-2025 ರಿಂದ 10-11-2025 ರವರೆಗೆ ಶಿವಮೊಗ್ಗದ ನವಿಲೆಯ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.
ಈ ವರ್ಷದ ಕೃಷಿ-ತೋಟಗಾರಿಕೆ ಮೇಳವನ್ನು 'ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ' ಎಂಬ ವಿಶೇಷ ಧೈಯ ವಾಕ್ಯದೊಂದಿಗೆ ಆಯೋಜಿಸಲಾಗುತ್ತಿದ್ದು, ಇದು ರೈತರು ಪರಸ್ಪರ ಸಹಕಾರದಿಂದ ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳುತ್ತದೆ.
ಮೇಳದ ಪ್ರಮುಖ ಉದ್ದೇಶ ಮತ್ತು ವಿಶೇಷತೆಗಳು:
ಆಯಾ ಪ್ರದೇಶದ ಕೃಷಿ, ಹವಮಾನ ಮತ್ತು ಬೆಳೆ ಪರಿಸರಕ್ಕನುಗುಣವಾಗಿ ಕೃಷಿ, ತೋಟಗಾರಿಕೆ, ಅರಣ್ಯ, ಪಶು ವಿಜ್ಞಾನ, ಮೀನುಗಾರಿಕೆ, ಮೌಲ್ಯವರ್ಧನೆ ಮತ್ತು ಕೌಶಲ್ಯಾಭಿವೃದ್ಧಿ ಮುಂತಾದ ವಿಷಯಗಳಲ್ಲಿ ಆಗಿರುವ ಹೊಸ ಆವಿಷ್ಕಾರಗಳನ್ನು ಮತ್ತು ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸುವುದು ಈ ಮೇಳದ ಮುಖ್ಯ ಉದ್ದೇಶವಾಗಿದೆ. ಇದರ ಜೊತೆಗೆ, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ರೈತರು ಹಾಗೂ ಗ್ರಾಮ ಸಮುದಾಯಕ್ಕೆ ತಲುಪಿಸುವ ಮೂಲಕ ಅವರ ಆರ್ಥಿಕ ಸಬಲೀಕರಣಕ್ಕೆ ನೆರವಾಗಲು ವಿವಿ ಉದ್ದೇಶಿಸಿದೆ.
2025ರ ಮೇಳದ ಪ್ರಮುಖ ಆಕರ್ಷಣೆಗಳು:
ಮೇಳದಲ್ಲಿ ರೈತರಿಗೆ ಮತ್ತು ಸಾರ್ವಜನಿಕರಿಗೆ ಪ್ರೇರಣೆ ನೀಡುವ ಹಲವು ವಿಶಿಷ್ಟ ವಿಭಾಗಗಳನ್ನು ತೆರೆಯಲಾಗುತ್ತಿದೆ. ಅವುಗಳಲ್ಲಿ ಪ್ರಮುಖವಾದವು:
ತಂತ್ರಜ್ಞಾನ ಉದ್ಯಾನವನ: ಇತ್ತೀಚಿನ ಕೃಷಿ ಯಂತ್ರೋಪಕರಣಗಳು ಮತ್ತು ತಾಂತ್ರಿಕತೆಗಳ ಪ್ರದರ್ಶನ.
ಸಮಗ್ರ ಕೃಷಿ ಪದ್ಧತಿ: ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನೆಯ ಸಮಗ್ರ ಮಾದರಿಗಳ ಪ್ರಾತ್ಯಕ್ಷಿಕೆ.
ಪುಷ್ಪ ಕೃಷಿ ಮತ್ತು ತಾರಸಿ ತೋಟ: ಆಧುನಿಕ ಹೂವಿನ ಕೃಷಿ ಮತ್ತು ನಗರ ಪ್ರದೇಶದವರಿಗೆ ತಾರಸಿ ತೋಟದ ಅಳವಡಿಕೆ ಕುರಿತು ಮಾಹಿತಿ.
ಸಿರಿಧಾನ್ಯಗಳ ಮೌಲ್ಯವರ್ಧನೆ ಮತ್ತು ತಾಂತ್ರಿಕತೆಗಳು: ಸಿರಿಧಾನ್ಯಗಳ ಮಹತ್ವ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕುರಿತು ವಿಭಾಗ.
ಗೋಡಂಬಿ ಬೆಳೆ ಪ್ರಾತ್ಯಕ್ಷಿಕೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ: ಗೋಡಂಬಿ ಕೃಷಿ ಮತ್ತು ಅದರ ಲಾಭದಾಯಕ ಮೌಲ್ಯವರ್ಧನೆಯ ಸಂಪೂರ್ಣ ಮಾಹಿತಿ.
ಪರಿಸರ ಕೃಷಿ ಪ್ರವಾಸೋದ್ಯಮ: ಕೃಷಿಯೊಂದಿಗೆ ಪ್ರವಾಸೋದ್ಯಮವನ್ನು ಸಂಯೋಜಿಸುವ ಹೊಸ ಪರಿಕಲ್ಪನೆ.
ಇತರೆ ವಿಭಾಗಗಳು: ಜೇನು ವನ ಮತ್ತು ಕೀಟ ಪ್ರಪಂಚ, ಸಾವಯವ ಕೃಷಿ, ಪಶುಪಾಲನೆ, ಕೊಲ್ಲೋತ್ತರ ತಾಂತ್ರಿಕತೆ ಹಾಗೂ ಕೃಷಿ ಪರಿಕರ ಮತ್ತು ಯಂತ್ರೋಪಕರಣಗಳ ಬೃಹತ್ ಪ್ರದರ್ಶನ.
ಸಂವಾದ ಮತ್ತು ಮಳಿಗೆಗಳ ಮಾಹಿತಿ:
ಈ ಬೃಹತ್ ಮೇಳದಲ್ಲಿ ಒಟ್ಟು 400 ಕ್ಕೂ ಹೆಚ್ಚು ಬೀಜ, ಸಸಿ ಮತ್ತು ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇರಲಿವೆ. ಇದರ ಜೊತೆಗೆ, ರೈತ ಸಮಾಲೋಚನೆ, ತಜ್ಞರೊಂದಿಗೆ ಸಂವಾದ ಹಾಗೂ ಪ್ರಮುಖ ತಾಂತ್ರಿಕ ಸಮಾವೇಶಗಳನ್ನು ಕೂಡ ಏರ್ಪಡಿಸಲಾಗುವುದು. ಈ ಮೂಲಕ ರೈತರಿಗೆ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮತ್ತು ಜ್ಞಾನ ವಿನಿಮಯಕ್ಕೆ ವೇದಿಕೆ ಒದಗಿಸಲಾಗುವುದು. ಕೃಷಿಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕೃಷಿ ಕ್ಷೇತ್ರದ ಹೊಸ ಮಾಹಿತಿಯನ್ನು ಪಡೆದುಕೊಂಡು ಮೇಳದ ಯಶಸ್ಸಿಗೆ ಪಾತ್ರರಾಗಬೇಕೆಂದು ವಿವಿಯ ಪ್ರಕಟಣೆಯಲ್ಲಿ ಕೋರಲಾಗಿದೆ.
ಮಳಿಗೆಗಳ ಕಾಯ್ದಿರಿಸಲು ಸಂಪರ್ಕಿಸಿ:
ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ಮಳಿಗೆಗಳನ್ನು ಕಾಯ್ದಿರಿಸಲು ಆಸಕ್ತರು ಈ ಕೆಳಗಿನವರನ್ನು ಸಂಪರ್ಕಿಸಬಹುದು:
1. ಡಾ. ಬಿ.ಸಿ. ಹನುಮಂತಸ್ವಾಮಿ, ಸಹ ವಿಸ್ತರಣಾ ನಿರ್ದೇಶಕರು (ಮೊಬೈಲ್: 9480838217)
2. ಡಾ. ಕಲ್ಲೇಶ್ವರ ಸ್ವಾಮಿ ಸಿ.ಎಂ., ಪ್ರಾಧ್ಯಾಪಕರು (ಮೊಬೈಲ್: 9449537578)
3. ಡಾ. ಗಿರೀಶ್ ಆರ್., ವಿಜ್ಞಾನಿ (ಮೊಬೈಲ್: 9739916660)
4. ಡಾ. ನಾಗರಾಜ್ ಆರ್., ಹಿರಿಯ ತಾಂತ್ರಿಕ ಅಧಿಕಾರಿ (ಮೊಬೈಲ್: 9353493824)
