- Home
- Karnataka Districts
- ಶಿವಮೊಗ್ಗ ಪ್ರೀತಿ ವಿರೋಧಕ್ಕೆ ಬೇಸತ್ತು ಕಾಲುವೆಗೆ ಹಾರಿದ ಪ್ರೇಮಿಗಳು; ಯುವತಿ ಸಾವು, ಯುವಕ ಬಚಾವ್!
ಶಿವಮೊಗ್ಗ ಪ್ರೀತಿ ವಿರೋಧಕ್ಕೆ ಬೇಸತ್ತು ಕಾಲುವೆಗೆ ಹಾರಿದ ಪ್ರೇಮಿಗಳು; ಯುವತಿ ಸಾವು, ಯುವಕ ಬಚಾವ್!
ಪ್ರೀತಿಗೆ ಮನೆಯವರ ವಿರೋಧದಿಂದ ಮನನೊಂದು, ಶಿವಮೊಗ್ಗದ ಯುವ ಪ್ರೇಮಿಗಳು ಕಾಲುವೆಗೆ ಹಾರಿ ಆತ್ಮಹ*ತ್ಯೆಗೆ ಯತ್ನಿಸಿದ್ದಾರೆ. ಈ ದುರಂತ ಘಟನೆಯಲ್ಲಿ ಯುವತಿ ಸ್ವಾತಿ ಮೃತಪಟ್ಟಿದ್ದು, ಯುವಕ ಸೂರ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

3 ವರ್ಷದ ಪ್ರೀತಿಗೆ ವಿರೋಧ
ಶಿವಮೊಗ್ಗ (ಸೆ.24): ಪ್ರೀತಿಗೆ ಕುಟುಂಬಸ್ಥರಿಂದ ವಿರೋಧ ವ್ಯಕ್ತವಾದ ಕಾರಣ ಮನನೊಂದ ಯುವ ಪ್ರೇಮಿಗಳಿಬ್ಬರು ಕಾಲುವೆಗೆ ಹಾರಿ ಆತ್ಮಹ*ತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯಲ್ಲಿ ಯುವತಿ ಸಾವನ್ನಪ್ಪಿದ್ದು, ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸಾವಿಗೆ ಯತ್ನಿಸಿದ ಪ್ರೇಮಿಗಳ ಪೈಕಿ ಯುವಕ ಬಚಾವ್
ಭದ್ರಾವತಿ ತಾಲೂಕಿನ ಅಂತರಗಂಗೆಯಲ್ಲಿ ಈ ದುರಂತ ನಡೆದಿದ್ದು, ಸ್ವಾತಿ (19) ಮೃತಪಟ್ಟ ಯುವತಿ. ಈಕೆಯೊಂದಿಗೆ ಆತ್ಮಹ*ತ್ಯೆಗೆ ಯತ್ನಿಸಿ ಬದುಕುಳಿದ ಯುವಕ ಸೂರ್ಯ (20) ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಭದ್ರಾವತಿ ಅಂತರಗಂಗೆ ನಿವಾಸಿಗಳು
ಇಬ್ಬರೂ ಶಿವಮೊಗ್ಗ ಜಿಲ್ಲೆಯ ಅಂತರಗಂಗೆಯ ಭೋವಿ ಕಾಲನಿ ನಿವಾಸಿಗಳಾಗಿದ್ದು, ಕಳೆದ ಮೂರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಮೂರು ವರ್ಷಗಳಿಂದ ಹಲವು ಪ್ರವಾಸಿ ತಾಣಗಳಲ್ಲಿ ಪ್ರಣಯ ಹಕ್ಕಿಗಳಾಗಿ ಸುತ್ತಾಡಿದ್ದಾರೆ.
ಬುದ್ಧಿವಾದ ಹೇಳಿದರೂ ಕೇಳದ ಪ್ರೇಮಿಗಳು
ಇತ್ತೀಚೆಗೆ ಇವರ ಪ್ರೀತಿ ವಿಚಾರ ಮನೆಯವರಿಗೆ ತಿಳಿದುಬಂದಿದೆ. ಪ್ರೀತಿಗೆ ವಿರೋಧ ವ್ಯಕ್ತಪಡಿಸಿ, ಬುದ್ಧಿವಾದ ಹೇಳಿದ ಕಾರಣ ಇಬ್ಬರೂ ಭಾನುವಾರ ಮನನೊಂದು ಇರುವೆ ಪುಡಿ ಸೇವಿಸಿ, ಬಳಿಕ ಅಂತರಗಂಗೆಯ ಉಕ್ಕುಂದದಲ್ಲಿರುವ ಕಾಲುವೆಗೆ ಹಾರಿದ್ದಾರೆ.
ಕಾಲುವೆಯಲ್ಲಿ ಮರದ ದಿಮ್ಮಿ ಹಿಡಿದ ಯುವಕ
ಆತ್ಮಹ*ತ್ಯೆಗೆ ಯತ್ನಿಸುವಾಗ ಅದೃಷ್ಟವಶಾತ್ ಸೂರ್ಯ ಮರದ ದಿಮ್ಮಿಯ ಸಹಾಯದಿಂದ ಬದುಕುಳಿದಿದ್ದಾನೆ. ಕೂಡಲೇ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ನೀರಿನ ಸೆಳೆತಕ್ಕೆ ಸಿಲುಕಿದ ಸ್ವಾತಿ ನೀರುಪಾಲಾಗಿದ್ದಾಳೆ.
ಸ್ವಾತಿ ಮೃತದೇಹ ಇನ್ನೂ ಪತ್ತೆಯಾಗಿಲ್ಲ
ಸ್ವಾತಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ದಿನಗಳಿಂದ ಶೋಧ ನಡೆಸಿದ್ದರು. ಮಂಗಳವಾರ ಆಕೆಯ ಮೃತದೇಹ ಪತ್ತೆಯಾಗಿದ್ದು, ಹೊರತೆಗೆಯಲಾಗಿದೆ. ಸ್ವಾತಿ ಪ್ರಥಮ ಪದವಿ ವಿದ್ಯಾರ್ಥಿನಿಯಾಗಿದ್ದರೆ, ಸೂರ್ಯ ಕೂಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಭದ್ರಾವತಿ ಠಾಣೆಯಲ್ಲಿ ಪ್ರಕರಣ ದಾಖಲು
ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೀತಿ ನಿರಾಕರಣೆ ಕಾರಣಕ್ಕೆ ನಡೆಯುತ್ತಿರುವ ಇಂತಹ ದುರಂತಗಳು ಸಮಾಜದಲ್ಲಿ ಆತಂಕ ಮೂಡಿಸಿವೆ.