ಕರ್ನಾಟಕದಲ್ಲಿ 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರರ ನೇಮಕಾತಿ ಸಂಬಂಧ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ, ಬಿಷ್ಣೋಯ್‌ ಅವರಿದ್ದ ಪೀಠವು ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶ ಎತ್ತಿಹಿಡಿದಿದೆ.

ನವದೆಹಲಿ (ಅ.18): ಕರ್ನಾಟಕದಲ್ಲಿ 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರರ ನೇಮಕಾತಿ ಸಂಬಂಧ ಸುಪ್ರೀಂ ಕೋರ್ಟ್‌ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಈ ನೇಮಕಾತಿ ಪ್ರಕ್ರಿಯೆ ಕುರಿತ ಆಕ್ಷೇಪಗಳನ್ನು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಸ್‌ಎಟಿ- ಕೆ ಸ್ಯಾಟ್) ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಸೂಚಿಸಿ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಎತ್ತಿಹಿಡಿದಿದೆ. ನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ ಮತ್ತು ನ್ಯಾ.ವಿಜಯ್‌ ಬಿಷ್ಣೋಯ್‌ ಅವರಿದ್ದ ಪೀಠವು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶ ಎತ್ತಿಹಿಡಿದಿದೆ.

ಜತೆಗೆ ನೇಮಕಾತಿ ಪ್ರಕ್ರಿಯೆ ವೇಳೆ ಎದುರಾಗುವ ಸೇವಾ ಕುಂದು-ಕೊರತೆಗಳ ಪರಿಹಾರಕ್ಕೆ ಕೆಸ್ಯಾಟ್‌ ಸೂಕ್ತ ವೇದಿಕೆ ಎಂದು ಅಭಿಪ್ರಾಯಪಟ್ಟಿದೆ. ‘ಹೈಕೋರ್ಟ್‌ನ ವಿಭಾಗೀಯ ಪೀಠವು ಏಕಪೀಠದ ಆದೇಶವನ್ನು ರದ್ದು ಮಾಡಿ ನೀಡಿದ ಆದೇಶವು ಸರಿಯಾಗಿಯೇ ಇದೆ. ಇದರ ಜತೆಗೆ ನೇಮಕಾತಿಗೆ ಸಂಬಂಧಿಸಿದ ಮೇಲ್ಮನವಿದಾರರಿಗೆ ಕೆಸ್ಯಾಟ್‌ ಮೊರೆ ಹೋಗುವಂತೆ ನೀಡಿದ ಆದೇಶದಲ್ಲೂ ಯಾವುದೇ ತಪ್ಪು ಕಾಣುತ್ತಿಲ್ಲ’ ಎಂದು ನ್ಯಾ. ವಿಜಯ್‌ ಬಿಷ್ಣೋಯ್‌ ತಿಳಿಸಿದ್ದಾರೆ.

ಪ್ರಕರಣ ಏನು?

6ರಿಂದ 8ನೇ ತರಗತಿಗಾಗಿ 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗೆ ಮಾ.21, 2022ರಂದು ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಮೇ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಸಿದ ಬಳಿಕ, ನ.18ರಂದು ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಲಾಗಿತ್ತು. ಆದರೆ, ಪಟ್ಟಿಯಲ್ಲಿ ಒಬಿಸಿ ಕೆಟಗರಿಯಲ್ಲಿ ಅರ್ಜಿ ಸಲ್ಲಿಸಿದ್ದ ಮಹಿಳಾ ಅಭ್ಯರ್ಥಿಗಳ ಹೆಸರನ್ನು ಜನರಲ್‌ ಕೆಟಗರಿಗೆ ಸೇರ್ಪಡೆ ಮಾಡಲಾಗಿತ್ತು. ಗಂಡನ ಬದಲು ತಮ್ಮ ತಂದೆಯ ಜಾತಿ-ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗಿತ್ತು.

ಆದರೆ, ನೇಮಕಾತಿ ಅಧಿಸೂಚನೆಯಲ್ಲಿ ಗಂಡನ ಜಾತಿ-ಆದಾಯ ಪ್ರಮಾಣಪತ್ರವನ್ನೇ ಸಲ್ಲಿಸುವಂತೆ ಸ್ಪಷ್ಟ ನಿರ್ದೇಶನ ಇರಲಿಲ್ಲ. ಹಾಗಾಗಿ ನಮಗೆ ಅನ್ಯಾಯ ಆಗಿದೆ ಎಂದು ಹೇಳಿಕೊಂಡು ಕೆಲ ಅಭ್ಯರ್ಥಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ತಮ್ಮನ್ನು ಒಬಿಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕಸದಸ್ಯ ಪೀಠವು, ಜ.30, 2023ರಂದು ತಾತ್ಕಾಲಿಕ ಮೆರಿಟ್‌ ಪಟ್ಟಿಯನ್ನು ರದ್ದು ಮಾಡಿತ್ತು. ಜತೆಗೆ, ಈ ಅಭ್ಯರ್ಥಿಗಳನ್ನು ಒಬಿಸಿ ಕೆಟಗರಿಗೆ ಸೇರ್ಪಡೆ ಮಾಡುವಂತೆಯೂ ಆದೇಶ ನೀಡಿತ್ತು.

ಅದರಂತೆ ಸರ್ಕಾರ ಫೆ.27, 2023ರಂದು ಹೊಸದಾಗಿ ತಾತ್ಕಾಲಿಕ ಮೆರಿಟ್‌ ಪಟ್ಟಿ ಪ್ರಕಟಿಸಿತು. ಇದರಿಂದ ಈ ಹಿಂದೆ ಆಯ್ಕೆ ಆಗಿದ್ದ 451 ಅಭ್ಯರ್ಥಿಗಳನ್ನು ಪಟ್ಟಿಯಿಂದ ಹೊರಗಿಡಬೇಕಾಯಿತು. ಬಳಿಕ ಅಂತಿಮ ಆಯ್ಕೆ ಪಟ್ಟಿಯನ್ನು ಮಾ.8, 2023ರಂದು ಪ್ರಕಟಿಸಲಾಯಿತು. ಈ ನಡುವೆ, ಪರಿಷ್ಕೃತ ಪಟ್ಟಿಯಲ್ಲಿ ಕೈಬಿಟ್ಟ ಅಭ್ಯರ್ಥಿಗಳು ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಪೀಠವು, ಏಕಸದಸ್ಯ ಪೀಠದ ಆದೇಶವನ್ನು ರದ್ದು ಮಾಡಿ, ಅರ್ಜಿದಾರರಿಗೆ ಕೆಸ್ಯಾಟ್‌ ಮೊರೆ ಹೋಗುವಂತೆ ಅ.12, 2023ರಂದು ನಿರ್ದೇಶನ ನೀಡಿತ್ತು. ಜತೆಗೆ, ಅಂತಿಮ ನೇಮಕಾತಿ ಪಟ್ಟಿಯಂತೆ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸುವಂತೆಯೂ ಸರ್ಕಾರಕ್ಕೆ ನಿರ್ದೇಶ ನೀಡಿತ್ತು.

ಇದೀಗ ಹೈಕೋರ್ಟ್‌ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌, ಸೇವಾ ನ್ಯಾಯಮಂಡಳಿಗಳ ವ್ಯಾಪ್ತಿಗೆ ಬರುವ ರಿಟ್‌ ಅರ್ಜಿಗಳನ್ನು ಹೈಕೋರ್ಟ್‌ಗಳು ಯಾವುದೇ ಕಾರಣಕ್ಕೂ ಸಂವಿಧಾನದ 226ನೇ ಪರಿಚ್ಛೇದದಡಿ ವಿಚಾರಣೆಗೆ ಕೈಗೆತ್ತಿಕೊಳ್ಳಬಾರದು. ಪರಿಣಾಮಕಾರಿ ಪರ್ಯಾಯ ಪರಿಹಾರ ಲಭ್ಯವಿರುವಾಗ ಹೈಕೋರ್ಟ್‌ಗಳು ಇಂಥ ರಿಟ್‌ ಅರ್ಜಿಗಳಿಗೆ ಆದ್ಯತೆ ನೀಡಬಾರದು. ಪ್ರಕರಣದಲ್ಲಿ ಹೈಕೋರ್ಟ್‌ ವಿಭಾಗೀಯ ಪೀಠ ನೀಡಿದ ತೀರ್ಪಿನಲ್ಲಿ ಯಾವುದೇ ದೋಷಗಳಿಲ್ಲ ಎಂದು ತಿಳಿಸಿದೆ.