ಪ್ರತಾಪ್ ಸಿಂಹ ವಿರುದ್ಧದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನು ರದ್ದುಪಡಿಸಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ತಮ್ಮ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನು ರದ್ದುಪಡಿಸುವಂತೆ ಅರ್ಜಿ ಸಲ್ಲಿಸಿದ್ದರು.
ಬೆಂಗಳೂರು (ಅ.18): ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ದೋಷಪೂರಿತ ಆರೋಪಪಟ್ಟಿ ಸಲ್ಲಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನು ರದ್ದುಪಡಿಸಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ತಮ್ಮ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಪ್ರತಾಪ್ ಸಿಂಹ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರ ಪೀಠ, ಆರೋಪ ಪಟ್ಟಿಯಲ್ಲಿನ ಅಂಶಗಳು ಐಪಿಸಿ ಸೆಕ್ಷನ್ 171ಎಚ್ (ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮ ಪಾವತಿಗಳು) ಅಪರಾಧಕ್ಕೆ ಅನ್ವಯಿಸುವುದಿಲ್ಲ. ಐಪಿಸಿ ಸೆಕ್ಷನ್ 188 ಅಡಿ ಸಾರ್ವಜನಿಕ ಸೇವಕರು ಹೊರಡಿಸಿದ ಕಾನೂನುಬದ್ಧ ಆದೇಶವನ್ನು ಉಲ್ಲಂಘಿಸಿರುವುದಕ್ಕೆ ಶಿಕ್ಷಿಸುವ ಅಪರಾಧಕ್ಕೆ ಅನ್ವಯಿಸುತ್ತವೆ. ಹಾಲಿ ಪ್ರಕರಣದಲ್ಲಿ ಸಬ್ ಇನ್‌ಸ್ಪೆಕ್ಟರ್ ಶ್ರೇಣಿಯ ಅಧಿಕಾರಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಅವರು ಐಪಿಸಿ ಸೆಕ್ಷನ್ 177ಎಚ್ ಮತ್ತು ಸೆಕ್ಷನ್ 188ರ ನಡುವಿನ ಮೂಲಭೂತ ವ್ಯತ್ಯಾಸ ಗುರುತಿಸಿಲ್ಲ ಎಂದು ಪೀಠ ಕಟುವಾಗಿ ನುಡಿದಿದೆ.
ಪ್ರಮುಖರಿಗೆ ಸಂಬಂಧಿಸಿದ ಕೆಲ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೆಲವೊಮ್ಮೆ ದೋಷಪೂರಿತ ಆರೋಪ ಪಟ್ಟಿ ಸಲ್ಲಿಸುತ್ತಾರೆ. ಆ ಮೂಲಕ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯವೇ ರದ್ದುಪಡಿಸಿದೆ ಎಂಬುದಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಾರೆ. ತಮ್ಮ ಸುರಕ್ಷತೆ ದೃಷ್ಟಿಯಿಂದ ಅಧಿಕಾರಿಗಳು ಹೀಗೆ ನಡೆದುಕೊಳ್ಳುತ್ತಾರೆ. ಪ್ರಕರಣ ದಾಖಲಿಸಬೇಕು. ಆದರೆ ಅದು ವಿಫಲವಾಗಬೇಕು ಎಂಬುದು ಅಧಿಕಾರಿಗಳ ಧೋರಣೆ. ಎಲ್ಲವೂ ಗೊತ್ತಿದ್ದೇ ಅಧಿಕಾರಿಗಳು ಹೀಗೆ ಮಾಡುತ್ತಾರೆ. ಅಧಿಕಾರಿಗಳ ಇಂತಹ ನಡೆ ಬಗ್ಗೆ ಎಚ್ಚರವಹಿಸಬೇಕಿದೆ ನ್ಯಾಯಪೀಠ ಆದೇಶದಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದೆ. ಅಂತಿಮವಾಗಿ ಅರ್ಜಿದಾರರ ವಿರುದ್ಧ ವಿಶೇಷ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ರಂಗಸಮುದ್ರದ ಸಮೀಪ ಪ್ರತಾಪ್ ಸಿಂಹ ಮತ್ತಿತರರ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರ ಜೊತೆ ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಪ್ರತಾಪ್ ಮತ್ತು ಇತರರು ಕಾರಿನಲ್ಲಿದ್ದರು. ಇದಕ್ಕೆ ಯಾವುದೇ ಅನುಮತಿ ಪಡೆದಿರಲಿಲ್ಲ. ಇದಕ್ಕೆ ಸೂಕ್ತ ಪ್ರತಿಕ್ರಿಯೆ ಬಾರದಿದ್ದಾಗ ಐಪಿಸಿ ಸೆಕ್ಷನ್ 177ಎಚ್ ಅಡಿ ಪ್ರತಾಪ್ ಸಿಂಹ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
