ತಮಿಳುನಾಡು ಕಾಂಗ್ರೆಸ್‌ ಸಂಸದ ಸಸಿಕಾಂತ್ ಸೆಂಥಿಲ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಸಂಬಂಧ ಆರೋಪಿ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರು (ಅ.15): ಮಾಜಿ ಐಎಎಸ್ ಅಧಿಕಾರಿ ಹಾಗೂ ತಮಿಳುನಾಡು ಕಾಂಗ್ರೆಸ್‌ ಸಂಸದ ಸಸಿಕಾಂತ್ ಸೆಂಥಿಲ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಸಂಬಂಧ ಆರೋಪಿ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ. ಸಂಸದ ಸಸಿಕಾಂತ್‌ ಸೆಂಥಿಲ್‌ ಅವರು ಸಲ್ಲಿಸಿದ್ದ ಖಾಸಗಿ ದೂರು ಸಂಬಂಧ ಮಂಗಳವಾರ ವಿಚಾರಣೆ ನಡೆಸಿದ 42ನೇ ಎ‌ಸಿಎಂಎಂ ನ್ಯಾಯಾಲಯ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 223ರ ಅಡಿ ದೂರುದಾರ ಸಸಿಕಾಂತ ಸೆಂಥಿಲ್ ಹಾಗೂ ಸಾಕ್ಷಿಯಾದ ಕಿರಣ್‌ಜಿತ್ ಅವರ ಸ್ವಯಂ ಹೇಳಿಕೆಗಳನ್ನು ದಾಖಲಿಸಿಕೊಂಡಿತು.

ಬಳಿಕ ಸೆಕ್ಷನ್ 223 ಅಡಿ ಆರೋಪಿ ಜನಾರ್ಧನ ರೆಡ್ಡಿ ಅವರ ವಾದ ಆಲಿಸಲು ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯವು ವಿಚಾರಣೆಯನ್ನು ಅ.28ಕ್ಕೆ ಮುಂದೂಡಿತು. ಧರ್ಮಸ್ಥಳ ಪ್ರಕರಣದ ಸಂಬಂಧ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ನನ್ನ ವಿರುದ್ಧ ಆಧಾರ ರಹಿತ, ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡಿ ಮಾನಹಾನಿ ಉಂಟು ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸಸಿಕಾಂತ್‌ ಸೆಂಥಿಲ್‌ ಅವರು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ಅದರಂತೆ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ಗಾಲಿ ಜನಾರ್ಧನ ರೆಡ್ಡಿಗೆ ನೋಟಿಸ್‌ ಜಾರಿಗೊಳಿಸಿದೆ.

ಹಿಂದೂ ಸಮಾಜ ಒಡೆಯುವ ಹುನ್ನಾರ

ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಹೆಸರಿನಲ್ಲಿ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ, ಈ ಮೂಲಕ ಹಿಂದೂ ಸಮಾಜವನ್ನು ಒಡೆಯುವ ಕೊಳಕು ರಾಜಕೀಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಆಪಾದಿಸಿದರು. ಸೋನಿಯಾ ಗಾಂಧಿ ಹಾಗೂ ಕ್ರೈಸ್ತ ಮಿಷನರಿಗಳ ಒತ್ತಡದಿಂದಾಗಿಯೇ ಕ್ರೈಸ್ತ ಎಂಬ ಹೆಸರನ್ನು ಸೇರಿಸಿ ಜನರ ಮತಾಂತರ ಮಾಡುವ ಹೀನ ಕೃತ್ಯಕ್ಕೆ ಸಿದ್ದರಾಮಯ್ಯ ಮುಂದಾಗಿರುವುದು ಅತ್ಯಂತ ನಾಚಿಕೆಗೇಡು ಎಂದರು. ಈ ಸಮೀಕ್ಷೆಯಲ್ಲಿ ಜಾತಿಗಳ ನಡುವೆ ಕದನ ಸೃಷ್ಟಿಸುವ ಹುನ್ನಾರವಿದೆ. ಸರ್ಕಾರ ಕೂಡಲೇ ತನ್ನ ನಿಲುವಿನಿಂದ ಹಿಂದಕ್ಕೆ ಸರಿಯಬೇಕು. ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ, ಸಮೀಕ್ಷೆ ಕಾರ್ಯಕ್ಕೆ ಮುಂದಾಗಬೇಕು. ಸರ್ಕಾರ ಪ್ರತಿಪಕ್ಷಗಳ ಸಲಹೆ ನಿರಾಕರಿಸಿದರೆ, ಸಮೀಕ್ಷೆಗೆ ಅಸಹಕಾರ ತೋರಿಸುತ್ತೇವೆ. ಸಮೀಕ್ಷೆ ಬರುವವರಿಗೆ ಯಾವುದೇ ಮಾಹಿತಿ ನೀಡದಂತೆ ಬಹಿಷ್ಕರಿಸುತ್ತೇವೆ ಎಂದು ರೆಡ್ಡಿ ಎಚ್ಚರಿಸಿದರು.

ಕುಡಿತಿನಿ ಬಳಿ ಸ್ಥಾಪನೆ ಆಗಬೇಕಿದ್ದ ಮಿತ್ತಲ್ ಕಂಪನಿಯ ಉಕ್ಕಿನ ಕಾರ್ಖಾನೆ ಆಂಧ್ರಪ್ರದೇಶಕ್ಕೆ ಹೋಗಿದೆ. ಸರ್ಕಾರ ಕೈಗಾರಿಕೆ ಸ್ಥಾಪನೆಗೆ ಬೇಡಿಕೆಯಷ್ಟು ಅದಿರು, ನೀರು ಹಾಗೂ ಮೂಲ ಸೌಕರ್ಯ ಕಲ್ಪಿಸಬೇಕಾಗುತ್ತದೆ. ಜತೆಗೆ ಅಗತ್ಯ ಸಹಕಾರ ಕೊಟ್ಟರೆ ಮಾತ್ರ ಕೈಗಾರಿಕೆ ಸ್ಥಾಪನೆ ಸಾಧ್ಯ. ಆದರೆ, ಕಾಂಗ್ರೆಸ್ ಸರ್ಕಾರ ಯಾವುದೇ ಸಹಕಾರ ನೀಡಲಿಲ್ಲ. ಸರ್ಕಾರ ನಿಯಮದಂತೆ ನಿಗದಿತ ಸ್ಥಳದಲ್ಲಿ ಕೈಗಾರಿಕೆ ಸ್ಥಾಪನೆಗೆ ಮುಂದಾಗಬೇಕು. ಇಲ್ಲವೇ ರೈತರ ಜಮೀನು ಹಿಂದಕ್ಕೆ ನೀಡಬೇಕು ಎಂದು ರೆಡ್ಡಿ ಒತ್ತಾಯಿಸಿದರು. ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ಸಂಬಂಧ ಸಚಿವ ಎಂ.ಬಿ. ಪಾಟೀಲ್ ಹಾಗೂ ಸಂತೋಷ್‌ ಲಾಡ್ ಅವರಿಬ್ಬರ ಸಮ್ಮುಖದಲ್ಲಿ ಚರ್ಚಿಸಿ, ಮನವರಿಕೆ ಮಾಡಿಕೊಡಲಾಗಿದೆ. ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ ಎಂದರು.