ಪ್ರವಾಸೋದ್ಯಮ ಇಲಾಖೆ ನನ್ನ ಇಷ್ಟದ ಇಲಾಖೆಯಾಗಿದೆ. ಅಂಜನಾದ್ರಿ ನಮ್ಮ ಭಾಗದ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇದರ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಜಿ.ಜನಾರ್ಧನ ರೆಡ್ಡಿ ಹೇಳಿದರು.

ಕೊಪ್ಪಳ (ಸೆ.27): ಅಂಜನಾದ್ರಿ ನಮ್ಮ ಭಾಗದ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇದರ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಜಿ.ಜನಾರ್ಧನ ರೆಡ್ಡಿ ಹೇಳಿದರು. ಅವರು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕೊಪ್ಪಳ ಸಹಯೋಗದಲ್ಲಿ ವಿಶ್ವ ಪ್ರವಾಸೋಧ್ಯಮ ದಿನದ ಅಂಗವಾಗಿ ಆನೆಗೊಂದಿ ಗ್ರಾಮದ ಗಗನ್ ಮಹಲದಿಂದ ಅಂಜನಾದ್ರಿ ಬೆಟ್ಟದವರೆಗೆ ಹಮ್ಮಿಕೊಂಡಿದ್ದ ಪ್ಲಾಗ ರನ್ ಪ್ಲಾಸ್ಟಿಕ್ ಬಳಕೆ ಮುಕ್ತ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರವಾಸೋದ್ಯಮ ಇಲಾಖೆ ನನ್ನ ಇಷ್ಟದ ಇಲಾಖೆಯಾಗಿದೆ, ನಾನು ಈ ಹಿಂದೆ ಪ್ರವಾಸೋದ್ಯಮ ಇಲಾಖೆಯ ಸಚಿವನಾಗಿದ್ದಾಗ ನಮ್ಮ ಭಾಗದಲ್ಲಿ 6 ಜಂಗಲ್ ಲಾಡ್ಜಗಳಿದ್ದವು 19 ಜಂಗಲ್ ಲಾಡ್ಜಗಳನ್ನು ಕಟ್ಟುವ ಕೆಲಸ ಮಾಡಿದೆ. ಹಂಪಿಯಲ್ಲಿ ₹500 ಕೋಟಿ ಅನುದಾನ ಕೇಂದ್ರ ಮತ್ತು ರಾಜ್ಯ ಸರ್ಕಾರದ ಶೇ.50 -50ರ ಅನುಪಾತದಲ್ಲಿ ಹಂಪಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗಲು ಹಂಪಿ, ಹೊಸಪೇಟೆ, ಕಮಲಾಪುರ ತಿರುಗಾಡಲು ಬ್ಯಾಟರಿಚಾಲಿತ ಕಾರುಗಳ ಜತೆಗೆ ಇತರೆ ಅಭಿವೃದ್ಧಿ ಕಾರ್ಯ ಮಾಡಿದ್ದೆ. 350 ಎಕರೆ ಪ್ರದೇಶದಲ್ಲಿ ಅಟಲ್ ಬಿಹಾರಿ ವಾಜಪೇಯಿ ಜೂ ಪಾರ್ಕ್‌ ಮಾಡಲಾಯಿತು. ಪ್ರವಾಸೋದ್ಯಮ ಬೆಳವಣಿಗೆಯಿಂದ ನಮ್ಮ ಭಾಗದ ವ್ಯಾಪಾರಸ್ಥರಿಗೆ ಅನುಕೂಲವಾಯಿತು ಎಂದರು.

ಪ್ರವಾಸೋದ್ಯಮ ಇಲಾಖೆಯಲ್ಲಿ ಗ್ರೀನ್ ಪೊಲೀಸ್ ವ್ಯವಸ್ಥೆ ಪರಿಚಯಿಸಿ ಗೈಡ್ ಹಾಗೂ ಪ್ರವಾಸಿಗರ ರಕ್ಷಣೆ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ವಿಜಯನಗರ ಸಾಮ್ರಾಜ್ಯ ಅಂದು ಗೋವಾ, ತಮಿಳುನಾಡು, ಓರಿಸ್ಸಾ, ಪಶ್ಚಿಮ ಬಂಗಾಳದವರೆಗೆ ವಿಶಾಲವಾಗಿ ಹರಡಿತ್ತು. ಇಲ್ಲಿ ಹುಟ್ಟಿ ಬೆಳೆದ ನಾವು ಪುಣ್ಯವಂತರು. ಅಂಜನಾದ್ರಿಗೆ ತಿರುಪತಿ ಮಾದರಿಯಲ್ಲಿ ಮೆಟ್ಟಿಲು, ಪ್ರದರ್ಶನ ಪಥ, ರಸ್ತೆ ಅಭಿವೃದ್ಧಿ ಮತ್ತು ರಸ್ತೆಯ ಎರಡು ಬದಿಗಳಲ್ಲಿ ಲೈಟಿಂಗ್ ವ್ಯವಸ್ಥೆ ಮಾಡುತ್ತಿದ್ದೇವೆ. ಇದರಿಂದ ಅಂಜನಾದ್ರಿಗೆ ಬರುವ ಭಕ್ತರಿಗೆ ಅನುಕೂಲವಾಗಲಿದೆ ಎಂದರು.

ಪ್ಲಾಸ್ಟಿಕ್ ಬಳಕೆ ಮುಕ್ತ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ, ಈ ವರ್ಷದ ವಿಶ್ವ ಪ್ರವಾಸೋದ್ಯಮ ದಿನದ ಸಂದೇಶ ಪ್ರವಾಸೋದ್ಯಮ ಮತ್ತು ಸುಸ್ಥಿರ ಪರಿವರ್ತನೆ ಎಂಬುದಾಗಿದೆ. ಕಿಷ್ಕಿಂದಾ ಭಾಗದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರು ಬರುತ್ತಾರೆ. ಪರಿಸರಕ್ಕೆ ಹಾನಿಯಾಗಬಾರದು ಮತ್ತು ಇಲ್ಲಿಗೆ ಬರುವ ಪ್ರವಾಸಿಗರಿಗೆ ಒಳ್ಳೆಯ ವಾತಾವರಣ ಇರಬೇಕು ಎನ್ನುವ ಉದ್ದೇಶದಿಂದ ಜನರಲ್ಲಿ ಅರಿವು ಮೂಡಿಸಲು ಪ್ಲಾಸ್ಟಿಕ್ ಬಳಕೆ ಮುಕ್ತ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜನರ ಬೌದ್ದಿಕ ಬೆಳವಣಿಗೆಗೆ ಕಾರಣ

ವಿಶೇಷ ಉಪನ್ಯಾಸ ನೀಡಿದ ಡಾ.ಶರಣಬಸಪ್ಪ ಕೋಲ್ಕರ್ ಮಾತನಾಡಿ, ಪ್ರವಾಸೋದ್ಯಮ ಇಂದು ಕೃಷಿಯಂತೆ ಉದ್ಯಮವಾಗಿ ಪರಿಭಾವಿಸಲಾಗಿದೆ. ಜಗತ್ತಿನಾದ್ಯಂತ ಇದು ಪ್ರಸಿದ್ಧಿ ಪಡೆಯುತ್ತಿದೆ. ಇದರಿಂದ ಜನರ ಬೌದ್ದಿಕ ಬೆಳವಣಿಗೆಗೆ ಕಾರಣವಾಗಿದೆ. ದೇಶ ನೋಡು ಕೋಶ ಓದು ಎನ್ನುವಂತೆ ಇದರಿಂದ ಜ್ಞಾನ ಪಡೆಯಬಹುದು. ಬೇರೆ ಬೇರೆ ಸ್ಥಳಗಳ ಸಂಸ್ಕೃತಿ, ಪರಂಪರೆ, ನಂಬಿಕೆ ಮತ್ತು ಜನಾಂಗ ಯಾವ ರೀತಿಯಲ್ಲಿ ಬದುಕಬೇಕು ಎಂಬುದರ ದಾರಿ ತೋರಿಸುತ್ತದೆ. ನಮ್ಮ ಭಾಗದಲ್ಲಿ ನೂರಾರು ಆದಿಮಾನವನ ವಾಸ ಸ್ಥಾನಗಳಿವೆ. ಪಂಪಾ ಕ್ಷೇತ್ರ. ಕಿಷ್ಕಿಂದಾ ಸೇರಿದಂತೆ ಅನೇಕ ಸ್ಥಳಗಳಿವೆ ನಮ್ಮ ಭಾಗದ ಚರಿತ್ರೆ ಜಗತ್ತಿಗೆ ತೋರಿಸಬೇಕಿದೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮಾತನಾಡಿ, ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕೊಪ್ಪಳ ಸೇರಿದಂತೆ ವಿವಿಧ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾರತದ ನಮ್ಮ ಸಂಸ್ಕೃತಿ ನಾವು ಹೇಗೆ ಅವರನ್ನು ಪ್ರೀತಿ ವಿಶ್ವಾಸದಿಂದ ಕಾಣಬೇಕಿದೆ. ಅವರು ಇತರೆ ಪ್ರವಾಸಿಗರಿಗೆ ಈ ಭಾಗದ ಕುರಿತು ಒಳ್ಳೆಯ ಮಾಹಿತಿ ನೀಡುತ್ತಾರೆ. ನಾವು ಎಲ್ಲೂ ಪ್ಲಾಸ್ಟಿಕ್ ಎಸೆಯಲು ಅವಕಾಶ ಕೊಡಬಾರದು ಎಂದರು.

ಈ ಕಾರ್ಯಕ್ರಮದಲ್ಲಿ ಆನೆಗೊಂದಿ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ್, ಜಿಪಂ ಯೋಜನಾ ನಿರ್ದೆಶಕ ಪ್ರಕಾಶ, ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿ ಸೆಜೇಶ್ವರ, ಆನೆಗೊಂದಿ ರಾಜ ವಶಂಸ್ಥ ಲಲಿತಾರಾಣಿ ಶ್ರೀ ರಂಗದೇವರಾಯಲು ಹಾಗೂ ರಾಜಾ ಶ್ರೀ ಕೃಷ್ಣ ದೇವರಾಯ, ಲಕ್ಷ್ಮೀ ಅರುಣಾ ಜನಾರ್ದನ ರೆಡ್ಡಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ, ಕನಕಗಿರಿ ತಹಸೀಲ್ದಾರ ವಿಶ್ವನಾಥ ಮುರಡಿ, ಗಂಗಾವತಿ ತಹಸೀಲ್ದಾರ ನಾಗರಾಜ ಮತ್ತು ಕೊಪ್ಪಳ, ಗಂಗಾವತಿ, ಕಿಷ್ಕಿಂದಾ ಚಾರಣ ಬಳಗ, ಗೋ ಗ್ರೀನ್ ಗಂಗಾವತಿ, ಪರಿಸರ ಸೇವಾ ಟ್ರಸ್ಟ್ ಗಂಗಾವತಿ ಪದಾಧಿಕಾರಿಗಳು ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.