ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕ್ರಿಯಾಶೀಲತೆ, ವಿಶಿಷ್ಟ ಯೋಜನೆಗಳ ಮೂಲಕ ನಾಡಿನ ಸಮಗ್ರ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಿ ಗಣನೀಯ ಸಾಧನೆಗೈದ ರಾಜ್ಯದ 33 ಎಂಜಿನಿಯರ್‌ಗಳು ಪ್ರಶಸ್ತಿಗೆ ಭಾಜನರಾದರು.
ಬೆಂಗಳೂರು (ಅ.19): ಸರ್.ಎಂ.ವಿಶ್ವೇಶ್ವರಯ್ಯನವರ ಮಾರ್ಗದಲ್ಲಿ ನಡೆಯುತ್ತ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕ್ರಿಯಾಶೀಲತೆ, ವಿಶಿಷ್ಟ ಯೋಜನೆಗಳ ಮೂಲಕ ನಾಡಿನ ಸಮಗ್ರ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಿ ಗಣನೀಯ ಸಾಧನೆಗೈದ ರಾಜ್ಯದ 33 ಎಂಜಿನಿಯರ್‌ಗಳು ‘ಕನ್ನಡಪ್ರಭ’-‘ಏಷಿಯಾನೆಟ್ ಸುವರ್ಣ ನ್ಯೂಸ್’ ಕೊಡಮಾಡುವ ‘ಎಮಿನೆಂಟ್ ಎಂಜಿನಿಯರ್-2025’ ಪ್ರಶಸ್ತಿಗೆ ಭಾಜನರಾದರು.
ನಗರದ ಹೋಟೆಲ್ ಲಲಿತ್ ಅಶೋಕ್‌ನಲ್ಲಿ ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ಸೋಪ್ ಆ್ಯಂಡ್ ಡಿಟರ್ಜಂಟ್ ಲಿ. ಅಧ್ಯಕ್ಷ, ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಮುಖ್ಯ ಅತಿಥಿಯಾಗಿ ಆಗಮಿಸಿ ‘ಎಮಿನೆಂಟ್ ಎಂಜಿನಿಯರ್-2025’ ಪ್ರಶಸ್ತಿ ಪ್ರದಾನ ಮಾಡಿ ಕಾರ್ಯಕ್ರಮಕ್ಕೆ ಮೆರಗು ತಂದರು. ಅವರೊಂದಿಗೆ ಕನ್ನಡಪ್ರಭ-ಏಷಿಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ಸಾಧಕ ಎಂಜಿನಿಯರ್‌ಗಳಿಗೆ ಪ್ರಶಸ್ತಿ ಫಲಕ, ಸ್ಮರಣಿಕೆ ನೀಡುವ ಮೂಲಕ ಸನ್ಮಾನಿಸಿದರು. ಈ ಮೂಲಕ ಇಡೀ ಎಂಜಿನಿಯರ್ ಸಮೂಹವನ್ನು ಗೌರವಿಸಲಾಯಿತು.
ಸರ್ಕಾರಿ ನೌಕರರಾಗಿ, ಖಾಸಗಿಯಾಗಿ, ಉದ್ಯಮಿಗಳಾಗಿ ರಸ್ತೆ ಸೇತುವೆ ಅಣೆಕಟ್ಟು ನಿರ್ಮಾಣ, ನಿರ್ವಹಣೆಯ ಎಂಜಿನಿಯರ್‌ಗಳಿಂದ ಹಿಡಿದು ನಾಡಿಗೆ ಎಂಜಿನಿಯರ್‌ಗಳನ್ನು ನೀಡುವ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನು, ಗುರುತಿಸಿ ಗೌರವಿಸುವ, ಆ ಮೂಲಕ ಪ್ರೋತ್ಸಾಹಿಸುವ ಸದುದ್ದೇಶದಿಂದ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿತ್ತು. ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ಮೈಸೂರು, ಚಿಕ್ಕಮಗಳೂರು ಉತ್ತರ ಕರ್ನಾಟಕದ ಬೆಳಗಾವಿಯಿಂದ ಹಿಡಿದು ಬಾಗಲಕೋಟೆ, ಉತ್ತರಕನ್ನಡ, ವಿಜಯಪುರ, ಬಳ್ಳಾರಿ, ಹಾವೇರಿ ಹೀಗೆ ರಾಜ್ಯದ ನಾನಾ ಭಾಗಗಳ ಎಂಜಿನಿಯರ್‌ಗಳು ಆಗಮಿಸಿ ಗಣ್ಯರಿಂದ ಪ್ರಶಸ್ತಿ ಸ್ವೀಕರಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಸಾಧನೆಯ ಕಿರುಚಿತ್ರ ಪ್ರದರ್ಶನ
ಸಾಧಕರ ಸಾಧನೆಯನ್ನು ಕಿರುಚಿತ್ರ (ವಿಟಿ) ಪ್ರದರ್ಶನದ ಮೂಲಕ ಬಿತ್ತರಿಸಿ ಎಂಜಿನಿಯರ್‌ಗಳು ಸಾಗಿಬಂದ ದಾರಿಯನ್ನು ಮೆಲುಕು ಹಾಕುವ ಪ್ರಯತ್ನವಾಯಿತು. ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ ಜಿಪಂ, ಲೋಕೋಪಯೋಗಿ ಇಲಾಖೆ, ನಗರಸಭೆಗಳಲ್ಲಿ ಸೇವೆಯಲ್ಲಿದ್ದು ತಮ್ಮದೇ ಕೊಡುಗೆ ನೀಡುತ್ತಿರುವವರನ್ನು ಮುಕ್ತಕಂಠದಿಂದ ಶ್ಲಾಘಿಸಲಾಯಿತು. ಕೊಡುಗೆ ನೀಡಿದ ನಿವೃತ್ತರಿಂದ ಹಿಡಿದು ಕರ್ತವ್ಯದ ಹಾದಿಯಲ್ಲಿ ಬಹಳಷ್ಟು ದೂರ ಕ್ರಮಿಸಬೇಕಾದ ಯುವ ಎಂಜಿನಿಯರ್‌ಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ವಿಶ್ವೇಶ್ವರಯ್ಯ ಅವರು ದೇಶಕ್ಕೆ ಬಹುದೊಡ್ಡ ಎಂಜಿನಿಯರಿಂಗ್ ಬುನಾದಿ ಹಾಕಿಕೊಟ್ಟಿದ್ದಾರೆ. ಅವರ ಹಾದಿಯಲ್ಲಿ ನಾವು ಮುನ್ನಡೆಯಬೇಕಾಗಿದೆ. ಸನ್ಮಾನದ ಹಾರ ಬಲು ಭಾರವಾಗಿರುತ್ತದೆ. ಸುದ್ದಿ ಸಂಸ್ಥೆಯವರು ಸನ್ಮಾನ ಮಾಡಿದ್ದಾರೆಂದು ಇಲ್ಲಿಗೆ ನಮ್ಮ ಸಾಧನೆ ಮುಗಿಯಿತು ಎಂದುಕೊಳ್ಳಬೇಡಿ. ಪ್ರತಿದಿನ ಎಂಜಿನಿಯರಿಂಗ್ ಕೌಶಲ್ಯ ಹೆಚ್ಚಿಸಿಕೊಳ್ಳಿ. ದಿನವೂ ಕಲಿಯುತ್ತಿರಿ, ಮುಂದಿನ ಪೀಳಿಗೆಗೆ ಕಲಿಸುತ್ತಿರಿ. ಈ ನಿಟ್ಟಿನಲ್ಲಿ ಕೆಲಸ ಮುಂದುವರಿಸಿ ಎಂದು ಕರೆಕೊಟ್ಟರು.
ಎಂಜಿನಿಯರ್‌ಗಳದ್ದು ತಳಮಟ್ಟದಲ್ಲಿದ್ದು ಬದ್ಧತೆಯಿಂದ, ಸೂಕ್ಷ್ಮತೆಯಿಂದ ಕೆಲಸ ಮಾಡಬೇಕಾಗುತ್ತದೆ. ರಾಜ್ಯದ ದೊಡ್ಡ ಸಂಪತ್ತಾಗಿರುವ ಎಂಜಿನಿಯರ್‌ಗಳನ್ನು ಕನ್ನಡಪ್ರಭ-ಏಷಿಯಾನೆಟ್ ಸುವರ್ಣ ನ್ಯೂಸ್ ಗುರುತಿಸಿ ಸನ್ಮಾನಿಸುವುದು ಶ್ಲಾಘನೀಯ ಎಂದು ಹೇಳಿದರು. ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ ( ಅಪ್ಪಾಜಿ) ಮಾತನಾಡಿ, ದೇಶದಲ್ಲಿ ಕಟ್ಟಡದಿಂದ ಹಿಡಿದು ಕೃಷಿವರೆಗೆ, ವೈದ್ಯಕೀಯ ಕ್ಷೇತ್ರದಿಂದ ತಂತ್ರಜ್ಞಾನವರೆಗೆ ಎಲ್ಲ ಕ್ಷೇತ್ರದಲ್ಲಿ ಎಂಜಿನಿಯರ್‌ಗಳ ಕೊಡುಗೆ ದೊಡ್ಡದು. ಅದರಲ್ಲೂ ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಎಂಜಿನಿಯರಿಂಗ್ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ನಮ್ಮ ಯುವಕರು ಹೆಚ್ಚಾಗಿ ಈ ಕ್ಷೇತ್ರದತ್ತ ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಕನ್ನಡಪ್ರಭ-ಏಷಿಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ದೇಶದಲ್ಲಿ ಕರ್ನಾಟಕ ಅತ್ಯಂತ ಪ್ರಗತಿ ಹೊಂದಿದ ರಾಜ್ಯ ಎಂಬ ಹೆಗ್ಗಳಿಕೆಗೆ ಕಾರಣವಾಗಿದ್ದು ನಮ್ಮ ಎಂಜಿನಿಯರ್‌ಗಳಿಂದ. ಇಲ್ಲಿಂದ ಹಲವು ಎಂಜಿನಿಯರ್‌ಗಳು ವಲಸೆ ಹೋದರೆ ಇನ್ನು ಹಲವರು ಇಲ್ಲಿಯೇ ಉಳಿದುಕೊಂಡು ದೇಶ ಕಟ್ಟಲು ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಎಮಿನೆಂಟ್ ಎಂಜಿನಿಯರ್ ಪ್ರಶಸ್ತಿ ನೀಡುತ್ತಿರುವುದು ಒಂದು ನೆಪ ಮಾತ್ರ. ಸಮಾಜದ ಅತ್ಯುತ್ತಮ ಮಾದರಿಗಳನ್ನು ಜನರ ಮುಂದಿಡುವುದು ನಮ್ಮ ಮೂಲ ಉದ್ದೇಶ ಎಂದು ತಿಳಿಸಿದರು.
ಸಾಧಕರು ವೇದಿಕೆ ಮೇಲೆ ಪ್ರಶಸ್ತಿ ಸ್ವೀಕರಿಸಿದ ಬಳಿಕ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು. ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆ ಹಿಡಿದು ಮತ್ತು ಸಾಧಕರೊಂದಿಗೆ ಬೇರೆ ಬೇರೆ ಊರುಗಳಿಂದ ಬಂದಿದ್ದವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ್ ವಂದಿಸಿದರು. ಕಾರ್ಯಕ್ರಮದಲ್ಲಿ ಪರ್ವ ಸಿಇಒ ಶಶಿಧರ ನಾಗರಾಜಪ್ಪ ಹಾಗೂ ಅವರ ತಂಡದವರು ದುಬೈನಲ್ಲಿ ಮನೆ ಕೊಳ್ಳುವುದು ಹೇಗೆ, ಅಲ್ಲಿ ಅವಕಾಶಗಳು ಹೇಗಿವೆ, ತೆರಿಗೆ ವಿಚಾರ, ಆರ್ಥಿಕ ನೆರವು ಹಾಗೂ ಹೂಡಿಕೆ ಕುರಿತಾಗಿ ವಿಸ್ತಾರವಾದ ಮಾಹಿತಿ ನೀಡಿದರು.
