ತಮಗೆ ಬಂದ ಬೆದರಿಕೆ ಕರೆಗಳ ನಂತರ, ತಮ್ಮ ಮತಕ್ಷೇತ್ರವಾದ ಚಿತ್ತಾಪುರದಲ್ಲಿ ಆರೆಸ್ಸೆಸ್ ಯೋಜಿಸಿರುವ ಪಥಸಂಚಲನವು ಉದ್ದೇಶಪೂರ್ವಕ ರಾಜಕೀಯ ಕುತಂತ್ರ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಪಥಸಂಚಲನಕ್ಕೆ ಸರಿಯಾದ ಅನುಮತಿ ಪಡೆಯದಿರುವುದನ್ನು ಪ್ರಶ್ನಿಸಿದ್ದಾರೆ.
ಕಲಬುರಗಿ (ಅ.19): ಕೆಲವು ವಿಚಾರಗಳು ಮಾಧ್ಯಮದಲ್ಲಿ ಹರಡುತ್ತಿದೆ. ಅದು ಮಾಹಿತಿಯ ಕೊರತೆಯಿಂದಲೇ ಅಥವಾ ಬಿಜೆಪಿಯವರ ಅಪಪ್ರಚಾರದಿಂದಲೋ ಹರಡುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಕಾರ್ಯಚಟುವಟಿಕೆ ನಿಷೇಧ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕ್ರೊನೊಲಜಿ ಗಮನಿಸಿ ಹೇಳ್ತಿದ್ದೇನೆ. ಕೆಲವು ಸಂಘಟನೆಗಳು ಅಸಂವಿಧಾನಿಕ ಚಟುವಟಿಕೆ ನಡೆಸುತ್ತಿವೆ ಅದಕ್ಕೆ ಕಡಿವಾಣ ಹಾಕಬೇಕು ಅಂತ ನಾನು ಹೇಳಿದೆ. ಈ ವಿಚಾರ ಕ್ಯಾಬಿನೆಟ್ ನಲ್ಲೂ ಇದು ಚರ್ಚೆಯಾಗಿ ಬೇರೆ ಬೇರೆ ಇಲಾಖೆಯ ನಿಯಮ ತರೋಣ ಅಂತ ನಿರ್ಧಾರ ಆಯ್ತು. ಕಾನೂನು ನಿಯಮ ಏನಿರಬೇಕು ಎಂದು ತೀರ್ಮಾನ ತರಲಾಯಿತು. ರಾಷ್ಟ್ರಮಟ್ಟದಲ್ಲಿ ಆರ್ ಎಸ್ ಎಸ್ ಬ್ಯಾನ್ ಆಗುತ್ತೆ ಎಂಬ ಚರ್ಚೆ ನಡೆಯಿತು. ನನಗೆ ದಿನ ನಿತ್ಯ ಬೆದರಿಕೆ ಕರೆ ಬರುವುದು ಪ್ರಾರಂಭ ಆಯಿತು. ಬೆದರಿಕೆಯ ಕರೆಯ ವೀಡಿಯೋ ನಾನು ಬಿಡುಗಡೆ ಮಾಡಿದ ಮೇಲೆ ಬಿಜೆಪಿ ಬಾಯಿಗೆ ಹೊಲಿಗೆ ಬಿತ್ತು ಎಂದರು.
ಕಲಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ನಿಂದ ಯೋಜಿತ ಪಥಸಂಚಲನವು ತೀವ್ರ ವಿವಾದಕ್ಕೆ ಕಾರಣವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಈ ಘಟನೆಯನ್ನು ಉದ್ದೇಶಪೂರ್ವಕ ರಾಜಕೀಯ ಕುತಂತ್ರ ಎಂದು ಖರ್ಗೆ ಆರೋಪಿಸಿದರು.
ನನಗೆ ಬುದ್ಧಿ ಕಲಿಸಬೇಕು ಅಂತಾ ಇದೆ ಪ್ಲ್ಯಾನ್:
ಆರ್ ಎಸ್ ಎಸ್ ಕಲಬುರ್ಗಿ ಜಿಲ್ಲೆಯಲ್ಲಿ ಪಥ ಸಂಚಲನ ಮಾಡ್ತೀವಿ ಅಂತ ಹಠ ಹಿಡಿದರು. ಮೊದಲೇ ಇತ್ತೋ ಏನೋ ದಿನಾಂಕವಂತೂ ಹೇಳಿಲ್ಲ. ಉದ್ದೇಶಪೂರ್ವಕವಾಗಿ ನನ್ನ ಮತ ಕ್ಷೇತ್ರದಲ್ಲಿ ಪ್ಲ್ಯಾನ್ ಮಾಡಿಕೊಂಡರು. ನನಗೆ ಬುದ್ದಿ ಕಲಿಸಬೇಕು ಅಂತ ಇದೆಲ್ಲ ಪ್ಲ್ಯಾನ್ ಮಾಡಿದ್ದಾರೆ. ಬೆದರಿಕೆ ಹಾಕಿದ ವ್ಯಕ್ತಿಯ ಬಂಧನ ಆದ ಮೇಲೆ ಚಿತ್ತಾಪುರದಲ್ಲಿ ಪಂಥ ಸಂಚಲನ ಪ್ಲ್ಯಾನ್ ಮಾಡಿದ್ದಾರೆ. ಯಾವುದೋ ಕಾಗದದಲ್ಲಿ ಚಿತ್ತಾಪುರದ ವ್ಯಕ್ತಿಯೂ ಅಲ್ಲ ಅವರಿಂದ ಮಾಹಿತಿ ಕೊಟ್ಟಿದ್ದಾರೆ. ಅನುಮತಿ ಕೋರಿಲ್ಲ ಅವರು, ಕೇವಲ ಕಾಗದದಲ್ಲಿ ರೂಟ್ ಮ್ಯಾಪ್ ಹಾಕಿ ಮಾಹಿತಿಗಾಗಿ ಅಂತ ಬರೆದುಕೊಟ್ಟಿದ್ದಾರೆ. ಇದೇ ವೇಳೆ ಭೀಮ್ ಆರ್ಮಿಯೂ ಕೂಡ ಪಥಸಂಚಲನಕ್ಕೆ ಅನುಮತಿ ಕೇಳಿದ್ದಾರೆ. ಈ ಸಂಘಟನೆಯವರು ಚಿತ್ತಾಪುರ ದಲ್ಲಿ ಮಾಡುವಾಗ ನಮಗೂ ಅವಕಾಶ ಕೊಡಿ ಅಂತ ಪತ್ರ ಬರೆದಿದ್ದಾರೆ. ಇದೇ ಸಂಘಟನೆಯಿಂದ ಬೈಸಿಕೊಂಡು ನಮ್ಮ ಕುಟುಂಬದ ಬಗ್ಗೆ ಇಲ್ಲ ಸಲ್ಲದ ಮಾತನಾಡಿ ಅದೇ ಸಂಘಟನೆ ನಮ್ಮ ತಾಲೂಕಿನಲ್ಲಿ ಪಥಸಂಚಲನ ಮಾಡುವಾಗ ನಮ್ಮ ಜನರು ಏನು ಮಾಡಬೇಕು? ಆರ್ ಎಸ್ ಎಸ್ ಗೆ ತಕ್ಷಣವೇ ಪಥ ಸಂಚಲನ ಮಾಡಿ ಏನು ಸಾಧಿಸಬೇಕಿತ್ತು ಎಂದು ಪ್ರಶ್ನಿಸಿದರು.
ಅಮಾಯಕ ವ್ಯಕ್ತಿಯಿಂದ ನನಗೆ ಬೆದರಿಕೆ ಹಾಕಿಸ್ತೀರಾ?
ಅಮಾಯಕ ವ್ಯಕ್ತಿಯಿಂದ ಬೆದರಿಕೆ ಹಾಕಿಸ್ತೀರಾ ಎಂದು ಆರೆಸ್ಸೆಸ್ ವಿರುದ್ಧ ಕಿಡಿಕಾರಿದ ಪ್ರಿಯಾಂಕ್ ಖರ್ಗೆ ಅವರು, ನಿಮ್ಮ ಮಾತಿನಿಂದ ಜನರಿಗೆ ಘಾಸಿಯಾಗಿದೆ, ಆಕ್ರೋಶವಿದೆ. ಇದೇ ಸಂದರ್ಭದಲ್ಲಿ ಯಾಕೆ ಪಥಸಂಚಲನ ಮಾಡಬೇಕು. ಚಿತ್ತಾಪುರದ ಹಿಂದಿನ ಬಿಜೆಪಿ ಅಭ್ಯರ್ಥಿ ಕೂಡ ಪ್ರೆಸ್ ಮೀಟ್ ಮಾಡಿ 'ನಾಳೆ ನಿಮ್ಮ ಮನೆಗೂ ಬರ್ತಾರೆ ಹುಷಾರು' ಅಂತ ಮತ್ತೆ ಬೆದರಿಕೆ ಹಾಕ್ತಾನೆ. ಇದಾದ ಮೇಲೆ ಮತ್ತೆ ಪಥಸಂಚಲನ ಮಾಡಬೇಕಾ? ಚಿತ್ತಾಪುರದ ಜನಪ್ರತಿನಿಧಿಯನ್ನು ನಿಂದಿಸುತ್ತಿದ್ದೀರಾ ನಿಮಗೆ ಅವಕಾಶ ಕೊಡಬೇಕಾ ಇವತ್ತೇ? ಯಾಕೆ ಈಗಲೇ ಪಥ ಸಂಚಲನ ಮಾಡಬೇಕು ನೀವು? ನಾವೇನು ಒಂಟಿಯಲ್ಲ, ನಮ್ಮ ಪರವಾಗಿ ಜನರೂ ಇದ್ದಾರೆ, ನಾವೇನಾದರೂ ಪ್ರಚೋದನೆ ಕೊಟ್ಟಿದ್ದೀವಾ? ಎಂಎಲ್ಎ ಅಭ್ಯರ್ಥಿ ಬೈತಾರೆ, ಸಂಘಟನೆ ಬೈಯುತ್ತದೆ, ಅಲ್ಲಿಯೇ ಪಥ ಸಂಚಲನಾ ಮಾಡ್ತೀರಾ? ಸಂವಿಧಾನ, ಕಾನೂನಿಗಿಂತ ನೀವು ದೊಡ್ಡವರಾ? ಎಂದು ವಾಗ್ದಾಳಿ ನಡೆಸಿದರು.
ಎಷ್ಟು ಜನ ಸೇರ್ತಾರೆ ಅಂತಾ ತಹಸೀಲ್ದಾರರಿಗೂ ಮಾಹಿತಿ ಇಲ್ಲ:
ಪಥಸಂಚಲನಕ್ಕೆ ಅನುಮತಿ ಪಡೆಯಬೇಕು. ಆದರೆ ಆರೆಸ್ಸೆಸ್ ಪಥಸಂಚಲನಕ್ಕೆ ಎಷ್ಟು ಜನರು ಸೇರ್ತಾರೆ ಅಂತಾ ತಹಶಿಲ್ದಾರರಿಗೆ ಮಾಹಿತಿಯೇ ನೀಡಿಲ್ಲ. ಸ್ಥಳದ ಎನ್ಓಸಿ ಕೊಟ್ಟಿಲ್ಲ, ದಾಖಲೆ ಕೊಟ್ಟಿಲ್ಲ, ಅನುಮತಿಯನ್ನೇ ಕೇಳಿಲ್ಲ. ಸಂಘದ ನೋಂದಣಿ ಪ್ರಮಾಣ ಪತ್ರ ಸಲ್ಲಿಸಿಲ್ಲ. ಇದೆಲ್ಲ ಹಲವಾರು ಪ್ರಶ್ನೆಗಳಿಗೆ ಪಥ ಸಂಚಲನ ನಡೆಸುವವರು ಮಾಹಿತಿ ನೀಡಿಲ್ಲ. ನಿನ್ನೆ ರಾತ್ರಿ 'ಸಂಘ ಯಾವುದೇ ನೋಂದಾಯಿತ ಅಲ್ಲ' ಅಂತ ಬರೆದುಕೊಟ್ಟಿದ್ದಾರೆ. ಇದನ್ನ ಚಾಲೆಂಜ್ ಮಾಡಿ ಕೋರ್ಟ್ ಹೋಗಿದ್ದಾರೆ. ಕೋರ್ಟ್ ನಲ್ಲಿ ಬಹಳಷ್ಟು ಚರ್ಚೆ ಆಗಿದೆ. ಸಮಾಜದಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ಸರ್ಕಾರದ್ದು ಎಂದು ಜಡ್ಜ್ ಹೇಳಿದ್ದಾರೆ. ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದು ಜಡ್ಜ್ ಹೇಳಿದ್ದಾರೆ ಎಂದರು.
ಕಾಂಗ್ರೆಸ್‌ಗೆ ಮುಖಭಂಗ ಹೇಳಿಕೆ ವಿಜಯೇಂದ್ರ ವಿರುದ್ಧ ಖರ್ಗೆ ಗರಂ
ಕಾಂಗ್ರೆಸ್ ಗೆ ಮುಖಭಂಗ ಆಗಿದೆ ಎಂಬ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಗರಂ ಆದ ಪ್ರಿಯಾಂಕ್ ಖರ್ಗೆ ಅವರು, ಎಲ್ಲಿ ಆಗಿದೆ ಮುಖಭಂಗ? ಆರ್ಡರ್ ತೋರಿಸಲಿ, ಇವತ್ತು ಇರಬೇಕಿತ್ತಲ್ವ? ವಿಜಯೇಂದ್ರ ನೀವು ಸ್ವಂತ ಬುದ್ದಿಯನ್ನ ಉಪಯೋಗ ಮಾಡಿ ಸ್ಟೇಟ್ಮೆಂಟ್ ಮಾಡಲಿಲ್ಲ ಅಂದ್ರೆ ನಗೆಪಾಟಲಿಗೆ ಈಡಾಗುತ್ತಿರಾ ಎಂದು ತಿರುಗೇಟು ನೀಡಿದರಲ್ಲದೇ, ಕೇಳಿರುವ 11 ಪ್ರಶ್ನೆಗಳಿಗೆ ಉತ್ತರ ಕೊಟ್ಟು ಚಿತ್ತಾಪುರಕ್ಕೆ ಬನ್ನಿ.ಅದುಬಿಟ್ಟು ಸುಮ್ಮೆ ರಿಪಬ್ಲಿಕ್ ಆಫ್ ಕಲ್ಬುರ್ಗಿ, ರಿಪಬ್ಲಿಕ್ ಆಫ್ ಚಿತ್ತಾಪುರ, ಸರ್ವಾಧಿಕಾರಿ ಧೋರಣೆ ಅಂತಿರಾ? ನಾನಾ ಕೊಟ್ಟಿರೋದು ಆರ್ಡರ್? ಆರ್ಡರ್ ನಲ್ಲಿ ಇವತ್ತು ಮಾಡಬೇಕು ಅಂತ ಎಲ್ಲಿದೆ ತೋರಿಸಿ, ಮುಖಭಂಗ ಅಂತೆ. ಅವರು ಪರ್ಮೀಷನ್ ಕೇಳದೆ ಮಾಹಿತಿ ನೀಡಿದ್ದಾರೆ. ನೀವು ಪರ್ಮೀಷನ್ ತೆಗೆದುಕೊಳ್ಳದೆ ಹೇಗೆ ಪೋಸ್ಟರ್ ಹಾಕಿದ್ರಿ? ಹರಿಹಾಯ್ದರು.
